ಜ್ಯೋತಿಷ್ಯ

ಈ ರಾಶಿಯವರ 12ನೇ ಮನೆಯಲ್ಲಿ ಶನಿ ಇದ್ದಾನೆ- ಆರೋಗ್ಯ ಕಳೆದುಕೊಳ್ಳಬೇಡಿ- ವರ್ಷ ಭವಿಷ್ಯದಲ್ಲಿದೆ ಎಚ್ಚರಿಕೆ!

ಮೇಷ: 9ನೇ ಮನೆಯಲ್ಲಿ ಗುರು ಮಾ.29ರವರೆಗೆ ಇರುತ್ತಾನೆ. ಸ್ವಂತಮನೆಯಾದ್ದರಿಂದ ಶುಭ. 10ನೇ ಮನೆಯಲ್ಲಿ ಗುರು-ಕುಜ- ಶನಿ ಒಂದೇ ಮನೆಯಲ್ಲಿರುವುದರಿಂದ ಏ.15ರವರೆಗೆ ಹೆಚ್ಚಿನ ಪ್ರಯಾಣ ಬೇಡ. 3 ತಿಂಗಳು ಗುರುಬಲ ಕಡಿಮೆಯಿದ್ದು, ವಿದೇಶ ಪ್ರವಾಸ, ಕೋರ್ಟ್ ಕಟ್ಲೆಗಳಲ್ಲಿ ಈ ಸಮಯದಲ್ಲಿ ಸ್ವಲ್ಪ ಹಿನ್ನಡೆಯಾಗುತ್ತದೆ. ನಂತರದಲ್ಲಿ ಪೂರ್ಣಗುರುಬಲ ಸಿಕ್ಕಿ ಶುಭವಾಗುತ್ತದೆ, ಭಾಗ್ಯೋದಯವಾಗುತ್ತದೆ. ಸೆಪ್ಟೆಂಬರ್​ನಿಂದ ನವೆಂಬರ್ ವೇಳೆಯಲ್ಲಿ ಕೈ ಹಿಡಿದ ಕೆಲಸದಲ್ಲೆಲ್ಲ ಜಯ ಸಿಗುತ್ತದೆ. ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಪಾರಾಯಣ ಒಳ್ಳೆಯದು. ಕೋಪ ಹತೋಟಿಯಲ್ಲಿರಲಿ. ಪ್ರಗತಿಗೆ ಸಹಕಾರ ಕೊಟ್ಟವರನ್ನು ಮರೆಯಬಾರದು. ಒಟ್ಟಾರೆ ಶುಭಫಲ.

ವೃಷಭ: ರಾಶಿ ಅಧಿಪತಿ ಶುಕ್ರ. ರಾಷ್ಟ್ರದ ಮಹಾಸ್ಥಾನವಾದ ವೈಷ್ಣೋದೇವಿ ಸಹಿತ ಭೈರವೇಶ್ವರ ಪೂಜೆ ನೆರವೇರಿಸಿದರೆ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈಗಷ್ಟೆ ಅಷ್ಟಮ ಶನಿಯಿಂದ ಪಾರಾಗಿದ್ದು, ಮಾರ್ಚ್​ನಿಂದ ಜೂನ್​ವರೆಗೆ ವಿಶೇಷ ಜಯ, ಸುಖ, ಸಂತೋಷ ಲಭಿಸುತ್ತದೆ. ಜೂನ್​ನಿಂದ ನವೆಂಬರ್​ವರೆಗೆ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಗುರುಸ್ಮರಣೆಯಿರಲಿ, ದತ್ತಾತ್ರೇಯ ಪೂಜೆ ನೆರವೇರಲಿ. ಮಂತ್ರಾಲಯ ರಾಘವೇಂದ್ರ ಸ್ವಾಮಿಯನ್ನು ಪೂಜಿಸಿ, ಭಜಿಸಿ. ಕೆಲಸ ಇಲ್ಲದವರಿಗೆ ಉತ್ತಮ ಕೆಲಸ ಸಿಗುತ್ತದೆ, ಕೆಲಸದಲ್ಲಿರುವವರಿಗೆ ಬಡ್ತಿ ಸಿಗುತ್ತದೆ. ಈ ರಾಶಿಯ ಅವಿವಾಹಿತ ಹೆಣ್ಣು ಮಕ್ಕಳಿಗೆ ರಾಶಿಯ ಬಲದಿಂದ ವಿವಾಹ ಯೋಗ್ಯವಿದೆ.

ಮಿಥುನ: ರಾಶಿ ಅಧಿಪತಿ ಬುಧ. ಸೆ.22ರ ನಂತರ ರಾಹು-ಕೇತು ಬದಲಾವಣೆಯಿದೆ. 7ನೇ ಮನೆಯಲ್ಲಿ ಗುರು ಇರುವ ಕಾರಣ ಸ್ವಲ್ಪ ಒಳ್ಳೆಯ ಸಮಯ. ಆದರೂ ಅಷ್ಟಮದಲ್ಲಿ ಶನಿ ಇರುವುದರಿಂದ ಧನ, ಪ್ರಗತಿಯಲ್ಲಿ ತೊಂದರೆಯಾಗಿ ಮಾನನಷ್ಟ ಪ್ರಸಂಗ ಸಂಭವಿಸಬಹುದು. ನವೆಂಬರ್​ವರೆಗೆ ಅಲ್ಪಮಟ್ಟದ ಪ್ರಗತಿ ಕಾಣಬಹುದು. 2021 ಏ.5ರವರೆಗೂ ಅಷ್ಟೇನೂ ಉತ್ತಮ ಕಾಲವಿಲ್ಲ. ಉಮಾಮಹೇಶ್ವರ ಪೂಜೆಯಿಂದ ಸಂಕಷ್ಟದಿಂದ ಪಾರಾಗಬಹುದು. ಅಗೋಚರ ಕಾಯಿಲೆಯೂ ಕಾಣಿಸುವ ಸಂಭವವಿದ್ದು, ಈಶ್ವರನೇ ಇದಕ್ಕೂ ಪರಿಹಾರ ನೀಡಬಲ್ಲ.

ಕರ್ಕಾಟಕ: ಆರನೇ ಮನೆಯಲ್ಲಿರುವ ಗುರು ಮಾ.29ಕ್ಕೆ 7ನೇ ಮನೆಗೆ ತೆರಳುತ್ತಾನೆ. 3 ತಿಂಗಳು ಶುಭಫಲವಿದೆ. ಹೊಸ ಮನೆ ಕಟ್ಟಿದವರು ಪ್ರವೇಶಿಸುವ ಶುಭಸಂದರ್ಭ ಒದಗುತ್ತದೆ. ರಾಜಕಾರಣಿಗಳಿಗೆ ಸಂಕಷ್ಟವಿದ್ದು, ಸ್ಥಾನ ನಷ್ಟ ಅಥವಾ ಸ್ಥಾನ ಬದಲಾವಣೆ ಆಗಬಹುದು. ಜೂ.29ಕ್ಕೆ ಗುರು 6ನೇ ಮನೆಗೆ ವಾಪಸಾಗಿ, ನ.11ರವರೆಗೂ ಅಷ್ಟೇನೂ ಒಳ್ಳೆಯ ಸಮಯವಿಲ್ಲ. ಆರೋಗ್ಯದ ಕಡೆಗೆ ಗಮನ ನೀಡಿ, ದತ್ತ ದೇವರನ್ನು ಪೂಜಿಸಿ. ವಿದ್ಯಾರ್ಥಿಗಳು ಅನ್ಯ ವಿದ್ಯಾರ್ಥಿಗಳಿಗಿಂತ ದುಪ್ಪಟ್ಟು ಪರಿಶ್ರಮ ಹಾಕಿದರೆ ಮಾತ್ರ ಸಫಲತೆ ಸಾಧ್ಯ. ಹನುಮಂತನ ಆರಾಧನೆ ಮಾಡಬೇಕು.

ಸಿಂಹ: ಹಾಲಿ 5ನೇ ಮನೆಯಲ್ಲಿ ಗುರು ಮಾ.29ರವರೆಗೆ ಇರುತ್ತಾನೆ. 6ನೇ ಮನೆಯಲ್ಲಿ ಪರಾಕ್ರಮ ಸ್ಥಾನದಲ್ಲಿ ಶನಿ ಇರುವ ಕಾರಣ ಎಲ್ಲದರಲ್ಲೂ ಜಯ ಸಿಕ್ಕುತ್ತದೆ. ಆದರೆ ಎಲ್ಲವನ್ನೂ ಸಮಾಧಾನದಿಂದ ಕಾಣಬೇಕು. ಕೋಪಗೊಂಡರೆ, ಬರುವುದೂ ಇಲ್ಲವಾಗಬಹುದು. ಮಾ.29ರಿಂದ ಜೂ.29ರವರೆಗೆ ಗುರು ಆರನೇ ಮನೆಯಲ್ಲಿರುವಾಗ ಹೊಟ್ಟೆಗೆ ಸಂಬಂಧಿಸಿದ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳುತ್ತದೆ. ವಿಶೇಷ ಔಷಧದ ಅವಶ್ಯಕತೆ ಇಲ್ಲದೇ ಗುಣವಾಗುತ್ತದೆ. ಶನಿಯೇ ಶತ್ರುಸಂಹಾರ ಮಾಡುತ್ತಾನೆ. ಕುಲಗುರುಗಳನ್ನು ಆರಾಧಿಸಿ. ಶೃಂಗೇರಿಯಲ್ಲಿರುವ ಸೂರ್ಯನಾರಾಯಣ ದೇವಸ್ಥಾನದಲ್ಲಿ ಪೂಜೆ ಮಾಡಿ ಗುರುಗಳ ದರ್ಶನ ಮಾಡಿ.

ಕನ್ಯಾ: ಪಂಚಮದಲ್ಲಿ ಶನಿ ಇರುವ ಕಾರಣ ಆರೋಗ್ಯದಲ್ಲಿ ಎಚ್ಚರ ವಹಿಸಬೇಕು. ಮಾಡಿದ ಪಾಪಕ್ಕೆ ಪ್ರಕಟಣೆಯೇ ಪ್ರಾಯಶ್ಚಿತ್ತ. ಇಂತಹ ತಪ್ಪನ್ನು ಮಾಡಿದ್ದೇನೆ ಎಂದು ದೇವರ ಮುಂದೆ ಒಪ್ಪಿಕೊಳ್ಳುವುದರಿಂದಲೇ ಪರಿಹಾರ ಸಿಗುತ್ತದೆ. ಆಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆಯುಷ್ಯ, ಅಭಿವೃದ್ಧಿಗೆ ತ್ರ್ಯಂಬಕ ಪೂಜೆ, ಮೃತ್ಯುಂಜಯ ಹವನ, ಸಂಜೀವಿನಿ ಮಂತ್ರದಿಂದ ಜಪ, ರುದ್ರಾಭಿಷೇಕ ನಿಮ್ಮನ್ನು ಸ್ಥಿರ ಆರೋಗ್ಯದಲ್ಲಿ ಕಾಪಾಡಿ ಇಷ್ಟಾರ್ಥಗಳು ಮುಂದಿನ ಸಂವತ್ಸರದಲ್ಲಿ ಕೈಗೂಡುತ್ತವೆ. ಮನೆಯಲ್ಲಿ ಅನ್ನದಾನವಿರಲಿ, ನಾರಾಯಣ ಪೂಜೆ, ಜಪ ಮಾಡುತ್ತಲೇ ದೋಣಿ ಸಾಗಲಿ.

ತುಲಾ: ಮೂರನೇ ಮನೆಯಲ್ಲಿ ಗುರು-ಕೇತು ಇದ್ದಾರೆ. ಹರಿತವಾದ ನಾಲಗೆಯೇ ತೊಂದರೆ ನೀಡುವ ಸಂಭವ ಹೆಚ್ಚಿದೆ. ಚತುರ್ಥದಲ್ಲಿ ಶನಿ ವಿಶೇಷ ಯೋಗ ನೀಡುವುದಿಲ್ಲವಾದರೂ ಸ್ವಕ್ಷೇತ್ರದಲ್ಲಿರುವುದರಿಂದ ಬಾಧಿಸುವುದೂ ಇಲ್ಲ. ಹಿಂದೆ ಧನನಷ್ಟದಿಂದ ಆಸ್ತಿ ಕಳೆದುಕೊಂಡಿದ್ದೀರೊ, ಇದೀಗ ಮಿಕ್ಕ ಹಣಕ್ಕೆ ಬೆಲೆ ಬರುತ್ತದೆ. ಆ ಹಣವನ್ನು ಜೋಪಾನವಾಗಿ ಕಾಪಾಡಿಕೊಳ್ಳಿ. ಎಲ್ಲ ವಿಚಾರದಲ್ಲೂ ನಿಮ್ಮ ನಿರ್ಣಯ ನಿಮ್ಮ ತಕ್ಕಡಿಯಲ್ಲೇ ಇರಲಿ. ನ್ಯಾಯ ಸಮ್ಮತವಾಗಿ ಧರ್ಮಮಾರ್ಗ, ನೀತಿ ಮಾರ್ಗ ಸನುಸರಿಸಿದರೆ ವಿಶೇಷ ಲಾಭ ಹೊಂದುತ್ತೀರಿ. ಒಟ್ಟಾರೆ ಸಂವತ್ಸರ ಲಾಭಕರ. 4ನೇ ಮನೆಯಲ್ಲಿ ಶನಿ ಇರುವುದರಿಂದ ಶಬರಿಮಲೆ ಅಯ್ಯಪ್ಪ ಪೂಜೆ ಮಾಡಿ, ಇಷ್ಟಾರ್ಥ ನೆರವೇರುತ್ತದೆ. ಹಾಗೆಯೇ ಎರ್ನಾಕುಲಂ ಬಳಿಯ ಭಗವತಿ ಆರಾಧಿಸಿ.

ವೃಶ್ಚಿಕ: ರಾಶಿಯ ಅಧಿಪತಿ ಅಂಗಾರಕ. ಎರಡನೇ ಮನೆಯಲ್ಲಿ ಕೇತುಗ್ರಸ್ಥ ಗುರು ಇದ್ದಾನೆ. ಗುರುವಿನ ಮಾ.29ರ ಚಲನೆ ನಿಮಗೆ ಸಂತೋಷ ನೀಡುತ್ತದೆ. ಸ್ಥಗಿತವಾದ ಕಾರ್ಯಗಳು ಮುನ್ನುಗ್ಗುತ್ತವೆ. ಭೂಮಿಯಿಂದ ಲಾಭವಿದೆ, ಋಣ ಪರಿಹಾರವಾಗುತ್ತದೆ. ಆಂಧ್ರಪ್ರದೇಶದಲ್ಲಿರುವ ಪಾನಕ ನರಸಿಂಹನನ್ನು ಪೂಜಿಸಿ, ಭಜಿಸಿ. ರಾಶಿ ಅಧಿಪತಿ ಷಣ್ಮುಖನನ್ನು ಆರಾಧಿಸಿ. ಶುದ್ಧಷಷ್ಠಿಯಂದು ಉಪವಾಸವಿದ್ದು ಭೂಮಿಯಿಂದ ಲಾಭ ಪಡೆಯಿರಿ. ಮನೆಯಲ್ಲಿ ಹಿರಿಯರ ಕಾಳಜಿ ಇರಲಿ. ತಂದೆ ತಾಯಿಯೇ ಉಮಾಮಹೇಶ್ವರ ಸ್ವರೂಪವೆಂದು ತಿಳಿದು ನಮಸ್ಕರಿಸಿ. ಸಾಕ್ಷಾತ್ ದೇವರೇ ಮೆಚ್ಚಿ ಇಷ್ಟಾರ್ಥ ನಡೆಸಿಕೊಡುತ್ತಾನೆ.

ಧನು: ರಾಶಿ ಅಧಿಪತಿ ಗುರು. ಮಾ.29ರವರೆಗೂ ಸ್ವಗೃಹದಲ್ಲೇ ಇದ್ದು ಹಲವಾರು ಚಿಂತೆಗಳನ್ನು ಸೃಷ್ಟಿಸಿರುತ್ತಾನೆ. ಮಾ.29ರಿಂದ ಜೂ.29ರವರೆಗೆ ಗುರು ಎರಡನೇ ಮನೆಗೆ ಸಂಚರಿಸಿ ನಿಮ್ಮ ಉತ್ತಮ ನಿಮಗಾಗಿ ಕಾಯುತ್ತಿದೆ. ಮೂಲಾ ನಕ್ಷತ್ರ, ಪೂರ್ವಾಷಾಢ ನಕ್ಷತ್ರದವರು ಕಡೆಯ ಭಾಗದ ಶನಿಕಾಟದಲ್ಲಿದ್ದು, ಕುಲದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ. ರುದ್ರಾಭಿಷೇಕ, ಉದಕಶಾಂತಿ ಮಾಡಿದರೆ ಉತ್ತಮ. ಶನಿಕಾಟ ಪರಿಹಾರಕ್ಕಾಗಿ ಗುರು ದತ್ತಾತ್ರೇಯನ ಗುರು ಚರಿತ್ರೆ ಪಾರಾಯಣ, ದತ್ತಾತ್ರೇಯನ ವಿಶೇಷ 12 ಜಾಗಗಳ ದರ್ಶನ ಮಾಡಬೇಕು. ಕೇತುವಿಗಾಗಿ ಗಣಪತಿ ಪ್ರಾರ್ಥನೆ ಮಾಡಬೇಕು. ಪೂರ್ವಾಷಾಢ ಅಧಿಪತಿ ಶುಕ್ರನಾಗಿರುವುದರಿಂದ ದುರ್ಗಾಪರಮೇಶ್ವರಿ ಪೂಜಿ, ಭಜಿಸಿ, ಆನಂದಿಸಿ.

ಮಕರ: ರಾಶಿ ಅಧಿಪತಿ ಶನಿ ಸ್ವಕ್ಷೇತ್ರದಲ್ಲೇ ಉಳಿದಿರುತ್ತಾನೆ. ಅಲ್ಲಿಗೆ 12ರ ಗುರು ಜನ್ಮಕ್ಕೆ ಬಂದು ನಿಮ್ಮ ಮನೋ ಆಯಾಸ ಕಡಿಮೆ ಮಾಡುತ್ತಾನೆ. ಶಿಶುಗಳ ಮೇಲೆ ಕೋಪತಾಪ ಬೇಡ. 2 ವರ್ಷ 8 ತಿಂಗಳ ಶನಿಕಾಟ ಕಳೆದಿದ್ದು, ಮಧ್ಯ ಭಾಗದಲ್ಲಿದ್ದೀರ. ಶನಿ ಸ್ವಕ್ಷೇತ್ರದಲ್ಲಿದ್ದರೂ ಸಣ್ಣಪುಟ್ಟ ಜಗಳ, ಮನಃಸ್ಥಾಪ, ಕೌಟುಂಬಿಕ ವಿಷಯದಲ್ಲಿ ಪರಸ್ಪರ ವಿರುದ್ಧ, ಆಲಸ್ಯ, ದೇಹದ ಆರೋಗ್ಯ ಚಿಂತೆ ಕಾಡುತ್ತದೆ. ಆದರೆ ಇವೆಲ್ಲ ಸತ್ಯಕ್ಕೆ ದೂರವಾದವು. ಮನಃಸಂಕಲ್ಪ, ಮನೋ ದೈರ್ಯ ಇದ್ದೆಡೆ ಜಯವಿದೆ ಎಂದು ಭಗವಂತನೇ ಹೇಳಿದ್ದಾನೆ. ಕುಲದೇವರನ್ನು ಆರಾಧಿಸಿ, ಶನಿಕಾಟ ಮುಗಿಯುವವರೆಗೂ ದತ್ತಾತ್ರೇಯನ ಆರಾಧನೆ ಮಾಡಿ. ಪ್ರತಿ ಮಂಗಳವಾರ ವೀರ ಹನುಮನಿಗೆ ನಾಳೆ, ಬೆಲ್ಲ, ಕಾಯಿ ಕೊಟ್ಟರೆ ಇಚ್ಚೆ ಪರಿಪೂರ್ಣ ಮಾಡಿಕೊಳ್ಳಬಹುದು. ಜಯ ನಿಮ್ಮದೆ. ಭಗವಂತನ ಪ್ರಾರ್ಥನೆ ಅಗತ್ಯ.

ಕುಂಭ: 12ನೇ ಮನೆಯಲ್ಲಿ ಶನಿ ಇದ್ದು, ಆರೋಗ್ಯ ಕಳೆದುಕೊಳ್ಳಬೇಡಿ. ಸೂರ್ಯನ ಪುತ್ರ ಶನಿ. ಸೂರ್ಯನ ಆರಾಧನೆ ಮಾಡಿ. ಚರ್ಮರೋಗದ ಬಗ್ಗೆ ಎಚ್ಚರವಿರಲಿ. ಖಾರ, ಹುಳಿ, ಎಣ್ಣೆ ಪದಾರ್ಥ ರ್ವ್ಯಜ ಮಾಡಿ. ರುಚಿ ನಾಲಗೆಗೆ ಮಾತ್ರ. ಎಚ್ಚರ ತಪ್ಪಿದರೆ ಶರೀರ ಸ್ವಾಸ್ಥ್ಯ ಕಳೆದುಕೊಳ್ಳಬೇಕಾಗುತ್ತದೆ. ಸ್ವಕ್ಷೇತ್ರದಲ್ಲಿ ಶನಿ ಹೆಚ್ಚಿನ ಲಾಭ ಕೊಡುವುದಿಲ್ಲ. ಬಂಡವಾಳ ಹೂಡಬೇಡಿ. ಸಾಲ ಪಡೆದು ಮನಸ್ಸಿನ ಆರೋಗ್ಯವನ್ನೂ ಕಳೆದುಕೊಂಡು, ಶತೃಗಳನ್ನೂ ಸೃಷ್ಟಿಸಿಕೊಳ್ಳಬೇಡಿ. ಪ್ರತಿ ಶನಿವಾರ ಉಮಾಮಹೇಶ್ವರ, ಮಲ್ಲಿಕಾರ್ಜುನ ದೇವರನ್ನು ಪ್ರದೋಷದಲ್ಲಿ ಪೂಜಿಸಿ, ಚರಾಚರ ಜಗತ್ತಿನಲ್ಲಿ ನಿಮ್ಮ ಪ್ರಾರ್ಥನೆಯನ್ನು ಈಡೇರಿಸಿಕೊಳ್ಳಿ. ತಿಲ ದಾನ, ತಿಲಾ ತೈಲ ಬೆಳಗಿ, ಶನಿವಾರ ಉಪವಾಸ, ಅನ್ನದಾನ ಮಾಡಿ, ತೃಪ್ತಿಯಿರಲಿ, ದುರಾಸೆ ಬೇಡ.

ಮೀನ: 11ನೇ ಮನೆಯಲ್ಲಿ ಶನಿ ಇದ್ದಾನೆ. ಏಕಾದಶದಲ್ಲಿ ಲಾಭ, ಕೀರ್ತಿ, ಯಶಸ್ಸು, ಪ್ರಗತಿ, ಧೈರ್ಯ, ಭಾಗ್ಯ ಉಂಟುಮಾಡುವ ಕಾಲ. ಒಳ್ಳೆಯದನ್ನು ಅನುಭವಿಸಿ ಪರೋಪಕಾರ ಮಾಡಿ. ನಿಮಗೆ ಎಲ್ಲವನ್ನೂ ಕೊಟ್ಟು ದೇವರು ಪರೀಕ್ಷೆ ಮಾಡುತ್ತಿರುತ್ತಾನೆ. ಯಾರಿಗಾದರೂ ತ್ಯಾಗ ಮಾಡುತ್ತೀರೋ ಎಂದು ನೋಡುತ್ತಿರುತ್ತಾನೆ. ದಾನ ಧರ್ಮಕ್ಕೆ ಮುಂದಾಗಿ, ಇದರಿಂದ ಆರೋಗ್ಯದಲ್ಲೂ ಶುಭಕರ. ಬಂದ ಧನವನ್ನು ಬಂಡವಾಳ ಹೂಡಬೇಡಿ. 2022ರಿಂದ ಜನ್ಮಶನಿ ಆರಂಭವಾಗುತ್ತದೆ. ಈಗ ದುಡಿದಿದ್ದ ಹಣವನ್ನು ಜೋಪಾನವಾಗಿಟ್ಟುಕೊಳ್ಳಿ, ಕಷ್ಟದ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ಇಡಗುಂಜಿಗೆ ಭೇಟಿ ನೀಡಿ ಹಣಪತಿ ಆರಾಧಿಸಿ, ಅಲ್ಲೆ ಸತ್ಯಗಣಪತಿ ವ್ರತ, ಮಕರ ಶನಿಗೆ ಶಾಂತಿ ಮಾಡಿಸಿ. ಎಲ್ಲ ಶ್ರೇಯಸ್ಸು ಪಡೆದುಕೊಳ್ಳಿರಿ.