ಮೆಲೋಡಿ ಕ್ವೀನ್, ಗಾನಕೋಗಿಲೆ ಆಶಾ ಭೋಸ್ಲೆ ಹಿಂದಿ, ಇಂಗ್ಲೀಷ್, ತೆಲುಗು, ಮಲಯಾಳಂ, ತಮಿಳು, ಮರಾಠಿ, ಬೆಂಗಾಲಿ, ನೇಪಾಲಿ, ಭೋಜಪುರಿ, ಗುಜರಾತಿ, ಅಸ್ಸಾಮೀ, ಪಂಜಾಬಿ, ಓರಿಯಾ, ಸೇರಿ 20 ವಿವಿಧ ಭಾಷೆಗಳಲ್ಲಿ ಥರಹೇವಾರಿ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲೂ ಐದು ಸಿನಿಮಾ ಹಾಡುಗಳನ್ನು ಆಶಾ ಭೋಸ್ಲೆ ಹಾಡಿದ್ದಾರೆ. 1966ರಲ್ಲಿ ಬಿಡುಗಡೆಯಾದ ಐತಿಹಾಸಿಕ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ "ಯಾಕೋ ಏನೋ' ಹಾಡಿ ಧ್ವನಿಯಾಗುವ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ 1973ರಲ್ಲಿ ಡಾ. ರಾಜಕುಮಾರ್, ಡಾ. ಭಾರತಿ ವಿಷ್ಣುವರ್ಧನ್ ನಟಿಸಿದ್ದ, ಸಿದ್ದಲಿಂಗಯ್ಯ ನಿರ್ದೇಶನದಲ್ಲಿ, ಜಿ.ಕೆ. ವೆಂಕಟೇಶ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ "ದೂರದ ಬೆಟ್ಟ' ಚಿತ್ರದ "ಸವಾಲು ಹಾಕಿ ಸೋಲಿಸಿ ಎಲ್ಲರ' ಸಾಂಗ್ ಹಾಡಿದ್ದರು. ಬಳಿಕ 27 ವರ್ಷಗಳ ನಂತರ 2010ರಲ್ಲಿ ದ್ವಾರ್ಕಿ ನಿರ್ದೇಶನ, ಪೌಲ್ರಾಜ್ ಸಂಗೀತ ನಿರ್ದೇಶನದ ಹಾಗೂ ಶ್ರೀನಗರ ಕಿಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ "ಮತ್ತೆ ಮುಂಗಾರು' ಚಿತ್ರದ "ಹೇಳದೆ ಕಾರಣ' ಹಾಡನ್ನು ಹಾಡಿದ್ದ ಅವರು, ನಂತರ 2017ರಲ್ಲಿ ತೆರೆಗೆ ಬಂದ ಆರ್ಯನ್ ಪ್ರತಾಪ್ ನಿರ್ದೇಶನದ, ಜೋಯೆಲ್ ಮತ್ತು ಅಭಿಲಾಷ್ ಸಂಗೀತ ನೀಡಿದ್ದ "19/11' ಚಿತ್ರದ "ಕಣ್ಣು ಕಣ್ಣಲಿ ಬಣ್ಣ ಬಣ್ಣದ ಕನಸನ್ನು' ಹಾಡಿಗೆ ಧ್ವನಿಯಾಗಿದ್ದರು. ಹಾಗೇ 2010ರಲ್ಲಿ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಸಂಯೋಜಿಸಿದ್ದ ಹಾಡನ್ನೂ ಆಶಾ ತಾಯ್ ಹಾಡಿದ್ದರು.
ಕ್ವೀನ್ ಆಫ್ ನ್ಯೂ ಮ್ಯೂಸಿಕ್
ಅವರು ನಮ್ಮೊಂದಿಗಿಲ್ಲ ಅಂತ ಅಂದುಕೊಳ್ಳುವುದೂ ತುಂಬ ಕಷ್ಟ. ಅವರ ಹಾಡುಗಳ ಮೂಲಕ ನಮ್ಮ ಜತೆ ಯಾವಾಗಲೂ ಇರುತ್ತಾರೆ. ಆಶಾಜೀ ನನಗೆ ಬಹಳ ಇಷ್ಟದ ಗಾಯಕಿ. ಹೆಣ್ಣುಮಕ್ಕಳ ಧ್ವನಿ ಸಿನಿಮಾದಲ್ಲಿ ಯಾವಾಗಲೂ ಸಾಫ್ಟ್ಆಗಿ, ಸಿಹಿಯಾಗಿರಬೇಕು ಎಂಬ ಸ್ಟಿರಿಯೋಟೈಪ್ ಬ್ರೇಕ್ ಮಾಡಿ ಹೊಸ ಟ್ರೆಂಡ್ ಸೃಷ್ಟಿಸಿದವರು ಅವರು. ಕ್ವೀನ್ ಆ್ ನ್ಯೂ ಮ್ಯೂಸಿಕ್. ಕ್ಲಾಸಿಕಲ್, ಕ್ಯಾಬರೇ, ಫನ್, ಐಟಂ, ಎಮೋಷನಲ್... ಹೀಗೆ ಅದೆಷ್ಟು ಬಗೆಯ ಹಾಡುಗಳನ್ನು ಹಾಡಿದ್ದಾರೋ ಲೆಕ್ಕಕ್ಕಿಲ್ಲ. ಎಲ್ಲ ರೀತಿಯ ಸಿಂಗರ್ಗಳಿಗೂ ಸ್ಪೇಸ್ ಸೃಷ್ಟಿಸಿಕೊಟ್ಟ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.
ವರ್ಸಟೈಲ್ ಗಾಯಕಿ
ಒಬ್ಬೊಬ್ಬರು ಒಂದೊಂದು ರೀತಿಯ ಹಾಡುಗಳಿಗೆ ಫಿಕ್ಸ್ ಆಗುತ್ತಾರೆ. ಆದರೆ ಆಶಾ ಭೋಸ್ಲೆ ಎಲ್ಲ ರೀತಿಯ ಹಾಡುಗಳನ್ನೂ ಹಾಡುತ್ತಿದ್ದರು. ಅವರಂತಹ ಪ್ರತಿಭೆ ಮತ್ತೊಬ್ಬರಿಲ್ಲ. ಲತಾ ಮಂಗೇಷ್ಕರ್, ಆಶಾ ಭೋಂಸ್ಲೆ ಅವರ ಜಾಗಗಳನ್ನು ತುಂಬುವವರು ಯಾರೂ ಇಲ್ಲ. ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. "ಹೂವೆ ಹೂವೆ' ಹಾಡನ್ನು ಲತಾ ದೀದಿ ಹಾಡಬೇಕಿತ್ತು. ಈಗ ನನಗೆ ವಯಸ್ಸಾಗಿದೆ, ಹಾಡಲಾಗುವುದಿಲ್ಲ ಆಶಾನ ಕೇಳಿ ಅಂದರು. ಆಶಾ ಭೋಸ್ಲೆಯವರ ಮನೆಗೆ ಹೋಗಿ ಹಾಡನ್ನು ಕೇಳಿಸಿದೆ. ಅವರು ಹೈ ಪಿಚ್ನಲ್ಲಿ ಹಾಡುವುದು ಕಷ್ಟವಾಗುತ್ತದೆ ಅಂತ ಕವಿತಾ ಸುಬ್ರಮಣ್ಯಂರನ್ನು ಪರಿಚಯಿಸಿ ನನಗೆ ಆಶೀರ್ವದಿಸಿ ಕಳುಹಿಸಿದರು. ಅವರನ್ನು ನೆನಪಿಸಿಕೊಂಡರೂ ನನಗೆ ಕಣ್ಣಲ್ಲಿ ನೀರು ಬರುತ್ತದೆ.
- ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ.
ಅವರಂತಹ ಸಿಂಗರ್ ಮತ್ತೊಬ್ಬರಿಲ್ಲ
ಎಲ್ಲ ಸಿಂಗರ್ಗಳನ್ನೂ ಕಾಪಿ ಮಾಡುವವರಿದ್ದಾರೆ. ಆದರೆ, ಆಶಾ ಭೋಸ್ಲೆಯವರ ಕಂಠ ಕಾಪಿ ಮಾಡಲು ಆಗುವುದಿಲ್ಲ. ಅವರೊಬ್ಬ ಲೆಜೆಂಡ್. ಅವರ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಎರಡು, ಮೂರು ತಿಂಗಳ ಹಿಂದಷ್ಟೇ 92ರ ಹರೆಯದರಲ್ಲೂ ಅದೆಷ್ಟು ಅದ್ಭುತವಾಗಿ ವೇದಿಕೆ ಕಾರ್ಯಕ್ರಮ ನೀಡಿದರೆಂದರೆ, ನೋಡಿ ತುಂಬ ಖುಷಿಪಟ್ಟಿದ್ದೆ. ಅವರಂತಹ ಸಿಂಗರ್ ಇನ್ನೊಬ್ಬರಿಲ್ಲ.
- ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ
ಸಂಗೀತದ ಮೂಲಕ ನಮ್ಮೊಂದಿಗಿದ್ದಾರೆ
ಇಡೀ ಭಾರತಕ್ಕೆ, ಸಂಗೀತ ಪ್ರಪಂಚಕ್ಕೆ ಭಾರೀ ನಷ್ಟವಾಗಿದೆ. ಇಷ್ಟು ದಿನ ಅವರು ಸಂಗೀತವನ್ನು ಜೀವಂತವಾಗಿಟ್ಟಿದ್ದರು. ಇನ್ನುಮುಂದೆ ಸಂಗೀತ ಅವರನ್ನು ಜೀವಂತವಾಗಿಡಲಿದೆ. ಲತಾ ಮಂಗೇಷ್ಕರ್ ಮತ್ತು ಆಶಾ ಭೋಸ್ಲೆ ಎರಡು ಪಿಲ್ಲರ್ಗಳಂತೆ ಭಾರತೀಯ ಸಂಗೀತವನ್ನು ಪ್ರಪಂಚಕ್ಕೆ ಕೊಂಡೊಯ್ದಿದ್ದರು. ನಾನು 25 ವರ್ಷ ಮುಂಬೈನಲ್ಲಿದ್ದೆ. ಆಗ ಅವರ ಇಡೀ ಕುಟುಂಬವನ್ನು ಭೇಟಿಯಾಗಿದ್ದೇನೆ. ಕೆಲ ವರ್ಷಗಳ ಹಿಂದೆ ಗುರುಗಳಾದ ಸುರೇಶ್ ವಾಡೇಕರ್ ಅವರ ಕಾರ್ಯಕ್ರಮದಲ್ಲಿ ಆಶಾರನ್ನು ಭೇಟಿಯಾಗಿದ್ದೆ. 86, 87 ವರ್ಷವಾಗಿದ್ದರೂ ನಿಂತೇ ಹಾಡಿದರು. ಸಂಗೀತದ ಮೇಲೆ ಅವರಿಗಿರುವ ಶ್ರದ್ಧೆ, ಭಕ್ತಿ, ಒಲವು ನೋಡಿ ಆಶ್ಚರ್ಯವಾಗುತ್ತಿತ್ತು.
ನನ್ನ ಪಾಲಿನ ಆರಾಧ್ಯ ದೈವ ಅವರು
ಆಶಾ ಭೋಸ್ಲೆಯವರು ಗಾಯನ ಕ್ಷೇತ್ರದಲ್ಲಿ ನನಗೆ ಆರಾಧ್ಯ ದೈವವಾಗಿದ್ದರು. ಒಂದಲ್ಲ ಒಂದು ದಿನ ಅವರನ್ನು ಭೇಟಿಯಾಗಲೇಬೇಕು ಎಂಬ ಆಸೆ ಇತ್ತು. ಕಳೆದ ವರ್ಷ "ಲತಾ & ಆಶಾ : ಉತ್ಸವ್' ಎಂಬ ಅವರಿಗೆ ಟ್ರಿಬ್ಯೂಟ್ ಕಾರ್ಯಕ್ರಮ ಆಯೋಜಿಸಿದ್ದೆವು. ತುಂಬ ಒಳ್ಳೆ ಪ್ರತಿಕ್ರಿಯೆ ದೊರೆತಿತ್ತು. ಹೀಗಾಗಿ ಅದನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುವ ಆಲೋಚನೆ ಇತ್ತು. ಹೀಗಾಗಿ ಮುಂಬೈಗೆ ಹೋಗಿ ಅವರನ್ನು ಭೇಟಿಯಾಗುವ ಯೋಜನೆಯಿತ್ತು. ಅಷ್ಟರಲ್ಲಿ ಹೀಗಾಯಿತು. ಅವರು ಇಂತಹ ಪ್ರಕಾರದಲ್ಲಿ ಹಾಡಿಲ್ಲ ಅಂತಿಲ್ಲ. ಎಲ್ಲ ಪ್ರಕಾರದ ಹಾಡುಗಳನ್ನೂ ಹಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆಯಂತೆ ಅವರು ಹಾಡದ ಪ್ರಕಾರವಿಲ್ಲ. ಅವರಷ್ಟು ವೈವಿಧ್ಯಮಯವಾಗಿ ಹಾಡಿರುವ ಗಾಯಕಿಯನ್ನು ಭಾರತೀಯ ಚಿತ್ರರಂಗದಲ್ಲಿ ನಾನು ನೋಡಿಲ್ಲ. ಎಲ್ಲ ಗಾಯಕರಿಗೂ ಆದರ್ಶ.