Asha Bhosle  
ಬಾಲಿವುಡ್

Asha Bhosle: ಪಂಚಭೂತಗಳಲ್ಲಿ ಲೀನವಾದ ಸ್ವರ ಮಾಂತ್ರಿಕಿ; ಸಕಲ ಸರ್ಕಾರಿ ಗೌರವಗಳೊಂದಿಗೆ ಆಶಾ ಭೋಸ್ಲೆ ಅಂತ್ಯಕ್ರಿಯೆ!

ಮುಂಬೈ: ಭಾರತೀಯ ಚಿತ್ರರಂಗದ ಅದ್ಭುತ ಧ್ವನಿ, ಪದ್ಮವಿಭೂಷಣ ಪುರಸ್ಕೃತೆ ಆಶಾ ಭೋಸ್ಲೆ (92) (Asha Bhosle )ಅವರ ಅಂತ್ಯಕ್ರಿಯೆಯು ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಸಾವಿರಾರು ಅಭಿಮಾನಿಗಳು, ಚಿತ್ರರಂಗದ ದಿಗ್ಗಜರು ಹಾಗೂ ರಾಜಕೀಯ ನಾಯಕರ ಸಮ್ಮುಖದಲ್ಲಿ ಆಶಾ ತೈ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.
ಭಾನುವಾರ (ಏಪ್ರಿಲ್ 12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆಶಾ ಭೋಂಸ್ಲೆ ನಿಧನರಾಗಿದ್ದರು. ಎದೆ ನೋವು ಮತ್ತು ತೀವ್ರ ಸುಸ್ತಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯದಿಂದ ಅವರು ಇಹಲೋಕ ತ್ಯಜಿಸಿದರು. ಸೋಮವಾರ ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು ಲೋವರ್ ಪರೇಲ್‌ನಲ್ಲಿರುವ 'ಕಾಸಾ ಗ್ರಾಂಡೆ' ನಿವಾಸಕ್ಕೆ ತರಲಾಗಿತ್ತು.

ಗಣ್ಯರಿಂದ ಅಂತಿಮ ನಮನ

ಆಶಾ ಭೋಂಸ್ಲೆ ಅವರ ಅಂತಿಮ ದರ್ಶನ ಪಡೆಯಲು ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ತಂಡೋಪತಂಡವಾಗಿ ಆಗಮಿಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸುನೇತ್ರಾ ಪವಾರ್ ಅಂತಿಮ ನಮನ ಸಲ್ಲಿಸಿದರು. ಬಾಲಿವುಡ್ ನಟರಾದ ಅಮೀರ್ ಖಾನ್, ವಿಕ್ಕಿ ಕೌಶಲ್, ಸಂಗೀತ ನಿರ್ದೇಶಕ ಅನು ಮಲಿಕ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಣ್ಣೀರು ಹಾಕುತ್ತಾ ತಮ್ಮ ಪ್ರೀತಿಯ ಗಾಯಕಿಗೆ ವಿದಾಯ ಹೇಳಿದರು.
ಪುತ್ರನಿಂದ ಅಂತಿಮ ವಿಧಿವಿಧಾನ
ಶಿವಾಜಿ ಪಾರ್ಕ್‌ನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಆಶಾ ಅವರ ಪುತ್ರ ಆನಂದ್ ಭೋಸ್ಲೆ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸರ್ಕಾರಿ ಗೌರವದ ಅಂಗವಾಗಿ ಪೊಲೀಸರು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಿದರು. ದಂತಕಥೆ ಲತಾ ಮಂಗೇಶ್ಕರ್ ಅವರ ಕಿರಿಯ ಸಹೋದರಿಯಾಗಿದ್ದ ಆಶಾ, ತಮ್ಮ ಎಂಟು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ‘ದಮ್ ಮಾರೋ ದಮ್’, ‘ಚುರಾ ಲಿಯಾ ಹೈ ತುಮ್ನೆ’, ‘ಪಿಯಾ ತು ಅಬ್ ತೋ ಆಜಾ’ ದಂತಹ ಸಾವಿರಾರು ಮಧುರ ಗೀತೆಗಳನ್ನು ನೀಡಿದ್ದಾರೆ,(ಏಜೆನ್ಸೀಸ್​).