Weekly Horoscope 
ವಾರ ಭವಿಷ್ಯ

ವಾರ ಭವಿಷ್ಯ: ಈ ರಾಶಿಯವರಿಗೆ ಒಳ್ಳೆಯ ಕಾಲ ಇನ್ನೇನು ಆರಂಭವಾಗಲಿದೆ

ಮಣಿಕಂಠ ಪಾ ಹಿರೇಮಠ

ಶನಿಯು ಮೀನ ರಾಶಿಯಲ್ಲಿ ಇದ್ದು, ಗುರು ಕರ್ಕಾಟಕ ರಾಶಿಯಲ್ಲಿ ಉಚ್ಚನಾಗಿದ್ದಾನೆ. ರವಿಯು ಸಿಂಹ ರಾಶಿಯನ್ನು ಬಂದು ಸೇರಿ ಬುಧಾಧಿತ್ಯ ಯೋಗವು ಉಂಟಾಗಲಿದೆ. ನಿಮಗೆ ಒಳ್ಳೆಯ ಕಾಲ ಇನ್ನೇನು ಆರಂಭವಾಗಲಿದೆ. 10 ಬಾರಿ ಪ್ರಯತ್ನಿಸಿ 11ನೇ ಬಾರಿಗೆ ಕೆಲಸವಾಗುತ್ತದೆ ಎಂದು ಬೇಸರಿಸದಿರಿ. ಗುರಿಯನ್ನು ಮುಟ್ಟಿ ಇಷ್ಟಾರ್ಥ ಸಾಧಿಸಿಕೊಳ್ಳಿ. ಷಣ್ಮುಖ ಸುಬ್ರಹ್ಮಣ್ಯನನ್ನು ಪೂಜಿಸಿ. ಅಷ್ಟಯೋಗಗಳನ್ನು ಕೊಟ್ಟು ಸಲಹುತ್ತಾನೆ.

ವೃಷಭ: ಈ ರಾಶಿಯ ಅಧಿಪತಿ ಶುಕ್ರನು ಕನ್ಯಾರಾಶಿಯನ್ನು ಸೇರಿ ಶನಿಯ ದೃಷ್ಟಿಯನ್ನು ಹೊಂದಿದ್ದಾನೆ. ಶನಿ ಶುಕ್ರ ಇಬ್ಬರೂ ಮಿತ್ರ ಗ್ರಹಗಳು. ಆದ್ದರಿಂದ ನಿಮಗೆ ಹೆಚ್ಚಿನ ಸಂತಸವನ್ನು, ಒಳ್ಳೆಯ ಫಲವನ್ನು ಕೊಡಲಿದ್ದಾರೆ. ಪಂಚಮದಲ್ಲಿ ರವಿ ಬುಧರಿದ್ದು ಯಾವುದೇ ಕೆಲಸ ಮಾಡಿದರೂ ನಿಮಗೆ ಜಯವಾಗಲಿದೆ. ಏಕಾದಶದಲ್ಲಿ ಶನಿ ಇದ್ದು ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡುತ್ತಾನೆ. ಹೆಚ್ಚಿನ ಫಲವನ್ನು ದೇವರೇ ಕರುಣಿಸುತ್ತಾನೆ.
ಮಿಥುನ: ರಾಶಿಯಲ್ಲಿ ಕುಜನು ಕುಳಿತಿದ್ದು ಅದು ಬುಧನ ಮನೆಯಾದ್ದರಿಂದ ಕೆಲಸಗಳಿಗೆ ಕಂಡೂ ಕಾಣದ ತೊಂದರೆ ಬರುತ್ತದೆ. ಆದರೆ ಅದನ್ನು ದಾಟಲು ದ್ವಿತೀಯದಲ್ಲಿ ಗುರುವಿದ್ದು ಅಸಾಧ್ಯವಾದ ಶಕ್ತಿಯನ್ನು ಕೊಟ್ಟು ಮುನ್ನಡೆಸುತ್ತಾನೆ. ಸತ್ಯನಾರಾಯಣ ವ್ರತ ಕಥೆಯನ್ನು ಓದಿ ಲಾಭ, ಕೀರ್ತಿ ಯಶೋಧೈರ್ಯವನ್ನು ಪಡೆದುಕೊಳ್ಳಬಹುದು.
ಕಟಕ: ರಾಶಿಯಲ್ಲಿ ಉಚ್ಚ ಗುರುವಿದ್ದು ಮಾಡುವ ಕೆಲಸಗಳಲ್ಲಿ ಜಯವನ್ನು, ಕೀರ್ತಿಯನ್ನು ತರುತ್ತಾನೆ. ದ್ವಿತೀಯದಲ್ಲಿ ರವಿ ಬುಧರಿದ್ದು ಬುಧಾದಿತ್ಯಯೋಗ ಉಂಟಾಗುವುದರಿಂದ ನೀವು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ. ಉಮಾಮಹೇಶ್ವರ ವ್ರತ ಕಥೆಯನ್ನು ಓದಿ. ಕೆಲಸವನ್ನು ಪೂರ್ಣಗೊಳಿಸಿ ಕೀರ್ತಿಯನ್ನು ಪಡೆಯಬಹುದು.
ಸಿಂಹ: ರವಿಬುಧ ಒಟ್ಟಿಗೆ ಇದ್ದು ಕೇತು ಸಂಯುಕ್ತರಾಗಿದ್ದಾರೆ. ಅಷ್ಟಮದಲ್ಲಿ ಶನಿ ಇರುವುದರಿಂದ ಮನುಷ್ಯನ ವೇಗವು ಕಡಿಮೆಯಾಗುತ್ತದೆ. ಗ್ರಹಗಳ ಸ್ಥಿತಿ ಈ ರೀತಿ ಇರುವಾಗ ಎಚ್ಚರಿಕೆಯಿಂದ ಸಾಗಬೇಕು. ಸೂರ್ಯನಾರಾಯಣನನ್ನು ಕೆಂಪು ಹೂವಿನಿಂದ ಅರ್ಚಿಸಿ ಪೂಜಿಸಿ.
ಕನ್ಯಾ: ಶುಕ್ರನು ಕನ್ಯಾ ರಾಶಿಯಲ್ಲಿ ಕುಳಿತಿದ್ದು ಅದು ಬುಧನ ಮನೆ. ಬುಧ, ಶುಕ್ರ, ಶನಿ ಇವೆಲ್ಲವೂ ಪರಸ್ಪರ ಹೊಂದಾಣಿಕೆ ಇರುವ ಗ್ರಹಗಳು. ನಿಮ್ಮ ಸಮಯಕ್ಕಾಗಿ ಕಾದರೆ ನೀವು ಏನನ್ನು ಬೇಕಾದರೂ ಸಾಧಿಸಬಹುದು. ಬರಬೇಕಾದ ಹಣವು ಬಂದು ಸೇರುತ್ತದೆ.
ತುಲಾ: ಈ ರಾಶಿಯವರಿಗೆ ಗ್ರಹಸ್ಥಿತಿಯನ್ನು ಹೇಳುವ ಅಗತ್ಯವೇ ಇಲ್ಲ. ಶನಿಯು ಷಷ್ಠದಲ್ಲಿದ್ದು, ಗುರುವು ಉಚ್ಚ ರಾಶಿಯಲ್ಲಿ ದಶಮದಲ್ಲಿ ಇರುವುದರಿಂದ ನೆನೆಸಿದ ಕಾರ್ಯಗಳೆಲ್ಲವೂ ಕೈಗೂಡುತ್ತವೆ. ಚಿಂತಾಮಣಿ ಗಣಪತಿಯನ್ನು ಪೂಜಿಸಿದರೆ ಅವನ ಅನುಗ್ರಹದಿಂದ ಎಲ್ಲ ಕೆಲಸಗಳು ನೆರವೇರುತ್ತವೆ. ನಿಮಗೆ ಯಾವ ತೊಡಕೂ ಇಲ್ಲ. ನಡುಕವೂ ಬೇಡ. ಧೈರ್ಯವಾಗಿ ಗುರಿ ಮುಟ್ಟಬಹುದು.
ವೃಶ್ಚಿಕ: ಒಂಭತ್ತನೇ ಮನೆಯಲ್ಲಿ ಗುರುವಿದ್ದು ಬಿರುಗಾಳಿ ಬೀಸಲಿ, ನಿಲ್ಲದ ಮಳೆ ಬರಲಿ ಜಗ್ಗುವುದು ಬೇಡ. ದೈವ ಬಲವು ನಿಮ್ಮ ಬೆನ್ನ ಹಿಂದಿದೆ. ಯಾವ ಕಾರ್ಯ ಮಾಡಿದರೂ ಫಲವನ್ನು ಗಣಪತಿಯೇ ಕೊಡುತ್ತಾನೆ. ಮುಂದಿನ ಸಂವತ್ಸರದ ತನಕ ನಿತ್ಯವೂ ಗಣಪತಿಯನ್ನು ಗರಿಕೆಯಿಂದ ಪೂಜಿಸಿ. ಬರಬೇಕಾದ ಹಣ ಬಂದು ಸೇರುತ್ತದೆ. ಋಣಮುಕ್ತರಾಗುತ್ತೀರಿ.
ಧನಸ್ಸು: ಶಾಂತವಾಗಿ ಸಮಾಧಾನವಾಗಿ ಆಗುಹೋಗುಗಳನ್ನು ಅರ್ಥೈಸಿಕೊಳ್ಳಬೇಕು. ಶನಿಯು ನಾಲ್ಕನೇ ಮತ್ತು ಐದನೇ ಮನೆಯ ಸಂಚಾರದಲ್ಲಿ ಇರುವಾಗ ಜನ್ಮದಾತರ ನೆರಳಿನಲ್ಲಿ ಬದುಕಬೇಕಾದ ಸಮಯವಿದು. ನಿಮ್ಮ ಜಾಣ್ಮೆ ತೋರಬೇಕಾದ ಸಮಯವು 2029ನೆಯ ಇಸ್ವಿಯಲ್ಲಿ ಬರುತ್ತದೆ. ವಿಚಾರಗಳನ್ನು ಬಂದಂತೆ ಸ್ವೀಕರಿಸಿ ತೃಪ್ತಿಯನ್ನು ಹೊಂದಿರಿ.
ಮಕರ: ಈ ರಾಶಿಯವರಿಗೆ ಎರಡನೇ ಮನೆಯಲ್ಲಿ ರಾಹುವಿದ್ದು ಕಲಹ, ದ್ವೇಷ, ಕೆಲವೊಮ್ಮೆ ಕೆಲಸಗಳು ಆಗದಿರಲು ಕೆಲವು ವ್ಯಕ್ತಿಗಳ ಮೇಲೆ ತಪ್ಪು ಗ್ರಹಿಕೆ ಉಂಟಾಗುತ್ತದೆ. ದೇವರೊಬ್ಬ ನಾಮ ಹಲವು ಎಂಬಂತೆ ದೇವತಾ ಪ್ರಾರ್ಥನೆಯನ್ನು ಮಾಡಲೇಬೇಕು. ಹಯಗ್ರೀವ ದೇವರನ್ನು ಪೂಜಿಸಿ. ಸುಖವಾಗಿರಿ.
ಕುಂಭ: ರಾಶಿ ಅಧಿಪತಿ ಶನಿ. ರಾಹು ಶನಿಯ ಮನೆಯಲ್ಲಿ ಕುಳಿತಿದ್ದು, ಶನಿಯು ದ್ವಿತೀಯದಲ್ಲಿ ಗುರುವಿನ ಮನೆಯಲ್ಲಿ ನೆಲೆಸಿದ್ದಾನೆ. ಶಾಸ್ತ್ರೀಯವಾಗಿ ಇಬ್ಬರು ಗುರುಗಳು ಒಂದೇ ಊರಿನಲ್ಲಿರಕೂಡದು. ಅದೇ ರೀತಿ ಎರಡು ಮಿತ್ರ ಗ್ರಹಗಳು ಹಿಂದೆ ಮುಂದೆ ಬಂದಾಗ ಮನಸ್ಸು ವಿಚಲಿತವಾಗಿ ಸಂದಿಗ್ಧಕ್ಕೆ ಸಿಲುಕುತ್ತದೆ. ಆದ್ದರಿಂದ ಶನಿಯ ಸಂಚಾರದ ಸಮಯದಲ್ಲಿ ಗುರುಬಲವು ಇಲ್ಲದ್ದರಿಂದ ದೈವವೇ ನಿಮ್ಮನ್ನು ಕಾಯಬೇಕು. ಉಷಾ ಕಾಲದಲ್ಲಿ ನರಸಿಂಹ ದೇವರನ್ನು ಅನನ್ಯ ಭಕ್ತಿಯಿಂದ ಪೂಜಿಸಿ.
ಮೀನ: ಮನುಷ್ಯನಿಗೆ ಎಲ್ಲವೂ ಇದ್ದು ವ್ಯಕ್ತಿತ್ವವೇ ಇಲ್ಲದಾದರೆ ಏನು ಉಪಯೋಗ? ಈಗ ತಾತ್ಕಾಲಿಕವಾಗಿ ಗುರುವು ಪಂಚಮದಲ್ಲಿದ್ದು ಜನ್ಮ ಶನಿಯ ದೃಷ್ಟಿಯು ಪಂಚಮಕ್ಕೆ ಬೀಳುವುದರಿಂದ ಕಾರ್ಯಸಾಧನೆ ಆಗುವ ಸಮಯದಲ್ಲಿ ಸರಿಯಾಗಿ ವಿಘ್ನಗಳು ಬಂದು ಹಾನಿಯಾಗುವಷ್ಟು ಮಳೆಯನ್ನು ಸುರಿಸುವ ಗುಣಗಳು ಸದ್ಯಕ್ಕೆ ಈ ಗ್ರಹಗಳಲ್ಲಿ ಇರುತ್ತದೆ. ಕುಲದೇವರೊಬ್ಬನೇ ನಿಮ್ಮ ಇಷ್ಟಾರ್ಥವನ್ನು ಪೂರೈಸಲು ಸಾಧ್ಯ. ಕುಲದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿ ಜೀವನದಲ್ಲಿ ಮುಂದೆ ಸಾಗಿರಿ.