ಅತ್ಯಂತ ಲಾಭದಾಯದ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಒಂದು. ಹೀಗಾಗಿಯೇ ಸಿನಿಮಾ ತಾರೆಯರು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದು ಸಾಮಾನ್ಯ. ಹಣವಿದ್ದಾಗ ಎಲ್ಲಾದರೂ ಒಂದು ಪ್ರಾಪರ್ಟಿ ಖರೀದಿಸುವ ಅವರು, ಹಣದ ಅವಶ್ಯಕತೆ ಬಂದಾಗ ಅದನ್ನು ಮಾರುತ್ತಾರೆ. ಅಥವಾ ಅಲ್ಲಿ ಮನೆ, ಕಚೇರಿ, ಫಾಮ್ರ್ಹೌಸ್, ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸುವುದುಂಟು. ಅದಕ್ಕೆ ಉತ್ತಮ ಉದಾಹರಣೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್.
ಹೌದು, 2007ರಲ್ಲಿ ಗುಜರಾತನ್ ರಾಯಭಾರಿಯಾಗಿದ್ದ ಸಮಯದಲ್ಲಿ ಅಮಿತಾಭ್, ಅಹಮದಾಬಾದ್ನ ಗಿಫ್ಟ್ ಸಿಟಿ (ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿ) ಸಮೀಪ ₹7 ಕೋಟಿ ಕೊಟ್ಟು 5.72 ಎಕರೆ ಜಾಗ ಖರೀದಿಸಿದ್ದರು. ಕೆಲ ವರ್ಷಗಳ ಹಿಂದೆ ಆ ಭೂಮಿಯನ್ನು ಪುತ್ರ ಅಭಿಷೇಕ್ ಹೆಸರಿಗೆ ವರ್ಗಾಯಿಸಿದ್ದರು. ಇದೀಗ ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿರುವ ನಿರ್ಮಾಪಕ ಆನಂದ್ ಪಂಡಿತ್ ಜತೆ ಸೇರಿ ಅಭಿಷೇಕ್ ಆ ಜಾಗವನ್ನು ಡೆವೆಲಪ್ ಮಾಡಲು ಮುಂದಾಗಿದ್ದಾರೆ.
ಸುಮಾರು 10 ಲಕ್ಷ ಚದರಡಿಯಲ್ಲಿ ಐಶಾರಾಮಿ ಅಪಾರ್ಟ್ಮೆಂಟ್, ಕಚೇರಿ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಪ್ಲ್ಯಾನ್ನ್ ಮಾಡಿದ್ದಾರೆ. ಅಂದಹಾಗೆ, ಈ ಜಾಗದ ಪ್ರಸ್ತುತ ಮೌಲ್ಯ ಬರೋಬ್ಬರಿ ₹210 ಕೋಟಿ ದಾಟಿದೆ ಎನ್ನಲಾಗಿದೆ. ಆ ಮೂಲಕ ₹7 ಕೋಟಿ ಹೂಡಿಕೆ 19 ವರ್ಷಗಳಲ್ಲಿ ₹203 ಕೋಟಿ ಲಾಭ ನೀಡಿದಂತಾಗಿದೆ.