ಜ್ಯೋತಿಷ್ಯ

ವಾರ ಭವಿಷ್ಯ: ಈ ರಾಶಿಯವರು ತಮ್ಮ ಮಕ್ಕಳಿಗೆ ಒಳ್ಳೆಯ ನಡತೆ ಕಲಿಸಿದರೆ ಮುಂದೆ ಒಳಿತು ಇದೆ

24-05-2020 ರಿಂದ 30-05-2020

ಮೇಷ: ದಶಮದಲ್ಲಿ ಶನಿ, ಗುರುವಕ್ರರಾಗಿದ್ದು ಶುಕ್ರನು ವಕ್ರನಾಗಿರುತ್ತಾನೆ. ಸಮಯಕ್ಕೆ ಸರಿಯಾಗಿ ಕೆಲಸಗಳು ಆಗದಿದ್ದರೂ ಸಹ ಮೇಷದ ಅಧಿಪತಿ ಕುಜನು ಹನ್ನೊಂದರಲ್ಲಿದ್ದು ನಿಮ್ಮ ಕಾರ್ಯಗಳನ್ನು ನಡೆಸಿಕೊಡುತ್ತಾನೆ. ಮೇಷದ ಸೂರ್ಯನು ಮಿಥುನದ ಬುಧನು ನಿಮ್ಮನ್ನು ಕಾಪಾಡಿ ಯಥೋಚಿತವಾದ ಕೆಲಸವನ್ನು ಮಾಡಿಕೊಡುತ್ತಾನೆ. ಗ್ರಹಬಲಕ್ಕಿಂತ ದೈವಬಲವೇ ಶ್ರೇಷ್ಠ. ಸುಬ್ರಹ್ಮಣ್ಯನ ಆರಾಧನೆ ಮಾಡಿ. ಭುಜಂಗಪ್ರಯಾತ ಸ್ತೋತ್ರ ಪಠಿಸಿ.

ವೃಷಭ: ಸ್ವಕ್ಷೇತ್ರ ಶುಕ್ರನು ಶುಭನಾಗಿದ್ದರೂ ಧನದ ಕೊರತೆ ಇರುತ್ತದೆ. ಒಂಬತ್ತರ ಶನಿ ಗುರುವಿನ ಜೊತೆ ವಕ್ರಗತಿಯಲ್ಲಿರುವುದರಿಂದ ಕೆಲಸಗಳು, ನಿರೀಕ್ಷಿತ ಧನವು ಬರುವುದು ತಡವಾಗಬಹುದು. 29-6-2020ರವರೆಗೂ ಸಮಾಧಾನಚಿತ್ತರಾಗಿ ಇದ್ದಲ್ಲಿ, ಕೊಲ್ಲಾಪುರ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿದಲ್ಲಿ ನಿಮ್ಮ ಕೆಲಸ ಕೈಗೂಡುವುದು. ಉದ್ವೇಗ ಬೇಡ. ಆರೋಗ್ಯವನ್ನು ಕಾಪಾಡಿಕೊಳ್ಳಿ.

ಮಿಥುನ: ಅಷ್ಟಮ ಶನಿ ಸಂಸಾರದಲ್ಲಿ ಗೊಂದಲವನ್ನು ಮಾಡಿದರೂ ಗುರುವು ವಕ್ರತ್ವದಲ್ಲಿ ಇರುವುದರಿಂದ ಶಾಂತವಾಗಿರುವುದು ಲೇಸು. ಕೈಗೆ ಕೈ ಜೋಡಿಸಿದಲ್ಲಿ ಶಾಂತಿಯ ಮಹಾಸಂಕಲ್ಪವೂ ಹಾಳಾಗುತ್ತದೆ, ಎಚ್ಚರವಿರಲಿ. ದಶಾವತಾರಿ ಶ್ರೀರಾಮನ ಪ್ರಾರ್ಥನೆ ಇರಲಿ. ಸುಂದರಕಾಂಡವನ್ನು ಪಠಿಸಿ. 24.05.2020ರ ಮೇಲೆ ಬುಧನ ಸ್ಥಾನ ಬದಲಾಗಿ ಅಲ್ಪ ಸಹಾಯವು ದೊರಕಿ ಆಶಾಭಾವನೆ ಮೂಡಿಸುತ್ತಾನೆ.

ಕಟಕ: ಸಪ್ತಮ ಗುರುವು ನಿಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ. ದೈವವು ನಿಮ್ಮನ್ನು ಪರೀಕ್ಷಿಸಲಿದೆ. ಸಪ್ತಮ ಶನಿಯು ಕಲಹವನ್ನು, ಅಧೈರ್ಯ, ಅಶಾಂತಿಯನ್ನು ಉಂಟುಮಾಡುತ್ತಾನೆ. ಭವಾನಿಶಂಕರನ ಆರಾಧನೆಯೇ ನಿಮ್ಮನ್ನು ಕಾಪಾಡುವುದು. ಗೌರಿಹರನನ್ನು ಪೂಜಿಸಿರಿ. ಶಿವನಾಮವನ್ನು ಮನಸಾ ಜಪಿಸಿ. ಅನನುಕೂಲಗಳು ದೂರವಾಗಿ ಶಾಂತ ಪರಿಸ್ಥಿತಿ ಒದಗಿಬರುತ್ತದೆ.

ಸಿಂಹ: ಶನಿ ನಿಮ್ಮ ಕಷ್ಟಗಳನ್ನು ದೂರಮಾಡಿ ಧನದ ಕೊರತೆಯನ್ನು ನೀಗಿ ನಿಮ್ಮ ಮನೋಭಿಲಾಷೆಯನ್ನು ಈಡೇರಿಸುವನು. ಆದರೆ ಗುರು ವಕ್ರನಾಗಿರುವುದರಿಂದ ಬರುವ ಧನ, ಸುಖ, ಸಂಪತ್ತು ನಿಧಾನವಾಗಲಿದೆ. ಜೊತೆ ಜೊತೆಯಾಗಿ ಋಣಾತ್ಮಕವಾಗಿಯೂ ಇದೆ. ಧೈರ್ಯಗೆಡಬೇಡಿ. ಸಿಂಹಾಧಿಪತಿ ಸೂರ್ಯನ ಅದಿತ್ಯಹೃದಯ ಪಾರಾಯಣ ಮಾಡಿ. ಸೂರ್ಯ ನಾರಾಯಣ ಅಷ್ಟೋತ್ತರ ಪಠಿಸಿ. ಒಳ್ಳೆಯ ಕಾಲ ಶೀಘ್ರವಾಗಿ ಬರಲಿದೆ.

ಕನ್ಯಾ: ಪಂಚಮ ಶನಿ ಒಳ್ಳೆಯದನ್ನು ಹೇಳಿದರೂ ಕೇಳುವುದಿಲ್ಲ. ಕೇಳಿದರೂ ಮಾಡುವುದಿಲ್ಲ. ನಿಮ್ಮದು ಏಕಾಧಿಪತಿ ಸಾಮ್ರಾಜ್ಯ. ತಪ್ಪನ್ನು ಸರಿ ಎನ್ನುವಿರಿ. ಸರಿಯನ್ನು ತಪ್ಪೆನ್ನುತ್ತೀರ. ವಿವೇಚನೆ ಇರಬೇಕು. ಮಾಡಿದ ತಪು್ಪ ಅರಿವಿರಬೇಕು. ನಿಮ್ಮ ಜೀವನ ಸುಗಮವಾಗಿರಬೇಕಾದರೆ ದತ್ತಾತ್ರೇಯ ಸಪ್ತಾಹ ಪಾರಾಯಣ ಮಾಡಿ. ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಿ. ಅಷ್ಟೋತ್ತರ ಪಾರಾಯಣ ಮಾಡಿ. ನಿಮ್ಮ ಮಾರ್ಗವನ್ನು ಬದಲಾಯಿಸಿಕೊಳ್ಳಿ.

ತುಲಾ: ನಿಮಗೆ ನೀವೇ ಸವಾಲು. ನಿಮ್ಮ ಜೀವನ ಶುದ್ಧವಾದ, ಸತ್ಯವಾದ ಜೀವನವಾಗಿರಬೇಕು. ಅಳತೆಯಲ್ಲಿ ಮೋಸವಾದಲ್ಲಿ ಅನ್ಯಾಯ ಮಾಡಿದ ಫಲ ಬಂದು ಸೇರುವುದು. ನೀವು ಬುದ್ಧಿವಂತರು. ಅಜ್ಞಾನದಿಂದ ತುಂಬಿ ಕೇಡುಂಟು ಮಾಡಿಕೊಳ್ಳುತ್ತೀರ. ನಿಮಗೆ ಯಶಸ್ಸು, ಲಾಭ ಬರಬೇಕಾದಲ್ಲಿ ಸರಸ್ವತಿ ಮಂತ್ರವನ್ನು ಉಪದೇಶ ತೆಗೆದುಕೊಂಡು ಪಠಣ ಮಾಡಿ. ದುರ್ಗಾ ಸಹಸ್ರನಾಮ ಪಠಿಸಿ. ನಿಮ್ಮ ದೋಣಿ ಜಯದ ದಡವನ್ನು ಮುಟ್ಟುತ್ತದೆ. 4ರ ಶನಿ, ಗುರು ಕಾರಣ.

ವೃಶ್ಚಿಕ: ಚೇಳು ನಿಮ್ಮ ಚಿಹ್ನೆ. ಚೇಳಿನಲ್ಲಿ, ಸರ್ಪದಲ್ಲಿ ಅಮೃತ ಸಿಗಲಾರದು. ವಿಷವೇ ತುಂಬಿರುತ್ತದೆ. ವಿಚಾರವಿಲ್ಲದೆ ಜನಗಳನ್ನು ನಂಬಿ ಹಿಂದೆ ಮಾಡಿಕೊಂಡ ಅವಿವೇಕದಲ್ಲಿ ಸಿಲುಕಿ ಒದ್ದಾಡುತ್ತಿದ್ದಾಗ ನಿಮ್ಮ ಪ್ರಾಣದಾತೆ ಮಾತೃಶ್ರಿಯನ್ನು ಪೂಜಿಸಿರಿ. ಅವರ ಆಶೀರ್ವಾದ ಪಡೆಯಿರಿ. ನಿಮ್ಮ ಕಷ್ಟಗಳು ದೂರವಾಗಿ ಧನಪ್ರವಾಹ ಬಂದು ಸೇರುತ್ತದೆ. ಧನ ದುಃಖವನ್ನು ತರುತ್ತದೆ. ದಾನ, ಧರ್ಮ ನಿಮ್ಮ ಧ್ಯೇಯವಾಗಿರಲಿ.

ಧನಸ್ಸು: ಶ್ರೀರಾಮಚಂದ್ರನನ್ನು ಆರಾಧಿಸಿದವರಿಗೆ, ರಾಮಾಯಣ ಪಾರಾಯಣ ಮಾಡಿದವನಿಗೆ ಧನಸ್ಸಿನ ಬೆಲೆ ಗೊತ್ತಿರುತ್ತದೆ. ಅಂತಹ ಧನಸ್ಸಿನಿಂದ ಬಿಟ್ಟ ಬಾಣವು ಗುರಿಯನ್ನು ಮುಟ್ಟಿದೆ. ರಾಕ್ಷಸರನ್ನು ಅಡಗಿಸಿದೆ. ನಿಮ್ಮ ಗುರಿಯು ಸತ್ಯ ಸಂಕಲ್ಪವಾಗಿರಬೇಕು. ಮನುಷ್ಯನ ಒಳ್ಳೆಯದಕ್ಕಾಗಿ ಇರಬೇಕು. ಮುಂದೆ ಬರುವ ದಿನಗಳು ವಿಶೇಷವಾದ ಯೋಗಾನುಯೋಗಗಳನ್ನು ತಂದುಕೊಡುತ್ತವೆ. ಎಲ್ಲಾ ಹೆಣ್ಣುಮಕ್ಕಳನ್ನು ತಾಯಿಯಂತೆ ಕಾಣಿ. ಆದಿಶೇಷನ ಪ್ರಾರ್ಥನೆ ಇರಲಿ.

ಮಕರ: ಧನಸ್ಸಿನಿಂದ ಹೊರಟ ರವಿಯು ಉತ್ತರಾಯಣ ಪಥದಲ್ಲಿ ಇದ್ದು ಇನ್ನು 40 ದಿನಗಳ ಅಂತರದಲ್ಲಿ ದಕ್ಷಿಣಾಯನಕ್ಕೆ ಬಂದು ಸೇರಲಿದ್ದಾನೆ. ಸೂರ್ಯನ ತಾಪ ಶನಿ ತಾಪಕ್ಕಿಂತ ಹೆಚ್ಚಿನದು. ನಿಮ್ಮ ಮಕ್ಕಳನ್ನು ಪೋಷಿಸಿ, ಸಾಕಿ ಸಲಹಿ ಒಳ್ಳೆಯ ನಡತೆ ಕಲಿಸಿ. ಇಲ್ಲದಿದ್ದರೆ ಮುಂದೆ ಅವರಿಂದಲೇ ತೊಂದರೆ ಬಂದೀತು. ದೇವರು ಕೊಟ್ಟಿದ್ದನ್ನೇ ಮಹಾಪ್ರಸಾದವೆಂದು ಸ್ವೀಕರಿಸಿ. ಲಕ್ಷ್ಮೀ ಸಹಸ್ರನಾಮ ಪಠಿಸಿ. ನಿಮ್ಮ ಆದ್ಯತೆ ಆರೋಗ್ಯಕ್ಕಿರಲಿ.

ಕುಂಭ: ಕುಂಭ ರಾಶಿಯಲ್ಲಿ ಶನಿಯ ಮನೆಯಲ್ಲಿ ಅಂಗಾರಕನು ಉಪಸ್ಥಿತನಿದ್ದಾನೆ. ವಿನಾಕಾರಣ ಬೇಡದ ವಿಚಾರಕ್ಕೆ ಗೃಹದಲ್ಲಿ ಮನಃಶಾಂತಿ ಕೆಡಿಸುವ ಕಾಲವಿದು. ದ್ವಾದಶ ಶನಿ ನಿಮಗೆ ಗುರುವಾಗಿ ಪಾಠವನ್ನು ಕಲಿಸುತ್ತಾನೆ. ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವೇ ಪರಿಹಾರ. ದನಸ್ಸಲ್ಲಿ ಶನಿಯಿದ್ದಾಗ ವಿವೇಚನೆ ಇಲ್ಲದೆ ಕಳೆದಿದ್ದೀರ. ಅಪಾತ್ರರಿಗೆ ದಾನ ಮಾಡಿದ್ದೀರ. ಈಗ ತಿದ್ದಿಕೊಂಡು ನಿಮ್ಮ ಚೌಕಟ್ಟಿನಲ್ಲಿ ಕೆಲಸ ಮಾಡಿ. ಶನಿಸ್ತೋತ್ರ ಪಠಿಸಿ. ಎಳ್ಳೆಣ್ಣೆ, ಕರಿ ಎಳ್ಳು, ಬೆಲ್ಲ ದಾನ ಮಾಡಿ.

ಮೀನ: ಲಾಭದ ಶನಿ ಮನಸ್ಸನ್ನು ಸಂತೋಷವಾಗಿಟ್ಟಿದ್ದಾನೆ. ಕರೋನಾ-19ರಿಂದ ವಹಿವಾಟು ನಿಂತಿದೆ. ಸಾವಧಾನಚಿತ್ತರಾಗಿರಿ. ದೈವವನ್ನು ಮರೆತಲ್ಲಿ ಅವನೇ ಎಚ್ಚರಿಸುತ್ತಾನೆ. ಪ್ರದೋಷದಂದು ಮಹಾದೇವನನ್ನು ಪೂಜಿಸುವುದನ್ನು ಮರೆಯಬೇಡಿ. ಜಲ, ತಿಲ, ಬಿಲ್ವಪತ್ರೆ ದೇವನಿಗೆ ಅರ್ಪಿಸಿ. ಇದೇ ನಿಮ್ಮನ್ನು ಕಾಪಾಡಿ ಧನ, ಸುಖ, ಆಯಸ್ಸು, ಕೀರ್ತಿ ಲಭಿಸುತ್ತದೆ. ಏಕಾದಶಿಯಂದು ನಾರಾಯಣನಿಗೆ ತುಳಸಿ ಅರ್ಪಿಸಿ. ಇನ್ನು 20 ತಿಂಗಳು ಅಡೆತಡೆ ಇಲ್ಲದೆ ಸುಖವಾಗಿ ನಡೆಯುತ್ತದೆ.