ಚಿತ್ರ Instagram 
ಬಾಲಿವುಡ್

ಭಾರತಕ್ಕಿಂತ ಈ ದೇಶವೇ ಬೆಸ್ಟ್​..ದುಬೈನಲ್ಲಿ ಏಜೆಂಟ್ ಆಗಿದ್ದೇಕೆ 'ಗೋಲ್ಮಾಲ್ 'ನಟಿ ರಿಮಿ ಸೇನ್​...? Rimi Sen

Rimi Sen: 20 ರ ದಶಕದಲ್ಲಿ ಹಂಗಾಮಾ, ಧೂಮ್, ಗೋಲ್ಮಾಲ್, ಫಿರ್ ಹೇರಾ ಫೆರಿ ಚಿತ್ರಗಳಲ್ಲಿ ನಟಿಸಿ ಬಾಲಿವುಡ್​ನಲ್ಲಿ ಸದ್ದು ಮಾಡಿದ್ದ ನಟಿ ರಿಮಿ ಸೇನ್ ಸಧ್ಯ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದಿದ್ದು, ಇತ್ತೀಚೆಗೆ ನಟಿ ಬೇರೊಂದು ವಿಷಯದಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೇನಂತೀರಾ ಈ ಸ್ಟೋರಿ ಓದಿ.
ನಟಿ ಸದ್ಯ ದುಬೈನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ತಮ್ಮ ಹೊಸ ವೃತ್ತಿ ಜೀವನದ ಬಗ್ಗೆ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಇತ್ತೀಚಿಗೆ ನಡೆದ ಬಿಲ್ಡ್‌ಕ್ಯಾಪ್ಸ್ ರಿಯಲ್ ಎಸ್ಟೇಟ್ ಎಲ್‌ಎಲ್‌ಸಿ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ದುಬೈ ಅವರನ್ನು ಹೇಗೆ ಸ್ವಾಗತಿಸಿತು ಹಾಗೆಯೇ ಕಟ್-ಥ್ರೋಟ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೇಗೆ ಹಿಡಿತ ಸಾಧಿಸಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.
ದುಬೈ ಎಲ್ಲರನ್ನೂ ಸ್ವಾಗತಿಸುವ ನಗರ. ಇಲ್ಲಿನ ಜನಸಂಖ್ಯೆಯಲ್ಲಿ ಶೇ. 95ರಷ್ಟು  ವಿದೇಶಿಯರಿದ್ದಾರೆ. ಆದರೂ ಇದು ಎಲ್ಲರಿಗೂ ಮನೆಯಂತೆ ಭಾಸವಾಗುತ್ತದೆ. ಮಸೀದಿಗಳು, ದೇವಾಲಯಗಳು ಎಲ್ಲವೂ ಇವೆ. ನಗರವು ಜನರ ಜೀವನವನ್ನು ಸುಲಭಗೊಳಿಸುವತ್ತ ಗಮನ ಹರಿಸುತ್ತದೆ ಎಂದರು.
ನಮ್ಮ ದೇಶದಲ್ಲಿ ಇದು ನಿಜಕ್ಕೂ ಕಾಣದ ಸಂಗತಿ. ಏಕೆಂದರೆ, ಸರ್ಕಾರವು ರಾತ್ರೋರಾತ್ರಿ ನೀತಿಗಳನ್ನು ಬದಲಾಯಿಸುತ್ತಲೇ ಇರುತ್ತದೆ, ಇದು ಜನರ ಜೀವನವನ್ನು ಹೆಚ್ಚು ಕಷ್ಟಕರವಾಗಿಸುತ್ತದೆ. ಆದರೆ, ದುಬೈಯಲ್ಲಿ ವ್ಯವಹಾರ ಸುಗಮವಾಗಿದೆ ಇಲ್ಲಿ ತೆರಿಗೆಗಳು ಮತ್ತು ಸಂಕೀರ್ಣತೆಗಳು ಕಡಿಮೆ ಎಮದು ಹೇಳಿದರು.
ಇಲ್ಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಶಿಸ್ತು ಇದೆ. ಏಜೆಂಟ್‌ಗಳು ಮತ್ತು ಏಜೆನ್ಸಿಗಳ ಮೂಲಕ ಮಾತ್ರ ಕೆಲಸ ನಡೆಯುತ್ತದೆ. ಡೆವಲಪರ್‌ಗಳು ಮತ್ತು ಏಜೆನ್ಸಿಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತವೆ. ಆದಾಗ್ಯೂ, ದುಬೈಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ಗಳನ್ನು ಆರ್ಥಿಕ ಸಲಹೆಗಾರರಂತೆ ಗೌರವಿಸಲಾಗುತ್ತದೆ. ಆದರೆ ಭಾರತದಲ್ಲಿ ಎರಡು ತಿಂಗಳ ಬ್ರೋಕರೇಜ್ ಕೇಳಿದರೆ ಅಪರಾಧದಂತೆ ನೋಡಲಾಗುತ್ತದೆ ಎಂದು ಅಭಿಪ್ರಾಯ ಸೂಚಿಸಿದ್ದಾರೆ.

ಬೊಟಾಕ್ಸ್ ಮತ್ತು ಫಿಲ್ಲರ್‌ಗಳ ಕುರಿತು ರಿಮಿ ಸೇನ್

ಎರಡು ವರ್ಷಗಳ ಹಿಂದೆ ರಿಮಿ ಸೇನ್ ಅವರ ಲುಕ್ ಬದಲಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಅನೇಕರು ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದರು. ಈ ವಿಚಾರದ ಕುರಿತು ಹಿಂದೂಸ್ತಾನ್ ಟೈಮ್ಸ್‌ಗೆ ಸಂದರ್ಶನ ನೀಡಿದ ನಟಿ ಜನರು ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಭಾವಿಸಿದರೆ ಅದು ನನಗೆ ತುಂಬಾ ಒಳ್ಳೆಯದು. ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳದೆ, ಜನ ಹೀಗೆ ಮಾತನಾಡುತ್ತಿದ್ದಾರೆ. ಆದರೆ, ನಾನು ಫಿಲ್ಲರ್‌ಗಳು, ಬೊಟಾಕ್ಸ್ ಮತ್ತು ಪಿಆರ್‌ಪಿ ಚಿಕಿತ್ಸೆಯನ್ನು ಮಾತ್ರ ಮಾಡಿಸಿಕೊಂಡಿದ್ದೇನೆ ಎಂದರು (ಏಜೆನ್ಸೀಸ್​).