ಧುರಂಧರ್ ದ ರಿವೆಂಜ್ 
ಬಾಲಿವುಡ್

Dhurandhar the Revenge Review - ರಕ್ತಸಿಕ್ತ ಸೇಡಿನ ಕಥೆಯಲ್ಲಿ ನಿ"ಗೂಢಚಾರಿ'ಗಳ ದರ್ಶನ

Dhurandhar The Revenge Review -
ಚಿತ್ರ: ಧುರಂಧರ್​
ನಿರ್ದೇಶನ: ಆದಿತ್ಯ ಧರ್​
ತಾರಾಗಣ: ರಣವೀರ್​ ಸಿಂಗ್​, ಸಂಜಯ್​ ದತ್​, ಸಾರಾ ಅರ್ಜುನ್​, ರಾಕೇಶ್​ ಬೇಡಿ, ಅರ್ಜುನ್​ ರಾಂಪಾಲ್​, ಮಾಧವನ್​, ಗೌರವ್​ ಗೇರ ಮತ್ತಿತರರು
ರೆಹಮಾನ್​ ಬಲೂಚ್​ (ಅಕ್ಷಯ್​ ಖನ್ನಾ) ಹತ್ಯೆಯೊಂದಿಗೆ "ಧುರಂಧರ್​' ಮೊದಲ ಭಾಗ ಅಂತ್ಯವಾಗಿತ್ತು. ಅಲ್ಲಿಂದ ಹಂಜಾ ಅಲಿ ಮಜಾರಿ/ ಜಸ್ಕೀರಟ್​ ಸಿಂಗ್​ ರಂಗಿ (ರಣವೀರ್​ ಸಿಂಗ್​) ದೊಡ್ಡ ಆಟ ಪ್ರಾರಂಭಿಸಿರುವ ಸುಳಿವು ಕೂಡ ಸಿಕ್ಕಿತ್ತು. ಒಂದೆಡೆ ಸಂಸದ ಜಮೀಲ್​ ಜಮಾಲಿ (ರಾಕೇಶ್​ ಬೇಡಿ) ಮಗಳು ಯಾಲಿನಾ (ಸಾರಾ) ಮದುವೆಯಾಗಿ ರಾಜಕೀಯವಾಗಿ ಮನ್ನಣೆ ಗಳಿಸುವ ಹಂಜಾ, ಮತ್ತೊಂದೆಡೆ ರೆಹಮಾನ್​ನ ಸದೆಬಡಿದು, ಉಜೈರ್​ ಬಲೂಚ್​ನ ದುಬೈಗೆ ಕಳುಹಿಸಿ, ಇಡೀ ಲಿಯಾರಿಯ ರಾಜನಾಗುತ್ತಾನೆ. ಕ್ರಮೇಣ ಐಎಸ್​ಐನ ಮೇಜರ್​ ಇಕ್ಬಾಲ್​ (ಅರ್ಜುನ್​ ರಾಂಪಾಲ್​) ನಂಬಿಕೆ ಗಳಿಸಿ, ಬಡೇ ಸಾಬ್​ ದಾವೂದ್​ ಇಬ್ರಾಹಿಂ ಸಂಪರ್ಕ ಗಿಟ್ಟಿಸಿಕೊಂಡು, ಭಾರತಕ್ಕೆ ಡ್ರಗ್ಸ್​ ಮತ್ತು ನಕಲಿ ನೋಟುಗಳನ್ನು ಸರಬರಾಜು ಮಾಡುವ ಹೊಸ ಜವಾಬ್ದಾರಿ ಪಡೆಯುತ್ತಾನೆ. ಕ್ರಮೇಣ ಲಿಯಾರಿ ಕಿಂಗ್​, ಕರಾಚಿ ಬಾದ್ಶಾ ಆಗಿ ಹೆಮ್ಮರವಾಗಿ ಬೆಳೆಯುತ್ತಾನೆ. ಅದೇ ಸಮಯದಲ್ಲಿ ಭಾರತದಲ್ಲಿ ವಿವಿಧ ಭಯೋತ್ಪಾದಕ ದಾಳಿಗಳನ್ನು ನಡೆಸಿದ ಉಗ್ರರು ಪಾಕಿಸ್ತಾನದಲ್ಲಿ ಅನಾಮಿಕರ ಗುಂಡಿಗೆ ಬಲಿಯಾಗತೊಡಗುತ್ತಾರೆ. ಸಾಲು ಸಾಲು ಉಗ್ರರ ಹೆಣಗಳು ಬೀಳುತ್ತಿದ್ದಂತೆಯೇ, ಪಾಕ್​ನಲ್ಲಿ ಭಾರತದ ಗೂಢಚಾರಿಗಳಿರುವ ಸುಳಿವು ಸಿಕ್ಕಿ, ಅವರು ಸ್ಪೆ$ಗಳ ಬೇಟೆಗಿಳಿಯುತ್ತಾರೆ. ಅದೇ ಸಮಯದಲ್ಲಿ ಹಂಜಾ ಲಿಯಾರಿ ಟಾಸ್ಕ್​ ಫೋರ್ಸ್​ನ ಎಸ್​ಪಿ ಅಸ್ಲಂಗೆ (ಸಂಜಯ್​ ದತ್​) ಟಾರ್ಗೆಟ್​ ಆಗುತ್ತಾನೆ. ಹಾಗೇ ಮೂರು ತಲೆಮಾರುಗಳಿಂದ ಸೇನೆಯಲ್ಲಿದ್ದ ಪಠಾಣಕೋಟ್​ನ ಸಾಮಾನ್ಯ ಕುಟುಂಬದ ಜಸ್ಕೀರಟ್​ ಸಿಂಗ್​, ಹಂಜಾ ಹೇಗಾದ ಎಂಬುದು ಬಹಿರಂಗವಾಗುತ್ತದೆ. ಮುಂದೆ? ಹಂಜಾ ಶತ್ರುಗಳ ಶಿಕಾರಿ ಮಾಡುತ್ತಾನಾ? ಶಿಕಾರಿ ಆಗುತ್ತಾನಾ? ಸಿನಿಮಾ ನೋಡಿ.
"ಧುರಂಧರ್​'ಗಿಂತ "ದ ರಿವೆಂಜ್​' ರನ್​ಟೈಮ್​ ಮಾತ್ರವಲ್ಲ ಡ್ರಾಮಾ, ಕ್ರೌರ್ಯ, ಸಸ್ಪೆನ್ಸ್​, ಥ್ರಿಲ್​, ಆ್ಯಕ್ಷನ್​... ಹೀಗೆ ಎಲ್ಲ ವಿಷಯಗಳಲ್ಲೂ ಒಂದು ಹೆಜ್ಜೆ ಮುಂದಿದೆ. ಹೀಗಾಗಿ ಪೆರ್ಕ್ಟ್​ ಸೀಕ್ವೆಲ್​ ಎನ್ನಬಹುದು. ಒಂದು ನಿಮಿಷದ ರೀಲ್ಸ್​ ನೋಡುತ್ತಾ ಮೊಬೈಲ್​ಗೆ ಅಂಟಿಕೊಂಡಿರುವ ಪ್ರೇಕ್ಷಕರನ್ನು ಮೂರುಮುಕ್ಕಾಲು ತಾಸು ಬಿಗ್​ಸ್ಕ್ರೀನ್​ನತ್ತ ಎಳೆದು ತರುವ ಎಲ್ಲ ಅಂಶಗಳೂ ಇದರಲ್ಲಿವೆ. 2002ರಿಂದ 2024ರವರೆಗೆ ನಡೆದ ನೈಜ ಟನೆಗಳನ್ನು ಕಾಲ್ಪನಿಕ ಸ್ಪರ್ಶದೊಂದಿಗೆ ಸಿನಿಮಾ ರೂಪ ನೀಡಿರುವ ಆದಿತ್ಯ ಧರ್​ ಇಲ್ಲಿ ನಿಜವಾದ "ಧುರಂಧರ್​'. ಕೆಲವೆಡೆ ಅತಿ ಅನ್ನಿಸಿದರೂ ಅಲ್ಲಲ್ಲಿ ನೈಜ ಟನೆಗಳನ್ನು ನೆನಪಿಸುತ್ತಾ, "ಸತ್ಯ ಇನ್ನೂ ಕಟುವಾಗಿತ್ತು' ಎಂದೂ ನೆನಪಿಸುವ ಅವರ ಸಿನಿಮಾ ಮೇಕಿಂಗ್​ ಶೈಲಿಗೆ ಅವರೇ ಸಾಟಿ. ಅದಕ್ಕೆ ಬೆಂಬಲವಾಗಿ ನಿಂತಿರುವವರು ನಟ ರಣವೀರ್​ ಸಿಂಗ್​. ಹಂಜಾ ಮತ್ತು ಜಸ್ಕೀರಟ್​ ಎರಡೂ ಪಾತ್ರಗಳನ್ನು ಜೀವಿಸಿದ್ದಾರೆ. ಸಾಲು ಸೋಲಿನಿಂದ ಕಂಗೆಟ್ಟಿದ್ದ ಅವರಿಗೆ "ಧುರಂಧರ್​' ಸರಣಿ ಮರುಜನ್ಮ ನೀಡಿದೆ. ಹಾಗೇ ಸಂಜಯ್​ ದತ್​, ಅರ್ಜುನ್​ ರಾಂಪಾಲ್​, ರಾಕೇಶ್​ ಬೇಡಿ ಪಾತ್ರಗಳು ಈ ಸೀಕ್ವೆಲ್​ನ ಹೈಲೈಟ್​. ಇನ್ನು ವಿಕಾಶ್​ ನೌಲಾಖಾ ಛಾಯಾಗ್ರಹಣ ಮತ್ತು ಶಾಶ್ವತ್​ ಸಚ್​ದೇವ್​ ಹಿನ್ನೆಲೆ ಸಂಗೀತ ಕೂಡ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಿಸುತ್ತವೆ. ಒಂದೊಳ್ಳೆ ಸಿನಿಮ್ಯಾಟಿಕ್​ ಅನುಭವ ನೀಡುವ ಜತೆಗೆ ಇತಿಹಾಸವನ್ನು ಮತ್ತೊಮ್ಮೆ, ಮಗದೊಮ್ಮೆ ನೆನಪಿಸುವ "ಧುರಂಧರ್​' ಗೂಢಚಾರರ ರಹಸ್ಯಮಯ ಜೀವನದ ದರ್ಶನವನ್ನೂ ಮಾಡಿಸುತ್ತದೆ.

ಮೊದಲ ದಿನವೇ ದಾಖಲೆ

"ಧುರಂಧರ್​ 2' ಕಲೆಕ್ಷನ್​ನಲ್ಲೂ ಹೊಸ ದಾಖಲೆ ಬರೆದಿದೆ. ಪಾಕ್​ ವಿರೋಧಿ ವಿಷಯವಿರುವ ಕಾರಣ "ಧುರಂಧರ್​' ಸರಣಿ ಕೊಲ್ಲಿ ರಾಷ್ಟ್ರಗಳಲ್ಲಿ ರಿಲೀಸ್​ ಆಗಿರಲಿಲ್ಲ. ಇದೀಗ ಯುದ್ಧವೂ ನಡೆಯುತ್ತಿರುವ ಕಾರಣ ಸೀಕ್ವೆಲ್​ ಕೂಡ ಹಲವು ದೇಶಗಳಲ್ಲಿ ಬಿಡುಗಡೆಯಾಗಿಲ್ಲ. ಅದರ ನಡುವೆಯೂ "ಧುರಂಧರ್​' ಕಲೆಕ್ಷನ್​ ಕಿಂಗ್​ ಆಗಿದೆ. ಬುಧವಾರ (ಮಾ. 18) ಪೇಯ್ಡ್​ ಪ್ರೀಮಿಯರ್​ನಲ್ಲೇ ಭಾರತದಲ್ಲಿ ₹43 ಕೋಟಿ ಸೇರಿ ವಿಶ್ವಾದ್ಯಂತ ₹75 ಕೋಟಿ ಬಾಚಿಕೊಂಡಿದ್ದ ಸಿನಿಮಾ, ಗುರುವಾರ (ಮಾ. 19) ₹165 ಕೋಟಿ ಕಲೆಕ್ಷನ್​ ಮಾಡಿಕೊಂಡಿದೆ. ಆ ಮೂಲಕ ಮೊದಲ ದಿನದಂತ್ಯಕ್ಕೆ ಒಟ್ಟು ಗಳಿಕೆ ₹240 ಕೋಟಿ ದಾಟಿದ್ದು, ಭಾರತೀಯ ಬಾಕ್ಸಾಫಿಸಿನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ಹಿಂದೆ "ಆರ್​ಆರ್​ಆರ್​' (₹223 ಕೋಟಿ), "ಬಾಹುಬಲಿ 2' (₹214 ಕೋಟಿ) ಅತಿಹೆಚ್ಚು ಗಳಿಕೆ ಮಾಡಿದ್ದವು. ಇದೀಗ "ಧುರಂಧರ್​' ಹೊಸ ರೆಕಾರ್ಡ್​ ಸೃಷ್ಟಿಸಿದೆ. ಮೊದಲ ವಾರಾಂತ್ಯಕ್ಕೆ ₹600 ಕೋಟಿ ದಾಟುವ ಸಾಮರ್ಥ್ಯವಿರುವ ಈ ಚಿತ್ರದ ಒಟ್ಟು ಗಳಿಕೆ ₹2000 ಕೋಟಿ ಮುಟ್ಟಿದರೂ ಆಶ್ಚರ್ಯವಿಲ್ಲ ಎಂದು ಬಾಲಿವುಡ್​ ಪಂಡಿತರು ಭವಿಷ್ಯ ನುಡಿದಿದ್ದು, ಕುತೂಹಲ ಮೂಡಿಸಿದೆ.