Dandruff: ಇತ್ತೀಚಿನ ದಿನಗಳಲ್ಲಿ ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಾಟ್ಟಿದೆ. ನೆತ್ತಿಯ ತುರಿಕೆ, ಬಿಳಿ ಚಕ್ಕೆಗಳು ಇವೆಲ್ಲವೂ ತಲೆಯ ಅನುಕೂಲತೆಯನ್ನು ಉಂಟುಮಾಡುವುದರ ಜೊತೆಗೆ ಕಿರಿ ಕಿರಿ ಅನುಭವವನ್ನು ಉಂಟು ಮಾಡುತ್ತದೆ. ಆದಾಗ್ಯೂ, ಸರಿಯಾದ ಕಾಳಜಿ ಮತ್ತು ಸೂಕ್ತವಾದ ಶಾಂಪು ಬಳಸುವುದರಿಂದ ಈ ರೀತಿಯ ಸಮಸ್ಯೆಯನ್ನು ನಿಯಂತ್ರಿಸಬಹುದು.
ತಲೆಹೊಟ್ಟಿಗೆ ಕಾರಣಗಳೇನು?
ನೆತ್ತಿಯಲ್ಲಿ ಮಲಾಸ್ಸೇಜಿಯಾ ಎಂಬ ಶಿಲೀಂಧ್ರದ ಅತಿಯಾದ ಬೆಳವಣಿಗೆಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಇದಲ್ಲದೆ, ಒಣ ನೆತ್ತಿ, ತೈಲಗ್ರಂಥಿಗಳ ಅತಿಕ್ರಿಯೆ, ಒತ್ತಡ, ಅಪೌಷ್ಟಿಕ ಆಹಾರ, ತಪ್ಪು ಶಾಂಪೂ ಬಳಕೆ ಅಥವಾ ಹವಾಮಾನ ಬದಲಾವಣೆಗಳು ಸಹ ಕಾರಣವಾಗಬಹುದು. ಇದರಿಂದ ನೆತ್ತಿ ತುರಿಕೆ, ಹೊಟ್ಟು ಉದುರುವಿಕೆ ಮತ್ತು ಕೆಲವೊಮ್ಮೆ ಕೂದಲು ಉದುರುವಿಕೆ ಉಂಟಾಗುತ್ತದೆ.
ಪರಿಣಾಮಕಾರಿ ಮನೆಮದ್ದುಗಳು
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯಲ್ಲಿ ಆಂಟಿ -ಫಂಗಲ್ ಗುಣಗಳಿವೆ. ಇದು ತಲೆಯ ಹೊಟ್ಟನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಹಾಗಾಗಿ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, 30 ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ವಾರಕ್ಕೆ 2-3 ಬಾರಿ ಹೀಗೆ ಮಾಡುವುದರಿಂದ ತಲೆಯ ಹೊಟ್ಟನ್ನು ಕಡಿಮೆ ಮಾಡುತ್ತದೆ.
ಅಲೋವೆರಾ ಜೆಲ್
ತಾಜಾ ಅಲೋವೆರಾ ಜೆಲ್ ಅನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ 20-30 ನಿಮಿಷ ಬಿಟ್ಟು ತೊಳೆಯುವುದರಿಂದ ಇದು ನೆತ್ತಿಯನ್ನು ತಂಪಾಗಿಸಿ, ತುರಿಜೆ ಕಡಿಮೆ ಮಾಡುತ್ತದೆ. ಇದರಿಂದ ಶಿಲೀಂಧ್ರಗಳ ಸೋಂಕು ಕಡಿಮೆಯಾಗುತ್ತದೆ.
ನಿಂಬೆ ರಸ
ನಿಂಬೆ ರಸದಲ್ಲಿ ಸಿಟ್ರಸ್ ಆಮ್ಲ ಇರುವುದರಿಂದ ಇದನ್ನು ನೀರಿನಲ್ಲಿ ಬೆರಸಿ ನೆತ್ತಿಗೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯುವುದರಿಂದ ಇದು ಆಮ್ಲೀಯತೆ pH ಸಮತೋಲನ ಮಾಡಿ ಹೊಟ್ಟು ಕಡಿಮೆ ಮಾಡಿ, ತುರಿಕೆ, ಸೋಂಕನ್ನು ಹೋಗಲಾಡಿಸುತ್ತದೆ.
ಮೆಂತ್ಯ ಬೀಜ
ಮೆಂತ್ಯ ಬೀಜಗಳನ್ನು ರಾತ್ರಿ ನೆನೆಸಿ, ಬೆಳಿಗ್ಗೆ ಪೇಸ್ಟ್ ಮಾಡಿ ತಲೆಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ತೊಳೆಯುವುದರಿಂದ ಇದು ನೆತ್ತಿಯನ್ನು ಪೋಷಿಸಿ, ಸೋಂಕನ್ನು ಕಡಿಮೆ, ತುರಿಕೆ, ಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈರುಳ್ಳಿ ರಸ
ಈರುಳ್ಳಿಯು ಶಿಲೀಂಧ್ರಗಳ ಸೋಂಕನ್ನು ಕಡಿಮೆ ಮಾಡಲು ಸಹಾಯವಾಗುವ ಔಷಧಿಯಾಗಿದ್ದು, ಈರುಳ್ಳಿ ರಸವನ್ನು ನೆತ್ತಿಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯುವುದರಿಂದ ಇದರಲ್ಲಿರುವ ಸಲ್ಫರ್ ಅಂಶವು ತಲೆಯ ಹೊಟ್ಟನ್ನು ಕಡಿಮೆ ಮಾಡುವುದರ ಜೊತೆಗೆ ಕೂದಲನ್ನು ಸದೃಢವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಜೀವನಶೈಲಿ ಸಲಹೆಗಳು
1. ತಲೆಯ ಹೊಟ್ಟು, ಸೋಂಕು ಈ ರೀತಿಯ ಸಮಸ್ಯೆಯಿಂದ ಇರುವಂತವರು ಆಹಾರದಲ್ಲಿ ಪ್ರೋಟೀನ್, ಕಬ್ಬಿಣ, ಜಿಂಕ್, ವಿಟಮಿನ್ B ಯುಕ್ತ ಆಹಾರಗಳನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.
2. ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗಾ, ಧ್ಯಾನ ಅಥವಾ ನಡೆಯುವುದು, ಓಡುವುದರ ಅಭ್ಯಾಸ ಮಾಡಿ. ಇದು ತಲೆಯ ಹೊಟ್ಟನ್ನು ಕಡಿಮೆ ಮಾಡುತ್ತದೆ.
3. ನಿಯಮಿತವಾಗಿ ತಲೆ ತೊಳೆಯಿರಿ, ಅತಿಯಾಗಿ ಶಾಂಪುವನ್ನು ಬಳಸಬೇಡಿ. ಇದು ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತದೆ.
4. ದೇಹಕ್ಕೆ ಸಾಕಷ್ಟು ನೀರು ಕುಡಿಯಿರಿ ಮತ್ತು 7-8 ಗಂಟೆ ನಿದ್ರೆ ಮಾಡಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.