ಕರೀನಾ ಕಪೂರ್​ 
ಬಾಲಿವುಡ್

Kareena Kapoor - ಕರೀನಾ, ನೀವು ಮಾಡಿದ್ದು ಸರೀನಾ?

Kareena Kapoor-
ವಿಮಾನ ನಿಲ್ದಾಣಗಳಲ್ಲಿ ವಿಶೇಷ ಭದ್ರತೆ ಇರುತ್ತದೆ. ಸಿಐಎಸ್​ಎಫ್​​ ಯೋಧರು ಪ್ರತಿಯೊಬ್ಬರ ಬೋರ್ಡಿಂಗ್​ ಪಾಸ್​ ಹಾಗೂ ಗುರುತಿನ ಚೀಟಿ ಪರಿಶೀಲಿಸಿ ಒಳಗೆ ಬಿಡುತ್ತಾರೆ. ಬಡವ, ಶ್ರೀಮಂತ ಎನ್ನದೇ ಎಲ್ಲರೂ ಸರತಿ ಸಾಲಿನಲ್ಲಿ ನಿಂತು, ಸೆಕ್ಯೂರಿಟಿ ಚೆಕ್​ಗೆ ಒಳಗಾಗಿಯೇ ನಿಲ್ದಾಣದ ಒಳಗೆ ಬರಬೇಕು. ಆದರೆ, ಇತ್ತೀಚೆಗಷ್ಟೆ ಬಾಲಿವುಡ್​ ನಟಿ ಕರೀನಾ ಕಪೂರ್​, ಮುಂಬೈ ವಿಮಾನ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲದೇ, ಜನರ ನಡುವೆಯೇ ಮುಂದಕ್ಕೆ ಬಂದು, ಸೆಕ್ಯೂರಿಟಿ ಚೆಕ್ಕಿಂಗ್​ ಕೂಡ ಮಾಡಿಸಿಕೊಳ್ಳದೇ, ನೇರ ಒಳಗೆ ಪ್ರವೇಶಿಸಿದ್ದಾರೆ. ಅದರ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಲವರು ಕರೀನಾ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಕೆಲವರು ಮುಂಬೈ ಏರ್​ಪೋರ್ಟ್​ ಸೆಕ್ಯೂರಿಟಿ ಸಿಬ್ಬಂದಿ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
"ಸ್ಟಾರ್​ಗಳನ್ನು ಇಷ್ಟು ಹೊತ್ತು ಮೆರೆಸುವುದು ಭಾರತದಲ್ಲಿ ಮಾತ್ರ. ರಕ್ಷಣೆ ವಿಷಯ ಬಂದಾಗ ಎಲ್ಲರನ್ನೂ ಒಂದೇ ರೀತಿ ನೋಡಬೇಕು, ಒಂದೇ ರೂಲ್​ ಇರಬೇಕು' ಎಂದು ಕಿವಿಮಾತು ನುಡಿದಿದ್ದಾರೆ. ಕರೀನಾ ಕಪೂರ್​ ಮಾತ್ರವಲ್ಲ ಈ ಹಿಂದೆ ಸಲ್ಮಾನ್​ ಖಾನ್​, ಅಲ್ಲು ಅರ್ಜುನ್​ ಸೇರಿ ಕೆಲ ತಾರೆಯರು ಸರತಿ ಸಾಲಿನಲ್ಲಿ ನಿಲ್ಲದೇ, ಸೆಕ್ಯೂರಿಟಿ ಚೆಕ್​ಗಾಗಿ ಕಾಯದೇ ಏರ್​ಪೋರ್ಟ್​ ಒಳಗೆ ಹೋಗಿದ್ದು ಸುದ್ದಿಯಾಗಿತ್ತು. ಇನ್ನು ಶಾರುಖ್​ ಖಾನ್​, ಇರ್ಫಾನ್​​, ಜಾನ್​ ಅಬ್ರಹಾಂ ಸೇರಿ ಕೆಲ ಸ್ಟಾರ್​ಗಳನ್ನು ಅಮೆರಿಕದ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿಚಾರಣೆಗೂ ಒಳಪಡಿಸಲಾಗಿತ್ತು ಎಂದು ವರದಿಗಳಾಗಿದ್ದವು.