ಜ್ಯೋತಿಷ್ಯ

ದೀಪಾವಳಿ ಹಬ್ಬದ ರಂಗೋಲಿಗಿರಲಿ ವಾಸ್ತು ಟಚ್; ಈ ದಿಕ್ಕಿನಲ್ಲಿ, ಈ ಬಣ್ಣ, ಆಕೃತಿಯ ರಂಗೋಲಿ ಇದ್ದರೆ ಲಕ್ಷ್ಮಿ ಎಂಟ್ರಿ ಗ್ಯಾರಂಟಿ!..Vastu Tips

  • ರಂಗೋಲಿ ಕೇವಲ ಕಲೆಯಲ್ಲ, ವಾಸ್ತು ಶಾಸ್ತ್ರದ ಪ್ರಕಾರ ಇದು ಲಕ್ಷ್ಮಿ ದೇವಿಯನ್ನು ಮನೆಗೆ ಸ್ವಾಗತಿಸುವ ವಿಧಾನ.

  • ವೃತ್ತಾಕಾರದ ರಂಗೋಲಿ, ಕಮಲದ ಹೂವು, ಒಳಮುಖವಾಗಿರುವ ಲಕ್ಷ್ಮಿಯ ಹೆಜ್ಜೆಗಳು, ಸ್ವಸ್ತಿಕ್, ಓಂ, ದೀಪ ರಂಗೋಲಿ ಬಿಡಿಸುವುದು ಉತ್ತಮ.

  • ಮನೆಯ ದಿಕ್ಕನ್ನು ಆಧಾರವಾಗಿಟ್ಟುಕೊಂಡು ರಂಗೋಲಿಗೆ ಕೆಲವು ಬಣ್ಣಗಳನ್ನು ಮಾತ್ರ ಬಳಕೆ ಮಾಡಿ.

Vastu Rangoli for Diwali: ದೀಪಾವಳಿ ಹಬ್ಬಕ್ಕೆ ಇನ್ನೇನೂ ದಿನಗಣನೆ ಶುರುವಾಗಿದೆ. ಹಬ್ಬಕ್ಕೆ ಖರೀದಿ ಭರಾಟೆಯೂ ಜೋರಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಹಬ್ಬದಂದು ಮನೆ ಒರೆಸಿ..ತೊಳೆದು ಶುಭ್ರಗೊಳಿಸಿರುತ್ತೇವೆ. ನಂತರ ಹಸಿರು ತೋರಣ ಹಾಕಿ..ರಂಗೋಲಿ ಬಿಡಿಸಿ ಮನೆಯ ಅಂದ ಹೆಚ್ಚುವಂತೆ ಮಾಡುತ್ತೇವೆ. ಈ ಹೊತ್ತಲ್ಲಿ ಗಮನಿಸಬೇಕಾದ ಮುಖ್ಯವಾದ ವಿಚಾರ ಎಂದರೆ, ರಂಗೋಲಿ ಅಂದ್ರೆ ಕೇವಲ ಬಣ್ಣದ ಚಿತ್ತಾರ ಅಲ್ಲ, ಅದು ಮನೆಗೆ ಪಾಸಿಟಿವ್ ಎನರ್ಜಿಯನ್ನು ಕರೆಯುವ ವಾಸ್ತು ಸಾಧನ. ದೀಪಾವಳಿಯಂದು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಬಣ್ಣ ಮತ್ತು ಆಕೃತಿಯ ರಂಗೋಲಿ ಹಾಕಿದರೆ ಮನೆಗೆ ಸುಖ-ಸಂಪತ್ತು, ಧನಲಕ್ಷ್ಮಿ ಒಲಿಯುತ್ತಾಳೆ ಎಂಬುದು ವಾಸ್ತು ಶಾಸ್ತ್ರದ ನಂಬಿಕೆ.

ನವೆಂಬರ್ 6 ರಂದು ಮತ್ತು ನವೆಂಬರ್ 8 ರಂದು ದೀಪಾವಳಿ ಲಕ್ಷ್ಮಿ ಪೂಜೆ ನಡೆಯಲಿದೆ. ಲಕ್ಷ್ಮಿ ದೇವಿಯನ್ನು ಮನೆಗೆ ಕರೆಸಿಕೊಳ್ಳಲು ರಂಗೋಲಿ ಯಾವ ದಿಕ್ಕಿನಲ್ಲಿ ಹಾಕಬೇಕು, ಯಾವ ಬಣ್ಣಗಳಿಂದ ಕೂಡಿರಬೇಕು, ಯಾವ ಆಕೃತಿಯಲ್ಲಿ ರಂಗೋಲಿ ಇದ್ದರೆ ಲಕ್ಷ್ಮಿ ದೇವಿ ಮನೆಗೆ ಪ್ರವೇಶಿಸುತ್ತಾಳೆ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

ಮುಖ್ಯ ದ್ವಾರದಲ್ಲಿ ರಂಗೋಲಿ

ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯ ದ್ವಾರವನ್ನು ಮನೆಯ 'ಮುಖ' ಎಂದು ಕರೆಯಲಾಗುತ್ತದೆ. ಅತಿಥಿಗಳು, ಹೊಸ ಅವಕಾಶಗಳು ಮತ್ತು ಸಕಾರಾತ್ಮಕ ಶಕ್ತಿಗಳು ಈ ದ್ವಾರದ ಮೂಲಕವೇ ಪ್ರವೇಶಿಸುತ್ತವೆ ಎನ್ನುವುದು ನಂಬಿಕೆ. ದೀಪಾವಳಿಯ ರಾತ್ರಿ ಸ್ವಚ್ಛ ಹಾಗೂ ಚೆನ್ನಾಗಿ ದೀಪಗಳಿಂದ ಬೆಳಗಿದ ಮನೆಗಳಿಗೆ ಲಕ್ಷ್ಮಿ ದೇವಿ ಭೇಟಿ ನೀಡುತ್ತಾಳೆ.

ಮುಖ್ಯ ದ್ವಾರದ ಬಳಿ ಬಿಡಿಸುವ ರಂಗೋಲಿ ದೇವಿಗೆ ಸ್ವಾಗತ ಕೋರುವ ಆಹ್ವಾನ ಪತ್ರಿಕೆಯಂತೆ ಕೆಲಸ ಮಾಡುತ್ತದೆ. ಜೊತೆಗೆ ಈ ರಂಗೋಲಿ ಮನೆಗೆ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.

ಹೀಗಾಗಿ, ದೀಪಾವಳಿ ಹಬ್ಬದಂದು ಬಾಗಿಲಿಗೆ ಅಡ್ಡವಾಗದಂತೆ, ಪಾದಗಳು ಹೆಚ್ಚಾಗಿ ತುಳಿಯದ ಜಾಗದಲ್ಲಿ ರಂಗೋಲಿ ಬಿಡಿಸಬೇಕು. ಇದರ ಸುತ್ತಲೂ ಶೂಗಳು ಮತ್ತು ಕಸದ ಬುಟ್ಟಿ ಇರದಂತೆ ನೋಡಿಕೊಳ್ಳುವುದು ಮುಖ್ಯ. ಸಂಜೆ ವೇಳೆಗೆ ಇದರ ಬಳಿ ದೀಪವಿಟ್ಟು ಬೆಳಗಬೇಕು.

ಬಣ್ಣದ ಆಯ್ಕೆ ಹೇಗಿರಬೇಕು?

ಮನೆಯ ಮುಖ್ಯ ಬಾಗಿಲು ಯಾವ ದಿಕ್ಕಿಗಿದೆ ಎಂಬುದರ ಆಧಾರದ ಮೇಲೆ ಬಣ್ಣ ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಉತ್ತರ ದಿಕ್ಕಿನಲ್ಲಿ ಬಾಗಿಲುಯಿದ್ದರೆ, ಅಲ್ಲಿ ಕುಬೇರ, ಬುಧ ಗ್ರಹದ ಸಂಕೇತ ಎಂದು ನಂಬಲಾಗಿದೆ. ಹೀಗಾಗಿ ಇಲ್ಲಿ ಹಸಿರು ಮತ್ತು ತಿಳಿ ನೀಲಿ ಬಣ್ಣವನ್ನು ಹಾಕುವಂತೆ ನಿಮ್ಮ ರಂಗೋಲಿ ಡಿಸೈನ್ ಆಯ್ಕೆ ಮಾಡಿಕೊಳ್ಳಿ.

ಕೆಂಪು

ಪೂರ್ವ ದಿಕ್ಕು ಸೂರ್ಯನಿಗೆ ಸೇರಿದೆ. ಇಲ್ಲಿ ಬೆಚ್ಚಗಿನ ಹಳದಿ, ಕಿತ್ತಳೆ ಮತ್ತು ಸ್ವಲ್ಪ ರೋಮ್ಯಾಂಟಿಕ್ ಕೆಂಪು ಬಣ್ಣಗಳನ್ನು ಬಳಸಬಹುದು. ಅರಿಶಿನ ಮತ್ತು ಕುಂಕುಮದ ಛಾಯೆಗಳು ಆರೋಗ್ಯ ಮತ್ತು ಯಶಸ್ಸನ್ನು ತರುತ್ತವೆ.

ದಕ್ಷಿಣ ದಿಕ್ಕಿನ ನಿಮ್ಮ ಮನೆಯ ಬಾಗಿಲಿದ್ದರೆ ಇದು ಮಂಗಳ ಹಾಗೂ ಅಗ್ನಿ ಮೂಲೆ ಎಂದು ಅರ್ಥ. ಹೀಗಾಗಿ ದಕ್ಷಿಣಕ್ಕೆ ಕೆಂಪು ಮತ್ತು ಗುಲಾಬಿ ಬಣ್ಣಗಳು ಅತ್ಯಂತ ಸುರಕ್ಷಿತ ಆಯ್ಕೆ. ಕಿತ್ತಳೆ ಬಣ್ಣದ ಬಾರ್ಡರ್‌ಗಳು ಇದಕ್ಕೆ ಹೆಚ್ಚಿನ ಮೆರುಗು ನೀಡುತ್ತವೆ. ಇಲ್ಲಿ ಗಾಢ ನೀಲಿ ಅಥವಾ ಕಪ್ಪು ಬಣ್ಣಗಳನ್ನು ಬಳಸಬಾರದು.

ಪಶ್ಚಿಮ ದಿಕ್ಕಿನ ಬಾಗಿಲು

ಶನಿ ದೇವರಿಂದ ಆಳಲ್ಪಡುವ ಪಶ್ಚಿಮ ದಿಕ್ಕು ಸ್ಥಿರತೆಗೆ ಹೆಸರುವಾಸಿ. ಇಲ್ಲಿ ಬಿಳಿ ಮತ್ತು ಬೆಳ್ಳಿ ಬಣ್ಣಗಳು ಒಳ್ಳೆಯ ಆಧಾರವಾಗಿದ್ದು, ಬೂದು ಅಥವಾ ಗೋಲ್ಡನ್ ಬಣ್ಣದ ಬಾರ್ಡರ್ ನೀಡಬಹುದು.

ವಿಶೇಷಬವಾಗಿ ಗಮನ ಹರಿಸಬೇಕಾದ ವಿಚಾರ ಎಂದರೆ, ಹಳದಿ ಬಣ್ಣವು ಯಾವುದೇ ದಿಕ್ಕಿನ ಬಾಗಿಲಿಗೂ ಅತ್ಯಂತ ಸುರಕ್ಷಿತವಾಗಿದೆ. ಕೆಂಪು ಬಣ್ಣವು ಶುಭ ಶಕ್ತಿಯನ್ನು ತಂದರೆ, ಬಿಳಿ ಬಣ್ಣವು ಶಾಂತಿಯನ್ನು ಕಾಪಾಡುತ್ತದೆ. ಕಪ್ಪು ಅಥವಾ ಮಂದ ಕಂದು ಬಣ್ಣಗಳನ್ನು ಆದಷ್ಟು ದೂರವಿಡಿ.

ಸಮೃದ್ಧಿ ತರುವ ರಂಗೋಲಿ ಆಕೃತಿ ಇವು

ವೃತ್ತಾಕಾರ

ಯಾವುದೇ ಮೂಲೆಗಳಿಲ್ಲದ ವೃತ್ತವು ಪರಿಪೂರ್ಣತೆ ಮತ್ತು ನಿರಂತರ ಹರಿವನ್ನು ಸೂಚಿಸುತ್ತದೆ. ಇದು ಪ್ರತಿಯೊಂದು ಪ್ರವೇಶದ್ವಾರಕ್ಕೂ ಅತ್ಯುತ್ತಮವಾಗಿ ಒಪ್ಪುತ್ತದೆ.

ಕಮಲಾಕಾರದ ರಂಗೋಲಿ

ಲಕ್ಷ್ಮಿ ದೇವಿಯು ಕಮಲದ ಮೇಲೆ ಆಸೀನಳಾಗಿರುತ್ತಾಳೆ, ಹಾಗಾಗಿ ಇದು ದೀಪಾವಳಿಯ ಕ್ಲಾಸಿಕ್ ಸಂಕೇತ. 8 ಎಸಳುಗಳಿರುವ ಕಮಲದ ಹೂವು ಅಷ್ಟಲಕ್ಷ್ಮಿಯರನ್ನು ಪ್ರತಿನಿಧಿಸುವುದರಿಂದ ಅತ್ಯಂತ ಮಂಗಳಕರ.

ಲಕ್ಷ್ಮಿಯ ಹೆಜ್ಜೆಗಳು

ಅಕ್ಕಿ ಹಿಟ್ಟು ಅಥವಾ ಕೆಂಪು ಬಣ್ಣದಲ್ಲಿ ಬಿಡಿಸುವ ಸಣ್ಣ ಹೆಜ್ಜೆಗಳು ಮನೆಯೊಳಗೆ ಹೆಜ್ಜೆ ಇಡುತ್ತಿರುವ ದೇವಿಯನ್ನು ಸೂಚಿಸುತ್ತವೆ. ಹೆಜ್ಜೆಗಳು ಯಾವಾಗಲೂ ಮನೆಯ ಒಳಮುಖವಾಗಿರಬೇಕು, ಹೊರಮುಖವಾಗಿರಬಾರದು.

ಸ್ವಸ್ತಿಕ್ ಮತ್ತು ಓಂ

ಇವು ಆಶೀರ್ವಾದ ಮತ್ತು ರಕ್ಷಣೆಯ ಪವಿತ್ರ ಚಿಹ್ನೆಗಳು. ಇವುಗಳನ್ನು ರಂಗೋಲಿಯ ಮಧ್ಯಭಾಗದಲ್ಲಿ ಅಥವಾ ಬಾಗಿಳಿನ ಎರಡೂ ಕಡೆಗಳಲ್ಲಿ ಬಿಡಿಸಬಹುದು.

ದೀಪ ಮತ್ತು ಕಲಶ

ಬೆಳಕು ಮತ್ತು ಸಮೃದ್ಧಿಯ ಸಂಕೇತವಾಗಿರುವ ಇವು ಸಣ್ಣ ರಂಗೋಲಿಗಳಿಗೂ ಸೂಕ್ತವಾಗಿವೆ.

ಚೌಕ ಮತ್ತು ಆಯತಕಾರದ ರಂಗೋಲಿ

ಇವು ಭೂಮಿ ತತ್ವಕ್ಕೆ ಸೇರಿದ್ದು ಸ್ಥಿರತೆಯನ್ನು ಸೂಚಿಸುತ್ತವೆ. ದಕ್ಷಿಣ ಮತ್ತು ನೈಋತ್ಯ ದಿಕ್ಕಿನ ಪ್ರವೇಶದ್ವಾರಗಳಿಗೆ ಇದು ಸೂಕ್ತ.

ಇದನ್ನೇ ಬಳಸಿ

ಅಕ್ಕಿ ಹಿಟ್ಟು ರಂಗೋಲಿಗೆ ಅತ್ಯಂತ ಶುದ್ಧವಾದ ಮೂಲವಾಗಿದೆ. ಇರುವೆ ಮತ್ತು ಸಣ್ಣ ಜೀವಿಗಳಿಗೆ ಆಹಾರವಾಗುವುದರಿಂದ ಇದು ಪುಣ್ಯ ಕಾರ್ಯವೂ ಹೌದು. ಅರಿಶಿನ ಮತ್ತು ಕುಂಕುಮ ನೈಸರ್ಗಿಕ ಬಣ್ಣಗಳನ್ನು ನೀಡಿದರೆ, ಹೂವಿನ ದಳಗಳು ಪರಿಸರಕ್ಕೆ ಹಾನಿಯಾಗದಂತೆ ರಂಗೋಲಿಯನ್ನು ಸುಂದರಗೊಳಿಸುತ್ತವೆ, (ಏಜೆನ್ಸೀಸ್)