- ನಿತ್ಯವು ವಾಕಿಂಗ್ ಮಾಡುವ ಅಭ್ಯಾಸದಿಂದ ಹೃದಯ ಮತ್ತು ರಕ್ತದೊತ್ತಡದಂತಹ ಸಮಸ್ಯೆ ನಿಯಂತ್ರಿಸುತ್ತದೆ
- ಕ್ಯಾಲೊರಿಗಳನ್ನು ಸುಡುವ ಮೂಲಕ ತೂಕ ಇಳಿಸಲು ಮೂವತ್ತು ನಿಮಿಷದ ನಡಿಗೆ ಸಹಕಾರಿ
- ನಿತ್ಯವೂ ವಾಕ್ ಮಾಡುವ ಅಭ್ಯಾಸದಿಂದ ಮಾನಸಿಕ ಒತ್ತಡ ಕಡಿಮೆ ಮಾಡಿ ಮೂಡ್ ಸುಧಾರಿಸುತ್ತದೆ.
Walking Benefits: ಪಾರ್ಕ್ಗಳಲ್ಲಿ ಹಿರಿಯರು ವಾಕ್ ಮಾಡುತ್ತಾ ದಿನನಿತ್ಯದ ಚಟುವಟಿಕೆ ಮಾಡಲು ಸೇರಿದರೆ, ಇನ್ನು ಕೆಲವರು ಮಾನಸಿಕ ಶಾಂತಿಗಾಗಿ ನಡಿಗೆ ಕೈಗೊಳ್ಳುತ್ತಾರೆ, ಇದು ಸುಲಭವಾದ ವ್ಯಾಯಾಮ. ದಿನದಲ್ಲಿ ಕೇವಲ ಮೂವತ್ತು ನಿಮಿಷ ವ್ಯಾಯಾಮ ಮಾಡಿದರೆ ಸಾಕು ನೀವು ಆರೋಗ್ಯವಾಗಿರಬಹುದು ಎಂದು ಹೇಳುತ್ತಾರೆ ವೈದ್ಯರು.
ಇಂದಿನ ಆಧುನಿಕ ಯುಗದಲ್ಲಿ ಜಿಮ್, ಏರೋಬಿಕ್ಸ್ ಹೀಗೆ ನೂರಾರು ಹೊಸ ವ್ಯಾಯಾಮ ಹುಟ್ಟುಕೊಂಡಿರಬಹುದು ಆದರೆ ನಡಿಗೆಯೊಂದು ಪರಿಣಾಮಕಾರಿ ಚಟುವಟಿಕೆ. ಇದು ಕಡಿಮೆ ಶ್ರಮದಾಯಕ ಮತ್ತು ಆರೋಗ್ಯಕ್ಕೆ ಅಪಾರ ಲಾಭವನ್ನು ನೀಡುತ್ತದೆ. ವಾಕಿಂಗ್ನಿಂದ ತೂಕ ಇಳಿಸೋಕೆ ಮಾತ್ರ ಅಲ್ಲ. ಇದರಿಂದ ಬೇರೆ ಏನೆಲ್ಲ ಪ್ರಯೋಜನ ಸಿಗಲಿದೆ ಎಂಬುದರ ಪಟ್ಟಿ ಇಲ್ಲಿದೆ.
ಹೃದಯಕ್ಕೆಷ್ಟು ಸಹಕಾರಿ?
ವೇಗವಾಗಿ ವಾಕ್ ಮಾಡೋದು ನಿಮ್ಮ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ನಿಧಾನವಾಗಿ ತಗ್ಗಿಸುವ ವೈಶಿಷ್ಟ್ಯವು ನಡಿಗೆಯಲ್ಲಿದೆ.
ತೂಕ ಇಳಿಸೋಕೆ ಇರೋ ಸರಳ ಮದ್ದು
ಸುಲಭವಾಗಿ ತೂಕ ಇಳಿಕೆ ಮಾಡಿಕೊಳ್ಳೋದು ಹೇಗೆ ಎಂದು ಚಿಂತಿಸುತ್ತಿರುವವರು ಈ ನಡಿಗೆಯನ್ನು ರೂಢಿಸಿಕೊಂಡರೆ ಉತ್ತಮ. ಒಬ್ಬ ವ್ಯಕ್ತಿಯ ತೂಕ ಮತ್ತು ವೇಗದ ಆಧಾರದ ಮೇಲೆ ಮೂವತ್ತು ನಿಮಿಷ ವಾಕಿಂಗ್ ಮಾಡಿದರೆ 100ರಿಂದ 200 ಕ್ಯಾಲೋರಿ ಬೊಜ್ಜು ಇಳಿಸಬಹುದಾಗಿದೆ.
ಕಾಲು, ಹೊಟ್ಟೆ ಸ್ನಾಯುಗಳಿಗೆ ಬಲ
ನಡಿಗೆಯು ಮೂಳೆ ಸವೆತವನ್ನು ತಡೆಗಟ್ಟುತ್ತದೆ. ಕಾಲುಗಳು, ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ವಯಸ್ಸಾದವರೂ ನಿತ್ಯ ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಅವರನ್ನು ಹೆಚ್ಚಾಗಿ ಕಾಡುವ 'ಆಸ್ಟಿಯೊಪೊರೋಸಿಸ್' (Osteoporosis) ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಮಾನಸಿಕವಾಗಿ ನೆಮ್ಮದಿ ತರುವ ವಾಕಿಂಗ್
ನಿತ್ಯವೂ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಇದು ನಿಮ್ಮ ಮಾನಸಿಕ ಒತ್ತಡ ಹಾಗೂ ಇತರ ಆತಂಕವನ್ನು ಸರಿದೂಗಿಸುತ್ತದೆ. ಸಂಶೋಧನೆಗಳ ಪ್ರಕಾರ ನಿತ್ಯ 10 ನಿಮಿಷ ವಾಕಿಂಗ್ ಮಾಡೋದು ಶೇ.15% ಅಕಾಲಿಕ ಮರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ವಾಕಿಂಗ್ ಮಾಡುವುದನ್ನು ರೂಢಿ ಮಾಡಿಕೊಳ್ಳುವುದು ಹೇಗೆ?
ವಾಕಿಂಗ್ ಮಾಡುವ ಅಭ್ಯಾಸವಿಲ್ಲದೇ ಇದ್ದರೆ, ಮೊದಲ ದಿನ 10ರಿಂದ 15 ನಿಮಿಷ ಮಾತ್ರ ವಾಕಿಂಗ್ ಮಾಡಿ..ಈ ಸಮಯವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡಿಕೊಳ್ಳಿ. ವಾರಕ್ಕೆ ಕನಿಷ್ಠ 150 ನಿಮಿಷ ವಾಕಿಂಗ್ ಮಾಡುವ ಗುರಿಯನ್ನು ನಿಮಗೆ ನೀವೆ ಹಾಕಿಕೊಳ್ಳಿ ಎನ್ನುತ್ತಾರೆ ವೈದ್ಯರು, (ಏಜೆನ್ಸೀಸ್)
ಈ ಮೇಲಿನ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಿಂದ ಪಡೆದ ಮಾಹಿತಿ ಅನುಸಾರ ಬರೆಯಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.