- ಮಲ್ಲಿಗೆ ಹೂವನ್ನು ಒಂದೆರಡು ದಿನ ತಾಜವಾಗಿಡಲು ಏನು ಮಾಡಬೇಕು?
- ಹತ್ತಿ ಬಟ್ಟೆ, ಬಾಳೆ ಎಲೆಯಲ್ಲಿ ಮಲ್ಲಿಗೆಯನ್ನು ಕಟ್ಟಿ ಜೋಪಾನವಾಗಿಸಿ
- ಹಬ್ಬದ ದಿನ ದುಬಾರಿ ಹೂ ಖರೀದಿ ಮಾಡುವ ಬದಲು ಈ ಟಿಪ್ಸ್ ಫಾಲೋ ಮಾಡಿ
How to Keep Jasmine Fresh: ಜಾಜಿ ಮಲ್ಲಿಗೆ, ಸೂಜಿ, ದುಂಡು, ಕಾಡು ಮಲ್ಲಿಗೆ. ಉಡುಪಿ, ಏಳು ಸುತ್ತಿನ ಮಲ್ಲಿಗೆ, ಮೈಸೂರು ಮಲ್ಲಿಗೆ ಹೀಗೆ ತರಹೇವಾರಿ ಪ್ರಬೇಧವನ್ನು ಹೊಂದಿರುವ ಮಲ್ಲಿಗೆಯನ್ನು ಇಷ್ಟ ಪಡದೇ ಇರುವವರು ಯಾರೂ ಇಲ್ಲ. ಹಾಗೇಯೇ ಈ ಹೂ ಇರುವ ಸುತ್ತ-ಮುತ್ತಲಿನ ಪ್ರದೇಶವು ಸದಾ ಘಮಗುಟ್ಟುತ್ತವೆ.
ಮಲ್ಲಿಗೆ ಹೂಗಳು ತುಂಬಾನೆ ಸೂಕ್ಷ್ಮ. ಇದು ಬೇಸಿಗೆ ಕಾಲವಾದ ಕಾರಣ ಮಲ್ಲಿಗೆ ಹೂ ಬೇಗ ಬಾಡುತ್ತವೆ. ಫ್ರಿಡ್ಜ್ ಇರುವವರು ಹೂವನ್ನು ಕವರ್ನಲ್ಲಿಟ್ಟು ರೆಫ್ರಿಜರೇಟರ್ನಲ್ಲಿ ಇಡುತ್ತಾರೆ. ಆದರೆ, ಒಮ್ಮೆ ಆಚೆ ತೆಗೆದರೆ ಅದು ಬೇಗನೇ ಕಪ್ಪಾಗಿಬಿಡುತ್ತದೆ. ಹೀಗಾಗಿ ನೈಸರ್ಗಿಕವಾಗಿಯೇ ಮಲ್ಲಿಗೆ ಹೂ ಕಾಪಾಡಿಕೊಳ್ಳೋದು ಹೇಗೆ ಅನ್ನೋದು ಈ ಲೇಖನದಲ್ಲಿ ಇದೆ.
ಆಗಾಗ ನೀರು ಚಿಮುಕಿಸಿ
ಮಾರುಕಟ್ಟೆಯಿಂದ ಮಲ್ಲಿಗೆ ಹೂವನ್ನು ತಂದ ನಂತರ ಕವರ್ನಲ್ಲೇ ಇಟ್ಟು, ಸುಮ್ಮನಾಗ್ಬೇಡಿ. ಬದಲಾಗಿ ಅದನ್ನು ಬಟ್ಟೆಯಲ್ಲಿ ಸುತ್ತಿ ಆಗಾಗ ನೀರು ಚಿಮುಕಿಸಿ. ಇದ್ರಿಂದಾಗಿ ನೀರು ಮಲ್ಲಿಗೆಯ ತಾಜಾತನವನ್ನು ಕಾಪಾಡಿಕೊಳ್ಳಲು ಸಹಾಯಾ ಮಾಡುತ್ತದೆ.
ಗಾಳಿಯಾಡದಂತೆ ಶೇಖರಿಸಿ
ಮಲ್ಲಿಗೆ ಹೂ ಅಥವಾ ಯಾವುದೇ ಹೂವಾಗಲಿ ಅದನ್ನು ಗಾಳಿಯಾಡದಂತೆ ಯಾವುದಾದರೂ ಪಾತ್ರೆಯಲ್ಲಿ ಶೇಖರಣೆ ಮಾಡಿ ಫ್ರಿಡ್ಜ್ನಲ್ಲಿ ಇಟ್ಟರೆ ಬೇಗ ಬಾಡೋದು ಅಥವಾ ಕಪ್ಪಾಗೋದನ್ನು ತಡೆಯುತ್ತದೆ. ಹೀಗಾಗಿ, ನೀವು ಯಾವುದೇ ದೂರದ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುವಾಗಲು ಶೇಖರಿಸಿಟ್ಟ ಮಲ್ಲಿಗೆ ಹೂವನ್ನು ಬಳಕೆ ಮಾಡಬಹುದು.
ಝಿಪ್ ಲಾಕ್ ಬಳಕೆ ಮಾಡಿ
ಇತ್ತೀಚೆಗಂತೂ ಆನ್ಲೈನ್ನಲ್ಲಿ ತರಹೇವಾರಿ ಝಿಪ್ಲಾಕ್ ಕವರ್ಗಳು ಬಂದಿವೆ. ನಿಮ್ಮ ಬಳಿ ಪಾತ್ರೆ ಇಲ್ಲದೆ ಹೋದರೆ ಝಿಪ್ ಲಾಕ್ ಬ್ಯಾಗ್ ಖರೀದಿ ಮಾಡಿ, ಅದರಲ್ಲಿ ಬಿಡಿ ಅಥವಾ ಕಟ್ಟಿರುವ ಹೂವನ್ನು ಶೇಖರಣೆ ಮಾಡಬಹುದು ಎನ್ನುತ್ತಾರೆ ಹೂ ಮಾರಾಟಗಾರರು.
ಸೂರ್ಯನ ಶಾಖ, ಲೈಟ್ ಬೆಳಕಿನಿಂದ ದೂರವಿರಲಿ
ಮಲ್ಲಿಗೆ ಹೂಗಳು ಸೂರ್ಯನ ಶಾಖದಿಂದ ಅಥವಾ ತುಂಬಾ ಬೆಳಕಿರುವ ಸ್ಥಳದಿಂದ ದೂರವಿದ್ದಷ್ಟು ಒಳ್ಳೆಯದು. ನೆರಳು ಅಥವಾ ತಂಪಾಗಿ ಇರುವ ಸ್ಥಳದಲ್ಲಿ ಮಲ್ಲಿಗೆಯನ್ನು ಶೇಖರಿಸಿ ಅಥವಾ ಬಟ್ಟೆಯನ್ನು ಒದ್ದೆಮಾಡಿ ಸುತ್ತಿ ಇಡಿ. ಇದರಿಂದ ಒಂದೆರಡು ದಿನಗಳವರೆಗೂ ಹೂಗಳು ತಾಜಾತನವನ್ನು ಕಾಯ್ದುಕೊಳ್ಳುತ್ತವೆ.
ಫ್ರಿಡ್ಜ್ ಇಲ್ವಾ ಹೀಗೆ ಮಾಡಿ
ಹೂವಿನ ತಾಜಾತನ ಕಾಯ್ದುಕೊಳ್ಳಲು ನಿಮ್ಮ ಫ್ರಿಡ್ಜ್ ಇಲ್ಲದಿದ್ದರೆ ಪರವಾಗಿಲ್ಲ. ಈ ಹಿಂದೆ ಹಿರಿಯರು ಫ್ರಿಡ್ಜ್ ಕಾಣದ ಕಾಲದಲ್ಲಿ ಏನು ಮಾಡುತ್ತಿದ್ದರು ಗೊತ್ತಾ?. ಹತ್ತಿ ಬಟ್ಟೆಯನ್ನು ಒದ್ದೆ ಮಾಡಿ ಅಥವಾ ಆ ಬಟ್ಟೆಯಲ್ಲಿ ಹೂವಿಟ್ಟು ಅದನ್ನು ಸೂಕ್ಷ್ಮವಾಗಿ ಗಾಳಿಯಾಡದಂತೆ ಸುತ್ತಿ ಅದರ ತಾಜಾತನ ಕಾಯ್ದುಕೊಳ್ಳುತ್ತಿದ್ದರು.
ಹಳೆಯ ಕಾಲದಲ್ಲೇ ಅಲ್ಲ ಈಗಲೂ ಸಹ ಕೆಲವೊಂದು ದೇಗಲುದ ಮುಂದೆ ಹೂ ಮಾರಾಟ ಮಾಡುವವರು ಹೂವನ್ನು ಬಾಳೆ ಎಲೆಗೆ ಸುತ್ತಿ ದಾರ ಕಟ್ಟಿ ನೀಡುತ್ತಿರುವುದು ಕಂಡಿರಬಹುದು. ಹಾಗೆಯೇ ನಿಮ್ಮ ಬಳಿ ಹತ್ತಿ ಬಟ್ಟೆ ಇಲ್ಲದಿದ್ದರೆ ಬಾಳೆ ಎಲೆಯಲ್ಲಿ ಅದನ್ನು ಜೋಪಾನ ಮಾಡಿ.
ಹಬ್ಬದ ದಿನ ಹೆಚ್ಚು ಖರ್ಚು ಬೇಡ
ಇಂತಹ ವಾಡಿಕೆಗಳನ್ನು ರೂಢಿಸಿಕೊಳ್ಳುವುದರಿಂದ ಹಬ್ಬವಿದ್ದಾಗ ಮಾರು ಕಟ್ಟೆಗೆ ಹೋಗಿ ದುಬಾರಿ ಬೆಲೆಯ ಹೂವನ್ನು ಖರೀದಿ ಮಾಡಿ ತಂದು ಪೇಚಾಡುವಂತೆ ಆಗುವುದು ತಪ್ಪಿಸುತ್ತದೆ. ಹಬ್ಬದ ದಿನವೂ ಇಷ್ಟೆಲ್ಲ ಹಣ ಖರ್ಚಾಗಿ ಬಿಡ್ತಲ್ಲ ಎಂದು ಬೇಸರವಾಗೋದನ್ನು ತಪ್ಪಿಸಲು ಈ ಸಲಹೆಗಳನ್ನು ಫಾಲೋ ಮಾಡಿ, ಹಬ್ಬದ ದಿನಕ್ಕಿಂತ ಮೊದಲೇ ಹೂ ತಂದಿಟ್ಟು ಹಣ ಉಳಿಸಿಕೊಳ್ಳಿ, (ಏಜೆನ್ಸೀಸ್).