ಧುರಂದರ್ ಚಿತ್ರದ ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್
- ಎರಡನೇ ಬಾರಿಗೆ ತನ್ನ ಚಿತ್ರದ ಮುಖೇನ ದೇಶದಲ್ಲಿ ಸಂಚಲನ
- ಧುರಂದರ್ ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ, ಪ್ರಶಂಸೆ
- ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಗಳಿಕೆ ದುಪ್ಪಟ್ಟು, ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ
ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್ ಅಂಗಳದಲ್ಲಿ ಬಿಡುಗಡೆಯಾಗಿ, ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಸ್ಪೈ-ಥ್ರಿಲ್ಲರ್ 'ಧುರಂಧರ್' ಸಿನಿಮಾ ಇದೀಗ ಬ್ಲಾಕ್ಬಸ್ಟರ್ ಹಿಟ್ ಸಾಲಿಗೆ ಸೇರ್ಪಡೆಗೊಂಡಿದೆ. ಕೇವಲ ಬಾಕ್ಸ್ ಆಫೀಸ್ನಲ್ಲಿ ಮಾತ್ರ ಅಬ್ಬರಿಸದ ಚಿತ್ರ, ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ, ಪ್ರಶಂಸೆ ಮತ್ತು ಉತ್ತಮ ವಿಮರ್ಶೆಗಳನ್ನು ಸ್ವೀಕರಿಸುತ್ತಿದೆ. ರಣವೀರ್ ಸಿಂಗ್ ನಟನಾಗಿ ಅಭಿನಯಿಸಿರುವ ಈ ಚಿತ್ರದ ಯಶಸ್ಸಿನ ಹಿಂದೆ ನಿರ್ದೇಶಕ ಆದಿತ್ಯ ಧರ್ ಅವರ ಪಾತ್ರವು ಪ್ರಮುಖವಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಈಗಾಗಲೇ ಜಾಗತಿಕವಾಗಿ ಸುಮಾರು 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ 'ಧುರಂದರ್', ಪಾಕ್ ಮತ್ತು ಭಾರತದ ನಡುವಿನ ಕೆಲವು ನೈಜ ಘಟನೆಗಳನ್ನು ಆಧರಿಸಿದೆ. ಆದಿತ್ಯ ಧರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಆರ್.ಮಾಧವನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳು ನೋಡುಗರಿಗೆ ರೋಮಾಂಚನಕಾರಿ ಅನುಭವವನ್ನು ನೀಡಿದೆ ಎಂಬುದು ಇತ್ತೀಚಿನ ವಿಮರ್ಶೆಗಳು ಮತ್ತು ರೇಟಿಂಗ್ಗಳೇ ಹೇಳುತ್ತಿವೆ.
ಇದೊಂದು ಚಿತ್ರದ ಮೂಲಕ ನಿರ್ದೇಶಕ ಆದಿತ್ಯ ಧರ್ ಮತ್ತೊಮ್ಮೆ ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ. ಈಗಾಗಲೇ ಗೂಗಲ್ನಲ್ಲಿ ಟ್ರೆಂಡಿಂಗ್ ಆಗುತ್ತಿರುವ ಈ ಬಾಲಿವುಡ್ ನಿರ್ದೇಶಕ. ನೆಟ್ಟಿಗರ ಕುತೂಹಲಕಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಅಷ್ಟಕ್ಕೂ, ಯಾರು ಈ ಆದಿತ್ಯ ಧರ್? ಇವರ ನಿರ್ದೇಶನದಲ್ಲಿ ಬಂದಿರುವ ಚಿತ್ರಗಳು ಯಾವುವು? ಇವರ ಹಿನ್ನೆಲೆ ಏನು? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಕಾಶ್ಮೀರಿ ಪಂಡಿತ್ ಕುಟುಂಬಕ್ಕೆ ಸೇರಿದ ಆದಿತ್ಯ ಧರ್, ಆರಂಭದಲ್ಲಿ ಸಿನಿಮಾಗಳಿಗೆ ಹಾಡುಗಳನ್ನು ಬರೆಯುತ್ತಿದ್ದರು. ಈ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ಧರ್, ನಂತರದಲ್ಲಿ ತಮ್ಮ ಅಣ್ಣನೊಂದಿಗೆ ಸೇರಿ ಕಿರುಚಿತ್ರಗಳನ್ನು ಮಾಡುತ, ನಿರ್ಮಾಪಕರಾಗಿಯೂ ಹೊರಹೊಮ್ಮಿದರು. ಈ ಹಾದಿಯಲ್ಲಿ ಸಾಗಿದ ಆದಿತ್ಯ ಧರ್, ಅಂದಿನ ಮಟ್ಟಿಗೆ 'ಉರಿ' ಚಿತ್ರದ ಮುಖೇನ ದೇಶದಲ್ಲಿ ಭಾರೀ ಸಂಚಲನ ಮೂಡಿಸಿದರು. ಈ ಸಿನಿಮಾ ಭಾರತೀಯರ ಮೆಚ್ಚುಗೆ ಹಾಗೂ ದೇಶಾಭಿಮಾನಕ್ಕೆ ಸಾಕ್ಷಿಯಾಯಿತು.
ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಆಧರಿಸಿದ ಸಿನಿಮಾ ಇದಾಗಿತ್ತು. ತಮ್ಮ ಚೊಚ್ಚಲ ಚಿತ್ರದೊಂದಿಗೆ ಬಾಲಿವುಡ್ನಲ್ಲಿ ತಮ್ಮದೇ ಛಾಪು ಸೃಷ್ಟಿಸಿದ ಧರ್, 'ಉರಿ' ಮೂಲಕ ಭಾರತೀಯ ಚಿತ್ರೋದ್ಯಮದಲ್ಲಿ ಹಿರಿಯ ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ಶ್ಲಾಘನೆಗೆ ಪಾತ್ರರಾದರು. ಕೇವಲ ಇದೊಂದು ಚಿತ್ರಕ್ಕಾಗಿ ಅವರು ಬರೋಬ್ಬರಿ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಹೆಚ್ಚುವರಿ ಖಾಸಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
'ಉರಿ' ಬಳಿಕ ಈಗ ಮತ್ತೊಮ್ಮೆ ಸಂಚಲನ
2019ರಲ್ಲಿ 'ಉರಿ' ಸಿನಿಮಾವನ್ನು ನಿರ್ದೇಶಿಸಿದ ಆದಿತ್ಯ ಧರ್, ಇದೀಗ ಹಲವು ವರ್ಷಗಳ ನಂತರ ಧುರಂಧರ್ ಮೂಲಕ ಮತ್ತೇ ದೇಶದಲ್ಲಿ ಸಂಚಲನ ಹುಟ್ಟುಹಾಕಿರುವುದು ನಿಜಕ್ಕೂ ಗಮನಾರ್ಹ. ಈಗಾಗಲೇ ದೇಶಿಯ ಹಾಗೂ ಜಾಗತಿಕವಾಗಿ ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಕಂಡಿರುವ 'ಧುರಂಧರ್' ತನ್ನ ಮೊದಲ ಭಾಗದಲ್ಲೇ 2ನೇ ಭಾಗವನ್ನೂ ಘೋಷಿಸಿದೆ. ಈ ಚಿತ್ರವು 2026ರಲ್ಲಿ ರಿಲೀಸ್ ಆಗಬಹುದು ಎಂಬ ಮಾತುಗಳು ಬಾಲಿವುಡ್ ಅಂಗಳದಿಂದ ಕೇಳಿಬಂದಿವೆ.
ಸ್ಟಾರ್ ನಟಿಯ ಪತಿ
2021ರಲ್ಲಿ ಆದಿತ್ಯ ಧರ್ ಬಾಲಿವುಡ್‌ನ ನಾಯಕಿ ಯಾಮಿ ಗೌತಮ್ ಅವರೊಂದಿಗೆ ಸಪ್ತಪದಿ ತುಳಿದರು. 'ಉರಿ' ಚಿತ್ರದ ಸಮಯದಲ್ಲಿ ಇಬ್ಬರೂ ಪರಸ್ಪರ ಪ್ರೀತಿಸಿ, ಸರಳ ವಿವಾಹವಾದರು. ದಂಪತಿಗೆ ಓರ್ವ ಪುತ್ರನಿದ್ದು, ಸುಖ ಸಂಸಾರ ಸಾಗಿಸುತ್ತಿದ್ದಾರೆ. ಪ್ರಸ್ತುತ, ಚಿತ್ರಗಳಿಗಿಂತ ನಟಿ ಬಾಲಿವುಡ್‌ನ ವೆಬ್ ಸರಣಿಗಳಲ್ಲಿ ಹೆಚ್ಚು ಬಿಜಿಯಾಗಿದ್ದಾರೆ.(ಏಜೆನ್ಸೀಸ್).