ಜ್ಯೋತಿಷ್ಯ 
ವಾರ ಭವಿಷ್ಯ

ವಾರಭವಿಷ್ಯ: ಈ ರಾಶಿಯವರು ಶರೀರದಲ್ಲಿ ಯಾವ ವ್ಯತ್ಯಾಸ ಕಂಡರೂ ವೈದ್ಯರನ್ನು ಸಂದರ್ಶಿಸಿ

ಮೇಷ: ಪರಾಭವನಾಮ ಸಂವತ್ಸರವು ಆರಂಭವಾಗಿದೆ. ರಾಮನವಮಿಯೂ ಬಂತು. ಸಾತ್ವಿಕ ಬಲವಿರಬೇಕು. ಪ್ರಜ್ಞೆಯಿಂದ ಕೆಲಸ ಮಾಡಿದರೆ ದೈವವೇ ಅಡೆತಡೆ ತಡೆದು ಒಳ್ಳೆಯ ದಾರಿ ತೋರುತ್ತಾನೆ. ಮಾತಿನಲ್ಲಿ ಹಿಡಿತ, ಕೆಲಸದಲ್ಲಿ ಜಾಗ್ರತೆಯಿರಲಿ. ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ಸುಬ್ರಹ್ಮಣ್ಯನನ್ನು ಪೂಜಿಸಲೇಬೇಕು.

ವೃಷಭ: ನೂತನ ಸಂವತ್ಸರದಲ್ಲಿ ತಡೆದು ನಿಂತಿರುವ ಕೆಲಸ ದಡವನ್ನು ಸೇರುತ್ತದೆ. ದಡವನ್ನು ಮುಟ್ಟಬೇಕಾದರೆ ಪ್ರತ್ಯಕ್ಷ ದುರ್ಗಾದೇವಿಯೇ ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ, ಮುಳುಗದಂತೆ ಕಾಯುತ್ತಾಳೆ. ಗುರುಗಳಲ್ಲಿ ಅತ್ಯಂತ ಶ್ರದ್ಧೆ, ಭಕ್ತಿಯಿದ್ದರೆ, ಗುರುವೇ ನಿಮ್ಮ ಕೆಲಸವನ್ನು ಸಾಧಿಸಿಕೊಡುತ್ತಾನೆ. ಸಜ್ಜನರ ಸಹವಾಸವಿರಲಿ. ಗುರುವಿನ ಮಾರ್ಗದರ್ಶನ ವಿರಲಿ. ದತ್ತಾತ್ರೇಯನೇ ನಿಮಗೆ ಸಂತೃಪ್ತ ಜೀವನ ನಡೆಯುವಂತೆ ಅನುಗ್ರಹಿಸುತ್ತಾನೆ.

ಮಿಥುನ: ಗುರುವೇ ಲಗ್ನದಲ್ಲಿರುವುದು ನಿಮ್ಮ ಪುಣ್ಯ. ಜೂ. 1ರಂದು ಗುರು 2ನೇ ಮನೆಗೆ ಬಂದು ನಿಮ್ಮ ಕಾರ್ಯವನ್ನು ಉದಯೋನ್ಮುಖವಾಗಿ ಕೊಂಡೊಯ್ಯುತ್ತಾನೆ. ಇಚ್ಚೆಯು ಪೂರ್ಣಗೊಳ್ಳುತ್ತದೆ. ಈ ಮಾಸದ ದೇವತೆ ಶ್ರೀರಾಮಚಂದ್ರನನ್ನು ಪೂಜಿಸಿ, ದುರ್ಗೆಯನ್ನು ಆರಾಧಿಸಿ. ದುಃಖ ದಾರಿದ್ರ್ಯ ದೂರವಾಗುತ್ತದೆ.

ಕಟಕ: ಕಟಕ ರಾಶಿಗೆ ಗುರುವು ದ್ವಾದಶದಲ್ಲಿದ್ದಾನೆ. ದೇವರು ಕೊಟ್ಟ ಕಣ್ಣುಗಳನ್ನು ತೆರೆದು ನೋಡಿದರೆ ಯಾವ ಭಯವೂ ಇಲ್ಲ. ದೇಹದ ಯಾವ ಭಾಗವನ್ನೂ ವಿನಾಕಾರಣ ಶೋಷಣೆ ಮಾಡದೆ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದರೆ ಯಾವ ಆಪತ್ತು ವಿಪತ್ತು ಬರುವು ದಿಲ್ಲ. ರಾಮಪೂಜೆಯಲ್ಲಿ ನೀವು ನಿರತರಾಗಿದ್ದರೆ ದುಃಖವೆಂಬುದೇ ಇರುವುದಿಲ್ಲ.

ಸಿಂಹ: ಸಿಂಹದ ಗರ್ಜನೆ ಒಂದಿದ್ದರೆ ಸಾಲದು. ಅದಕ್ಕೆ ಶಕ್ತಿಯನ್ನು ದೇವರೇ ನೀಡಿದ್ದಾನೆ. ಯಾವುದೇ ಪ್ರಾಣಿಯಾಗಲಿ ಮೊಸಳೆಬಾಯಿಗೆ ಸಿಕ್ಕರೆ ಅದಕ್ಕೂ ಪ್ರಾಣಭಯವಿರುತ್ತದೆ. ಗುರುಗಳ ಕೃಪೆಯಿದ್ದರೆ ದುಷ್ಟರನ್ನು ದೇವರೇ ದೂರಮಾಡುತ್ತಾನೆ. ಏಕಾದಶ ಗುರು ಸತ್ಪಲ ನೀಡುತ್ತಾನೆ. ಗುರುವಿನ ಮಾರ್ಗವನ್ನು ಅನುಸರಿಸಿ. ಆರೋಗ್ಯವನ್ನು ಒಳ್ಳೆಯ ಚಿಂತನೆಯಿಂದ ಸರಿಪಡಿಸಿಕೊಳ್ಳಿ.

ಕನ್ಯಾ: ಅಷ್ಟಮದಲ್ಲಿ ಶನಿಯಿದ್ದಾನೆ. ಯಾವುದೇ ರೋಗಕ್ಕೆ ದೇಹವು ತುತ್ತಾಗ ದಂತೆ ಆರೋಗ್ಯವನ್ನು ಇಟ್ಟುಕೊಳ್ಳಿ. ಗೆಲ್ಲುವ ಮಾರ್ಗ ಹುಡುಕುವುದು ನಿಮ್ಮ ಕರ್ತವ್ಯ. ದಶಮದಲ್ಲಿ ಗುರುವಿದ್ದು ಜೂನ್ ನಂತರ ಏಕಾದಶಕ್ಕೆ ಬಂದು ಜೀವನದಲ್ಲಿ ಕಾರ್ಯಸಾಧನೆ ಮಾಡಲು ಅನುವು ಮಾಡಿಕೊಡು ತ್ತಾನೆ. ಕಷ್ಟ ನಷ್ಟ ಪರಿಹರಿಸುತ್ತಾನೆ. ಶರೀರದಲ್ಲಿ ಯಾವ ವ್ಯತ್ಯಾಸ ಕಂಡರೂ ವೈದ್ಯರನ್ನು ಸಂದರ್ಶಿಸಿ. ಸುಬ್ರಹ್ಮಣ್ಯ ದೇವರನ್ನು ಅರ್ಚಿಸಿ.

ತುಲಾ: ಧೈರ್ಯವಂತರಾದ ನೀವು ಯಾವುದಕ್ಕೂ ಚಿಂತಿಸಬೇಡಿ. ಬೆಂಕಿ ಹೇಗೆ ಉರಿಯುವುದೋ ಹಾಗೆ ನಿಮ್ಮ ಕಷ್ಟವೂ ದೂರವಾಗಿ ಸದಾ ಬೆಳಕಿನೆಡೆಗೆ ಕೊಂಡೊಯ್ಯಲು ದುರ್ಗೆಯೇ ಸಾಕು. ಮನುಷ್ಯನು ಗುರುವನ್ನು ಕಾಣಲು ಪರಿಪೂರ್ಣವಾದ ಅನುಗ್ರಹ ಬೇಕಾದರೆ ನಿಮ್ಮ ಮಾತಾ- ಪಿತೃಗಳೇ ಇದ್ದಾರೆ. ಅವರನ್ನು ಪೂಜಿಸಿ ಪಾದಪ್ರಕ್ಷಾಲನ ಮಾಡಿ. ಅದೇ ಅಷ್ಟತೀರ್ಥದಂತೆ ಹರಿದು ಬಂದು ನಿಮ್ಮ ಇಚ್ಚೆಯು ಪೂರ್ಣಗೊಳ್ಳುತ್ತದೆ.

ವೃಶ್ಚಿಕ: ಶನಿಯು ಪಂಚಮದಲ್ಲಿ ಇರುವುದರಿಂದ ತಲೆ, ಕೈ,ಕಾಲುಗಳನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು. ಎಚ್ಚರತಪ್ಪಿ ಯಾವ ಕಡೆ ವಾಲಿದರೂ ಆ ಭಾಗದಲ್ಲಿ ನೋವು ಕಾಣಿಸಿಕೊಂಡು ಶರೀರವನ್ನು ಮೆದುವಾಗಿಸುತ್ತದೆ. ಮಾ. 24 ಷಷ್ಠಿಯು ಮಂಗಳವಾರವೇ ಬಂದಿರುವುದರಿಂದ ಸುಬ್ರಹ್ಮಣ್ಯನನ್ನು ಪೂಜಿಸಿದರೆ ಏನನ್ನೂ ಕಾಣಬಹುದು. ಎಂತಹ ಕಷ್ಟವಿದ್ದರೂ ದಾಟಬಹುದು. ಅನ್ಯರಿಗೂ ಸಹಾಯ ಮಾಡಬಹುದು.

ಧನು: ಧನು ರಾಶಿಯವರಿಗೆ ಗುರು ಕಟಾಕ್ಷವೇ ಸಾಕು. ಚತುರ್ಥದಲ್ಲಿ ಶುಕ್ರವಿದ್ದಾನೆ, ಧನಾಗಮ ಉಂಟಾಗುತ್ತದೆ. ಕುಜ-ರಾಹು ಬುಧ ತೃತೀಯದಲ್ಲಿದ್ದು, ರವಿ- ಶನಿಯಲ್ಲಿ ಇದ್ದಾರೆ. ತಂದೆ-ತಾಯಿಗೆ ಎದುರಾಡದೇ ಅವರನ್ನು ಪೂಜಿಸಿದರೆ ಕಾರ್ಯದಲ್ಲಿ ಜಯ ಉಂಟಾಗುವುದರಲ್ಲಿ ಸಂದೇಹವಿಲ್ಲ. ರಾಮನಂತೆ ತಂದೆಯನ್ನು ಪೂಜಿಸಿ. ಆರೋಗ್ಯವೂ ಪರಮಾನಂದವು ನಿಮ್ಮ ಸುತ್ತಲು ಗಾಳಿಯಂತೆ ಸಂಚರಿಸುತ್ತಿದೆ.

ಮಕರ: ಮಕರ ರಾಶಿಗೆ ಗುರುಕಟಾಕ್ಷ ಇಲ್ಲ. ಶನಿ-ರವಿಯೊಂದಿಗೆ ಸೇರಿದ್ದಾನೆ. ಮನೆ ಯಲ್ಲಿ ತಂದೆತಾಯಿಯನ್ನು ಅನುಸರಿಸಿ ನಡೆಯಿರಿ. ಗುರುವೇ ಆಗಲಿ, ತಂದೆ - ತಾಯಿಯೇ ಆಗಲಿ ಮಕ್ಕಳಿಗೆ ಶಾಪ ಹಾಕುವುದಿಲ್ಲ. ಅವರು ಎಲ್ಲವನ್ನೂ ಕೊಡಬಲ್ಲರು. ದೃಢವಾದ ನಂಬಿಕೆಯಿರಲಿ. ಗುರುವಿನ ಅಷ್ಟೋತ್ತರ ಪಠಿಸಿ.

ಕುಂಭ: ಕುಂಭ ರಾಶಿಯವರಿಗೆ ಕುಜ-ರಾಹು ಒಂದೇ ಮನೆಯಲ್ಲಿದ್ದು, ಶನಿಮನೆಯಲ್ಲಿಯೇ ಇರುವುದು ಸ್ನೇಹದ ಸೂಚನೆ ಕೊಡುತ್ತದೆ. ಕೆಲಸದಲ್ಲಿ ಆತುರವಿಲ್ಲದೆ ಮುಂದುವರಿಯಿರಿ. ವೇಗವು ಜಾಸ್ತಿಯಾದಾಗ ನಮ್ಮ ಎಚ್ಚರಿಕೆ ತಪು್ಪತ್ತದೆ. ದೈವವೆಂಬ ಇಂಧನದಲ್ಲಿ ದೇಹವನ್ನು ದಹಿಸಿದರೆ ನೀವು ಭಾಗ್ಯದ ಬಾಳನ್ನು ಬಾಳಲು ದೇವರೇ ದಾರಿ ತೋರುತ್ತಾನೆ. ಪಂಚಮ ಗುರುವಿನ ಅನುಗ್ರಹವಿದೆ. ದತ್ತದೇವರನ್ನು ಕುರುವಪುರದಲ್ಲಿ ದರ್ಶಿಸಿ ಬನ್ನಿ.

ಮೀನ: ರವಿ-ಶನಿ-ಶುಕ್ರರು ಲಗ್ನದಲ್ಲಿದ್ದು, ಚತುರ್ಥದಲ್ಲಿ ಗುರುವೂ ಇದ್ದಾನೆ. ಮನಸ್ಸಿಗೆ ಅನವಶ್ಯಕವಾಗಿ ಚರ್ಚೆಯು ಹುಟ್ಟಿಕೊಂಡು ವಿವಾದಾತ್ಮಕ ನಡೆಗೆ ಕರೆದೊಯ್ಯುತ್ತದೆ. ಶನಿ ಸಂಚಾರವು ಇರುವುದರಿಂದ ಬರೀ ಅಮೃತವೇ ಸಿಗಲು ಸಾಧ್ಯವಿಲ್ಲ. ಕಹಿ-ಸಿಹಿ ಹಂಚಿಕೊಂಡು ಶನಿಯ ಪ್ರೀತ್ಯರ್ಥ ಈಶ್ವರನನ್ನು ಪೂಜಿಸಿದರೆ ನಿಮ್ಮ ದುಃಖ ದೂರವಾಗಿ ಪಾಪವನ್ನು ಕಳೆದು ಜೀವನದಲ್ಲಿ ಸುಖವನ್ನು ಕಾಣಲು ಪರಮಾತ್ಮನೇ ಅವಕಾಶ ಮಾಡಿಕೊಡುತ್ತಾನೆ.