ಮೇಷ: ರಾಶಿಗೆ ಶನಿಯು 11ರಲ್ಲಿದ್ದು ಗುರು ಲಗ್ನದಲ್ಲೇ ಇದ್ದಾನೆ. ಯಾವ ಕಾರಣಕ್ಕೂ ಮನೆಯಲ್ಲಿ ಘರ್ಷಣೆ ಬೇಡ. ಮೀನ ರಾಶಿಯಲ್ಲಿ ರಾಹುವಿದ್ದರೂ ರವಿ, ಬುಧರು ನಿಮ್ಮನ್ನು ಕಾಪಾಡುತ್ತಾರೆ. ಗುರುವೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ರಾಜಕಾರಣಿಗಳಿಗೆ ಅನುಕೂಲವಾದ ಸಮಯ. ಜನಮೆಚ್ಚುವ ಕೆಲಸವನ್ನು ಮಾಡಿರಿ. ಮೇಷ ರಾಶಿಗೆ ಮೇ 1ನೇ ತಾರೀಖಿನ ನಂತರ ಗುರುವು ದ್ವಿತೀಯಕ್ಕೆ ಬರುವುದರಿಂದ ದೇವತಾ ಪ್ರಾರ್ಥನೆ ಮಾಡಿರಿ.
ವೃಷಭ: ದ್ವಾದಶದಲ್ಲಿ ಗುರುವಿದ್ದು, ಇದೇ ಮೇ 1ನೇ ತಾರೀಖಿನಿಂದ ಗುರು ಲಗ್ನಕ್ಕೆ ಬಂದು ಸತ್ಯವನ್ನು ಸಾರಿ ಎಲ್ಲರಿಗೂ ಒಳ್ಳೆಯ ನಡೆ-ನುಡಿಯನ್ನು ಕರುಣಿಸಿ ದೈವಬಲವನ್ನು, ಗ್ರಹಬಲವನ್ನು ತರುತ್ತಾನೆ. ಬುದ್ಧಿಬಲದಿಂದ ಒಳ್ಳೆಯ ಸ್ಥಾನಮಾನ ಪಡೆದು ಜಯಶೀಲರಾಗುತ್ತೀರಿ. ದೇಹಕ್ಕೆ ಅತಿಯಾದ ಆಯಾಸ ಮಾಡಿಕೊಳ್ಳದೆ ಎಚ್ಚರದಿಂದಿರಿ. ದುರ್ಗೆಯನ್ನು ಪ್ರಾರ್ಥಿಸಿ.
ಮಿಥುನ: ನಾಲ್ಕು ವಾರಗಳು ಮಾತ್ರವೇ ಈ ರಾಶಿಯವರಿಗೆ ಗುರುಬಲವಿದ್ದು, ನಿಮಗೆ ರಕ್ಷಣೆ ಕೊಡಲು ಗುರು ಸಜ್ಜಾಗಿದ್ದಾನೆ. ಶನಿ 9ರಲ್ಲಿದ್ದು ಯಾವ ಕೆಟ್ಟ ವಿಚಾರಗಳು ನಿಮ್ಮ ಹತ್ತಿರ ಬರದಂತೆ ಕಾಯುತ್ತಾನೆ. ಮಿಥುನ ರಾಶಿಯವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೆ 30ನೇ ಏಪ್ರಿಲ್ನೊಳಗೆ ಚುನಾವಣೆ ನಡೆದರೆ ಗುರುವಿನ ಪರಿಪೂರ್ಣ ಅನುಗ್ರಹ ಈ ರಾಶಿಯವರಿಗೆ ಇರುತ್ತದೆ. ರಾಷ್ಟ್ರಕ್ಕೆ ಅಭ್ಯುದಯವಾಗಲಿ ಎಂಬ ಚಿಂತನೆ ಮಾಡಿ ಅಯೋಧ್ಯೆ ಶ್ರೀರಾಮನನ್ನು ಪ್ರಾರ್ಥಿಸಿ.
ಕಟಕ: ಅಷ್ಟಮ ಶನಿ, ಗುರು ದಶಮದಲ್ಲಿದ್ದು ಏಕಾದಶಕ್ಕೆ ಮೇ ಒಂದನೇ ತಾರೀಖಿನಿಂದ ಬರುತ್ತಾನೆ. ಮನುಷ್ಯನಿಗೆ ಗುರುಬಲ ಬಂದಾಗ ಶನಿಕಾಟವು ಸ್ಥಗಿತವಾಗಿ ಒಳ್ಳೆಯ ದಿನಗಳನ್ನು ಕಾಣಬಹುದು. ಗುರು ನಿಮ್ಮ ಕೈಹಿಡಿದು ನಡೆಸುತ್ತಾನೆ. ಸದಾಕಾಲ ಪಾರ್ವತಿ ಪರಮೇಶ್ವರನನ್ನು ಪ್ರಾರ್ಥಿಸಿ. ದೇಶದ ಹಿತಕ್ಕಾಗಿ ಪ್ರಾರ್ಥನೆ ಇರಲಿ. ಮನುಕುಲದ ಸುಖವೇ ನಮ್ಮ ಮೂಲ ಉದ್ದೇಶವಾಗಿರಲಿ.
ಸಿಂಹ: ರಾಶಿ ಸೂರ್ಯನ ರಾಶಿಯಾಗಿದ್ದು, ಬೆಳಕನ್ನು ಕೊಡುವ ಸೂರ್ಯನಾರಾಯಣನನ್ನು, ವೈಭವ ಗಣಪತಿಯನ್ನು ಪ್ರಾರ್ಥಿಸಿ. ರಾಜಕಾರಣದಲ್ಲಿ ಇರುವವರಿಗೆ ವೈಭವ ಗಣಪತಿ ಗೆಲುವನ್ನು ಕೊಟ್ಟು ಒಳ್ಳೆಯ ಆರೋಗ್ಯ ಸಿಗುವಂತೆ ಕರುಣಿಸುತ್ತಾನೆ. ನಿಮ್ಮ ಬಾಳನ್ನು ಸಾರ್ಥಕ ಪಡಿಸಿಕೊಳ್ಳಿ. ಅಭಿವೃದ್ಧಿಯ ವಾರವಾಗಿದ್ದು ಸಂತಸದಿಂದಿರಿ. ಈ ರಾಶಿಯಲ್ಲಿ ಹುಟ್ಟಿದ ರಾಜಕಾರಣಿಗಳಿಗೆ ಗೆಲುವು ಶೇಕಡ 50 ಪ್ರಾಪ್ತವಾಗುತ್ತದೆ.
ಕನ್ಯಾ: ಆರನೇ ಮನೆಯಲ್ಲಿ ಶನಿ ಶತ್ರುನಾಶಕನಾಗಿದ್ದು, ಆರ್ಥಿಕ ಸದೃಢತೆ ಕೊಡುತ್ತಾನೆ. ಈ ರಾಶಿಯಲ್ಲಿ ಜನಿಸಿದ ನೀವು ರಾಷ್ಟ್ರದ ದೃಷ್ಟಿಯಿಂದ ರಾಜಮಾರ್ಗದಲ್ಲಿದ್ದರೆ ದೈವವು ನಿಮ್ಮ ಕೈ ಹಿಡಿಯುತ್ತದೆ. ಗುರು ಅಷ್ಟಮದಲ್ಲಿದ್ದು ಗುರುಬಲವಿಲ್ಲದ ಕಾರಣ ಗುರುದತ್ತಾತ್ರೇಯನನ್ನು ಪ್ರಾರ್ಥಿಸಿ, ಶನಿಯಿಂದ ಒಳ್ಳೆಯ ದಿನಗಳನ್ನು ಕಂಡುಕೊಳ್ಳಿ. ಈ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಪ್ರಾರ್ಥನೆ ಇರಲಿ ಹಾಗೂ ಕನ್ಯಾ ರಾಶಿಯವರು ಪರ್ಜನ್ಯ ದೇವರನ್ನು ಜಪಿಸಿ. ಇದರಿಂದ ರಾಷ್ಟ್ರಕ್ಕೆ ಬೇಕಾದ ಮಳೆಯನ್ನು ದೇವರ ಪ್ರಾರ್ಥನೆಯಿಂದ ಪಡೆಯಬಹುದು.
ತುಲಾ: ರಾಶಿಯಲ್ಲಿ ಜನಿಸಿದ ನೀವು, ಪಾಪ- ಪುಣ್ಯ ಗಳನ್ನು ತುಲನೆ ಮಾಡಿ ಲಾಭ, ನಷ್ಟ ಕಂಡುಕೊಳ್ಳುವ ಕಾಲ. ಸಪ್ತಮ ಗುರು ಮೇ ಒಂದರವರೆಗೂ ಇದ್ದು, ಭಾರತೀಯರ ಹಿತಕ್ಕಾಗಿ ಭಾರತಾಂಬೆಯ ಸ್ವರೂಪಿಯಾದ ದುರ್ಗೆಯನ್ನು ಪ್ರಾರ್ಥಿಸಿ. ನಿಮ್ಮ ವ್ಯಾಪಾರ ಜಯದ ಅಂಚನ್ನು ತಲುಪುತ್ತದೆ.
ವೃಶ್ಚಿಕ: ಮೇಷ, ವೃಶ್ಚಿಕಕ್ಕೆ ಅಧಿಪತಿ ಅಂಗಾರಕ. ತಮಿಳುನಾಡಿನಲ್ಲಿ ವಿರಾಜಮಾನವಾಗಿರುವ ಸುಬ್ರಮಣ್ಯ ದೇವರನ್ನು ದರ್ಶಿಸಿ. ಅಲ್ಲದೆ ನಿತ್ಯವೂ ಸುಬ್ರಮಣ್ಯನನ್ನು ಮನೆಯಲ್ಲೇ ಪ್ರಾರ್ಥಿಸಿ, ಧನದ ಹೊಳೆಯು ಹರಿದು ನಿಮ್ಮ ಕಷ್ಟದ ದಿನಗಳು ಮುಗಿಯುತ್ತವೆ. ಗುರುಬಲವು ಬಂದು ನಿಮಗೆ ಸುಖವನ್ನು ಕೊಡುತ್ತದೆ. ಸುಸ್ಥಿರವಾದ ರಾಷ್ಟ್ರಭಕ್ತಿ ಸಜ್ಜನರಿಂದ, ಯುವಕರಿಂದ ಕೂಡಿದ ಭಾರತವನ್ನು ನಿರ್ವಿುಸುವಂತೆ ದೇವರಲ್ಲಿ ಪ್ರಾರ್ಥನೆ ಈರಿಸಿ.
ಧನಸ್ಸು: ಬಾಲರಾಮನು ಆಗಲೇ ಅಯೋಧ್ಯೆಯಲ್ಲಿ ಬಂದು ನೆಲೆಸಿದ್ದಾನೆ. ಧನು ರಾಶಿಯವರಿಗೆ ಒಂದು ಕಡೆ ಗುರುವಿನ ಅನುಗ್ರಹವಿದ್ದು, ಮತ್ತೊಂದು ಮಾರ್ಗದಲ್ಲಿ ಶನಿಯ ಬಲವು ಸೇರಿದೆ. ಬಾಣಧಾರಿಯಾದ ಶ್ರೀರಾಮಚಂದ್ರನನ್ನು ಪ್ರಾರ್ಥಿಸಿ, ತೃತೀಯ ಶನಿ, ಪಂಚಮದಲ್ಲಿ ಗುರು ಇರುವುದರಿಂದ ನಿಮಗೆ ಎಲ್ಲವನ್ನೂ ಕೈಗೆ ಕೊಟ್ಟು ಸಲಹುತ್ತಾನೆ. ಸುಖವಾದ ಕಾಲ ನಡೆಯುತ್ತಿದೆ. ಆದ್ದರಿಂದ ಧನು ರಾಶಿಯವರು ಸ್ವಾರ್ಥವನ್ನು ಬದಿಗಿರಿಸಿ, ಈ ರಾಷ್ಟ್ರದ ಮುನ್ನಡೆಗೆ ಪ್ರಾರ್ಥಿಸಿ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ. ದೇಶಕ್ಕಾಗಿ ಮಾಡಿದ ಪ್ರಾರ್ಥನೆ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.
ಮಕರ: ಶನಿ ದ್ವಿತೀಯ ಸ್ಥಾನದಲ್ಲಿ ಮುಂದುವರಿದು, ಗುರುಬಲಕ್ಕಾಗಿ ಮೇ ಒಂದರವರೆಗೂ ತಾಳ್ಮೆಯಿಂದ ಕಾಯಬೇಕು. ನಿಮ್ಮ ಒಳ್ಳೆಯ ದಿನಗಳು ಆರಂಭವಾಗುತ್ತವೆ. ಭಾರತೀಯರಾದ ನಾವು ನಮ್ಮ ರಾಷ್ಟ್ರಕ್ಕಾಗಿ ಪ್ರಾರ್ಥನೆ ಸಲ್ಲಿಸಿ, ದೇಶದ ಹಿತಕ್ಕಾಗಿ ಚಿಂತನೆ ಮಾಡೋಣ. 140 ಕೋಟಿ ಪ್ರಜಾಸಮೂಹಕ್ಕೆ ಆರೋಗ್ಯವನ್ನು ಕೊಟ್ಟು ದೇವರು ಕಾಪಾಡಲೆಂದು ಬೇಡಿಕೊಳ್ಳೋಣ. ಸ್ವಚ್ಛವಾದ ಭಾರತ ನಿರ್ವಣವಾಗುವಂತೆ ಪ್ರಾರ್ಥನೆ ಇರಿಸೋಣ. ಶನಿಯ ಸಂಚಾರ 2025ರಲ್ಲಿ ಮುಗಿಯಲಿದ್ದು ಮುಂದಿನ ಶುಭದಿನಗಳಿಗಾಗಿ ಕಾದಿರಿ.
ಕುಂಭ: ಜನ್ಮದಲ್ಲಿ ಶನಿ, ಚತುರ್ಥಕ್ಕೆ ಗುರು ಸಾಗುವಾಗ ಮನುಷ್ಯನು ಮಾಡಿದ ಪೂರ್ವ ಜನುಮದ ಪಾಪಗಳು ವ್ಯಾಧಿಯಾಗಿಯೂ, ಕೂಡಿಟ್ಟ ಧನವೆಲ್ಲವೂ ಔಷಧಕ್ಕೆ ಸೇರುತ್ತದೆ. ಆರೋಗ್ಯ ಕೆಟ್ಟು ಮನಸ್ಸು ಬಾಡಿಹೋಗದಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ನೀವು ಭಗವದ್ಭಕ್ತರಾಗಿ, ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಅವನು ನಿಮ್ಮ ಅಭಿಷ್ಟಗಳನ್ನು ಪರಿಪೂರ್ಣಗೊಳಿಸುತ್ತಾನೆ.
ಮೀನ: ರಾಶಿಯವರಿಗೆ ಈ ಸದ್ಯದಲ್ಲಿ ದ್ವಾದಶ ಶನಿಯಿಂದ ಅಲ್ಪಸ್ವಲ್ಪ ತಾಪವನ್ನು ತಡೆದು ಬಂದಿರುವುದು ದ್ವಿತೀಯ ಗುರುವಿನ ಅನುಗ್ರಹ ಮಾತ್ರದಿಂದ. ನಮ್ಮ ಹಿತವನ್ನು ಸದಾ ಕಾಲ ದೇವರಲ್ಲಿ ಕೇಳಿಯೇ ಕೇಳುತ್ತೇವೆ. ಆದರೆ ದೇಶಭಕ್ತರಿಂದ, ದೈವಭಕ್ತರಿಂದ ಸನಾತನ ಧರ್ಮ ಉಳಿದು ಶ್ರೇಷ್ಠ ಭಾರತವನ್ನು ನಿರ್ವಿುಸುವಂತೆ ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪಿಯಾದ ದತ್ತಾತ್ರೇಯನನ್ನು ಅನನ್ಯವಾಗಿ ಭಕ್ತಿಯಿಂದ ಬೇಡಿಕೊಳ್ಳೋಣ. ಇನ್ನು ನಾಲ್ಕು ವಾರ ಗುರುಬಲವಿದ್ದು ಯಾವ ಚಿಂತೆಯೂ ಬೇಡ. ಈ ರಾಶಿಯಲ್ಲಿ ಹುಟ್ಟಿದ ರಾಜಕಾರಣಿಗಳಿಗೆ ದ್ವಿತೀಯ ಗುರು ಮೇ ಒಂದನೇ ತಾರೀಖಿನವರೆಗೂ ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಾನೆ, ಶುಭವಾಗಲಿ.