weekly horoscope 
ವಾರ ಭವಿಷ್ಯ

ವಾರಭವಿಷ್ಯ; ಈ ರಾಶಿಯವರು ಭಕ್ತಿಯಿಂದ ರುದ್ರಾಭಿಷೇಕ ಮಾಡಿದರೆ ದೈವಬಲವು ದೊರೆಯುವುದು

ಮೇಷ: ಮನುಷ್ಯನು ಶನಿ ಸಂಚಾರ ಕಾಲದಲ್ಲಿ ಇಟ್ಟ ಹೆಜ್ಜೆ ಮುಂದಿಡಲಾರ. ನಿಮಗೆ 4ನೇ ಮನೆಗೆ ಗುರು ಪ್ರವೇಶ ಮಾಡಿ ಉಚ್ಚ ರಾಶಿಯಲ್ಲಿ ನಿಮಗೆ ಬರಬೇಕಾದ ಧನಾಗಮನವಾಗುವುದು. ಗುರುಸ್ಮರಣೆ, ಗುರುಸೇವೆ ಸದಾ ಇರಲಿ. ಮೂರು ಲೋಕದಲ್ಲೆಲ್ಲೂ ಇಲ್ಲದ ಗಾಣಗಾಪುರದ ತ್ರಿಮೂರ್ತಿ ದತ್ತಾತ್ರೇಯನನ್ನು ದರ್ಶಿಸಿ, ಪ್ರಾರ್ಥಿಸಿ ಬನ್ನಿ. ಶುಭವಾಗುವುದು.
ವೃಷಭ: 2ನೇ ಮನೆಯ ಗುರುವಿನಿಂದ ಸಾಕಷ್ಟು ವಿಚಾರದಲ್ಲಿ ಪ್ರಗತಿ ಕಂಡಿದ್ದೀರಿ. 11ರ ಶನಿ ನಿಮ್ಮ ಕೆಲಸ ಮಾಡಿಕೊಟ್ಟು ಕೀರ್ತಿಯನ್ನು ಮುಂದುವರಿಯುವಂತೆ ಕಾಪಾಡಿದ್ದಾನೆ. ಅವನನ್ನು ಪೂಜಿಸುವುದು ಆದ್ಯ ಕರ್ತವ್ಯ. ಲಿಂಗಾಷ್ಟಕ ಪಠಿಸಿದರೆ ಕೈಗೊಂಡ ಕೆಲಸಗಳು ಮುಕ್ತಾಯ ಹಂತಕ್ಕೆ ಬರುತ್ತವೆ. ಶ್ರೀ ಕಂಠೇಶ್ವರನನ್ನು ದರ್ಶಿಸಿ ಬನ್ನಿ.
ಮಿಥುನ: ಸುಖ- ಸಂತೋಷ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ, ಶನಿಯು ಗುರು ಮನೆಯಲ್ಲಿ ಇದ್ದಾನೆ. ಗುರುವು ಪ್ರಾರ್ಥನೆ ಒಂದಕ್ಕೆ ಒಲಿಯುವ ದೇವತೆ. ಪ್ರಾರ್ಥಿಸಿ. ನಿಮ್ಮ ಕೆಲಸ ಕಾರ್ಯಗಳು ವಿಜೃಂಭಣೆಯಿಂದ ನಡೆಯುತ್ತವೆ. ಜೂನ್ 2ರ ನಂತರ ಎರಡನೇ ಮನೆಗೆ ಗುರು ಬಂದಾಗ ಉಜ್ವಲವಾದ ಭವಿಷ್ಯವಿದೆ.
ಕಟಕ: ಉಚ್ಚ ರಾಶಿಗೆ ಬಂದು ನಿಮ್ಮ ಆಲಸ್ಯ ದೂರಮಾಡಿ ಮನೆಯಲ್ಲಿ ಸಕಲ ಸೌಲಭ್ಯ ಸುಖವನ್ನು ಕೊಟ್ಟು ಇಚ್ಛಿತ ಕಾರ್ಯದಲ್ಲಿ ಜಯವನ್ನು ಕೊಡುತ್ತಾನೆ. ಉಮಾ ಮಹೇಶ್ವರ ವ್ರತಕತೆಯನ್ನು ಪಾರಾಯಣ ಮಾಡಿದರೆ ಸುಖ- ಶಾಂತಿ, ಆರೋಗ್ಯವು ಲಭಿಸುವುದು.
ಸಿಂಹ: ಗುರುವೆಂದರೆ ಗುರುವೇ. ಗುರುವಿಗೆ ಪರ್ಯಾಯವೇ ಇಲ್ಲ. 12ನೇ ಮನೆಗೆ ಬಂದರೂ ಉಚ್ಚ ರಾಶಿಯಲ್ಲಿ ಪ್ರವೇಶ ಮಾಡುವುದರಿಂದ, ಗುರು ಕಟಕ ರಾಶಿಗೆ ಬಂದಾಗ ಎಲ್ಲರಿಗೂ ಒಳ್ಳೆಯದನ್ನೇ ಮಾಡಿ ಪ್ರಗತಿಯನ್ನು, ಸುಖವನ್ನು ಕೊಡುತ್ತಾನೆ, ಆದರೆ ಅಷ್ಟಮದಲ್ಲಿ ಶನಿಯಿದ್ದು, ಮಾತು ಹರಿತವಾಗಬಾರದು. ಧೋರಣೆ, ಆಲಸ್ಯ ಬಾರದಂತೆ ಮುಂದೆ ಸಾಗಿದರೆ ಜೀವನದಲ್ಲಿ ಜಯವೇ ನಿಮ್ಮದು. ‘ಗುರು- ಗಣೇಶಾಭ್ಯೋ ನಮಃ’ ಎಂದು ಪ್ರಾರ್ಥಿಸಿ.
ಕನ್ಯಾ: ಏಕಾದಶಕ್ಕೆ ಗುರು ಬರುತ್ತಾನೆ. ಆದರೆ ಶನಿಯು 7ನೇ ಮನೆಯಲ್ಲೇ ಇರುತ್ತಾನೆ. ನಿಮ್ಮ ಶರೀರ ಬಾಧೆಯನ್ನು ಕಳೆದುಕೊಳ್ಳಲು ದೈವ ಒಂದೇ ಮಾರ್ಗ. ಭಕ್ತಿಯಿಂದ ರುದ್ರಾಭಿಷೇಕ ಹಾಗೂ ರುದ್ರಹೋಮ ಮಾಡಿದರೆ ಸಾಕಷ್ಟು ದೈವಬಲವು ದೊರೆತು ಆರೋಗ್ಯವನ್ನು ಪಡೆಯುತ್ತೀರಿ. ಸಕಲ ಸೌಭಾಗ್ಯವನ್ನು 11ನೇ ಮನೆಯ ಗುರುವಿನಿಂದ ಪಡೆಯುತ್ತೀರಿ.
ತುಲಾ: ಗುರು ದಶಮಕ್ಕೆ ಬಂದರೂ ಉಚ್ಚರಾಶಿಯಲ್ಲಿ ಇದ್ದಾನೆ. ಶನಿ 6ರಲ್ಲಿದ್ದು, ದಿನೇ ದಿನೇ ಕೀರ್ತಿಯು ಪಾಡ್ಯದಿಂದ ಪೌರ್ಣಮಿಗೆ ವೃದ್ಧಿಯಾಗುವ ಚಂದ್ರನಂತೆ ಬೆಳೆಯುವುದು. ಹಾಗೂ ನೀವೂ ಬೆಳೆಯಬಹುದು. ಕೀರ್ತಿಶಾಲಿಯಾಗುವಿರಿ. ಮಾಡಿದ ಕೆಲಸದಲ್ಲಿ ನಿಮಗೆ ಸೌಖ್ಯವು ಉಂಟಾಗುತ್ತದೆ. ಧೈರ್ಯವಾಗಿರಿ.
ವೃಶ್ಚಿಕ: ಈ ರಾಶಿಗೆ ಜೂನ್ 2ರಿಂದ ಗುರು 9ಕ್ಕೆ ಬಂದು, ಧನಲಾಭ ಕೊಟ್ಟು ನಿಮ್ಮನ್ನು ಹರಸುತ್ತಾನೆ. ಗುರುಚರಿತೆ ಪಾರಾಯಣ ಮಾಡಿರಿ ಹಾಗೂ ಶನೇಶ್ವರ ಗ್ರಹ ಪ್ರೀತ್ಯರ್ಥವಾಗಿ ತಿಲ- ತೈಲ ದಾನ ಕೊಟ್ಟು, ಕಪ್ಪು ಬಟ್ಟೆ ಕೊಡಿ. ಆತಂಕ ಕಡಿಮೆಯಾಗಿ ದುಡ್ಡಿನ ಚಿಂತೆ ತಪ್ಪುವುದು.
ಧನಸ್ಸು: ಗುರುವು ಅಷ್ಟಮಕ್ಕೆ ಬರಲಿದ್ದಾನೆ. ಶನಿಯು ಚತುರ್ಥದಲ್ಲಿ ಇರುತ್ತಾನೆ. ಇದು ನೀವು ಮೌನವಾಗಿದ್ದು, ಪ್ರಾರ್ಥನೆ ಮಾಡುವ ಸಮಯ. ಒಂದು ಅಂಕಿಯ ಮುಂದೆ ಸೊನ್ನೆಯನ್ನು ಸೇರಿಸುತ್ತಾ ಹೋದರೆ ಅದರ ಮೊತ್ತವು ಏರುವಂತೆ, ನೀವೂ ಸಹ ಜೀವನದಲ್ಲಿ ಎತ್ತರಕ್ಕೆ ಬೆಳೆಯುವ ಕಾಲ ದೂರವಿಲ್ಲ.
ಮಕರ: 7ನೇ ಮನೆಗೆ ಗುರುಬಂದು, ಸುಖ-ಶಾಂತಿ ಕೊಟ್ಟು ಮನೆಯಲ್ಲಿ ಆಗುವ ಕೆಲಸಗಳಿಗೆ ಚಾಲನೆ ಕೊಟ್ಟು ಮುಖದಲ್ಲಿ ಮಂದಹಾಸ ಬೀರುತ್ತಾನೆ. ಸಪ್ತಮದಲ್ಲಿ ಗುರುವಿರುವುದರಿಂದ ಎಲ್ಲರಿಗಾಗಿಯೂ ಪ್ರಾರ್ಥಿಸಿ. ಲಲಿತಾ ತ್ರಿಷತಿ ಪಠಿಸಿ. ಸಂಸಾರದಲ್ಲಿ ಸುಖ-ಸಮೃದ್ಧಿಯನ್ನು ಪಡೆಯಿರಿ.
ಕುಂಭ: ಷಷ್ಠಕ್ಕೆ ಗುರು ಬರುತ್ತಾನೆ. ಲಗ್ನದಲ್ಲಿ ರಾಹುವಿದ್ದರೂ ಪರವಾಗಿಲ್ಲ. ಶನಿ ಮನೆಯಲ್ಲಿ ಪಾಪಗ್ರಹವಿರುವುದು ನಿಮಗೆ ಒಳ್ಳೆಯ ಸಂಕೇತವೇ. ಗುರುವನ್ನು ಗಣೇಶನನ್ನು ಪ್ರಾರ್ಥಿಸಿ. ಸಾಡೇಸಾತಿಯ ಆಪತ್ತು ದೂರವಾಗಿ ನಿಮ್ಮ ಗುರಿಯನ್ನು ಮುಟ್ಟಬಹುದು. ಶಿವಸಹಸ್ರನಾಮ ಪಾರಾಯಣ ಮಾಡಿರಿ. ಇಚ್ಛಿತ ಫಲಗಳನ್ನು ಸಾಂಬಸದಾಶಿವನೇ ನೀಡುತ್ತಾನೆ.
ಮೀನ: ಶನಿ ಸಂಚಾರವಿದ್ದರೂ ಪಂಚಮಕ್ಕೆ ಗುರು ಬರುವುದು ಶುಭ ಸಂಕೇತ. ಶುಭಗ್ರಹವು ಉಚ್ಛ ರಾಶಿಗೆ ಬರುವುದರಿಂದ ಶೇ. 70 ಕೆಲಸಗಳು ನಿಮ್ಮಂತೆ ಆಗಿ ನಿಮಗೆ ಧನವನ್ನು ನೀಡುತ್ತಾನೆ. ಶನಿಯು ಗುರುಮನೆಯಲ್ಲಿ ಗುರು ಉಚ್ಛ ರಾಶಿಯಲ್ಲಿ ಇರುವುದರಿಂದ ಶನಿತಟಸ್ಥನಾಗಿರುತ್ತಾನೆ. ಕಾರ್ಯ ವೈಖರಿಯಲ್ಲಿ ಬದಲಾವಣೆ ತಂದು ಸಕಾರಾತ್ಮಕವಾಗಿ ಬಾಳನ್ನು ನಡೆಸಿದರೆ ಶಿವನು ಶನಿಶಾಪ ಕುಗ್ಗಿಸಿ ದೈವಬಲ ನೀಡುತ್ತಾನೆ. ಇಷ್ಟಾರ್ಥ ಸಿದ್ಧಿಸುತ್ತಾನೆ. ಶಿವಾಷ್ಟೋತ್ತರ ಪಠಿಸಿ.