ಸಾಂದರ್ಭಿಕ ಚಿತ್ರ  
ಸೌಂದರ್ಯ

ಕೊರಿಯನ್ನರು, ಜಪಾನಿಯರು, ಚೀನಿಯರು ರಾತ್ರಿ ಹೊತ್ತು ಜಳಕ ಮಾಡೋದೇಕೆ? ಇದರ ಹಿಂದಿದೆ ಈ ಗುಟ್ಟು | Bathing

ಮೋಹನ್​ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಬಹುತೇಕರ ಬೆಳಗಿನ ಮೊದಲ ಕೆಲಸವೇ ಸ್ನಾನ
  • ಕೊರಿಯನ್ನರು, ಜಪಾನಿಯರು, ಚೀನಿಯರು ರಾತ್ರಿ ಹೊತ್ತು ಜಳಕ ಮಾಡ್ತಾರೆ
  • ರಾತ್ರಿ ವೇಳೆಯೇ ಏಕೆ ಸ್ನಾನ ಮಾಡ್ತಾರೆ ಇವರು? ಇದರ ಹಿಂದಿರುವ ಗುಟ್ಟೇನು?
Bathing: ಬಹುತೇಕರು ಬೆಳಗ್ಗೆ ಎದ್ದ ಕೂಡಲೇ ಮೊದಲು ಸ್ನಾನ ಮುಗಿಸಿಯೇ ನಂತರದ ಕೆಲಸಗಳತ್ತ ಗಮನ ಹರಿಸುತ್ತಾರೆ. ಇನ್ನೂ ಕೆಲವರು, ದಿನಕ್ಕೆ ಎರಡು ಅಥವಾ ಮೂರು ಬಾರಿ ಜಳಕ ಮಾಡ್ತಾರೆ. ಕೆಲವೇ ಕೆಲವರು ಮಾತ್ರ ತಮಗೆ ಬೆಳಗ್ಗೆ ಸ್ನಾನ ಮಾಡಲು ಆಗೋದಿಲ್ಲ ಎಂದು ರಾತ್ರಿ ಹೊತ್ತು ಮಾಡಿಕೊಳ್ಳುತ್ತಾರೆ. ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು ಮಾಡ್ತಾರೆ. ಸ್ನಾನ ಮಾಡುವುದರಿಂದ ನಿಮ್ಮ ದೇಹ ಶುದ್ಧೀಕರಣವಾಗುವುದಲ್ಲದೆ, ರಕ್ತ ಪರಿಚಲನೆ ಸಹ ಸುಧಾರಣೆಯಾಗುತ್ತದೆ ಮತ್ತು ಉತ್ತಮ ನಿದ್ರೆಗೂ ಸಹಾಯ ಮಾಡುತ್ತದೆ.
ಇದು ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಅಂದಹಾಗೆ ನಮ್ಮ ದೇಶದಲ್ಲಿ ಹಲವಾರು ವರ್ಷಗಳಿಂದ ಬೆಳಗಿನ ಸಮಯದಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಆದರೆ, ಪ್ರಾಚೀನ ಕಾಲದಿಂದಲೂ ಜಪಾನ್, ಕೊರಿಯಾ ಮತ್ತು ಚೀನಾಗಳಲ್ಲಿ ರಾತ್ರಿ ಹೊತ್ತು ಸ್ನಾನ ಮಾಡುವ ಅಭ್ಯಾಸವಿದೆ. ಈ ಅಭ್ಯಾಸದ ಹಿಂದೆ ಒಂದು ಆಸಕ್ತಿದಾಯಕ ಕಾರಣವೂ ಇದೆ. ರಾತ್ರಿ ಹೊತ್ತು ಸ್ನಾನ ಮಾಡುವುದರಿಂದ ಹಗಲಿನಲ್ಲಿ ದೇಹದಲ್ಲಿ ಸಂಗ್ರಹವಾಗಿರುವ ವಿಷ ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಕೊರಿಯಾದಲ್ಲಿ ಜನರು ಕೆಲಸದ ದಿನದ ನಂತರ ಸಂಜೆ ಮನೆಗೆ ಬಂದಾಗ ರಾತ್ರಿ ಸ್ನಾನ ಮಾಡಲು ಇಷ್ಟಪಡುತ್ತಾರೆ. ಇದರಿಂದಾಗಿ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ಇನ್ನು ಜಪಾನಿನ ಜನರು ರಾತ್ರಿ ಸ್ನಾನ ಮಾಡಿ ವಿಶ್ರಾಂತಿ ಪಡೆಯುತ್ತಾರೆ ಮತ್ತು ಮಾನಸಿಕವಾಗಿ ಉತ್ತಮ ನಿದ್ರೆ ಬರುತ್ತದೆ ಎಂಬುದು ಅವರ ನಂಬಿಕೆಯಾಗಿದೆ. ರಾತ್ರಿ ಸ್ನಾನ ಮಾಡುವುದರಿಂದ ಹಗಲಿನಲ್ಲಿ ಸಂಗ್ರಹವಾದ ಕೊಳೆಯನ್ನು ತೊಳೆದು ದೇಹವು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಬೆಡ್​ಶೀಟ್‌ಗಳ ಮೇಲೆ ಸಂಗ್ರಹವಾಗುವ ಎಣ್ಣೆ ಮತ್ತು ಕೊಳೆಯ ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದ ಚರ್ಮದ ಆರೋಗ್ಯವು ಉತ್ತಮವಾಗಿರುತ್ತದೆ. ಆದಾಗ್ಯೂ, ಯುನೈಟೆಡ್ ಸ್ಟೇಟ್ಸ್, ಯುರೋಪ್ ಮತ್ತು ಕೆನಡಾದಂತಹ ಪಾಶ್ಚಿಮಾತ್ಯ ರಾಷ್ಟ್ರಗಳ ಜನರು ಬೆಳಗಿನ ಸಮಯದಲ್ಲಿ ಸ್ನಾನ ಮಾಡಲು ಬಯಸುತ್ತಾರೆ.

ಜಳಕ ಮಾಡಲು ಸರಿಯಾದ ಮಾರ್ಗ ಯಾವುದು?

ಮೊದಲು ತಲೆಯ ಮೇಲೆ ನೀರು ಸುರಿದು ಸ್ನಾನ ಪ್ರಾರಂಭಿಸುವುದು ಉತ್ತಮ. ಆದರೆ, ನೀವು ನಿಮ್ಮ ತಲೆಯನ್ನು ತೊಳೆಯಲು ಇಷ್ಟಪಡದಿದ್ದರೆ, ನೀವು ಈ ಕೆಳಗಿನ ವಿಧಾನವನ್ನು ಪ್ರಯತ್ನಿಸಬಹುದು. ನಿಮ್ಮ ತಲೆಯ ಮೇಲೆ ನೀರು ಸುರಿಯಲು ನೀವು ಬಯಸದಿದ್ದರೆ, ಕನಿಷ್ಟಪಕ್ಷ ನಿಮ್ಮ ಕೂದಲನ್ನು ಒದ್ದೆ ಮಾಡಿ. ಸ್ವಲ್ಪ ತಣ್ಣೀರು ತೆಗೆದುಕೊಂಡು ತಲೆಯ ಮಧ್ಯ ಭಾಗವನ್ನು ಒದ್ದೆ ಮಾಡಿ. ನಿಮ್ಮ ಎರಡೂ ಕಿವಿಗಳ ನಡುವಿನ ರೇಖೆಯನ್ನು ರೂಪಿಸುವ ತಲೆಯ ಮಧ್ಯಭಾಗದಲ್ಲಿರುವ ಭಾಗವನ್ನು ಒದ್ದೆ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಮನಸ್ಸನ್ನು ತಂಪಾಗಿಸುತ್ತದೆ.
ಇದಾದ ನಂತರ ಇಡೀ ದೇಹದ ಮೇಲೆ ನೀರನ್ನು ಸುರಿಯಬಹುದು. ಪ್ರತಿದಿನ ಸ್ನಾನ ಮಾಡುವುದು ಒಳ್ಳೆಯದು. ಬೆಚ್ಚಗಿನ ನೀರು ಉತ್ತಮ. ಅತಿಯಾದ ಬಿಸಿನೀರು ಚರ್ಮವನ್ನು ಒಣಗಿಸಬಹುದು. ಸ್ನಾನದ ನಂತರ ದೇಹವನ್ನು ಸಂಪೂರ್ಣವಾಗಿ ಒಣಗಿಸುವುದು ಸಹ ಮುಖ್ಯವಾಗಿದೆ. ಆದರೆ, ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ, ವಾರಕ್ಕೆ 2 ರಿಂದ 3 ಬಾರಿ ಸ್ನಾನ ಮಾಡುವುದು ಉತ್ತಮ ಅಭ್ಯಾಸ.

ಸ್ನಾನದಿಂದ ಏನೆಲ್ಲ ಪ್ರಯೋಜನ?

ಸ್ನಾನವು ಕೊಳಕು, ಬೆವರು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಸ್ನಾನವು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣುಗಳು ನಾಶವಾಗುತ್ತವೆ ಮತ್ತು ರೋಗಗಳನ್ನು ತಡೆಯುತ್ತವೆ. ರಕ್ತ ಪರಿಚಲನೆಗೆ ಮತ್ತು ಮಾನಸಿಕ ಆರೋಗ್ಯಕ್ಕೂ ಸ್ನಾನ ತುಂಬಾನೇ ಒಳ್ಳೆಯದು.
ನಿಮ್ಮ ಗಮನಕ್ಕೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.