3 ಈಡಿಯಟ್ಸ್ ಚಿತ್ರದ ಪೋಸ್ಟರ್
- 2009ರಲ್ಲಿ ತೆರೆಕಂಡ 3 ಈಡಿಯಟ್ಸ್ ಚಿತ್ರದ ಸೀಕ್ವೆಲ್ ಈಗ
- ಎರಡನೇ ಭಾಗಕ್ಕೆ ಅಸ್ತು ಎಂದ ಚಿತ್ರತಂಡ
- ಮತ್ತೊಮ್ಮೆ ಅಮೀರ್ ಖಾನ್, ರಾಜ್‌ಕುಮಾರ್ ಹಿರಾನಿ ಕಾಂಬೊ
ಮುಂಬೈ: ಬಾಲಿವುಡ್ ಅಂಗಳದಲ್ಲಿ 15 ವರ್ಷಗಳ ಹಿಂದೆ ತೆರೆಕಂಡು, ಸಿನಿಪ್ರಿಯರ ಜನಮಾನಸದಲ್ಲಿ ಇಂದಿಗೂ ಮರೆಯಲಾಗದ ಚಿತ್ರವಾಗಿ ಉಳಿದಿರುವ '3 ಈಡಿಯಟ್ಸ್' ನಿಜಕ್ಕೂ ಒಂದೊಳ್ಳೆ ಹಾಗೂ ಭರಪೂರ ಮನರಂಜನೆ ನೀಡಿದಂತ ಸಿನಿಮಾ ಎಂದರೆ ಖಂಡಿತ ತಪ್ಪಾಗಲಾರದು. ನಟರಾದ ಅಮೀರ್ ಖಾನ್, ಆರ್. ಮಾಧವನ್, ಶರ್ಮಾನ್ ಜೋಶಿ ಮತ್ತು ಕರೀನಾ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಚಿತ್ರವು, ಅಂದಿನ ಬ್ಲಾಕ್ಬಸ್ಟರ್ ಹಿಟ್ ಜತೆಗೆ ಚಿತ್ರರಸಿಕರ ಕಣ್ಣಂಚಲ್ಲಿ ನೀರು ತರಿಸಿದ ಚಿತ್ರವಾಯಿತು.
ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ ಈ ಸಿನಿಮಾದ ತಾರಾಗಣವೇ ಚಿತ್ರದ ಮೊದಲ ಗೆಲುವು ಎಂಬ ಮಾತು ಇಂದಿಗೂ ಬಾಲಿವುಡ್ ಚಿತ್ರೋದ್ಯಮದಲ್ಲಿ ಗಟ್ಟಿಯಾಗಿ ಉಳಿದಿದೆ. 15 ವರ್ಷಗಳ ಬಳಿಕ ಈ ಚಿತ್ರದ ಸೀಕ್ವೆಲ್ ಅನ್ನು ಮಾಡಲು ಹಿರಾನಿ ನಿರ್ಧರಿಸಿದ್ದು, ಇದಕ್ಕಾಗಿ ಅಮೀರ್ ಖಾನ್ ಜತೆ ಮಾತುಕತೆ ಕೂಡ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬಹು ವರ್ಷಗಳಿಂದ ಸೀಕ್ವೆಲ್ ಕನಸು ಕಾಣುತ್ತಿದ್ದ ರಾಜ್‌ಕುಮಾರ್ ಹಿರಾನಿ, ಇತ್ತೀಚೆಗೆ ತಮ್ಮ ಮುಂಬರುವ 'ದಾದಾಸಾಹೇಬ್ ಫಾಲ್ಕೆ' ಬಯೋಪಿಕ್ ಚಿತ್ರ ಸ್ಥಗಿತಗೊಂಡ ಬೆನ್ನಲ್ಲೇ '3 ಈಡಿಯಟ್ಸ್ 2' ಸಿನಿಮಾ ಕೆಲಸಗಳನ್ನು ಚುರುಕುಗೊಳಿಸಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಈ ಮಧ್ಯೆ, ಅದೇ ಹಳೆಯ ತಂಡ ಎರಡನೇ ಭಾಗದಲ್ಲಿಯೂ ಇರಲಿದೆಯೇ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಕಾಡಲಾರಂಭಿಸಿದೆ. ಒಟ್ಟಾರೆ ಚಿತ್ರದ ಸೀಕ್ವೆಲ್ ಖಚಿತವಾಗಿದ್ದು, ಅದರ ಮುಂದಿನ ಕೆಲಸಗಳು ಎಷ್ಟು ಬೇಗ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
2009ರಲ್ಲಿ ರಿಲೀಸ್ ಆದ '3 ಈಡಿಯಟ್ಸ್' ಒಂದು ಕಲ್ಟ್ ಕ್ಲಾಸಿಕ್ ಚಿತ್ರವಾಗಿ ಅಪಾರ ಯಶಸ್ಸನ್ನು ಕಂಡಿತು. ಭಾರತದ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹಾಸ್ಯದ ಮೂಲಕವೇ ನೋಡುಗರ ಮನಸ್ಸಿಗೆ ಮುಟ್ಟಿಸಿದ ಒಂದೊಳ್ಳೆ ಸಿನಿಮಾ ಇದಾಯಿತು. ಕೇವಲ ಸಿನಿಪ್ರಿಯರ ಮನಗೆಲ್ಲದ ಚಿತ್ರವು, ಭಾರತೀಯ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂ.ಗೂ ಅಧಿಕ ಲಾಭವನ್ನು ಗಳಿಸಿತು.(ಏಜೆನ್ಸೀಸ್).