- ಮಾತನಾಡುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಪಾಪರಾಜಿ
- ಕ್ಷಣಾರ್ಧದಲ್ಲಿ ತಿರುಗೇಟು ನೀಡಿದ ನಟಿ ಶ್ರುತಿ ಹಾಸನ್
- ನಟಿಯ ಪರವಾಗಿ ನಿಂತ ಅಭಿಮಾನಿಗಳು
ಪಾಪರಾಜಿಗಳು ಅಂದರೆ ಕೆಲ ಸೆಲೆಬ್ರಿಟಿಗಳಿಗೆ ಅತಿಯಾದ ಪ್ರೀತಿಯಾದರೆ, ಇನ್ನು ಕೆಲ ತಾರೆಯರಿಗೆ ಅಷ್ಟಕ್ಕಷ್ಟೇ. ಇದೆರಡಕ್ಕೂ ಕಾರಣ ಆಗಾಗ ವೈರಲ್ ಆಗುವ ಫೋಟೋ ಮತ್ತು ವಿಡಿಯೋಗಳು. ಸ್ಟಾರ್‌ಗಳ ಫೋಟೋ, ವಿಡಿಯೋ ಮಾಡುವ ಜತೆಜತೆಗೆ ಕೆಲವೊಮ್ಮೆ ಪಾಪರಾಜಿಗಳು ಅವರ ಜತೆ ಮಾತನಾಡುವುದುಂಟು. ಹೀಗೆ ಮಾತನಾಡುವ ಭರದಲ್ಲಿ ಇತ್ತೀಚೆಗಷ್ಟೆ ಪಾಪರಾಜಿಯೊಬ್ಬ ನಟಿ ಶ್ರುತಿ ಹಾಸನ್ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಮುಂಬೈನ ರೆಸ್ಟೋರೆಂಟ್‌ವೊಂದಕ್ಕೆ ಶ್ರುತಿ ಹೋಗುತ್ತಿದ್ದು, ಪಾರ್ಕಿಂಗ್ ಜಾಗದಲ್ಲಿ ಪಾಪರಾಜಿಗಳು ನಟಿಯ ಫೋಟೋ ಕ್ಕಿಕ್ಕಿಸಲು ಬಂದಿದ್ದರು. ಆಗ ಒಬ್ಬ ಶ್ರುತಿಯನ್ನು ಕಂಡು ‘ಮಮ್ಮಾ, ಮಮ್ಮಾ’ ಎಂದಿದ್ದಾನೆ. ಈ ಮಾತು ನಟಿಯ ಕೋಪಕ್ಕೆ ಕಾರಣವಾಗಿದ್ದು, ಕೂಡಲೇ ಎದುರು ಉತ್ತರಿಸಿ, ‘ಯಾರು ಮಮ್ಮಾ? ನಿಮ್ಮ ಮಮ್ಮಾನಾ? ಏನು ಮಾತನಾಡುತ್ತಿದ್ದೀರಿ?’ ಎಂದು ಸಿಡಿಮಿಡಿಗೊಂಡಿದ್ದಾರೆ. ಬಳಿಕ ಅಲ್ಲಿದ್ದ ಉಳಿದ ಪಾಪರಾಜಿಗಳು ನಟಿಯನ್ನು ಸಮಾಧಾನಪಡಿಸಿದ್ದು, ನಂತರ ಕಾರು ಹತ್ತಿ ಶ್ರುತಿ ತೆರಳಿದ್ದಾರೆ. ನಟಿಯ ಬಗ್ಗೆ ಮುಜುಗುರಕ್ಕೀಡಾಗುವ ಮಾತನಾಡಿದ ಪಾಪರಾಜಿ ವಿರುದ್ಧ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅಭಿಮಾನಿಗಳು ಶ್ರುತಿ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಈ ಬಗ್ಗೆ ನಟಿ ಶ್ರುತಿ ಹಾಸನ್ ಎಲ್ಲಿಯೂ ಪ್ರತಿಕ್ರಿಯಿಸಿಲ್ಲ. ಉಳಿದಂತೆ ಅವರು ಸದ್ಯ ತೆಲುಗಿನ ‘ಆಕಾಶಂಲೋ ಒಕ ತಾರಾ’, ತಮಿಳಿನ ‘ಟ್ರೇನ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್