ನಟಿ ಮುಮೈತ್ ( Mumaith Khan )
- ಮಗಧೀರ ಸಿನಿಮಾ ನೋಡಿದವರಿಗೆ ಬಂಗಾರಿ ಕೋಳಿ ಪೆಟ್ಟ ಹಾಡು ನೆನಪಿರುತ್ತದೆ
- ಈ ಹಾಡಿನಲ್ಲಿ ತುಂಬಾ ಹಾಟ್ ಆಗಿ ಸೊಂಟ ಬಳುಕಿಸಿದ ಮುಮೈತ್ ಖಾನ್ ಅನೇಕರಿಗೆ ಪರಿಚಿತರು
- ಗ್ಲಾಮರಸ್ ಗೊಂಬೆ ಎನಿಸಿಕೊಂಡಿದ್ದ ಮುಮೈತ್ ಖಾನ್ ಜೀವನದಲ್ಲಿ ನಡೆದ ಕಹಿ ಘಟನೆ ಮೆಲಕು ಹಾಕಿದ್ದಾರೆ
Mumaith Khan : ಮುಂದೆ ಏನಾಗುತ್ತದೆ ಎಂದು ಯಾರೂ ಊಹಿಸಲಾಗದು. ಈ ಅನಿರೀಕ್ಷಿತ ಜೀವನದಲ್ಲಿ ಮುಂದಿನ ಕ್ಷಣದಲ್ಲಿ ನಮಗಾಗಿ ಏನು ಕಾದಿರುತ್ತದೆ ಎಂದು ಹೇಳಲಾಗದು. ಖ್ಯಾತಿಯ ಉತ್ತುಂಗಕ್ಕೆ ಏರಿದವರು ಕೂಡ ದಿನ ಕಳೆದಂತೆ ಮರೆತು ಹೋಗಬಹುದು. ನಾವು ಈವರೆಗೂ ಹಾಕಿದ ಪೀಠಿಕೆಗೆ ನಟಿ ಮುಮೈತ್ ಖಾನ್ ಜೀವನ ತಾಜಾ ಸಾಕ್ಷಿಯಾಗಿದೆ.
ಹೌದು, ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾ ನೋಡಿದವರಿಗೆ ಬಂಗಾರಿ ಕೋಳಿ ಪೆಟ್ಟ ಹಾಡು ನೆನಪಿರುತ್ತದೆ. ಈ ಹಾಡಿನಲ್ಲಿ ತುಂಬಾ ಹಾಟ್ ಆಗಿ ಸೊಂಟ ಬಳುಕಿಸಿದ ಮುಮೈತ್ ಖಾನ್, ಅನೇಕರಿಗೆ ಪರಿಚಿತರು. ಐಟಂ ಸಾಂಗ್ಗಳಿಂದಲೇ ಸುದ್ದಿ ಮಾಡಿದವರು. ಗ್ಲಾಮರಸ್ ಗೊಂಬೆ ಎನಿಸಿಕೊಂಡಿದ್ದ ಮುಮೈತ್ ಖಾನ್ ಹಿಂದೊಮ್ಮೆ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮೆಲಕು ಹಾಕಿದ್ದಾರೆ.
ಮುಮೈತ್ ಖಾನ್ ಅವರು ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆ ನಟಿಯಾಗಿದ್ದರು. ಐಟಂ ಡಾನ್ಸ್ಗಳಿಗೆ ಮೊಲದ ಆಯ್ಕೆ ಮುಮೈತ್ ಆಗಿರುತ್ತಿದ್ದರು. ತಮ್ಮ 13ನೇ ವಯಸ್ಸಿನಿಂದಲೇ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, 18 ನೇ ವಯಸ್ಸಿನಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ಚಿತ್ರದಲ್ಲಿನ ಡೀಕ್ ಲೆ ಎಂಬ ಡಾನ್ಸ್ ನಂಬರ್ನಿಂದ ಮುಮೈತ್ ತಾರೆಯಾದರು. ನಂತರ, ಅವರು ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಂಡರು. ಮುಮೈತ್ ಅವರ ಐಟಂ ಸಾಂಗ್ ಇದ್ದರೆ ಆ ಸಿನಿಮಾ ಹಿಟ್ ಆಗುವುದು ಗ್ಯಾರಂಟಿ ಎಂಬ ಕಾಲವಿತ್ತು. ಅವರ ನೃತ್ಯವಿಲ್ಲದೆ ಸೂಪರ್‌ಸ್ಟಾರ್‌ಗಳ ಚಿತ್ರಗಳು ಅಪೂರ್ಣವಾಗುತ್ತಿದ್ದವು. ಐಟಂ ನೃತ್ಯದ ಜೊತೆಗೆ, ಆ ಕಾಲದ ನೈತಿಕತೆಯನ್ನು ಪ್ರಶ್ನಿಸುವ ದಿಟ್ಟ ಪಾತ್ರಗಳಿಂದಲೂ ಮುಮೈತ್ ಸಂಚಲನ ಮೂಡಿಸಿದರು.
ತಂದೆ ಪಾಕಿಸ್ತಾನಿ
ಅಂದಹಾಗೆ, ಮುಮೈತ್ ಅವರು ಮುಂಬೈನಲ್ಲಿ ಜನಿಸಿದರು. ಅವರ ತಂದೆ ಪಾಕಿಸ್ತಾನಿ ಮತ್ತು ತಾಯಿ ತಮಿಳುನಾಡಿನವರು. ಅವರ ಕುಟುಂಬದ ಬಡತನ ಮುಮೈತ್ ಅವರನ್ನು ಸಿನಿಮಾ ಕಡೆಗೆ ಕರೆದೊಯ್ದಿತು. ಇತ್ತೀಚೆಗೆ ಐಡ್ರೀಮ್‌ಗೆ ನೀಡಿದ ಸಂದರ್ಶನದಲ್ಲಿ ಮುಮೈತ್ ಅವರು ತಮ್ಮ ಕಷ್ಟ ಕಾಲವನ್ನು ನೆನೆದು ಭಾವುಕರಾದರು.
ಹಣ ಸಂಪಾದಿಸಲು ಹೇಳಲಿಲ್ಲ
ನನ್ನ ತಂದೆ ಮತ್ತು ತಾಯಿ ನನಗೆ ಹಣ ಸಂಪಾದಿಸಲು ಹೇಳಲಿಲ್ಲ. ದೊಡ್ಡವರಾದಾಗ, ನನ್ನ ತಂಗಿ ಮತ್ತು ನಾನು ಮನೆಯಲ್ಲಿ ಹಣವಿಲ್ಲ ಎಂದು ಅರಿತುಕೊಂಡೆವು. ಬಾಲ್ಯದಲ್ಲಿಯೂ ನಾನು ಶಾಲೆಗೆ ನಡೆದುಕೊಂಡು ಹೋಗಿ ಒಂದೂವರೆ ರೂಪಾಯಿ ಉಳಿಸುತ್ತಿದ್ದೆ. ನಾನು ಅದನ್ನು ನನ್ನ ಪಿಗ್ಗಿ ಬ್ಯಾಂಕಿನಲ್ಲಿ ಇಟ್ಟುಕೊಂಡು ನನ್ನ ತಂದೆಗೆ ಕೊಡುತ್ತಿದ್ದೆ. ಅವರು ಎಂದಿಗೂ ನನ್ನನ್ನು ಕೇಳದಿದ್ದರೂ ಸಹ ನಾನು ಕೊಡುತ್ತಿದ್ದೆ ಎಂದು ಮುಮೈತ್ ಖಾನ್ ಹೇಳಿದ್ದಾರೆ.
ಮುಮೈತ್ ಖಾನ್ ಅವರು ಹಲ್ಚಲ್, ರೌಡಿ ರಾಥೋಡ್ ಮತ್ತು ಲಕ್ಕಿಯಂತಹ ಹಿಂದಿ ಚಿತ್ರಗಳಲ್ಲಿ ಮತ್ತು ಪೋಕಿರಿ, ಕಂದಸಾಮಿ, ಛತ್ರಪತಿ, ಬಾಯ್ಸ್, ವೆಟ್ಟೈಯಾಡ್ ವಿಲಾಯಾಟ್, ವಿಲ್ಲು ಮತ್ತು ಸಿರುತೈ ಮುಂತಾದ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಒರಟಾ, ರಾಜ್ ದಿ ಶೋ ಮ್ಯಾನ್, ಶೌರ್ಯ ಹಾಗೂ ರಾಜಧಾನಿ ಸಿನಿಮಾದಲ್ಲಿ ಐಟಂ ಸಾಂಗ್ಗಳಲ್ಲಿ ಮಿಂಚಿದ್ದಾರೆ. ಮುಮೈತ್ ಖಾನ್ ಅವರ ಹಿಟ್ ಹಾಡುಗಳು ಇಂದಿಗೂ ಅಭಿಮಾನಿಗಳನ್ನು ರಂಜಿಸುತ್ತಲೇ ಇವೆ.
ಹಠಾತ್ ಕಣ್ಮರೆ
ಖ್ಯಾತಿಯ ಉತ್ತುಂಗದಲ್ಲಿದ್ದ ಮುಮೈತ್ ಖಾನ್, ಹಠಾತ್ ಕಣ್ಮರೆಯಾದರು. ಇದಕ್ಕೆ ಒಂದು ಕಾರಣವೂ ಇದೆ. ಆ ಕಾರಣವನ್ನು ಸ್ವತಃ ಮುಮೈತ್ ಅವರೇ ತಿಳಿಸಿದ್ದಾರೆ. ನಾನು ಬೇಕು ಅಂತಲೇ ಸಿನಿ ಉದ್ಯಮವನ್ನು ಬಿಡಲಿಲ್ಲ. ನನಗೆ ಹಿಂದೊಮ್ಮೆ ಅಪಘಾತವಾಯಿತು. ಇದರಿಂದ ನನ್ನ ಮೆದುಳಿನಲ್ಲಿ ಐದು ನರಗಳು ಹಾನಿಗೊಳಗಾದವು. ಸುಮಾರು 15 ದಿನಗಳ ಕಾಲ ನಾನು ಕೋಮಾಗೆ ಜಾರಿದ್ದೆ. ವೈದ್ಯರು ಕನಿಷ್ಠ ಏಳು ವರ್ಷಗಳ ಕಾಲ ಕೆಲಸ ಮಾಡಬಾರದೆಂದು ಹೇಳಿದರು. ನನಗೆ ಏನನ್ನೂ ಎತ್ತಲು ಸಹ ಸಾಧ್ಯವಾಗಲಿಲ್ಲ. ನನ್ನ ಕೈಕಾಲುಗಳೇ ಆಡುತ್ತಿರಲಿಲ್ಲ. ನಾನು ಮೂರ್ಛೆರೋಗಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದೆ. ಅದರಿಂದಾಗಿ, ನನ್ನ ತೂಕ ಹೆಚ್ಚಾಯಿತು. ದೇವರೇ ನನಗೆ ವಿರಾಮ ನೀಡಿದನು. ನಾನು ಅದನ್ನು ಒಪ್ಪಿಕೊಂಡೆ. ಆ ಏಳು ವರ್ಷಗಳಲ್ಲಿ ನಾನು ನನ್ನನ್ನೇ ಅಧ್ಯಯನ ಮಾಡುವುದರಲ್ಲಿ ಕಳೆದೆ ಎಂದು ಮುಮೈತ್ ಖಾನ್ ತಿಳಿಸಿದ್ದಾರೆ.
ಏಳು ವರ್ಷದಲ್ಲಿ ನನ್ನನ್ನು ತಾಯಿಯೇ ನೋಡಿಕೊಂಡರು. ಇಂದಿಗೂ ಸಹ, ಹಣ ಖರ್ಚು ಮಾಡಬೇಕಾದಾಗಲೆಲ್ಲಾ ನಾನು ನನ್ನ ತಾಯಿಗೆ ಕರೆ ಮಾಡಿ ಅನುಮತಿ ಕೇಳುತ್ತೇನೆ ಎಂದು ಮುಮೈತ್ ಹೇಳಿದ್ದಾರೆ.
ಸದ್ಯ ನಿಧಾನವಾಗಿ ಸಹಜ ಜೀವನಕ್ಕೆ ಮರಳಿರುವ ಮುಮೈತ್, ಈಗ ಮೇಕಪ್ ಮತ್ತು ಕೇಶ ವಿನ್ಯಾಸ ತರಬೇತಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಡಾನ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸುತ್ತಿದ್ದಾರೆ. ನಟನಾ ದಿನಗಳಲ್ಲಿ ನಾನು ಅನುಭವಿಸಿದ ಕಷ್ಟಗಳೇ ನಾನು ಸಂಸ್ಥೆಯನ್ನು ಪ್ರಾರಂಭಿಸಲು ಕಾರಣವಾಯಿತು ಎಂದು ಮುಮೈತ್ ಹೇಳುತ್ತಾರೆ, (ಏಜೆನ್ಸೀಸ್).