ಜ್ಯೋತಿಷ್ಯ

ವಾರಭವಿಷ್ಯ: ಗೆಳೆಯರ ಬಳಿ ಸ್ನೇಹದಿಂದಿರುವುದು ಸೂಕ್ತವಾದ್ರೂ ಯಾರಿಗೂ ಸಾಲ ಕೊಡುವುದು, ಕೊಡಿಸುವುದು ಬೇಡ

ಮೇಷ: ನಿಮ್ಮನ್ನು ನೀವು ಯಶಸ್ಸಿನ ಸೂಕ್ಷ್ಮಸ್ಥರಕ್ಕೆ ಏರಿಸಿಕೊಳ್ಳಲು ಪರದಾಡುತ್ತಿದ್ದೀರಿ. ಆದರೆ ನಿಮ್ಮ ಲೆಕ್ಕಾಚಾರಗಳು ಭಾಗ್ಯದಲ್ಲಿರುವ ಗೋಚಾರದ ಶನೈಶ್ಚರನಿಂದ, ಕರ್ಮಸ್ಥಾನದ ಕೇತು ದೋಷದಿಂದ ಕಂಪನದ ವಲಯಗಳನ್ನು ಸೃಷ್ಟಿಸುತ್ತಿವೆ. ಸದ್ಯ ಬೇಕಾದದ್ದು ಅಂತಃಸತ್ವದ ಖಡಕ್ಕಾದ ರಣ ತಂತ್ರಗಳು. ನಿಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಲಿ. ವಿರೋಧಿಗಳಿಗೆ ಸಫಲತೆ ಸಿಗದು. ಶ್ರೀದೇವಿ, ಖಡ್ಗ ಮಾಲಿನಿಯನ್ನು ಆರಾಧಿಸಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 5

ವೃಷಭ: ಯುಕ್ತವಾದ್ದನ್ನು ಮಾಡಲು ವಿರೋಧಿಗಳು ಅಡೆತಡೆ ತರುತ್ತಿರುತ್ತಾರೆ. ಹೀಗಾಗಬಾರದೆಂದರೆ ಅದು ನಿಮ್ಮ ಇಷ್ಟ ಅನಿಷ್ಟಗಳ ಮೇಲೆ ನಿಲ್ಲುವುದಿಲ್ಲ. ಒರಟಾಗಿರುವ ಜನರ ಮಾತನ್ನು ನಿರ್ಲಕ್ಷಿಸಿ. ಮರು ಮಾತನಾಡಿದರೆ ಅವರಿಗೆ ದೈತ್ಯ ಶಕ್ತಿ ಬರುತ್ತದೆ. ಮಂದಹಾಸವನ್ನು ಮರೆಯದಿರಿ. ಮುಗುಳ್ನಗೆಯೇ ನಿಮ್ಮ ವಜ್ರಾಯುಧವಾಗಿದೆ. ವಿರೋಧಿ ಗಳನ್ನು ನಿರ್ಲಕ್ಷಿಸಿದರೆ ತೆಪ್ಪಗಾಗುತ್ತಾರೆ. ಹನುಮಾನ್ ಚಾಲೀಸಾ ಓದಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 1

ಮಿಥುನ: ಆತ್ಮವಿಮರ್ಶೆ ಮುಖ್ಯವಾಗಿದೆ. ಆದರೆ ಅದೇ ಪ್ರಧಾನವಾಗಬಾರದು. ಆ ರೀತಿಯಾಗಿ ಎಚ್ಚರಿಕೆ ವಹಿಸಿ. ‘ಅತಿ ಸರ್ವತ್ರ ವರ್ಜ್ಯೆ’ ಎಂಬ ಮಾತು ರೂಢಿಯಲ್ಲಿದೆ. ಕೀಳರಿಮೆಗೆ ತುತ್ತಾಗುವಷ್ಟು ಆತ್ಮ ವಿಮರ್ಶೆ ಸೂಕ್ತವಲ್ಲ. ನಿಗೂಢ ಶಕ್ತಿಗಳು ನಿಮ್ಮ ದಾರಿಯಲ್ಲಿ ಅಡೆತಡೆಗಳನ್ನು ತರುತ್ತಲೇ ಇರುತ್ತವೆ. ಇದರಿಂದ ಹೊರಕ್ಕೆ ಬರಬೇಕು ಎಂದರೆ ಅರಿಷಿಣದ ಕೊಂಬಿಗೆ ಕೇಸರಿ ದಾರ ಸುತ್ತಿ ಮೈಡಾಣಿಯನ್ನು ಸ್ತುತಿಸಿ. ಇದರಿಂದ ಒಳಿತಾಗುತ್ತದೆ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 9

ಕಟಕ: ಅಂಗೈಯಲ್ಲಿನ ಪೂರ್ತಿ ನಂಬಿಕೆಯ ಘಟಕಗಳೇ ನಿಮ್ಮಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತವೆ. ಆದರೆ ಅದೃಷ್ಟ ದೇವತೆಯಿಂದ ಅಂತಿಮ ಗೆಲುವು ನಿಮಗೆ ನಿಶ್ಚಿತ. ಹೀಗೆಂದ ಮಾತ್ರಕ್ಕೆ ವಿರೋಧಿಗಳ ಶಕ್ತಿ ನಿಮ್ಮ ವಿರುದ್ಧ ನಿಷ್ಪಲ ಎಂದು ಭಾವಿಸದಿರಿ. ಸಾಯಂಕಾಲದ ಐದು ಗಂಟೆಯ ನಂತರ ದೊಡ್ಡ ಮೊತ್ತದ ಯೋಜನೆ ಹಾಕಬೇಡಿ. ಪರಮೇಶ್ವರನನ್ನು ಆರಾಧಿಸಿ. ಈ ಆರಾಧನೆಯಿಂದ ಗೆಲುವಿಗೆ ದಾರಿ ಇದೆ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 5

ಸಿಂಹ: ಬಿರುಗಾಳಿ ವೇಗವನ್ನು ಮಾನಸಿಕವಾದ ಕೆಚ್ಚು, ದಾರ್ಢ್ಯತೆಯ ರೊಚ್ಚಿನೊಂದಿಗೆ ಎದುರಿಸಿ. ಯಾರನ್ನೂ ನೇರವಾಗಿ ಎದುರಿಸಲು ಹೋಗಬೇಡಿ. ವಿಜಯ ಅಲ್ಪ ಕಾಲ ಆಗಬಹುದು. ಆದರೆ ಧೂರ್ತರು ಹಿಂಬದಿಯಿಂದ ಚೂರಿ ಝುಳಪಿಸುತ್ತಾರೆ. ಇದನ್ನು ನೆನಪಿಡಿ. ವೃಥಾ ಆತಂಕದ ಕೆನೆ ಪದರಗಳು ಮೂಡಿಕೊಳ್ಳುತ್ತವೆ. ಅಡೆತಡೆಗಳಿದ್ದರೂ ಮೆಟ್ಟಿ ನಿಲ್ಲುತ್ತೇನೆಂಬ ಛಲ ಇರಲಿ. ಹನುಮಂತ ಕವಚ ಓದಿದರೆ ಒಳಿತಿದೆ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 1

ಕನ್ಯಾ: ನಿಮ್ಮ ಹತ್ತಿರದ ಬಂಧುಗಳಿಂದ ವಿಪರೀತವಾದ ತಲೆ ನೋವಿದೆ. ಮಹತ್ವದ ಕಾರ್ಯ ಮಾಡಿ ಮುಗಿಸಲು ನಿಮ್ಮದೇ ಆದ ಸಾವಿರ ವಿಚಾರಗಳನ್ನು ಬದಿಗೊತ್ತಿ ಬಂಧುಗಳ ಬಗ್ಗೆ ತಾರಾಡುವ ಪರಿಸ್ಥಿತಿ ಎದುರಿಸುತ್ತೀರಿ. ವಾಸ್ತವ ಮುಚ್ಚಿಡಬೇಡಿ. ಸಂಕೋಚಕ್ಕೆ ಬಲಿಯಾಗಿ ಸ್ವಂತದ್ದನ್ನು ದೂರಕ್ಕೆ ತಳ್ಳುವ ಆತ್ಮಘಾತಕ ಕೆಲಸಕ್ಕೆ ಮುಂದಾಗದಿರಿ. ನಿಮ್ಮ ಅನೇಕ ಒತ್ತಡಗಳನ್ನು ಕರಗಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 9

ತುಲಾ: ದೊಡ್ಡ ದೊಡ್ಡ ಯೋಜನೆಗಳನ್ನು ನಿರ್ವಹಿಸಿಸಲು ಕಾಲ ಸೂಕ್ತವಾಗಿದೆ. ಆದರೂ ಯಾವುದೋ ಒಂದು ಮೂಲದಿಂದ ನಿಮ್ಮ ಸಂವೇದನಾಶೀಲ ಧಾತುಗಳನ್ನು ನಿಗ್ರಹಿಸಿ ಕ್ರಿಯಾಶೀಲತೆ ಚೂರು ಮಾಡುವ ನಕಾರಾತ್ಮಕ ಶಕ್ತಿ ಹೊರಹೊಮ್ಮಲಿದೆ. ಮನೆಯಲ್ಲಿ ಯಾರ ಜತೆಗೂ ವೃಥಾ ಚರ್ಚೆ ಬೇಡ. ವಿನಾಕಾರಣವಾದ ಮಾತಿಗೆ ಮುಂದಾಗದಿರಿ. ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ಕಾರ್ಯ ಸಿದ್ಧಿ ಇದೆ. ನರಸಿಂಹನನ್ನು ಸ್ತುತಿಸಿ. ಒಳಿತಿದೆ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ:3

ವೃಶ್ಚಿಕ: ಎಷ್ಟೇ ಪರದಾಡಿದರೂ ಕೆಲ ವಿಚಾರಗಳನ್ನು ನೀವು ಸರಿಪಡಿಸುವುದು ಕಷ್ಟ. ಮೈ ಪರಚಿಕೊಳ್ಳುವ ಸ್ಥಿತಿ ಎದುರಾಗುತ್ತಿರುತ್ತವೆ. ಏನೇ ಆದರೂ ಮರಮಟ್ಟು, ಪೀಠೋಪಕರಣ ಹಾಗೂ ಇಲೆಕ್ಟ್ರಾನಿಕ್ ಗೂಡ್ಸ್ ವಿಚಾರಗಳಿಗೆ ಸಂಬಂಧಿಸಿದಂತೆ ವ್ಯವಹರಿಸುತ್ತಿದ್ದರೆ ಗಣನೀಯ ಲಾಭ ಇದೆ. ವಿರುದ್ಧ ಲಿಂಗಿಗಳು ನಿಮ್ಮ ವಿರುದ್ಧ ಅಪಪ್ರಚಾರ ನಡೆಸುವ ಸಂದರ್ಭ ಇದೆ. ಎಚ್ಚರಿಕೆ ಇರಲಿ. ರಾಮರಕ್ಷಾ ಸ್ತೋತ್ರ ಪಠಿಸಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 8

ಧನು: ಮಾತು ಮಿತವಾಗಿರಲಿ. ಹಗ್ಗವೇ ಹಾವಿನಂತೆ ಹೆಡೆ ತೆರೆದು ತೂಗಾಡುವ ವಿಷಮ ಸ್ಥಿತಿ ಸಂಭವಿಸಿ ಚಿತ್ತ ಕ್ಷೋಭೆಗೆ ಕಾರಣವಾಗಬಹುದು. ‘ಮೌನವೇ ಬಂಗಾರ’ ಎಂಬ ಮಾತು ಈಗ ನೆನಪಿನಲ್ಲಿ ಇರಿಸುವುದು ಸೂಕ್ತ. ಅಗಲವಾದ ಬಾಳೆ ಎಲೆಯಲ್ಲಿ ಗುರುವಾರ, ಶನಿವಾರಗಳಂದು ಸರ್ಪಾಕಾರದ ಚಿತ್ರವನ್ನು ಸುಣ್ಣದಿಂದ ಬಿಡಿಸಿ ಆಗ್ನೇಯ ದಿಕ್ಕಿನೆಡೆ ಯಾರೂ ತುಳಿಯದ ಕಡೆ ಇಡಿ. ಪಂಚಮುಖಿ ಹನುಮ ಕವಚ ಓದಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 7

ಮಕರ: ಗೆಳೆಯರ ಬಳಿ ಸ್ನೇಹದಿಂದ ಇರುವುದು ಸೂಕ್ತ. ಆದರೆ ಯಾರಿಗೂ ಸಾಲ ಕೊಡುವುದು, ಕೊಡಿಸುವುದು ಬೇಡ. ಸಿನಿಮಾದ ಸಂದರ್ಭಗಳನ್ನು ಯೋಚಿಸಿ ನಿರ್ವಪಕರು ಅಥವಾ ಹಂಚಿಕೆದಾರರಿಗೆ ಹಣ ತೊಡಗಿಸಬೇಡಿ. ಮನೆ ಲೆಕ್ಕಪತ್ರ ಅಥವಾ ಖಾತಾ ಕಡತಗಳ ವಿಚಾರ ವಿವಾದಗಳಿಗೆ ಕಾರಣವಾಗಬಹುದು. ಸ್ವಂತ ಸೋದರ, ಸೋದರಿಯರೇ ತಿರುಗಿ ಬಿದ್ದಾರು. ನ್ಯಾಯದ ಗೆರೆಯನ್ನು ದಾಟಬೇಡಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 3

ಕುಂಭ: ಮಹತ್ವದ ದಿನಗಳು ಇವು. ನಿಮ್ಮ ಪಾಲಿಗೆ ಅನಿರೀಕ್ಷಿತ ಪ್ರವಾಸ ಬಂದರೂ ಆಲಸ್ಯವಿರದೇ ಪೂರೈಸಲು ಮುಂದಾಗಿ. ಈ ಪ್ರವಾಸಕ್ಕೂ ಮುನ್ನ ನೀವು ಹತ್ತಿರದ ದುರ್ಗಾ ದೇವಿಗೆ ಹಸಿರು ಬಳೆ ಹಾಗೂ ಕೆಂಪು ಕುಪು್ಪಸದ ಬಟ್ಟೆ ಅರ್ಪಿಸಿ ಪ್ರಸಾದ ಸ್ವೀಕರಿಸಿ. ವಾಯವ್ಯ ದಿಕ್ಕಿನ ಕಡೆಯ ಪ್ರವಾಸವಾದರೆ ಕೆಲವು ಅಹಾರ ವಿಷಯಗಳಲ್ಲಿ ನಿಯಂತ್ರಣ ಇರಲಿ, ಖರ್ಜೂರ, ಹಾಲು, ಅನ್ನ ತರಕಾರಿ ಬಳಸಿ, ಸಾಫಲ್ಯದ ವಿಚಾರದಲ್ಲಿ ಹರ್ಷದ ಸುದ್ದಿ ಇದೆ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 4

ಮೀನ: ನಿಮ್ಮ ಲೆಕ್ಕಾಚಾರಗಳು ಸೂಕ್ತವಾದರೂ ಸಹವರ್ತಿಗಳನ್ನು ನಿಮ್ಮ ದಾರಿಯ ಗುಂಟ ಸಮಾಧಾನಕರವಾದ ರೀತಿಯಲ್ಲಿ ಒಯ್ಯುವಲ್ಲಿ ವಿಫಲರಾಗಬೇಡಿ. ಅಗಾಧವಾದುದೊಂದನ್ನು ಗೆಲ್ಲುವ ಕಾರ್ಯಕ್ಕೆ ಚಾಲನೆ ಸಿಗಬೇಕಾಗಿದೆ. ನಿಮ್ಮ ಮನೆತನದ ಕಾರಣಿಕ ಶಕ್ತಿಯುಳ್ಳ ದೇವಿ ನಿಮ್ಮಿಂದ ಶುಭ ಕಾರ್ಯವನ್ನು ಮಾಡಿಸುವ ಉತ್ಸಾಹದಲ್ಲಿದೆ. ತೀರಾ ಹತ್ತಿರದವರು ಅಡ್ಡಗಾಲಿಡುತ್ತಾರೆ. ಎಚ್ಚರ. ಮಹಾಲಕ್ಷ್ಮಿಯನ್ನು ಸ್ತುತಿಸಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 6