ನವದೆಹಲಿ: ಬಹು ನಿರೀಕ್ಷೆ ಮೂಡಿಸಿದ್ದ Dhurandhar: The Revenge ಸಿನಿಮಾ ಇಂದು(ಮಾ.18) ಪೇಡ್ ಪ್ರೀವ್ಯೂಗಳೊಂದಿಗೆ ತೆರೆಕಂಡಿದ್ದು, ರಿಲೀಸ್‌ಗೂ ಮುನ್ನವೇ ಸೆನ್ಸಾರ್ ಕತ್ತರಿ ವಿಚಾರ ಚರ್ಚೆಗೆ ಕಾರಣವಾಗಿದೆ. Central Board of Film Certification (CBFC) ವರದಿ ಪ್ರಕಾರ, ಚಿತ್ರಕ್ಕೆ ಒಟ್ಟು 21 ಬದಲಾವಣೆಗಳನ್ನು ಸೂಚಿಸಲಾಗಿದ್ದು, ಅಂತಿಮವಾಗಿ ಭಾರತೀಯ ಆವೃತ್ತಿ ಸುಮಾರು 6 ನಿಮಿಷ ಕಡಿತಗೊಂಡಿದೆ.
ಹಿಂಸಾತ್ಮಕ ದೃಶ್ಯಗಳಿಗೆ ಕತ್ತರಿ
ಚಿತ್ರದಲ್ಲಿನ ಅತಿರೇಕದ ಹಿಂಸಾಚಾರದ ದೃಶ್ಯಗಳಿಗೆ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ. ಲಭ್ಯವಿರುವ ವರದಿಯ ಪ್ರಕಾರ, ಕಣ್ಣುಗಳನ್ನು ಜಜ್ಜುವುದು, ತಲೆಯನ್ನು ಕಲ್ಲಿನಿಂದ ಹೊಡೆಯುವುದು ಮತ್ತು ಸುತ್ತಿಗೆಯಿಂದ ದಾಳಿ ಮಾಡುವಂತಹ ಭೀಕರ ದೃಶ್ಯಗಳನ್ನು ಕಡಿತಗೊಳಿಸಲಾಗಿದೆ. ವಿಶೇಷವಾಗಿ, 'ತಲೆ ಕಡಿದು ಕಾಲಿನಿಂದ ಒದೆಯುವ' ಸುಮಾರು 24 ಸೆಕೆಂಡುಗಳ ದೃಶ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಎಲ್ಲಾ ಬದಲಾವಣೆಗಳ ನಂತರ ಚಿತ್ರಕ್ಕೆ 'A' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡಲಾಗಿದೆ.
ಚಿತ್ರದ ಅವಧಿ ಮತ್ತು ಅಭಿಮಾನಿಗಳ ಬೇಸರ
ಭಾರತದಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಅಂತಿಮ ಅವಧಿ 3 ಗಂಟೆ 49 ನಿಮಿಷ 36 ಸೆಕೆಂಡುಗಳು. ಇದು ಭಾರತೀಯ ಸಿನೆಮಾ ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ ಚಿತ್ರಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಆದರೆ, ವಿದೇಶಗಳಲ್ಲಿ 3 ಗಂಟೆ 55 ನಿಮಿಷಗಳ ಆವೃತ್ತಿ ಬಿಡುಗಡೆಯಾಗುತ್ತಿದ್ದು, ಭಾರತೀಯ ಪ್ರೇಕ್ಷಕರಿಗೆ 6 ನಿಮಿಷಗಳ ಪ್ರಮುಖ ದೃಶ್ಯಗಳು ಮಿಸ್ ಆಗುತ್ತಿವೆ ಎಂಬುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಸೆನ್ಸಾರ್ ಮಂಡಳಿಯ ಈ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಆರಂಭ
ಎಷ್ಟೇ ಕಡಿತಗಳಿದ್ದರೂ ಚಿತ್ರದ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಪೇಯ್ಡ್ ಪ್ರಿವ್ಯೂಗಳ ಮೂಲಕವೇ ಈ ಸಿನಿಮಾ 36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನದ ಮುಂಗಡ ಬುಕಿಂಗ್ ಈಗಾಗಲೇ 25 ಕೋಟಿ ರೂಪಾಯಿ ದಾಟಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.
ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಟಿ ಯಾಮಿ ಗೌತಮ್ ಅವರ ಅತಿಥಿ ಪಾತ್ರ ಚಿತ್ರದ ಮತ್ತೊಂದು ವಿಶೇಷತೆಯಾಗಿದೆ,(ಏಜೆನ್ಸೀಸ್).