ಸುಂದರ ಕ್ಷಣಗಳನ್ನು ಹಂಚಿಕೊಂಡ ನಟ ಕಬೀರ್ ಬೇಡಿ ಜೋಡಿ (ಚಿತ್ರ Instagram)
Kabir Bedi: ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಾಲಿವುಡ್‌ನ ಹಿರಿಯ ನಟ, ಕಬೀರ್ ಬೇಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ, ಇದು ಸಿನಿಮಾಗಳಿಂದಲ್ಲ. ಬದಲಾಗಿ, ಅವರ ವೈಯಕ್ತಿಕ ಜೀವನ ಸಂಭ್ರಮದಿಂದ. ಅದೇನಂತೀರಾ? ಹೌದು, ನಟ ಕಬೀರ್ ಬೇಡಿ ಅವರು ತಮ್ಮ ಪತ್ನಿ ಪರ್ವೀನ್ ದೋಸಾಂಜ್ ಅವರೊಂದಿಗೆ 10ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಈ ಸುಂದರ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲೇನಿದೆ?
ತಮ್ಮ ಗೋವಾ ಪ್ರವಾಸದ ಸುಂದರ ಕ್ಷಣಗಳನ್ನು ಹಂಚಿಕೊಂಡ ಈ ಜೋಡಿ ನಮ್ಮ 10ನೇ ವಿವಾಹ ವಾರ್ಷಿಕೋತ್ಸವ, ಒಟ್ಟಿಗೆ ಕಳೆದ 20 ವರ್ಷಗಳ ಅಮೂಲ್ಯ ಸಮಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಪ್ರವಾಸದ ಉದ್ದೇಶವನ್ನು ವಿವರಿಸುತ್ತಾ, ಇದು ಹಳೆಯ ನೆನಪುಗಳನ್ನು ಮೆಲುಕು ಹಾಕುವ ಜೀವನದ ಬಗ್ಗೆ ಪ್ರತಿಬಿಂಬಿಸುವ ಮತ್ತು ನಮ್ಮ ಭಾಂದವ್ಯವನ್ನು ನವೀಕರಿಸುವ ಸಮಯವಾಗಿತ್ತು. ನಾವಿಬ್ಬರೂ ಒಟ್ಟಿಗೆ ಕಳೆದ ಸಮಯ, ಏಕಾಂತದ ಕ್ಷಣಗಳು ತುಂಬಾ ಸುಂದರವಾಗಿದ್ದವು. ನಾವು ಈಗ ಹಿಂತಿರುಗಿದ್ದೇವೆ! ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.
ಈ ಜೋಡಿ ತಮ್ಮ ಜೀವನವನ್ನು ಅತ್ಯುತ್ತಮವಾಗಿ ನಡೆಸುತ್ತಿರುವುದನ್ನು ನಾವು ಕಾಣಬಹುದು. ಇವರು ಸಮುದ್ರದ ಬಳಿ ರುಚಿಕರವಾದ ಊಟಗಳನ್ನು ಸವಿಯುವುದರಿಂದ ಹಿಡಿದು ಸಮುದ್ರ ತೀರದಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳುವುದು. ಅವರಿಬ್ಬರ ಪ್ರೀತಿಯನ್ನು ತಿಳಿಸುತ್ತದೆ.
ವಯಸ್ಸಿನ ಅಂತರ ಮೀರಿಸಿದ ಪ್ರೀತಿ!
ಕಬೀರ್ ಬೇಡಿ ಅವರಿಗೆ ಈಗ 80 ವರ್ಷ ವಯಸ್ಸು. ಅವರ ಪತ್ನಿ ಪರ್ವೀನ್ ದೋಸಾಂಜ್ ಅವರು ಕಬೀರ್ಗಿಂತ 29 ವರ್ಷ ಕಿರಿಯ ವಯಸ್ಸಿನವರು. ಆದರೂ, ಈ ಜೋಡಿ ಕಳೆದ ಒಂದು ದಶಕದಿಂದ ಅತ್ಯಂತ ಸುಖವಾಗಿ ಜೀವನವನ್ನು ನಡೆಸುತ್ತಿರುವುದು ಅನೇಕ ದಂಪತಿಗೆ ಮಾದರಿಯಾಗಿದೆ.
2016ರಲ್ಲಿ ಕಬೀರ್ ಬೇಡಿ ತಮ್ಮ 70ನೇ ಹುಟ್ಟುಹಬ್ಬದ ಹಿಂದಿನ ದಿನ ಪರ್ವೀನ್ ಅವರನ್ನು ವಿವಾಹವಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.
ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಾವಿರಾರು ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸಿದ್ದಾರೆ. ಒಬ್ಬ ಬಳಕೆದಾರರು ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವದ ಶುಭಾಶಯಗಳು ಹೀರೋ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬ ಬಳಕೆದಾರ ನೀವಿಬ್ಬರೂ ಕೊನೆಯ ತನಕ ಹೀಗೆ ಇರಿ ಎಂದು ಬರೆದಿದ್ದಾರೆ (ಏಜೆನ್ಸೀಸ್).