- ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
- ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
- ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
- ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಇಡೀ ಜಗತ್ತಿನ ಸೃಷ್ಟಿಯಲ್ಲಿ ದೇವರು ಪ್ರಕೃತಿಗೆ ನೀಡಿದ ಸುಂದರ ಕೊಡುಗೆ ಎಂದರೆ ಅದು ಹೆಣ್ಣು. ಹೀಗಾಗಿಯೇ ಅನೇಕ ವಿಷಯಗಳಿಗೆ ಹೆಣ್ಣಿನ ಹೆಸರನ್ನೇ ಇಟ್ಟು ನಾವೆಲ್ಲರು ಆರಾಧಿಸುತ್ತಾ ಬರುತ್ತಿದ್ದೇವೆ. ಹೆಣ್ಣೆಂದರೆ ಸೃಷ್ಟಿಕರ್ತೆ, ಮಮತೆಯ ಮಡಿಲು, ತಾಳ್ಮೆಯ ತವರು ಹಾಗೂ ಆರೈಕೆಯ ಆಕಾರ ಎಂದರೆ ತಪ್ಪಾಗಲಾರದು. ಒಂದು ಮನೆ ಸ್ವರ್ಗದಂತೆ ಭಾಸವಾಗಬೇಕಾದರೆ ಅದು ಹೆಣ್ಣಿಂದ ಮಾತ್ರ ಸಾಧ್ಯ. ಹೆಣ್ಣಿಲ್ಲದಿದ್ದರೆ ಆ ಮನೆಯ ಕಳೆಯೇ ಮಾಯವಾಗುತ್ತದೆ. ತನ್ನ ಸುತ್ತಮುತ್ತಲಿನ ಪರಿಸರವನ್ನು ತನ್ನಷ್ಟೇ ಅಲಂಕೃತವಾಗಿ ಇಡುವುದು ಹೆಣ್ಣು ಮಾತ್ರ. ಹೀಗಾಗಿಯೇ ಮನೆಯ ನಂದಾದೀಪವನ್ನು ಹೆಣ್ಣಿಗೆ ಹೋಲಿಕೆ ಮಾಡಲಾಗುತ್ತದೆ.
ಯಾವುದೇ ಒಂದು ಹೆಣ್ಣು ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ತನ್ನೊಂದಿಗೆ ಅದೃಷ್ಟವನ್ನು ಹೊತ್ತು ತರುತ್ತಾಳೆ ಅನ್ನೋ ಮಾತಿದೆ. ಆದರೆ, ಎಲ್ಲ ಮಹಿಳೆಯ ವಿಚಾರದಲ್ಲಿ ಇದು ನಡೆಯುವುದಿಲ್ಲ. ಹೆಣ್ಣಿನ ಗುಣ, ನಡವಳಿಕೆ ಮೇಲೆ ಇದು ಅವಲಂಬಿತವಾಗಿರುತ್ತದೆ. ಗುಣ, ವ್ಯಕ್ತಿತ್ವ ಅಂತಾ ಬಂದಾಗ ಜ್ಯೋತಿಷ್ಯ ಶಾಸ್ತ್ರವು ಕೂಡ ಪ್ರಭಾವ ಬೀರುತ್ತದೆ. ಅಂದರೆ, ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರವು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವೈವಾಹಿಕ ಜೀವನ, ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಹೀಗಾಗಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಮದುವೆಯ ನಂತರ ತುಂಬಾ ಜವಾಬ್ದಾರಿಯುತ ಸೊಸೆಯಂದಿರು ಮತ್ತು ಅತ್ಯುತ್ತಮ ಹೆಂಡತಿಯರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅವರಿದ್ದ ಮನೆಯಲ್ಲಿ ಸಮೃದ್ಧಿ ನೆಲಸುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹಾಗಾದರೆ, ಯಾವ ರಾಶಿಯವರು ಮನೆಯಲ್ಲಿರುವ ಎಲ್ಲ ಸಂಬಂಧಿಕರನ್ನು ಗೌರವಿಸುವ ಮತ್ತು ಮನೆಯನ್ನು ಸಂತೋಷವಾಗಿಡುವ ಅತ್ಯುತ್ತಮ ಸೊಸೆಯಂದಿರಾಗಿರುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿಯೇ ಬುದ್ಧಿವಂತರು ಮತ್ತು ತಾವು ಮಾಡುವ ಎಲ್ಲದರಲ್ಲೂ ಪರಿಪೂರ್ಣತೆ ಮತ್ತು ಸೊಬಗನ್ನು ಬಯಸುತ್ತಾರೆ. ಮದುವೆಯ ನಂತರ ತಮ್ಮ ಗಂಡನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅವರ ಈ ಗುಣವು ಅವರು ಪ್ರವೇಶಿಸುವ ಮನೆಯಲ್ಲಿ ಬಾಂದವ್ಯವನ್ನು ಬೆಸೆಯುತ್ತದೆ. ಎಲ್ಲ ಸಂಬಂಧಿಕರಿಗೆ ತುಂಬಾ ಸಂತೋಷದಿಂದ ನೋಡಿಕೊಳ್ಳುತ್ತಾರೆ. ಇತರರ ಭಾವನೆಗಳನ್ನು ನೋಯಿಸದೆ ಎಲ್ಲರಿಗೂ ಗೌರವ ನೀಡಿ, ಇಡೀ ಮನೆಯನ್ನು ಉತ್ತಮ ವಾತಾವರಣದಲ್ಲಿ ಇಡುವ ಪ್ರಯತ್ನ ಮಾಡುತ್ತಾರೆ.
ಕರ್ಕಾಟಕ ರಾಶಿ
ಚಂದ್ರನಿಂದ ಆಳಲ್ಪಡುವ ಕರ್ಕಾಟಕ ರಾಶಿಯ ಮಹಿಳೆಯರು ಸ್ವಾಭಾವಿಕವಾಗಿ ಕಾಳಜಿಯುಳ್ಳವರು ಮತ್ತು ಸಹಾನುಭೂತಿಯುಳ್ಳವರು ಎಂದು ತಿಳಿದುಬಂದಿದೆ. ಅವರು ಏನನ್ನೂ ಹೇಳದೆಯೇ ಇತರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಪ್ರತಿಕ್ರಿಯಿಸುವ ಸಾಮರ್ಥ್ಯದೊಂದಿಗೆ ಜನಿಸುತ್ತಾರೆ. ಈ ರಾಶಿಚಕ್ರ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ತಮ್ಮ ಗಂಡಂದಿರಿಂದ ಮಾತ್ರವಲ್ಲದೆ ಇಡೀ ಕುಟುಂಬದಿಂದ ಪ್ರೀತಿಸಲ್ಪಡುತ್ತಾರೆ. ಇತರರನ್ನು ಸಂತೋಷವಾಗಿಡುವ ಕಲೆಯಲ್ಲಿ ಈ ರಾಶಿಯವರು ಚೆನ್ನಾಗಿ ಪರಿಣತರಾಗಿದ್ದಾರೆ.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಜನಿಸಿದ ಮಹಿಳೆಯರು ತಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುತ್ತಾರೆ. ಅವರಿದ್ದಲ್ಲಿ ಸಂತೋಷಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಅವರು ತಮ್ಮ ಕುಟುಂಬ ಸದಸ್ಯರಿಗೆ ನಿಷ್ಠಾವಂತರು ಮತ್ತು ಶ್ರದ್ಧೆಯುಳ್ಳವರು. ಅವರು ತಮ್ಮ ಸ್ವಂತ ಆಸೆಗಳು ಮತ್ತು ಸಂತೋಷಕ್ಕಿಂತ ತಮ್ಮ ಕುಟುಂಬದ ಸಂತೋಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರ ಈ ವಿಶಿಷ್ಟ ಗುಣಗಳು ಅವರನ್ನು ಆದರ್ಶ ಹೆಣ್ಣುಮಕ್ಕಳನ್ನಾಗಿ ಮಾತ್ರವಲ್ಲದೆ ಮದುವೆಯ ನಂತರ ಆದರ್ಶ ಸೊಸೆಯರನ್ನಾಗಿಯೂ ಮಾಡುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.