Eye makeup: ಇತ್ತೀಚಿನ ದಿನಗಳಲ್ಲಿ ವೇಗವಾಗಿ ಸಾಗುತ್ತಿರುವ ಫ್ಯಾಷನ್ ಜಗತ್ತಿನಲ್ಲಿ ಸೌಂದರ್ಯವರ್ಧಕಗಳು ಇಲ್ಲದೇ, ಯಾವ ವ್ಯಕ್ತಿಯೂ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಅಂದಹಾಗೇ, ಮಹಿಳೆಯರು ಕೂಡ ಸೌಂದರ್ಯದಿಂದ ಕಾಣಿಸಬೇಕೆಂದು ಹಲವಾರು ರೀತಿಯ ಮೇಕಪ್ ಪರಿಕರಗಳನ್ನು ಬಳಸುತ್ತಾರೆ. ಅದರಲ್ಲಿ ಹೆಚ್ಚಾಗಿ ಕಣ್ಣಿನ ಅಂದವನ್ನು ಹೆಚ್ಚಿಸುವ ಸಲುವಾಗಿ ಐಲೈನರ್ ಮತ್ತು ಐಶಾಡೋಗಳನ್ನು ಅತಿಹೆಚ್ಚಾಗಿ ಬಳಸುತ್ತಾರೆ. ಈ ಮೇಕಪ್ ಉತ್ಪನ್ನಗಳು ಕೇವಲ ಫ್ಯಾಷನ್ ಹೇಳಿಕೆಯಾಗಿಲ್ಲ. ಬದಲಿಗೆ ದೈನಂದಿನ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿವೆ.
ಮೇಕಪ್ ಉತ್ಪನ್ನಗಳು ನಿಮ್ಮ ನೋಟವನ್ನು ಹೆಚ್ಚಿಸುವುದಲ್ಲದೆ ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ. ಆದರೆ, ಕಣ್ಣುಗಳ ಸೂಕ್ಷ್ಮ ಸ್ವಭಾವದಿಂದಾಗಿ, ಅವುಗಳ ಹೇರಳ ಬಳಕೆಯು ಗಂಭೀರ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಅಪಾಯದ ಬಗ್ಗೆ ವೈದ್ಯರು ಕೆಲವೊಮ್ಮೆ ಎಚ್ಚರಿಸುತ್ತಾರೆ. ಈ ವಿಚಾರದ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ಕೂಡ ಹೊರಬಿದ್ದಿವೆ. ಅದೇನಂತೀರಾ.. ಇಲ್ಲಿದೆ ನೋಡಿ.
ಕಿರಿಕಿರಿ ಮತ್ತು ಅಲರ್ಜಿಗಳು ಕೇವಲ ದೂರುಗಳಲ್ಲ
ಕಣ್ಣಿನ ಸಮಸ್ಯೆ ಕುರಿತು ಮಾತನಾಡಿದ ನೇತ್ರಶಾಸ್ತ್ರಜ್ಞೆ ಡಾ. ಶರಣ್ಯ ತುರಿಕೆ, ಕೆಂಪು ಮತ್ತು ಊತ ಇವು ಕಣ್ಣಿನ ಮೇಕಪ್‌ಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳು ಎಂದಿದ್ದಾರೆ. ಇದು ನಾವು ಪ್ರತಿನಿತ್ಯ ಬಳಸುವ ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿನ ರಾಸಾಯನಿಕಗಳು, ವರ್ಣದ್ರವ್ಯಗಳು ಎಲ್ಲರಿಗೂ ಸೂಕ್ತವಾಗಿರುವುದಿಲ್ಲ. ಆದಾಗ್ಯೂ, ಕಣ್ಣಿನ ಅಲರ್ಜಿ ಮತ್ತು ಸೂಕ್ಷ್ಮ ಕಣ್ಣುಗಳನ್ನು ಹೊಂದಿರುವವರಿಗೆ ಈ ಮೇಕಪ್ ವಸ್ತುಗಳನ್ನು ಬಳಸಬಾರದು ಎಂದು ಹೇಳುತ್ತಾರೆ.
ಪಬ್‌ಮೆಡ್‌ನಲ್ಲಿ ಪ್ರಕಟವಾದ ಭಾರತೀಯ ಕ್ಲಿನಿಕಲ್ ಅಧ್ಯಯನದ ಪ್ರಕಾರ, ನಿಯಮಿತವಾಗಿ ಕಣ್ಣಿನ ಮೇಕಪ್ ಬಳಸುವ ಮಹಿಳೆಯರು ಅಲರ್ಜಿಕ್ ಕಾಂಜಂಕ್ಟಿವಿಟಿಸ್, ಒಣಗಿದ ಕಣ್ಣುಗಳು ಮತ್ತು ಕಣ್ಣಿನ ಮೇಲ್ಮೈಯಲ್ಲಿ ವರ್ಣದ್ರವ್ಯದಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ಅಧ್ಯಯನದಲ್ಲಿ ಶೇ. 85 ರಷ್ಟು ಜನರು ಕಣ್ಣಿಗೆ ಮಾಡಿಕೊಳ್ಳುವ ಮೇಕಪ್ನಿಂದ ಕಣ್ಣಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಒಪ್ಪಿಕೊಂಡಿದ್ದಾರೆ.
ಇದು ಭಾರತದಲ್ಲಿ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಈ ಸಮಸ್ಯೆ ಹೆಚ್ಚಾಗಿದೆ. ಆದಾಗ್ಯೂ, 1,741 ಮಹಿಳೆಯರನ್ನು ಒಳಗೊಂಡ ಒಂದು ಪ್ರಯೋಗದಲ್ಲಿ ಶೇ. 85 ಜನರು ಕಣ್ಣಿನ ಮೇಕಪ್‌ಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಣ್ಣುಗಳಲ್ಲಿ ನೀರು ಬರುವುದು, ತುರಿಕೆ, ಒತ್ತಿದ ಭಾವನೆ ಮತ್ತು ಭಾರವಾದ ಭಾವನೆ ಇದು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದ್ದರೂ, ಕಿರಿಯ ಮಹಿಳೆಯರು, ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವವರು ಹೆಚ್ಚಾಗಿ ಕಣ್ಣಿನ ಕಾಯಿಲೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಸೋಂಕಿನ ಅಪಾಯ
ಡಾ. ಶರಣ್ಯ ರಾವ್ ಸೂಚಿಸಿದಂತೆ, ಕಣ್ಣುಗಳಿಗೆ ಬ್ಯಾಕ್ಟೀರಿಯಾವನ್ನು ಪರಿಚಯಿಸುವ ಸುಲಭ ಮಾರ್ಗವೆಂದರೆ, ಅವಧಿ ಮುಗಿದ ಮೇಕಪ್ ಪರಿಕರಗಳ ಬಳಕೆ, ಕೊಳಕಾದ ಬ್ರಷ್ಗಳ ಬಳಕೆ, ಇತರರೊಂದಿಗೆ ಕಣ್ಣಿನ ಮೇಕಪ್ ಹಂಚಿಕೊಳ್ಳುವುದು. ಈ ರೀತಿಯ ಸಮಸ್ಯೆಗಳು ಕಾಂಜಂಕ್ಟಿವಿಟಿಸ್, ಸ್ಟೈಸ್ ಮತ್ತು ಬ್ಲೆಫರಿಟಿಸ್, ಕಣ್ಣುರೆಪ್ಪೆಗಳ ಉರಿಯೂತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದೇ ರೀತಿ ಮಸ್ಕರಾ ಮತ್ತು ಐಲೈನರ್ ಅನ್ನು ಕಣ್ಣಿನ ಮೇಲ್ಮೈಗೆ ಬಹಳ ಹತ್ತಿರವಾಗಿ ಹಚ್ಚುವುದರಿಂದ ಕಣ್ಣುಗಳಿಗೆ ಅಪಾಯವಾಗುತ್ತದೆ.
ಒಣಗಿದ ಕಣ್ಣುಗಳು ಮತ್ತು ಮಸುಕಾದ ದೃಷ್ಟಿ
ನೀವೇನಾದರೂ, ಕಣ್ಣುರೆಪ್ಪೆಗಳ ಅಂಚಿನಲ್ಲಿರುವ ಎಣ್ಣೆ ಗ್ರಂಥಿಗಳ ಮೇಲೆ ಸೌಂದರ್ಯ ವರ್ಧಕಗಳನ್ನು ಬಳಸುವುದರಿಂದ ಇದು ಅವುಗಳ ಮೇಲೆ ಗಂಭೀರ ಪರಿಣಾಮನ್ನು ಬೀರುತ್ತದೆ. ಆದಾಗ್ಯೂ, ಕಣ್ಣುಗಳ ಒಳ ಮೂಲೆಗಳಿಗೆ ಮೇಕಪ್ ಮಾಡುವುದಿಂದ ಗ್ರಂಥಿಗಳು ಮುಚ್ಚಿಹೋಗಬಹುದು. ಇದರಿಂದ ಕಣ್ಣೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಕಣ್ಣಿನ ಶುಷ್ಕತೆ, ಕಿರಿಕಿರಿ ಮತ್ತು ದೃಷ್ಟಿ ಮಂದವಾಗಲು ಕಾರಣವಾಗಬಹುದು.
MDPI ಜರ್ನಲ್‌ನಲ್ಲಿ ಪ್ರಕಟವಾದ ವಿಮರ್ಶೆ ಅಧ್ಯಯನದ ಪ್ರಕಾರ, ನಿರಂತರ ಮೇಕಪ್ ಬಳಕೆಯು ಕಣ್ಣಿನ ಮೇಲ್ಮೈಯ ಸ್ಥಿರತೆಯನ್ನು ಅಡ್ಡಿಪಡಿಸುತ್ತದೆ. ಜೊತೆಗೆ ದೀರ್ಘಾವಧಿಯಲ್ಲಿ ಉರಿಯೂತ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಮೇಕಪ್ ತೆಗೆಯುವಲ್ಲಿ ಅಜಾಗರೂಕತೆ
ಕೆಲವೊಮ್ಮೆ ಒತ್ತಡದ ಜೀವನಶೈಲಿಯಲ್ಲಿ ರಾತ್ರಿ ಮೇಕಪ್ ತೆಗೆಯದೇ ಮಲಗುವುದನ್ನು ಗಮನಿಸಿರುತ್ತೇವೆ. ಆದರೆ, ಈ ರೀತಿ ಮಲಗಿದಾಗ ನಿಮ್ಮ ಕಣ್ಣುಗಳನ್ನು ಬಲವಾಗಿ ಉಜ್ಜುವುದರಿಂದ ಸೋಂಕುಗಳು ಹರಡುತ್ತದೆ. ಇದು ಸೂಕ್ಷ್ಮ ಚರ್ಮವನ್ನು ಗಾಯಗೊಳಿಸುವುದರ ಜೊತೆಗೆ ಕಣ್ಣಿನ ಗ್ರಂಥಿಗಳನ್ನು ಹಾನಿಮಾಡುತ್ತದೆ.
ಸೌಂದರ್ಯವರ್ಧಕಗಳಿಂದ ಕಣ್ಣಿಗೆ ಸೋಂಕು ತಗಲದಂತೆ ಹೀಗೆ ಮಾಡಿ!
1. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬಳಸಿರಿ
2. ಮುಕ್ತಾಯ ದಿನಾಂಕವನ್ನು ಪರಿಶೀಲಿಸಿ ನಂತರ ಬಳಸಿ
3. ಮೇಕಪ್ ಜಾಸ್ತಿ ಮಾಡಿಕೊಳ್ಳಬೇಡಿ
4. ಬ್ರಷ್‌ಗಳು ಮತ್ತು ಲೇಪಕಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ
5. ಮಲಗುವ ಮುನ್ನ ಮೇಕಪ್ ತೆಗೆದುಹಾಕಿ