'ಹಮ್ ಮೇ ಶಹೇನ್ ಶಾ ಕೌನ್' ಸಿನಿಮಾ  
ಬಾಲಿವುಡ್

ರಜಿನಿ, ಶತ್ರುಘ್ನ ಸಿನ್ಹಾ, ಹೇಮಾ ಮಾಲಿನಿ... 37 ವರ್ಷಗಳ ಹಿಂದಿನ ಬ್ಲಾಕ್​ಬಸ್ಟರ್​ ಚಿತ್ರಕ್ಕೆ ರೀ-ರಿಲೀಸ್​ ಕಳೆ

ಪ್ರಮುಖ ಮುಖ್ಯಾಂಶಗಳು

  • 37 ವರ್ಷಗಳ ಬಳಿಕ ರೀ-ರಿಲೀಸ್​ಗೆ ಸಜ್ಜಾದ ಹಿಂದಿ ಸಿನಿಮಾ
  • ರಜಿನಿಕಾಂತ್​, ಹೇಮಾ ಮಾಲಿನಿ, ಶತ್ರುಘ್ನ ಸಿನ್ಹಾ ಅಭಿನಯದ ಸೂಪರ್​ಹಿಟ್​ ಚಿತ್ರಕ್ಕೆ ಹೊಸ ಕಳೆ
  • 4K, ಎಐ ಟೆಕ್ನಾಲಜಿ ಬಳಸಿಕೊಂಡು ಮತ್ತೊಮ್ಮೆ ಚಿತ್ರಮಂದಿರಕ್ಕೆ ತರಲು ಚಿತ್ರತಂಡ ಸಜ್ಜು
ಮುಂಬೈ: ತಮಿಳು, ತೆಲುಗು ಸೇರಿ ಹಿಂದಿ ಚಿತ್ರೋದ್ಯಮಗಳು ಇದೀಗ ತಮ್ಮ ಚಿತ್ರರಂಗದ ಹಿರಿಯ ಹಾಗೂ ದಿಗ್ಗಜ ನಟರ ಸೂಪರ್​ಹಿಟ್​ ಚಿತ್ರಗಳನ್ನು ಮತ್ತೊಮ್ಮೆ ಬೆಳ್ಳಿತೆರೆಗೆ ತರುತ್ತಿರುವುದು ನಿಜಕ್ಕೂ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಆಯಾ ಸ್ಟಾರ್​ ಹೀರೋಗಳ ಅಭಿಮಾನಿಗಳಿಗಂತು ಇದೊಂದು ರೀತಿ ಸಂಭ್ರಮವಾಗಿ ಮಾರ್ಪಟ್ಟಿದೆ. ಇದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಮರುಬಿಡುಗಡೆಯಾದ ನಟ ಅಜಿತ್ ಕುಮಾರ್​ ಅವರ 'ಮಂಕಥಾ' ಸಿನಿಮಾ.
2011ರಲ್ಲಿ ತೆರೆಕಂಡು ಬ್ಲಾಕ್​ಬಸ್ಟರ್​ ಸಾಲಿಗೆ ಸೇರ್ಪಡೆಯಾದ ಅಜಿತ್​ ಚಿತ್ರಕ್ಕೆ ಹೊಸ ಕಳೆ ನೀಡಿ, ಮತ್ತೊಮ್ಮೆ ತೆರೆಗೆ ತರಲಾಯಿತು. ಈ ಚಿತ್ರವನ್ನು ಮೊದಲ ಬಾರಿಗೆ ನೋಡ್ತಿರುವಂತೆ ಥಿಯೇಟರ್​ಗಳಲ್ಲಿ ಹುಚ್ಚೆದ್ದು, ಕುಣಿದು ಕುಪ್ಪಳಿಸಿದ ನಟನ ಅಭಿಮಾನಿಗಳು, ಅಜಿತ್​ಗೆ ಜೈಕಾರ ಕೂಗಿದರು. ಅಂತೆಯೇ, ಈಗ ರಜಿನಿಕಾಂತ್, ಹೇಮಾ ಮಾಲಿನಿ ಮತ್ತು ಶತ್ರುಘ್ನ ಸಿನ್ಹಾ ಅಭಿನಯದ ಹಿಂದಿ ಸಿನಿಮಾ 'ಹಮ್ ಮೇ ಶಹೇನ್ ಶಾ ಕೌನ್' ಕೂಡ ಇದೀಗ ಮೂರು ದಶಕಗಳ ಬಳಿಕ ರೀ-ರಿಲೀಸ್​ಗೆ ಸಜ್ಜಾಗಿದೆ.
ಹರ್ಮೆಶ್​ ಮಲ್ಹೋತ್ರಾ ನಿರ್ದೇಶನದ ಹಾಗೂ ರಾಜಾ ರಾಯ್​ ನಿರ್ಮಾಣದ ಈ ಚಿತ್ರದಲ್ಲಿ ರಜಿನಿಕಾಂತ್​, ಹೇಮಾ ಮಾಲಿನಿ, ಶತ್ರುಘ್ನ ಸಿನ್ಹಾ, ಅನಿತಾ ರಾಜ್, ಪ್ರೇಮ್ ಚೋಪ್ರಾ, ಶರತ್​ ಸ್ಯಾಕ್ಸೆನಾ, ಶಾರದ್​ ಸ್ಯಾಕ್ಸೆನಾ, ಅಮ್ರಿಶ್​ ಪೂರಿ ಮತ್ತು ಜಗದೀಪ್​ ಸೇರಿ ಬಹುದೊಡ್ಡ ತಾರಾಗಣವೇ ಇತ್ತು. ಡೈಲಾಗ್​ ಮತ್ತು ಸಂಗೀತದಿಂದಲೇ ನೋಡುಗರಿಂದ ಮೆಚ್ಚುಗೆ ಪಡೆದಿದ್ದ ಚಿತ್ರವು, ಆಧುನಿಕ ಟೆಕ್ನಾಲಜಿಯನ್ನು ಬಳಸಿಕೊಂಡು, 4K ರೀಮಾಸ್ಟರಿಂಗ್ ಮತ್ತು 5.1 ಸರೌಂಡ್ ಸೌಂಡ್ ಮಾಸ್ಟರಿಂಗ್‌ಗೆ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಗೆ ಕಾಲಿಡಲಿದೆ ಎಂದು ಚಿತ್ರತಂಡ ತಿಳಿಸಿದೆ,(ಏಜೆನ್ಸೀಸ್).