"ಲವ್ಯಾಪಾ', "ಮಹಾರಾಜ್' ಬಳಿಕ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾ "ಏಕ್ ದಿನ್'. ಈ ಚಿತ್ರದ ಮೂಲಕ ದಣದ ನಟಿ ಸಾಯಿಪಲ್ಲವಿ ಬಾಲಿವುಡ್ಗೆ ಡೆಬ್ಯೂ ಮಾಡುತ್ತಿರುವುದು ವಿಶೇಷ. ಇದು ರೊಮ್ಯಾಂಟಿಕ್ ಡ್ರಾಮಾ ಜಾನರ್ ಚಿತ್ರವಾಗಿದ್ದು, ಸುನಿಲ್ ಪಾಂಡೆ ನಿರ್ದೇಶಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾಗಿದ್ದರೆ "ಏಕ್ ದಿನ್' ಕಳೆದ ನವೆಂಬರ್ನಲ್ಲಿ ಬಿಡುಗಡೆಯಾಗಬೇಕಿತ್ತು. ಇದೀಗ ಮೇ 1ರಂದು ತೆರೆಗೆ ಬರಲು ರೆಡಿಯಾಗಿದೆ. ಸಾಮಾನ್ಯವಾಗಿ ಸಿನಿಮಾಗಳ ರಿಲೀಸ್ಗೆ ಇನ್ನೊಂದು ವಾರ ಅಥವಾ 10 ದಿನ ಇರುವಾಗ, ಆನ್ಲೈನ್ ಬುಕ್ಕಿಂಗ್ ಓಪನ್ ಆಗುತ್ತದೆ. ಆದರೆ, ಪ್ರೇಕ್ಷಕರನ್ನು ಸೆಳೆಯಲು ಹೊಸ ಬಗೆಯ ಪ್ರಚಾರತಂತ್ರ ಅನುಸರಿಸುತ್ತಿರುವ "ಏಕ್ ದಿನ್' ತಂಡ, ಬಿಡುಗಡೆಗೆ ಬರೋಬ್ಬರಿ 39 ದಿನ ಮುನ್ನವೇ ಆನ್ಲೈನ್ ಬುಕ್ಕಿಂಗ್ ಪ್ರಾರಂಭಿಸಿದೆ. ದೇಶಾದ್ಯಂತ 20 ನಗರಗಳಲ್ಲಿ ತಲಾ ಒಂದೊಂದು ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ನಲ್ಲಿ, ಒಂದೊಂದು ಶೋ ಬುಕ್ಕಿಂಗ್ಗೆ ಮಾತ್ರ ಅವಕಾಶ ನೀಡಲಾಗಿದೆ. ಈ 39 ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಟೀಸರ್, ಹಾಡುಗಳು, ಟ್ರೇಲರ್ ಜತೆಗೆ ವಿವಿಧ ಕಂಟೆಂಟ್ ನೋಡಿ ಮೆಚ್ಚುವ ಪ್ರೇಕ್ಷಕರು, ತಕ್ಷಣ ಸಿನಿಮಾ ಬುಕ್ ಮಾಡಲು ಮುಂದಾಗಬಹುದು ಎಂಬ ನಿರೀೆಯಲ್ಲಿ ಇದೇ ಮೊದಲ ಬಾರಿಗೆ ಚಿತ್ರತಂಡ ಈ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.
ಕಾಪಿ, ಪೇಸ್ಟ್!
ಸಾಮಾನ್ಯವಾಗಿ ಸಿನಿಮಾಗಳನ್ನು ರಿಮೇಕ್ ಮಾಡಿದರೆ, ನೇಟಿವಿಟಿಗೆ ತಕ್ಕಂತೆ ಕಥೆ, ಹಿನ್ನೆಲೆ, ಪಾತ್ರ ಎಲ್ಲವನ್ನೂ ಬದಲಿಸಲಾಗುತ್ತದೆ. ಭಾರತದಲ್ಲೇ ವಿವಿಧ ಭಾಷೆಗಳ ಚಿತ್ರಗಳ ರಿಮೇಕ್ ಸಮಯದಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದನ್ನು ನೋಡಿದ್ದೇವೆ. ಆದರೆ, ಆ ವಿಷಯದಲ್ಲಿ "ಏಕ್ ದಿನ್' ತಂಡ ಸೋಮಾರಿತನ ಪ್ರದರ್ಶಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ, ಇದು 2016ರ ಥಾಯ್ಲೆಂಡ್ ಸಿನಿಮಾ "ಒನ್ ಡೇ' ರಿಮೇಕ್ ಆಗಿದ್ದು, ಅದನ್ನೇ "ಏಕ್ ದಿನ್' ಎಂದು ಭಾಷಾಂತರ ಮಾಡಲಾಗಿದೆ. ಇನ್ನು ಥಾಯ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಮಂಜಿನ ನಡುವ ನಾಯಕ, ನಾಯಕಿ ನಡೆದುಬರುವುದನ್ನೇ ಹಿಂದಿ ಚಿತ್ರದಲ್ಲೂ ಕಾಪಿ ಮಾಡಲಾಗಿದೆ.