ಬೆಂಗಳೂರು: ಪ್ರೇಮ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ದಿ ಡೆವಿಲ್ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ಸದ್ಯ ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಚಿತ್ರದಲ್ಲಿನ ಅಶ್ಲೀಲ ಪದ ಬಳಕೆ ಮತ್ತು ಮದ್ಯಪಾನದ ವೈಭೋಗದ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ವಾದ-ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ, ನಿರ್ದೇಶಕ ಪ್ರೇಮ್ ಅವರ ಪತ್ನಿ ಹಾಗೂ ನಟಿ ರಕ್ಷಿತಾ(Rakshitha Prem) ಅವರು ಮೌನ ಮುರಿದಿದ್ದಾರೆ. ನಟ ನಿರ್ದೇಶ ಪ್ರೇಮ್(Director Prem) ಅವರ ಬೆಂಬಲಕ್ಕೆ ನಿಂತಿದ್ದಾರೆ.
ಸದ್ಯ ಕೆಡಿ ದಿ ಡೆವಿಲ್ ಸಿನಿಮಾದಲ್ಲಿನ ಹಿಂದಿಯಲ್ಲಿ ಮೂಡಿ ಬಂದಿರುವ 'ಸರ್ಕೆ ಚುನಾರ್' ಹಾಡಿಗೆ ಬಾಲಿವುಡ್ನ ಗಾಯಕರು, ಸಾಹಿತಿಗಳು ಹಾಗೂ ಕರ್ನಾಟಕದಲ್ಲಿರುವ ಮಹಿಳಾ ಸಾಹಿತಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮಧ್ಯೆ ನಟಿ ರಕ್ಷಿತಾ ಅವರು ತಮ್ಮ ಪತಿ ಪರವಹಿಸಿಕೊಂಡು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
"ನನ್ನನ್ನು ಗುರಿಯಾಗಿಸುತ್ತಿರುವವರಿಗೆ ನಾನು ಏನು ಬರೆಯುತ್ತಿದ್ದೇನೆ ಎಂಬ ಅರಿವಿದೆ. ಈ ಹಿಂದೆ ಹಿಂದಿ ಚಿತ್ರರಂಗದ 'ಚೋಲಿ ಕೆ ಪೀಚೆ' ಸೇರಿದಂತೆ ನೂರಾರು ಅಶ್ಲೀಲ ಹಾಡುಗಳನ್ನು ಎಲ್ಲರೂ ಸಂಭ್ರಮಿಸಿದ್ದರು, ಆದರೆ ಈಗ 'ಕೆಡಿ' ಚಿತ್ರದ ಹಾಡನ್ನು ಮಾತ್ರ ವಿಶೇಷವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇತ್ತೀಚಿನ ಸಿನಿಮಾವೊಂದರಲ್ಲಿ ಲೈಂಗಿಕ ದೃಶ್ಯಗಳಿದ್ದಾಗ ನಡೆಯದ ಚರ್ಚೆ, ಈಗ ಕೇವಲ ಒಂದು ಹಾಡಿನ ಬಗ್ಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಅಚ್ಚರಿಯ ಸಂಗತಿ. ನಾನು ಯಾವುದರ ಪರ ಅಥವಾ ವಿರುದ್ಧವಾಗಿಲ್ಲದಿದ್ದರೂ, ಈ ದ್ವಂದ್ವ ನಿಲುವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ನನ್ನ ಸ್ಪಷ್ಟ ಅನಿಸಿಕೆ." ಎಂದಿದ್ದಾರೆ.
ಗಿಮಿಕ್ಗಾಗಿ ಹೀಗೆ ಮಾಡ್ಬೇಡಿ
`ಜನರು ಒಬ್ಬ ನಿರ್ದೇಶಕನ ಬಗ್ಗೆ ಮಾತನಾಡುತ್ತಾರೆ. ನಂತರ ಅವರ ಸಿನಿಮಾಗಳ ಬಗ್ಗೆ, ಕುಟುಂಬದ ಆದ ನಂತರ ಆತನನ್ನು ಪ್ರೀತಿಸುವ ಜನರನ್ನು ಬೈದಾಡುತ್ತಾರೆ ಇದು ನಿಜವಾಗಿಯೂ ಸರಿಯಲ್ಲ. ಅವರು(ಪ್ರೇಮ್) ಎಷ್ಟೋ ಚಂದದ ಹಾಡುಗಳನ್ನು ಬರೆದಿದ್ದಾರೆ. ಅದೆಲ್ಲರ ಮಧ್ಯೆ ಅವರ ಈ ಒಂದು ಹಾಡನ್ನೇ ಎತ್ತಾಡುವುದು, ಅದರಿಂದಲೇ ಅವರನ್ನು ಜಡ್ಜ್ ಮಾಡುವುದು ಯಾಕೆ. ಇದೆಲ್ಲವೂ ಗಿಮಿಕ್ಗಾಗಿಯಾ? ಹಾಗೇನಾದರೂ ಆಗಿದ್ದರೆ ಇದು ನಿಜಕ್ಕೂ ಸರಿಯಾದದ್ದು ಅಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.
`ಒಬ್ಬ ನಿರ್ದೇಶಕನ ಕೆಲವು ಸಿನಿಮಾ ಹಿಟ್ ಆಗದೆ ಇದ್ದ ಮಾತ್ರಕ್ಕೆ ಅವರು ಕೆಟ್ಟ ಫಿಲ್ಮ್ ಮೇಕರ್ ಆಗೋದಿಲ್ಲ. ನಿಮಗೆ ಅವರನ್ನು ಪ್ರಶ್ನಿಸುವ ಕೇಳುವ ಹಕ್ಕಿದೆ. ಆದರೆ ನಿಂದಿಸುವ ಹಕ್ಕು ಇಲ್ಲ. ನನಗೆ ನನ್ನ ಭಾಷೆ ಹಾಗೂ ಜನರ ಬಗ್ಗೆ ಬಹಳ ಪ್ರೀತಿ ಇದೆ. ಇಂದಿನ ದಿನಗಳಲ್ಲಿ ಜನರು ರಕ್ತಪಾತದ ಸಿನಿಮಾಗಳನ್ನು ನೋಡುತ್ತಿದ್ದಾರೆ. ಲೈಂಗಿಕ ದೃಶ್ಯಗಳು ಎಲ್ಲವೂ ಬಹಿರಂಗವಾಗಿದೆ. ಪ್ರೇಮ್ ಸಹ ಒಬ್ಬ ಕನ್ನಡ ನಿಮಗೇನೂ ಬೇಕೋ ಅದನ್ನು ಅವರ ಬಳಿ ಕೇಳಿ' ಎಂದಿದ್ದಾರೆ.
ಕನ್ನಡ ಸಿನಿಮಾ ಓಟಿಟಿಗೆ ತರೋದೆ ಕಷ್ಟ
`ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಒಬ್ಬ ನಿರ್ದೇಶಕ ಮತ್ತು ನಿರ್ಮಾಪಕನಿಗೆ ತನ್ನ ಸಿನಿಮಾವನ್ನು ಓಟಿಟಿಯಲ್ಲಿ ಮಾರಾಟ ಮಾಡುವುದು ಕಷ್ಟಕರ. ಜನರನ್ನು ಚಿತ್ರರಂಗಕ್ಕೆ ಕರೆತರುವುದು ಸಾಹಸ. ಇದು ನಮ್ಮ ಒಂದು ಸಿನಿಮಾ ಮಾತ್ರವಲ್ಲ ಇಡೀ ಸ್ಯಾಂಡಲ್ವುಡ್ನ ಸಮಸ್ಯೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
`ಪ್ರೇಮ್ ತನ್ನ ಸಿನಿಮಾಗೆ ಬಂದಿರುವ ಎಲ್ಲ ಸಮಸ್ಯೆಯನ್ನು ಮೆಟ್ಟಿ ನಿಲ್ಲುತ್ತಾರೆ. ಇಂತಹ ಗಿಮಿಕ್, ಪ್ರಚಾರಗಳಿಂದ ಹೊರಬಂದ ಸಿನಿಮಾ ನಿಮಗೆ ಇಷ್ಟವಾಯಿತೋ ಅಥವಾ ಇಲ್ಲವೋ ಎನ್ನುವುದನ್ನು ಹೇಳುವ ಹಕ್ಕು ನಿಮಗಿದೆ. ನಿಮಗಾಗಿ ಇನ್ನು ಒಳ್ಳೆಯ ಸಿನಿಮಾಗಳನ್ನು ನಾವು ತರುತ್ತೇವೆ ನಮ್ಮ ಮೇಲೆ ನಂಬಿಕೆಯಿಡಿ' ಎಂದು ಹೇಳಿಕೊಂಡಿದ್ದಾರೆ.
`ನಾನು ಪ್ರತಿ ಬಾರಿ ನನ್ನ ದೇಹದ ವಿಚಾರಕ್ಕೆ ಟ್ರೋಲ್ಗೆ ಒಳಗಾಗುತ್ತೇನೆ. ಆದರೆ, ನಾನು ನಿಮ್ಮನ್ನು ಪ್ರೀತಿಸಿದಷ್ಟು ನೀವು ನನಗೆ ಅಷ್ಟೇ ಮಮತೆ ತೋರಿದ್ದೀರಿ. ಕೆಡಿ ಸಿನಿಮಾ ನಮ್ಮ ಕನಸ್ಸಿನ ಕೂಸು. ನಾವು ಸರಿಯಾದದ್ದನ್ನೇ ಮಾಡಿದ್ದೇವೆ. ನಮ್ಮ ಮೇಲೆ ನಂಬಿಕೆಯಿಡಿ' ಎಂದು ರಕ್ಷಿತಾ ಪ್ರೇಮ್ ಮನವಿ ಮಾಡಿಕೊಂಡಿದ್ದಾರೆ.
ಪ್ರೇಮ್ ಅವರ ಹಾಡುಗಳು ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಅಮ್ಮನ ಕುರಿತು ಹಾಗೂ ಪ್ರೇಮದ ಕುರಿತು ಸುಂದರ ಸಾಹಿತ್ಯ ಬರೆಯುವ ಇವರು, ಐಟಂ ಹಾಡುಗಳು ಬಂದಾಂಗ ಮನಬಂದಂತೆ ಪದಗಳನ್ನು ಬಳಸಿಕೊಳ್ಳುತ್ತಾರೆ ಎಂದು ಈ ಹಿಂದೆಯೂ ವಿವಾದವಾಗಿತ್ತು. ಪಡವಾರಳ್ಳಿ ಜಾತ್ರೆಯಾಗ, ಸೇಸಮ್ಮ ಸೇಸಮ್ಮ ಹಾಡು ಸೇರಿದಂತೆ ಹಲವು ಟೀಕೆಗೆ ಒಳಗಾಗಿದ್ದವು.(ಏಜೆನ್ಸೀಸ್).