ಮೇಷ: ಅಧಿಪತಿ ಅಂಗಾರಕನು ಅಧಿಕ ವ್ಯಯವನ್ನು ಮಾಡಿಸಿ ಧನದಲ್ಲಿ ಕೊರತೆಯನ್ನು ಉಂಟುಮಾಡುತ್ತಾನೆ. ಖರ್ಚು-ವೆಚ್ಚ ಸೀಮಿತದಲ್ಲಿಡಿ. ವಕ್ರೀಗುರು ಅಲ್ಪಸ್ವಲ್ಪ ಒಳ್ಳೆಯ ಫಲ ನೀಡಿ ಕಷ್ಟದಿಂದ ಪಾರು ಮಾಡುತ್ತಾನೆ. ದಕ್ಷಿಣಾಮೂರ್ತಿಯನ್ನು ಪೂಜಿಸಿ. ಸೋಮವಾರದಿಂದ ಶಿವನನ್ನು ಫಲಪಂಚಾಮೃತದಿಂದ ಆರಾಧಿಸಿ.
ವೃಷಭ: ರಾಶ್ಯಾಧಿಪತಿ ಶುಕ್ರನು ರಾಹುವಿನ ಜತೆ ಸೇರಿ ವ್ಯವಸ್ಥೆಯಲ್ಲಿ ಅಲ್ಪ ಕಳಂಕವನ್ನು ತಂದೊಡ್ಡುತ್ತಾನೆ. ಕುಜನು ಗುರುವಿನ ಮನೆಯಲ್ಲಿರುವುದರಿಂದ ಅಂಬಾಭವಾನಿಯನ್ನು ಪೂಜಿಸಿದರೆ ನೆಮ್ಮದಿ ಕಾಣಬಹುದು. ವೃಥಾ ಕಲಹ, ಅಪವಾದ ಬರುವ ಸಮಯ. ಎಲ್ಲಕ್ಕೂ ಮೌನವೇ ಉತ್ತರ. ಕಾಲ ಬಂದಾಗ ವಿರೋಧಿಗಳಿಗೆ ಸದ್ಬುದ್ಧಿ ಹೇಳಬಹುದು.
ಮಿಥುನ: ರಾಶಿಯಲ್ಲಿ ಶುಕ್ರ ರಾಹು, ಸಪ್ತಮದಲ್ಲಿ ವಕ್ರೀ ಗುರು-ಕೇತು ಒಳ್ಳೆಯ ಸಲ ನೀಡುವರು. ಶುಭ ಚಿಂತನೆ, ಸತ್ಕಾರ್ಯಗಳನ್ನು ಮಾಡಲು ಮನಸ್ಸನ್ನು ಕೊಡುವುದಿಲ್ಲ. ನಮ್ಮ ಸಮಯ ಹಾಳಾದಾಗ ಯಾರದೇ ನಿಂದನೆ ಬೇಡ. ನಾಗರಾಜ ಅಷ್ಟೋತ್ತರ ಪಠಣ ಮಾಡಿ. ಗಂ ಗಣಪತಯೇ ನಮಃ ಎಂಬ ನಾಮಜಪವನ್ನು ಮಾಡಿ, ಒಳ್ಳೆಯದಾಗುತ್ತದೆ.
ಕಟಕ: ರಾಶಿಯಲ್ಲೇ ರವಿ-ಬುಧರಿದ್ದು, ಆರರಲ್ಲಿ ಗುರು, ಸಪ್ತಮ ಶನಿ ವೃಥಾ ನಿಮ್ಮನ್ನು ಚಿಂತೆಗೀಡು ಮಾಡುತ್ತಾನೆ. ಸಂಯಮ, ಸೌಜನ್ಯವೇ ಸಂಸಾರದ ರಹಸ್ಯವಾಗಿದೆ. ಮಾತಿಗೆ ಪ್ರತಿವಾದ ಹೂಡುವುದು ಬೇಡ. ಲಲಿತಾ ಸಹಸ್ರನಾಮ ಪಾರಾಯಣ ಮಾಡಿ. ಮಹಾಕಾಳೇಶ್ವರನನ್ನು ಭಕ್ತಿಯಿಂದ ಪೂಜಿಸಿ. ಕಾಳಿಕಾಂಬಾ ಅಷ್ಟೋತ್ತರ ಪಠಿಸಿ, ಶುಭವಾಗಲಿದೆ.
ಸಿಂಹ: ರಾಶ್ಯಾಧಿಪತಿ ಸೂರ್ಯನು ಹನ್ನೆರಡರಲ್ಲಿದ್ದು ರವಿ-ಬುಧರ ಸಂಯೋಗವಿದೆ. ಕೆಲವೊಂದು ಕೆಲಸದಲ್ಲಿ ತಾತ್ಕಾಲಿಕ ತಡೆ ಉಂಟಾಗಬಹುದು. ಸೂರ್ಯ ಕವಚ ಹಾಗೂ ಸೂರ್ಯಾಷ್ಟೋತ್ತರ ತಪ್ಪದೆ ಪಠಿಸಿ. ಶ್ರೀರಾಮನನ್ನು ಧ್ಯಾನಿಸಿ, ಪೂಜಿಸಿ. ಸಕಲ ಭೋಗ ಭಾಗ್ಯವನ್ನು ಪಂಚಮ ಗುರು, ಷಷ್ಠ ಶನಿ ವಕ್ರೀಯಾಗಿಯೂ ಶುಭ, ಶ್ರೇಯಸ್ಸನ್ನು ಕೊಡುತ್ತಾನೆ.
ಕನ್ಯಾ: ಏಕಾದಶದಲ್ಲಿ ರವಿ-ಬುಧರಿದ್ದು, ಅಲ್ಪ ಸಂತೋಷ ನೀಡಿದರೂ ನಿಮ್ಮ ಕಾರ್ಯವೈಖರಿ ಬೇರೆಯವರನ್ನು ದುಃಖಕ್ಕೆ ಈಡು ಮಾಡುವುದು. ಸಿಗದಿದ್ದನ್ನು ಯೋಚಿಸುವುದು ಬೇಡ. ದೈವಬಲ ಇಲ್ಲದವನು ದುರ್ಬಲನಾಗುತ್ತಾನೆ. ಸತ್ಯವನ್ನು ನುಡಿಯಿರಿ. ಅಹಂಕಾರವನ್ನು ಬಿಟ್ಟರೆ ಆರೋಗ್ಯಕ್ಕೆ ಒಳ್ಳೆಯದು. ಸುಳ್ಳನ್ನು ನಿಜವೆಂದು ಬಿಂಬಿಸಬೇಡಿ. ಪರಿಶುದ್ಧ ಸಂಕಲ್ಪದಿಂದ ಕುಲದೇವರನ್ನು ಧ್ಯಾನಿಸಿ.
ತುಲಾ: ವೃಷಭಕ್ಕೆ ಒಡೆಯನಾದ ಶುಕ್ರನು ರಾಹುವಿನ ಜೊತೆಯಿದ್ದು, ಒಂಬತ್ತರ ಸಂಯೋಗದಲ್ಲಿ ಶುಭ ಫಲ ಕೊಡಲು ಉದ್ಯುಕ್ತನಾಗಿದ್ದಾನೆ. ಅನುಸರಿಸಿ ನಡೆಯುವುದೇ ಮನುಷ್ಯನ ಸದ್ಗುಣಗಳಲ್ಲಿ ಮೊದಲನೆಯದು. ಅತಿಕ್ರಮ ವಿಚಾರದಲ್ಲಿ ನಿಮ್ಮದಾಗಬೇಕೆಂಬುದು ಬಿಡಿ. ಮಹಾಗಣಪತಿ, ದುರ್ಗಾಪರಮೇಶ್ವರಿಯನ್ನು ಪೂಜಿಸಿ, ಆರಾಧಿಸಿ.
ವೃಶ್ಚಿಕ: ಮನುಷ್ಯನಿಗೆ ಆಮ್ಲಜನಕ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದು ಹಣ. ನಿಮ್ಮ ಕೆಲಸಗಳು ಸರಿಯಾಗಿ ಸಾಗಿದೆ. ಲೋಕವ್ಯಾಧಿ ಕಂಟಕವಾಗಿ ಹಣಕ್ಕೆ ಕೊರತೆಯಾಗಿದೆ. ಪರಮಾತ್ಮನ ಕೈ ಉದಾರವಾದ್ದರಿಂದ ಸಂಕಷ್ಟದಲ್ಲಿಯೂ ದೇವರು ನಿಮಗೆ ಧನ ನೀಡುವನು. ಪೂಜೆ-ಪುನಸ್ಕಾರಗಳಲ್ಲಿ ಆಲಸ್ಯ ಮಾಡಬೇಡಿ. ದತ್ತ-ಕಾರ್ತಿಕೇಯ ಇಬ್ಬರೇ ನಿಮ್ಮ ಜೀವನಕ್ಕೆ ಸಂತೋಷ ಲಾಭ ತರುವರು.
ಧನುಸ್ಸು: ರಾಶ್ಯಾಧಿಪತಿಯಾದ ಗುರುವು ಕಾಲಕಾಲಕ್ಕೆ ಕೊಡುವ ಬುದ್ಧಿಯನ್ನು ವ್ಯಯ ಮಾಡಿ, ಜಾಣತನದಲ್ಲಿ ಸತ್ಯ-ಧರ್ಮ-ನ್ಯಾಯ ಮಾರ್ಗದಲ್ಲಿ ಎಲ್ಲ ಸಂಪಾದಿಸಬಹುದು. ನಂಬಿದವರಿಗೆ ದ್ರೋಹ ಮಾಡಬೇಡಿ. ದೇವರು ಕೊಟ್ಟ ಬುದ್ಧಿಯನ್ನು ಸ್ವತಂತ್ರವಾಗಿ ಉಪಯೋಗಿಸಿ ಕೆಲಸಗಳಲ್ಲಿ ಜಯ ಉಂಟಾಗುತ್ತದೆ. ಕೇತುವಿಗೆ ಗಣಪತಿಯನ್ನು, ನರಸಿಂಹನನ್ನು ಸದಾಕಾಲ ಪ್ರಾರ್ಥಿಸಿ.
ಮಕರ: ಹಣವಿಲ್ಲದೆ ಜೀವನವನ್ನು ಸಾಗಿಸಬಹುದು ಎಂಬ ಉಕ್ತಿಯನ್ನು ನಿಜ ಮಾಡಿ ತೋರಿಸಿ. ಏನೇ ಇದ್ದರೂ ಅದೇ ಸಾಕಾಗುವಂತೆ ಮಾಡಿಕೊಳ್ಳುವುದೇ ನಿಮ್ಮ ಜೀವನಶೈಲಿಯಾಗಲಿ. ಈ ಹಿಂದೆ ಸುಖ, ಧನವನ್ನು ಅನುಭವಿಸಿ ಈಗ ಇಲ್ಲದಂತಾಗಿದೆ. ದೈವವು ನಿಮ್ಮನ್ನು ಪರೀಕ್ಷೆ ಮಾಡುವ ಕಾಲ. ಸೋಮವಾರ-ಶನಿವಾರ ಶಿವಾರಾಧನೆ ಮಾಡಿ. ದೈವವನ್ನು ಮರೆಯಬೇಡಿ.
ಕುಂಭ: ಹನ್ನೊಂದರ ಗುರು ದೈವ ಮಾರ್ಗವನ್ನು ತೋರಿಸಿ ಬದುಕುವ ಶೈಲಿಯನ್ನು ರೂಪಿಸಿಕೊಡುತ್ತಾನೆ. ಅದನ್ನು ನೀತಿಸಂಹಿತೆಯೆಂದು ತಿಳಿದು ಜೀವನಪಯಣವನ್ನು ಮುಂದುವರಿಸಿ. ನಿಮ್ಮ ಬೆನ್ನ ಹಿಂದೆ ಶ್ರೀಗುರುದತ್ತದೇವರ ಅನುಗ್ರಹವಿದೆ. ಹರಿಹರ ಬ್ರಹ್ಮಾದಿಗಳು ರಕ್ಷಿಸಲು ಅಸಾಧ್ಯವಾದಾಗ, ಗುರು ಒಬ್ಬನೇ ಸಾಕು. ಆದರೆ ಗುರುಚರಿತ್ರೆಯ ಎರಡನೇ ಅಧ್ಯಾಯವನ್ನು ತಪ್ಪದೆ ಓದಿ.
ಮೀನ: ಕೈಲಾಸವನ್ನೇ ನಿಮ್ಮ ಕೈಗಿಟ್ಟು, ಕುಬೇರಾದಿ ಅಷ್ಟದಿಕ್ಪಾಲಕರನ್ನು ನಿಮಗಾಗಿ ನೇಮಿಸಿದ್ದಾರೆ. ಸದಾ ದೇವರನ್ನು ಧ್ಯಾನಿಸಿ ಪೂಜಿಸಿ ಏನು ಬೇಕಾದರೂ ಪಡೆಯಬಹುದು. ದುರಾಸೆಪಡá-ವುದು ಬೇಡ. ಆದರೆ ಜೀವನದಲ್ಲಿ ಆಸೆ, ಧೈರ್ಯ, ಸತ್ಯ, ಧರ್ಮ, ಕರ್ಮ ಈ ಪಂಚಮುಖಗಳ ನಿಯಮವನ್ನು ಪಾಲಿಸಿ. ವಿಠ್ಠಲನನ್ನು ಶ್ರದ್ಧೆಯಿಂದ ಪೂಜಿಸಿ ಪಾಂಡುರಂಗನ ಅನುಗ್ರಹವನ್ನು ಪಡೆದುಕೊಳ್ಳಿ.