ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾಗಲು ಬಿಡಬೇಡಿ... ಬಿಟ್ಟರೆ ನಿಮಗೆ ಬ್ಯಾಡ್​ ಲಕ್​! Kitchen Tips

ಭಾರತೀಯ ಸಂಪ್ರದಾಯದಲ್ಲಿ ಅಡುಗೆ ಮನೆಗೆ ವಿಶೇಷ ಸ್ಥಾನವಿದ್ದು, ಅಲ್ಲಿರುವ ಕೆಲವು ವಸ್ತುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Kitchen Tips : ಮನೆಯ ಅಡುಗೆ ಮನೆ ಎಂದರೆ ಕೇವಲ ಆಹಾರ ತಯಾರಿಸುವ ಸ್ಥಳವಲ್ಲ, ಅದು ಮನೆಯ ಸಮೃದ್ಧಿ, ಆರೋಗ್ಯ ಮತ್ತು ಸಂತೋಷದ ಸಂಕೇತವೂ ಹೌದು. ಭಾರತೀಯ ಸಂಪ್ರದಾಯದಲ್ಲಿ ಅಡುಗೆ ಮನೆಗೆ ವಿಶೇಷ ಸ್ಥಾನವಿದ್ದು, ಅಲ್ಲಿರುವ ಕೆಲವು ವಸ್ತುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಕೆಲವು ವಸ್ತುಗಳು ಮನೆಯಲ್ಲಿ ಎಂದಿಗೂ ಖಾಲಿಯಾಗಬಾರದು ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂತಹ ನಂಬಿಕೆಗಳ ಹಿಂದೆ ಧಾರ್ಮಿಕ ಮಹತ್ವದ ಜೊತೆಗೆ ಜೀವನಕ್ಕೆ ಸಂಬಂಧಿಸಿದ ಕೆಲವು ಅರ್ಥಗಳೂ ಅಡಗಿವೆ. ಹಾಗಾದರೆ, ಅಡುಗೆ ಮನೆಯಲ್ಲಿ ಯಾವ ವಸ್ತುವನ್ನು ಖಾಲಿಯಾಗಲು ಬಿಡಬಾರದು? ಅದರ ಹಿಂದಿರುವ ಸಂಪ್ರದಾಯ ಮತ್ತು ವಿಶೇಷ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಅಕ್ಕಿ – ಅನ್ನಪೂರ್ಣೆಯ ಸಂಕೇತ

ಭಾರತೀಯ ಸಂಪ್ರದಾಯದಲ್ಲಿ ಅಕ್ಕಿಯನ್ನು ಅನ್ನಪೂರ್ಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನ್ನವು ಜೀವಿಯ ಜೀವನಾಡಿಯಾಗಿದ್ದು, ಪ್ರತಿಯೊಬ್ಬರ ಜೀವನದಲ್ಲೂ ಆಹಾರಕ್ಕೆ ಮಹತ್ವದ ಸ್ಥಾನವಿದೆ. ಹೀಗಾಗಿ ಮನೆಯ ಅಕ್ಕಿ ಡಬ್ಬಿ ಸಂಪೂರ್ಣ ಖಾಲಿಯಾಗುವ ಮೊದಲು ಹೊಸ ಅಕ್ಕಿಯನ್ನು ತುಂಬಿಸಿಡುವ ಪದ್ಧತಿ ಅನೇಕ ಕುಟುಂಬಗಳಲ್ಲಿದೆ. ಅಕ್ಕಿ ಸಮೃದ್ಧಿಯಾಗಿರುವುದು ಮನೆಯಲ್ಲಿ ಆಹಾರದ ಕೊರತೆಯಾಗದಿರಲಿ ಎಂಬ ಆಶಯವನ್ನು ಪ್ರತಿನಿಧಿಸುತ್ತದೆ.

ಉಪ್ಪು – ಆಹಾರದಲ್ಲಿ ಅಗತ್ಯವಾದ ವಸ್ತು

ಉಪ್ಪು ಪ್ರತಿಯೊಂದು ಅಡುಗೆಯಲ್ಲೂ ಬಳಕೆಯಾಗುವ ಅಗತ್ಯ ವಸ್ತು. ಸಂಪ್ರದಾಯದಲ್ಲಿ ಉಪ್ಪಿನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅದಕ್ಕೆ ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದು ಹೇಳಲಾಗುತ್ತದೆ. ಕೆಲವು ಕುಟುಂಬಗಳಲ್ಲಿ ಉಪ್ಪಿನ ಡಬ್ಬಿಯನ್ನು ಖಾಲಿಯಾಗಿ ಇಡಬಾರದು ಎಂಬ ನಂಬಿಕೆಯಿದೆ. ಉಪ್ಪು ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜತೆಗೆ ಆಹಾರ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಉಪ್ಪಿನ್ನೂ ಕೇಲವು ಮನೆಗಳಲ್ಲಿ ಸಮೃದ್ಧಿಯ ಸಂಕೇತ ಎಂದು ನಂಬಿಕೆ ಇದೆ.

ಅರಿಶಿನ – ಮಂಗಳಕರ ವಸ್ತು

ಭಾರತೀಯ ಸಂಪ್ರದಾಯದಲ್ಲಿ ಅರಿಶಿನವನ್ನು ಶುಭ ಮತ್ತು ಮಂಗಳದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೂಜೆ, ಹಬ್ಬಗಳು ಮತ್ತು ವಿವಿಧ ಶುಭಕಾರ್ಯಗಳಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಅಡುಗೆಯಲ್ಲಿಯೂ ಅರಿಶಿನ ಪ್ರಮುಖ ಪದಾರ್ಥವಾಗಿದೆ. ಹೀಗಾಗಿ ಮನೆಯಲ್ಲಿ ಅರಿಶಿನವನ್ನು ಇಟ್ಟುಕೊಳ್ಳುವುದು ಅನೇಕ ಕುಟುಂಬಗಳ ರೂಢಿಯಾಗಿದೆ.

ಧಾನ್ಯಗಳು – ಸಮೃದ್ಧಿಯ ಸಂಕೇತ

ಹಿಂದಿನ ಕಾಲದಲ್ಲಿ ಕುಟುಂಬಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಅಕ್ಕಿ, ಬೇಳೆ ಮತ್ತು ಇತರ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಧಾನ್ಯಗಳಿಂದ ತುಂಬಿದ ಕಣಜವು ಮನೆಯ ಆಹಾರ ಭದ್ರತೆಯ ಸಂಕೇತವಾಗಿತ್ತು. ಇಂದಿಗೂ ಅಡುಗೆ ಮನೆಯಲ್ಲಿ ಅಗತ್ಯ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ. ಸಂಪ್ರದಾಯದಲ್ಲಿ ಇದನ್ನು ಸಮೃದ್ಧಿಯೊಂದಿಗೆ ಜೋಡಿಸಿ ನೋಡಲಾಗುತ್ತದೆ. ಮನೆಯಲ್ಲಿ ಎಷ್ಟು ಧಾನ್ಯಗಳು ತುಂಬಿರುತ್ತವೆಯೋ ಅಷ್ಟು ಮನೆ ಬೆಳವಣಿಗೆಯಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದರು.

ತುಪ್ಪ – ಪವಿತ್ರತೆಯ ಸಂಕೇತ

ಪೂಜೆ, ಹೋಮ, ಹಬ್ಬಗಳು ಹಾಗೂ ವಿವಿಧ ಶುಭಕಾರ್ಯಗಳಲ್ಲಿ ತುಪ್ಪವನ್ನು ಬಳಸಲಾಗುತ್ತದೆ. ಅಡುಗೆಯಲ್ಲಿಯೂ ತುಪ್ಪವನ್ನು ಪೌಷ್ಟಿಕ ಆಹಾರ ಪದಾರ್ಥವಾಗಿ ಬಳಸುವ ಪದ್ಧತಿಯಿದೆ. ಕೆಲವು ಕುಟುಂಬಗಳಲ್ಲಿ ತುಪ್ಪವನ್ನು ಮಂಗಳಕರವೆಂದು ಪರಿಗಣಿಸಿ, ಅಡುಗೆ ಮನೆಯಲ್ಲಿ ಸದಾ ಸ್ವಲ್ಪ ಪ್ರಮಾಣದಲ್ಲಾದರೂ ಇಟ್ಟುಕೊಳ್ಳುತ್ತಾರೆ. ತುಪ್ಪದ ದೀಪ ಹಚ್ಚುವುದು ಮತ್ತು ನೈವೇದ್ಯಕ್ಕೆ ತುಪ್ಪ ಬಳಸುವುದು ಸಾಮಾನ್ಯವಾಗಿದೆ.

ಗಮನಿಸಿ: ಇವು ಭಾರತೀಯ ಸಂಪ್ರದಾಯಗಳಲ್ಲಿ ಕಂಡುಬರುವ ನಂಬಿಕೆಗಳು. ಇವುಗಳನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು; ವಸ್ತು ಖಾಲಿಯಾದರೆ ಅಶುಭ ಸಂಭವಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ, (ಏಜೆನ್ಸೀಸ್​).