Dental Care: ನಗಲು, ಸ್ಪಷ್ಟವಾಗಿ ಮಾತನಾಡಲು, ಗಟ್ಟಿಯಾಗಿರೋದನ್ನು ಅಗಿಯಲು ಹಲ್ಲು ಮುಖ್ಯ. ಇದು ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ಹೆಚ್ಚಿಸುತ್ತದೆ. ಇವುಗಳನ್ನು ಕೆಲವರು ಎರಡು ಬಾರಿ ಬ್ರಷ್ ಮಾಡಿ ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ. ಆದರೂ ಕಾಡೋದು ಬಿಳಿ ಹಲ್ಲಿನಲ್ಲಿ ಕಾಣುವ ಹಳದಿ ಬಣ್ಣದ ಸಮಸ್ಯೆ. ಎಷ್ಟೇ ಬ್ರಷ್ ಮಾಡಿದರೂ ಹಲ್ಲುಗಳು ಹಳದಿಯಾಗುತ್ತಿದ್ದರೆ ಕೆಲವು ಅಂಶಗಳು ನೀವು ಗಮನಿಸಬೇಕಾದದ್ದು ಇವೆ.
ಬಾಯಿಯನ್ನು ದೇಹದ ಆರೋಗ್ಯದ ಕೈಗನ್ನಡಿ ಎಂದು ಕರೆಯಲಾಗುತ್ತದೆ. ಹಲ್ಲುಗಳ ಬಣ್ಣ ಬದಲಾಗುವುದರ ಹಿಂದೆ ಕೇವಲ ಸ್ವಚ್ಛತೆಯ ಕೊರತೆ ಮಾತ್ರವಲ್ಲ, ಇನ್ನೂ ಹಲವು ಆಂತರಿಕ ಹಾಗೂ ಬಾಹ್ಯ ಕಾರಣಗಳಿರಬಹುದು ಎನ್ನುತ್ತಾರೆ ದಂತ ತಜ್ಞೆ ಡಾ. ಶ್ರದ್ಧಾ ಬಹಿರ್ವಾನಿ.
ಹಲ್ಲುಗಳು ಹಳದಿಯಾಗಲು ಪ್ರಮುಖ ಕಾರಣಗಳೇನು?
ಹಲ್ಲುಗಳ ನೈಸರ್ಗಿಕ ಬಣ್ಣ ಮಾಸಲು ವಯಸ್ಸು, ಅನುವಂಶೀಯತೆ, ನಾವು ಸೇವಿಸುವ ಆಹಾರ ಹಾಗೂ ಜೀವನಶೈಲಿ ನೇರ ಕಾರಣವಾಗುತ್ತದೆ.
ಅನುವಂಶೀಯತೆ ಮತ್ತು ವಯಸ್ಸು
ಕೆಲವರಿಗೆ ಜನ್ಮತಃ ಹಲ್ಲಿನ ಹೊರಪದರ (ಎನಾಮಲ್) ತೆಳುವಾಗಿರುತ್ತದೆ. ವಯಸ್ಸಾದಂತೆಯೂ ಈ ಪದರ ಸವೆಯುತ್ತದೆ. ಆಗ ಹಲ್ಲಿನ ಒಳಭಾಗದಲ್ಲಿರುವ 'ಡೆಂಟಿನ್' ಎಂಬ ಹಳದಿ ಪದರ ಎದ್ದು ಕಾಣುತ್ತದೆ. ಇದರಿಂದ ಹಲ್ಲುಗಳು ಸಹಜವಾಗಿಯೇ ಹಳದಿಯಾಗಿ ಕಾಣುತ್ತವೆ.
ಇದನ್ನು ಕುಡಿಯಲೇ ಬೇಡಿ
ಅತಿಯಾಗಿ ಟೀ, ಕಾಫಿ, ವೈನ್ ಕುಡಿಯುವ ಅಭ್ಯಾಸ, ತಂಪು ಪಾನೀಯಗಳು ಹಾಗೂ ಕೃತಕ ಬಣ್ಣವಿರುವ ಆಹಾರಗಳ ಸೇವನೆಯಿಂದ ಹಲ್ಲುಗಳ ಮೇಲೆ ಕಲೆಗಳು ಉಂಟಾಗುತ್ತವೆ. ಧೂಮಪಾನ, ಇ-ಸಿಗರೇಟ್ ಹಾಗೂ ತಂಬಾಕು ಸೇವನೆಯಿಂದ ಅದರಲ್ಲಿರುವ ನಿಕೋಟಿನ್ ಅಂಶ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ. ಹಲ್ಲಿನ ಮೇಲೆ 'ಟಾರ್ಟರ್' ಎಂಬ ಗಟ್ಟಿ ಪದರ ಕೂಡ ಹಲ್ಲುಗಳ ಅಂದ ಕೆಡಿಸುತ್ತದೆ.
ನೀರಿನಲ್ಲಿರುವ ಈ ಅಂಶ ಹಳದಿಯಾಗಲು ಕಾರಣ
ಬಾಲ್ಯದಲ್ಲಿ ಕುಡಿಯುವ ನೀರಿನಲ್ಲಿ, ಅದರಲ್ಲೂ ವಿಶೇಷವಾಗಿ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದರೆ ಹಲ್ಲಿನ ಬಣ್ಣ ಬದಲಾಗುತ್ತದೆ. ಇದನ್ನು 'ಫ್ಲೋರೋಸಿಸ್' ಎನ್ನಲಾಗುತ್ತದೆ.
ಈ ಮಾತ್ರೆ ಹಲ್ಲಿನ ಹಳದಿ ಬಣ್ಣಕ್ಕೆ ಕಾರಣ
ಟೆಟ್ರಾಸೈಕ್ಲಿನ್‌ನಂತಹ ಕೆಲವು ಔಷಧಿಗಳು ಹಾಗೂ ಐರನ್ ಮಾತ್ರೆಗಳ ಸೇವನೆಯೂ ಹಲ್ಲುಗಳ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಅಪಘಾತ ಅಥವಾ ಇತರೆ ಕಾರಣಗಳಿಂದ ಹಲ್ಲಿಗೆ ಪೆಟ್ಟಾದರೂ ಹಲ್ಲು ಕಪ್ಪಾಗುವ ಅಥವಾ ಹಳದಿಯಾಗುವ ಸಾಧ್ಯತೆ ಇರುತ್ತದೆ.
ಇದಕ್ಕಿರುವ ವೈದ್ಯಕೀಯ ಪರಿಹಾರಗಳೇನು?
- ಹಲ್ಲು ಹಳದಿಯಾಗಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಿ ದಂತ ವೈದ್ಯರು ಚಿಕಿತ್ಸೆ ನೀಡುತ್ತಾರೆ
- ಮೇಲ್ಮೈ ಕಲೆಗಳನ್ನು ಹೋಗಲಾಡಿಸಲು ಮತ್ತು ಟಾರ್ಟರ್ ನಿವಾರಿಸಲು 'ಪ್ರೊಫೆಷನಲ್ ಕ್ಲೀನಿಂಗ್' ಮತ್ತು
- ಹಲ್ಲುಗಳನ್ನು ಬೆಳ್ಳಗಾಗಿಸಲು 'ಬ್ಲೀಚಿಂಗ್' ಮಾಡಲಾಗುತ್ತದೆ.ಫ್ಲೋರೋಸಿಸ್ ಅಥವಾ ಅತಿಯಾದ ಕಲೆಗಳಿಂದ
- ಹಲ್ಲುಗಳು ಆಂತರಿಕವಾಗಿ ಹಾಳಾಗಿದ್ದರೆ, ಅಂತವರಿಗೆ ಕಾಸ್ಮೆಟಿಕ್ ಚಿಕಿತ್ಸೆಗಳಾದ 'ವೆನೀರ್ಸ್',
- 'ಲ್ಯಾಮಿನೇಟ್ಸ್' ಅಥವಾ ʼ'ಸೆರಾಮಿಕ್ ಕ್ರೌನ್ʼಗಳನ್ನು ಶಿಫಾರಸು ಮಾಡಲಾಗುತ್ತದೆ.*ಹಲ್ಲಿಗೆ ಪೆಟ್ಟಾಗಿ
- ನರಗಳಿಗೆ ಹಾನಿಯಾಗಿದ್ದರೆ, ರೂಟ್ ಕೆನಾಲ್ ಚಿಕಿತ್ಸೆಯ ಅಗತ್ಯವಿರುತ್ತದೆ.
ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಏನು?
- ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ದಿನನಿತ್ಯದ ಅಭ್ಯಾಸಗಳಲ್ಲೇ ಅಡಗಿದೆ.
- ದಿನಕ್ಕೆ ಕಡ್ಡಾಯವಾಗಿ ಎರಡು ಬಾರಿ ಬ್ರಷ್ ಮಾಡಿ. ಏನಾದರೂ ತಿಂದ ನಂತರ ಅಥವಾ ಊಟವಾದ ತಕ್ಷಣ ಬಾಯಿ ಮುಕ್ಕಳಿಸುವ ಅಭ್ಯಾಸವಿರಲಿ
- ಸಾಕಷ್ಟು ನೀರು ಕುಡಿಯುವುದು ಬಾಯಿಯ ಆರೋಗ್ಯಕ್ಕೆ ಬಹಳ ಒಳ್ಳೆಯದು.
- ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ದಂತ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಿ, (ಏಜೆನ್ಸೀಸ್).
ದಂತ ವೈದ್ಯೆ ಡಾ. ಶ್ರದ್ಧಾ ಬಹಿರ್ವಾನಿ ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಲೇಖನವನ್ನು ಬರೆಯಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.