- ಟಾಕ್ ಆಫ್ ದಿ ಟೌನ್ ಆದ 'ಧುರಂಧರ್ 2'
- ರಣವೀರ್ ಸಿಂಗ್-ಆದಿತ್ಯ ಧರ್ ಕಾಂಬೋಗೆ ಸಿನಿಪ್ರಿಯರು ಫಿದಾ
- 3 ಗಂಟೆ 49 ನಿಮಿಷಗಳ ಕಥೆಯ ಹಿಂದಿದೆ ಹಲವು ರೋಚಕ ಸಂಗತಿಗಳು
ಮುಂಬೈ: ಮಾ.19ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' (Dhurandhar 2) ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಗಳಿಕೆ ಕಂಡಿದ್ದು, ಬಾಲಿವುಡ್ನಿಂದ ಹಿಡಿದು ಸೌತ್ ಸ್ಟಾರ್ಗಳ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾಗಿದೆ. ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್ ಮಾಡಿ, ಮುನ್ನುಗ್ಗುತ್ತಿರುವ ಚಿತ್ರಕ್ಕೆ ಟೀಕೆಗಳ ನಡುವೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.
ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಧುರಂಧರ್ 2' ಕೇವಲ 6ನೇ ದಿನಕ್ಕೆ ವಿಶ್ವಾದ್ಯಂತ 636.69 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ 533.47 ಕೋಟಿ ರೂ. ಗಳಿಸಿ, ಇನ್ನೆರಡು ಅಥವಾ ಮೂರು ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರಲಿದೆ. ಈ ಚಿತ್ರದ ವಿಶೇಷತೆ ಏನಂದರೆ, ಸಿನಿಮಾದ ಹಲವು ಸೀನ್ಗಳನ್ನು ಮೊದಲೇ ಪೂರ್ಣ ಸ್ಕ್ರಿಪ್ಟ್ ಇಲ್ಲದೆಯೇ ಚಿತ್ರೀಕರಿಸಲಾಗಿದೆ. ನಿರ್ದೇಶಕರ ಈ ಮಾತುಗಳು ಸಿನಿಪ್ರಿಯರ ಹುಬ್ಬೇರಿಸಿದೆ.
ಚಿತ್ರೀಕರಣದ ಸಮಯದಲ್ಲಿ ದೃಶ್ಯಗಳು ಬಿಲ್ಡ್ ಆದವು ಮತ್ತು ಸಣ್ಣ ಮಾಂಟೇಜ್‌ಗಳು ದೊಡ್ಡ ಸೀನ್ಗಳಾಗಿ ಬದಲಾದವು. ಆದ್ದರಿಂದಲೇ, ಚಿತ್ರದ ಒಟ್ಟು ರನ್ಟೈಮ್ ಬರೋಬ್ಬರಿ 3 ಗಂಟೆ 49 ನಿಮಿಷಗಳಷ್ಟು ಉದ್ದವಾಗಿದೆ ಎಂದು ತಿಳಿಸಿದ್ದಾರೆ. ಧುರಂಧರ್ 1 ಮತ್ತು 2 ಭಾಗಗಳ ಒಟ್ಟು ಬಜೆಟ್ ಕೇವಲ 255 ಕೋಟಿ ರೂ. ಈ ವೆಚ್ಚದಲ್ಲಿ ಚಿತ್ರದ ದೃಶ್ಯಗಳು ಮತ್ತು ಕಥೆಯನ್ನು ಇಂಪ್ಯಾಕ್ಟ್ ಮಾಡುವಂತೆ ಮಾಡಿದ್ದೇವೆ. ಮತ್ತು ಭಾರೀ ವಿಎಫ್ಎಕ್ಸ್ ಅಥವಾ ವಿದೇಶಿ ಸ್ಥಳಗಳನ್ನು ಆಯ್ಕೆ ಮಾಡದೆಯೇ ನಿರ್ಮಿಸಲಾಗಿದೆ" ಎಂದು ಧರ್ ಹೇಳಿದ್ದಾರೆ.
ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ, ಸಿನಿಮಾ ಹಲವು ಸಂಭಾಷಣೆಗಳನ್ನು ಶೂಟಿಂಗ್ ಸಮಯದಲ್ಲಿ ಇಂಪ್ರೂವೈಸ್ ಮಾಡಲಾಗಿದೆ. ಟೇಕ್ ಓಕೆ ಅನ್ನುವ ದಿನವೇ ಫೈನಲ್ ಮಾಡಲಾದ ಸಂಭಾಷಣೆಗಳು ಚಿತ್ರದ ಸಹಜತೆಗೆ ಮೆರುಗು ನೀಡಿವೆ ಮತ್ತು ನೋಡುಗರಿಗೆ ಇಷ್ಟವಾಗಿವೆ ಎಂದಿದ್ದಾರೆ. ಒಟ್ಟಾರೆ, ಜಾಗತಿಕವಾಗಿ ಸಖತ್ ಸದ್ದು ಮಾಡುತ್ತಿರುವ 'ಧುರಂಧರ್'ಗೆ ದಕ್ಷಿಣದಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಅನೇಕರು ಚಿತ್ರಕಥೆ, ಕಲಾವಿದರ ಅಭಿನಯ ಮತ್ತು ನಿರ್ದೇಶನವನ್ನು ಕೊಂಡಾಡುತ್ತಿದ್ದಾರೆ,(ಏಜೆನ್ಸೀಸ್).