ವೃಷಭ: ನಿಮ್ಮ ನಡೆ-ನುಡಿ ಹಾವ ಭಾವವು ಆತ್ಮ ಹಾಗೂ ದೈವ ಒಪ್ಪುವ ರೀತಿಯಲ್ಲಿರಲಿ. ಕಣ್ಣೀರು ಬಂದಾಗ ಅದನ್ನು ಒರೆಸುವವಳು ತಾಯಿಯೇ. ಅಂತಹ ಮಹಾಮಾತೆಯಾದ ಚಂಡಿಕಾ ದುರ್ಗೆಯನ್ನು ಪ್ರಾರ್ಥಿಸಿ ಪೂಜಿಸಿ. ಶುಕ್ರಾಧಿಪತ್ಯವುಳ್ಳ ವೃಷಭ ರಾಶಿಯವರು ದೇವರನ್ನು ಸ್ಮರಿಸಿ.
ಮಿಥುನ: ಸೂಕ್ಷ್ಮಾತಿಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಂಡು ನಿಮ್ಮ ಮನಸ್ಸಿಗೆ ಒಪ್ಪುವ ಶುದ್ಧ ಮನಸ್ಸಿನಿಂದ ಸತ್ಯದ ದಾರಿಯನ್ನು ಹಿಡಿದು ನಡೆದರೆ ಗುರುವೇ ಮೆಚ್ಚಿ ನಿಮಗೆ ದಾರಿಯನ್ನು ತೋರುತ್ತಾನೆ. ಬುದ್ದಿಜೀವಿಗಳು ಅನಗತ್ಯವಾಗಿ ಇನ್ನೊಬ್ಬರ ವಿಷಯವನ್ನು ಮಾತನಾಡಿ ತೊಂದರೆ ತಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ಮಾತು ಅಗ್ನಿಯಂತೆ, ಆದ್ದರಿಂದ ಮೌನವಿರಲಿ. ಚಾಮುಂಡೇಶ್ವರಿ ಅಷ್ಟೋತ್ತರ ಪಠಿಸಿ.
ಕಟಕ: ಅಗಸನು ಕತ್ತೆಯನ್ನು ಒಂದು ಜೀವಿಯೆಂದು ತಿಳಿಯದೆ ಭಾರವನ್ನು ಹೇರಿ ಸೇವೆಯನ್ನು ತೆಗೆದುಕೊಂಡು ಅದು ಮಾಡಿದ ಉಪಕಾರವನ್ನು ಮರೆಯುತ್ತಾನೆ. ದ್ವಾದಶ ಗುರುವಿರುವ ಸಮಯಕ್ಕೆ ದೇಹಕ್ಕೆ ತಕ್ಕನಾದ ಕೆಲಸವನ್ನು ಮಾಡಿ ಸಂತಸದಿಂದಿರಿ. ರಾಮನ ಪ್ರಾರ್ಥನೆ ಇರಲಿ. ಸುಂದರಕಾಂಡ ಪಾರಾಯಣ ಮಾಡಿರಿ.
ಸಿಂಹ: ಮಾತಿನಲ್ಲಿ ನಯವಿರಲಿ. ರಕ್ತಸಂಬಂಧಿಗಳ ಜತೆ ಒಡನಾಟವು ಮಿತಿಯಲ್ಲಿರಲಿ. ಅಂಗಾರಕನಿಗೆ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿದರೆ, ಕಾಲಕ್ಕೆ ಸರಿಯಾಗಿ ಜ್ಞಾನವನ್ನು ಕೊಟ್ಟು ಮುನ್ನಡೆಸುತ್ತಾನೆ. ಸೂರ್ಯನಿಗೆ ಆದಿತ್ಯ ಹೃದಯ ಪಾರಾಯಣ ಮಾಡಿ.ಲಾಭ, ಕೀರ್ತಿ ಕೊಡುತ್ತಾನೆ. ಹರಿಹರರ ಚಿಂತನೆ ಸದಾ ಇರಲಿ.
ಕನ್ಯಾ: ನೀವು ನಿಮ್ಮ ಗುರುಗಳನ್ನು, ತಂದೆ ತಾಯಿಯನ್ನು ಅನನ್ಯವಾಗಿ ಪ್ರಾರ್ಥಿಸಿದರೆ, ಬರುವ ಕೆಟ್ಟ ಸಮಯವನ್ನು ದಾಟಬಹುದು. ಹನುಮಾನ್ ಅಷ್ಟೋತ್ತರ ಪಠಿಸಿ. ದೇವರಿಗೆ ಬೆಲ್ಲ- ಕಾಯಿ- ಜಿಂಜೀರ ಫಲ, ಕದಳಿ ಫಲ ಕೊಟ್ಟು ಅನುಗ್ರಹ ಪಡೆಯಿರಿ. ಉಮಾ ಮಹೇಶ್ವರನನ್ನು ಪೂಜಿಸುವುದನ್ನು ಮುಂದುವರಿಸಿ.
ತುಲಾ: ಈ ರಾಶಿಯಲ್ಲಿ ಹುಟ್ಟಿದವರು ವ್ಯವಹಾರ ವಿಷಯದಲ್ಲಿ ಸಾಮರ್ಥ್ಯ ಹೊಂದಿದವರು, ಜನಾಕರ್ಷಣೆಯಿಂದ ಕೆಲಸ ಸಾಧಿಸಿಕೊಳ್ಳುವವರು. ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ, ಸಾಧನೆ ಮಾಡುವುದು ಆದ್ಯ ಕರ್ತವ್ಯವಾಗಿರಲಿ. ನೀವು ಮೊದಲಿನಿಂದ ಕೈ ಹಿಡಿದ ವೃತ್ತಿಯಲ್ಲಿ ತಾತ್ಸಾರ ಮಾಡಬಾರದು. ಆರಂಭದಿಂದ ನಿಮಗೆ ದಾರಿದೀಪವಾದ ವೃತ್ತಿಯೇ ನಿಮಗೆ ವರವಾಗಿದೆ. ಯಶಸ್ಸು, ಧೈರ್ಯ, ಕೀರ್ತಿ, ಧನವನ್ನು ಕಾಣಬಹುದು.
ವೃಶ್ಚಿಕ: ಸ್ವಲ್ಪ ಮಟ್ಟಿಗೆ ಉದ್ವೇಗವೂ, ಮನಸ್ಸಿಗೆ ಕಿರಿಕಿರಿ, ಅಶಾಂತಿ ಉಂಟಾಗುವುದು ಸಹಜವಾದರೂ ಅವೆಲ್ಲವನ್ನೂ ದಾಟುವ ವಿಶ್ವಾಸ ನಿಮ್ಮದಾಗಿರಲಿ. ಅಷ್ಟಮ ಗುರುವು ಮನೋರೋಗವನ್ನು ಕೊಟ್ಟು ಕೆಲಸ ಕಾರ್ಯಗಳಲ್ಲಿ ಕಷ್ಟವನ್ನು ಕೊಡುವ ಕಾಲವಿದು. ಇದಕ್ಕೆ ಒಂದೇ ಒಂದು ಮಾರ್ಗ. ಸುಬ್ರಹ್ಮಣ್ಯ ದೇವರು ಒಬ್ಬನೇ ನಿಮ್ಮನ್ನು ಕಾಪಾಡುವವನು.
ಧನಸ್ಸು: ಧನಕ್ಕೆ ಅಧಿಪತಿ, ಧನಧಾನ್ಯಗಳ ಅಧಿಪತಿ ಗುರುಕಟಾಕ್ಷವನ್ನು ಕೊಡುವ ಅಧಿಪತಿ ಗುರು. ತನ್ನ ಮಾತಿನಂತೆ ನಡೆದರೆ ಆಕಾಶವನ್ನೇ ಮುಟ್ಟಿಸುವ ಏಕೈಕ ಗ್ರಹ ಗುರು. ದಾರಿಯನ್ನೇ ತೋರುವವನು ಗುರು. ಆದರೆ ನಿಮಗೆ ಜನ್ಮಕೊಟ್ಟ ಮಾತಾಪಿತರಿಗೆ ವಂದಿಸಿ, ಅವರ ಸೇವೆಯನ್ನು ಮಾಡಿರಿ. ಸಂತೋಷ, ದೀರ್ಘಾಯುಷ್ಯ ಹೀಗೆ ಎಲ್ಲ ರೀತಿಯ ಅಭೀಷ್ಟವನ್ನು ಪಡೆಯುವ ಕಾಲವಿದು.
ಮಕರ: ಸಂಸಾರದಲ್ಲಿ ಜಟಾಪಟಿಯು ನಡೆಯುತ್ತಿರುತ್ತದೆ. ಮೌನ ಧರಿಸಿ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಆ ಶಕ್ತಿಯು ನಿಮಗೆ ಇರಲೇಬೇಕಾದರೆ ಭಗವಂತನನ್ನು ಪೂಜಿಸಿ. 18 ದಿನಗಳ ಕಾಲ ನಿತ್ಯವೂ ನಾಗದೇವರನ್ನು ಅರ್ಚಿಸಿ, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ನಾಗರಾಜನು ನಿಮ್ಮನ್ನು ಕಾಪಾಡಲಿ.
ಕುಂಭ: ಖರ್ಚು-ವೆಚ್ಚವನ್ನು ಕಟ್ಟಿಹಾಕುವ ಆಭ್ಯಾಸ ಮುಂದುವರಿಸಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಜಾಣತನ. ಊಟದಿಂದ ಹಿಡಿದು ಮಲಗುವವರೆಗೂ ಎಲ್ಲದಕ್ಕೂ ಮಿತಿಯಿರಬೇಕು. ಕಾಲಜ್ಞಾನವಿರಬೇಕು. ಷಣ್ಮುಖನನ್ನು ಪ್ರಾರ್ಥಿಸಿ. ಪಾರ್ವತಿ ಸಾಂಬಸದಾಶಿವನನ್ನು ಪೂಜಿಸಿ.ಇಷ್ಟ ದೇವರು ಕೈ ಬಿಡುವುದಿಲ್ಲ.
ಮೀನ: ಕಾಲವು ಚೆನ್ನಾಗಿಯೇ ಕೂಡಿಬಂದಿದ್ದರೂ, ಯಾವ ವೈಫಲ್ಯವನ್ನೂ ಕಾಣದೆ ಮುಂದೆ ಸಾಗಲು, ಗುರುಚರಿತ್ರೆ ಪಾರಾಯಣ ಮಾಡಿ. ಗುರುವಿಗಾಗಿ 1ಕೆ.ಜಿ ಕಡಲೆಬೇಳೆಯನ್ನು ದಕ್ಷಿಣೆ ಸಹಿತ ದಾನ ನೀಡಿರಿ. ಮೃತ್ಯುಂಜಯ ಜಪ ಮಾಡಿ, ಶಿವನ ಸ್ಮರಣೆ ಮಾಡಲು ಮರೆಯಬೇಡಿ.