ಮುಂಬೈ: ದಿವಂಗತ ನಟ ಓಂ ಪುರಿ(Om Puri) ಅವರು ಚಿತ್ರರಂಗ ಕಂಡ ಅತ್ಯದ್ಭುತ ನಟರಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ವೈಯಕ್ತಿಕ ಜೀವನದಲ್ಲಿ ಅವರು ನನ್ನ ಸಹೋದರಿಗೆ ದೊಡ್ಡ ದ್ರೋಹ ಎಸಗಿದ್ದಾರೆ ಎಂದು ಹಿರಿಯ ನಟ ಅಣ್ಣು ಕಪೂರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. "ಓಂ ಪುರಿ ಒಬ್ಬ ಶ್ರೇಷ್ಠ ನಟ ನಿಜ, ಆದರೆ ನನ್ನ ಸಹೋದರಿಯ ಬದುಕನ್ನು ಹಾಳು ಮಾಡಿದ ವ್ಯಕ್ತಿ ಕೂಡ ಅವರೇ" ಎಂದು ಅವರು ನೋವು ತೋಡಿಕೊಂಡಿದ್ದಾರೆ.
ವೈಫಲ್ಯ ಕಂಡ ವಿವಾಹ ಜೀವನ
ಅಣ್ಣು ಕಪೂರ್ ಅವರ ಸಹೋದರಿ ಸೀಮಾ ಕಪೂರ್ ಮತ್ತು ಓಂ ಪುರಿ ಅವರ ಮದುವೆ ಕೆಲವೇ ತಿಂಗಳುಗಳಲ್ಲಿ ಮುರಿದು ಬಿದ್ದಿತ್ತು. ಸೀಮಾ ಕಪೂರ್ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಓಂ ಪುರಿ ಅವರು ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದು ಬಹಿರಂಗವಾಗಿತ್ತು. ಈ ಘಟನೆ ಅವರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿತ್ತು.
ಈ ಕುರಿತು ಮಾತನಾಡಿರುವ ಅಣ್ಣು ಕಪೂರ್, "ಓಂ ಪುರಿ ಅಪ್ರತಿಮ ನಟ, ಅವರ ಸಮಾನಕ್ಕೆ ನಿಲ್ಲುವ ಮತ್ತೊಬ್ಬ ಕಲಾವಿದನಿಲ್ಲ. ಆದರೆ ಆ ವಿಷಯವೇ ಬೇರೆ. ಅವರು ಒಬ್ಬ ಹೆಣ್ಣಿನ ಪತಿಯಾದ ಮೇಲೆ ಆಕೆಗೆ ದ್ರೋಹ ಮಾಡಿದರು. ಅಲ್ಲಿಂದಲೇ ಎಲ್ಲವೂ ಹಳಿ ತಪ್ಪಿತು. ನಾನು ಆ ಹೆಣ್ಣಿನ ಸಹೋದರನಾಗಿ ಈ ನೋವನ್ನು ಅನುಭವಿಸಿದ್ದೇನೆ," ಎಂದು ಸಿದ್ಧಾರ್ಥ್ ಕಣ್ಣನ್ ಅವರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಗರ್ಭಿಣಿಯಾಗಿದ್ದಾಗ ಎದುರಿಸಿದ ಕಿರುಕುಳ
ಕಳೆದ ವರ್ಷ ಸೀಮಾ ಕಪೂರ್ ಕೂಡ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಹಿ ನೆನಪುಗಳನ್ನು ಹಂಚಿಕೊಂಡಿದ್ದರು. "ನಾನು ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಅವರು ಬೇರೊಬ್ಬ ಮಹಿಳೆಯ (ನಂದಿತಾ ಪುರಿ) ಪ್ರೇಮಪಾಶಕ್ಕೆ ಬಿದ್ದಿದ್ದರು. ನನ್ನ ಸ್ನೇಹಿತರಿಗೆ ಈ ವಿಷಯ ಗೊತ್ತಿದ್ದರೂ ನನಗೆ ಹೇಳಿರಲಿಲ್ಲ. ಓಂ ಪುರಿ ಅತಿಯಾಗಿ ಕುಡಿಯುತ್ತಿದ್ದರು ಮತ್ತು ನಂದಿತಾ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದರು. ಆ ಮಾನಸಿಕ ಕಿರುಕುಳ ತಾಳಲಾರದೆ ನಾನು ಮನೆ ಬಿಟ್ಟು ಬಂದೆ," ಎಂದು ಸೀಮಾ ವಿವರಿಸಿದ್ದರು.
ದುರದೃಷ್ಟವಶಾತ್, ಆ ಸಮಯದಲ್ಲಿ ಸೀಮಾ ಅವರ ಮಗು ಕೂಡ ಮೃತಪಟ್ಟಿತ್ತು. ಈ ಸಂದರ್ಭದಲ್ಲಿ ಓಂ ಪುರಿ ಅವರು ಕೇವಲ 25,000 ರೂಪಾಯಿ ಹಣವನ್ನು ತಮ್ಮ ಕಾರ್ಯದರ್ಶಿ ಮೂಲಕ ಕಳುಹಿಸಿಕೊಟ್ಟಿದ್ದರಂತೆ. "ಆ ಹಣವನ್ನು ನಾನು ತಿರಸ್ಕರಿಸಿದೆ. ನನ್ನ ಸ್ವಾಭಿಮಾನ ಅವರಿಗೆ ಅಹಂಕಾರದಂತೆ ಕಂಡಿರಬಹುದು," ಎಂದು ಸೀಮಾ ಹೇಳಿದ್ದಾರೆ.
ಕೊನೆಯ ದಿನಗಳಲ್ಲಿ ಒಂದಾಗಿದ್ದ ದಂಪತಿ
ತಮ್ಮ ಜೀವನದ ಕೊನೆಯ ದಿನಗಳಲ್ಲಿ ಓಂ ಪುರಿ ಅವರು ದೈಹಿಕವಾಗಿ ತುಂಬಾ ಅಶಕ್ತರಾಗಿದ್ದರು. ಆ ಸಮಯದಲ್ಲಿ ಅವರು ತಮ್ಮ ತಪ್ಪಿನ ಅರಿವಾಗಿ ಸೀಮಾ ಕಪೂರ್ ಅವರ ಬಳಿ ಕ್ಷಮೆಯಾಚಿಸಿದ್ದರು. ಆ ಕ್ಷಣದಲ್ಲಿ ಸೀಮಾ ಅವರೇ ಓಂ ಪುರಿ ಅವರ ಆರೈಕೆ ಮಾಡಿದ್ದರು. "ಓಂ ಪುರಿ ಅವರು 10 ವರ್ಷಗಳ ಹಿಂದೆಯೇ ತೀರಿಕೊಳ್ಳಬೇಕಿತ್ತು. ನನ್ನ ಸಹೋದರಿ ಅವರ ಆರೈಕೆ ಮಾಡಿದ್ದರಿಂದ ಅವರು ಬದುಕಿದ್ದರು. ಈ ವಿಷಯದಲ್ಲಿ ನನಗೆ ನನ್ನ ಸಹೋದರಿಯ ಮೇಲೆ ಕೋಪವೂ ಇತ್ತು," ಎಂದು ಅಣ್ಣು ಕಪೂರ್ ಹೇಳಿದ್ದಾರೆ.
ಸಹೋದರಿಯ ಸ್ಥಿತಿಗೆ ಮರುಕ
"ಇಂದು ಓಂ ಪುರಿ ನಮ್ಮೊಂದಿಗಿಲ್ಲ. ಅವರ ಮಗ ಮತ್ತು ಮಾಜಿ ಪತ್ನಿ ನಂದಿತಾ ಅವರಿಗೆ ಒಳ್ಳೆಯದಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನಗೆ ಯಾರ ಮೇಲೂ ದ್ವೇಷವಿಲ್ಲ. ಆದರೆ ನನ್ನ ಸಹೋದರಿ ಸೀಮಾ ಅವರ ಜೀವನ ಹಾಳಾಯಿತು, ಅವರಿಗೆ ಈಗ ಯಾರ ಬೆಂಬಲವೂ ಇಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಿದೆ," ಎಂದು ಅಣ್ಣು ಕಪೂರ್ ಭಾವುಕರಾಗಿ ನುಡಿದಿದ್ದಾರೆ.
ಓಂ ಪುರಿ ಅವರು 1993ರಲ್ಲಿ ಪತ್ರಕರ್ತೆ ನಂದಿತಾ ಪುರಿ ಅವರನ್ನು ವಿವಾಹವಾಗಿದ್ದರು. 2017ರಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಈಗ ಅಣ್ಣು ಕಪೂರ್ ಅವರು ಹಳೆಯ ಸತ್ಯಗಳನ್ನು ಬಿಚ್ಚಿಟ್ಟಿರುವುದು ಬಾಲಿವುಡ್ ವಲಯದಲ್ಲಿ ಸಂಚಲನ ಮೂಡಿಸಿದೆ,(ಏಜೆನ್ಸೀಸ್).