ಎ.ಆರ್​. ರೆಹಮಾನ್​, ನಿತೇಶ್​ ರಾಣೆ 
ಬಾಲಿವುಡ್

ಬಾಲಿವುಡ್​ನಲ್ಲಿ ಕೋಮು ದ್ವೇಷ: ಈ ಮಾತನ್ನು ಇಸ್ಲಾಮಿಕ್​ ದೇಶದಲ್ಲಿ ಹೇಳಿದ್ದರೆ ರೆಹಮಾನ್​ ಹೆಣವಾಗುತ್ತಿದ್ದ: ನಿತೇಶ್​ ರಾಣೆ | A R Rahman

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನಲ್ಲಿ ಕೋಮು ದ್ವೇಷ ಹೆಚ್ಚುತ್ತಿದೆ ಎಂದಿದ್ದ ಎ.ಆರ್​. ರೆಹಮಾನ್​
  • ಈ ಮಾತನ್ನು ಇಸ್ಲಾಮಿಕ್​ ದೇಶದಲ್ಲಿ ಹೇಳಿದ್ದರೆ ರೆಹಮಾನ್​ ಹೆಣವಾಗುತ್ತಿದ್ದ ಎಂದ ನಿತೇಶ್​ ರಾಣೆ
  • ರೆಹಮಾನ್​​ ಅಂತವರಿಗೆ ಯಾವುದೇ ಕ್ಷೇತ್ರದಲ್ಲಿ ಅವಕಾಶ ನೀಡಬಾರದು
ಮುಂಬೈ: ಆಸ್ಕರ್​ ವಿಜೇತ ಸಂಗೀತ ಸಂಯೋಜಕ ಎ.ಆರ್​. ರೆಹಮಾನ್​ (A R Rahman) ಬಾಲಿವುಡ್​ನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕೋಮು ದ್ವೇಷ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಮಗೆ ಬರುವ ಅವಕಾಶಗಳ ಸಂಖ್ಯೆ ಕಡಿಮೆಯಾಗಿವೆ ಎಂಬ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ರೆಹಮಾನ್ ಅವರ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಯಾರಾದರೂ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಯಾವುದೇ ಇಸ್ಲಾಮಿಕ್ ದೇಶದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದರೆ, ರೆಹಮಾನ್​ ಜೀವಂತವಾಗಿ ಇರುತ್ತಿದ್ದರೆ? ಒಂದೊ ಅವರನ್ನು ಕೊಲ್ಲಲಾಗುತ್ತಿತ್ತು ಇಲ್ಲ ದೇಶವನ್ನೇ ಬಿಡಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.

ಎ.ಆರ್. ರೆಹಮಾನ್‌ರಂತವರಿಗೆ ಯಾವುದೇ ಅವಕಾಶ ನೀಡಬಾರದು

ಇತ್ತಿಚೆಗೆ ದಿ ಕಪಿಲ್ ಶರ್ಮಾ ಶೋನಲ್ಲಿ ಎ.ಆರ್. ರೆಹಮಾನ್ ಕಾಣಿಸಿಕೊಂಡಿದ್ದಕ್ಕೆ ನಿತೇಶ್ ರಾಣೆ ಆಕ್ಷೇಪ ವ್ಯಕ್ತಪಡಿಸಿದರು. "ದಿ ಕಪಿಲ್ ಶರ್ಮಾ ಶೋನಂತಹ ಕಾರ್ಯಕ್ರಮಗಳಿಗೆ ಎ.ಆರ್. ರೆಹಮಾನ್​ನನ್ನು ಏಕೆ ಆಹ್ವಾನಿಸಲಾಯಿತು? ಜನರಿಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಅವಕಾಶವಿದೆ, ಆದರೆ ಅವರ ಹೇಳಿಕೆಗಳು ದೇಶ ಮತ್ತು ಹಿಂದೂ ಧರ್ಮವನ್ನು ಅವಮಾನಿಸುವ ರೀತಿ ಇದ್ದರೆ ಅಂತವರಿಗೆ ಯಾವುದೇ ವೇದಿಕೆಗಳಲ್ಲಿ ಅವಕಾಶ ನೀಡಬಾರದು ಎಂದು ರಾಣೆ ಹೇಳಿದ್ದರೆ.
ಭವಿಷ್ಯದಲ್ಲಿ ದೇಶ, ಹಿಂದೂ ಸಮುದಾಯ ಅಥವಾ ಹಿಂದೂ ರಾಷ್ಟ್ರದ ಪರಿಕಲ್ಪನೆಯ ವಿರುದ್ಧ ಯಾರೂ ಮಾತನಾಡಲು ಧೈರ್ಯ ಮಾಡದಂತೆ ನಾವು ಮಾಡಬೇಕು. ನಾವು ಅಂತಹ ಜನರಲ್ಲಿ ಭಯವನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದರು.

ಎ.ಆರ್​. ರೆಹಮಾನ್​ ಹೇಳಿದ್ದೇನು?

ಬಿಬಿಸಿ ಏಷ್ಯನ್‌ನ ಯೂಟ್ಯೂಬ್ ಚಾನೆಲ್​ನಲ್ಲಿ ಹರುನ್ ರಷೀದ್ ಅವರಿಗೆ ರೆಹಮಾನ್​ ಸಂದರ್ಶನ ನೀಡಿದ್ದಾರೆ. ರಾಮಾಯಣ ಸಿನಿಮಾಗೆ ಸಂಗೀತ ನೀಡುವಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳು ಪಾತ್ರ ವಹಿಸಿವೆಯೇ ಎಂದು ರೆಹಮಾನ್ ಅವರನ್ನು ಈ ವೇಳೆ ಪ್ರಶ್ನಿಸಲಾಯಿತು. 
ಇದಕ್ಕೆ ಉತ್ತರ ನೀಡಿದ ರೆಹಮಾನ್​, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಪ್ರತಿ ವರ್ಷ ಹೇಳಿಕೊಡಲಾಗುತ್ತಿತ್ತು. ಆದ್ದರಿಂದ, ನನಗೆ ಕತೆಗಳು ಚೆನ್ನಾಗಿ ತಿಳಿದಿವೆ. ಈ ಕತೆಗಳು ಮಾನವ ದಯೆ, ಉನ್ನತ ಆದರ್ಶಗಳು ಮತ್ತು ಎಲ್ಲದರ ಬಗ್ಗೆ ತಿಳಿಸುತ್ತದೆ. ಜನರು ಏನೇ ವಾದಿಸಬಹುದು ಆದರೆ, ನಾನು ಎಲ್ಲ ಒಳ್ಳೆಯ ವಿಷಯಗಳನ್ನು ಗೌರವಿಸುತ್ತೇನೆ ಮತ್ತೆ ಒಳ್ಳೆಯ ವಿಷಯಗಳನ್ನು ಕಲಿತರೂ ತಪ್ಪಿಲ್ಲ ಎಂದರು.
ನಾನು ತೊಂಭತ್ತರ ದಶಕದಲ್ಲಿ ಕೆಲಸ ಆರಂಭಿಸಿದಾಗ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ ಹಿಂದಿ ಚಿತ್ರಗಳಲ್ಲಿ ನನಗೆ ತುಂಬಾ ಕಡಿಮೆ ಕೆಲಸ ಬಂದಿದೆ. ಇದಕ್ಕೆ ಕಾರಣ ನನ್ನ ಪ್ರಯತ್ನದ ಕೊರತೆಯಲ್ಲ ಮತ್ತು ನಾನು ಕೆಲಸಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನಗೆ ಕಡಿಮೆ ಕೆಲಸ ಸಿಗಲು ಅಧಿಕಾರದ ಹಸ್ತಾಂತರ ಕಾರಣ ಇರಬಹುದು ಅಥವಾ ಕೋಮು ಅಂಶಗಳು ಕೂಡ ಪ್ರಭಾವ ಬೀರಿರಬಹುದು ಎನ್ನುವ ಮೂಲಕ ತಾನು ಮುಸ್ಲಿಂ ಆಗಿರುವುದರಿಂದ ತನಗೆ ಅವಕಾಶಗಳು ಕಡಿಮೆ ಎಂಬ ಅರ್ಥದಲ್ಲಿ ರೆಹಮಾನ್​ ಹೇಳಿದ್ದಾರೆ.

ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿರುವ ಎ.ಆರ್​.ರೆಹಮಾನ್​

ತಮ್ಮ ಹೇಳಿಕೆಗಳ ಕುರಿತು ಗದ್ದಲ ಹೆಚ್ಚುತ್ತಿರುವಂತೆಯೇ, ಭಾನುವಾರ ರೆಹಮಾನ್ ಮೌನ ಮುರಿದು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪುನರುಚ್ಚರಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ನೋವುಂಟು ಮಾಡುವುದು ಎಂದಿಗೂ ತಮ್ಮ ಉದ್ದೇಶವಲ್ಲ ಮತ್ತು ಸಂಗೀತದ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಅವರು ಯಾವಾಗಲೂ ಶ್ರಮಿಸಿದ್ದಾರೆ ಎಂದು ಅವರು ಹೇಳಿದರು. 
ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಮಾಡುವುದು. ನಾನು ಎಂದಿಗೂ ನೋವುಂಟು ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ,(ಏಜನ್ಸೀಸ್).