ಮೇಷ: ‘ಜ್ಯೇಷ್ಠ ನಾದಂ ಬ್ರಹ್ಮಣಾಂ’ ಎಂಬಂತೆ ಜ್ಯೇಷ್ಠ ಅಧಿಪತಿ ಗಣಪತಿಯನ್ನು ಈ ಮಾಸದಲ್ಲಿ ಮೇಷರಾಶಿಯವರು ರಾಶಿಯಲ್ಲಿರುವ ಕುಜನಿಗೆ ಸುಬ್ರಹ್ಮಣ್ಯನನ್ನು ಪೂಜಿಸಿದರೆ ಗಳಿಸಬಹುದು, ಉಳಿಸಬಹುದು. ಸಮಯವು ಚೆನ್ನಾಗಿರುತ್ತದೆ. ಸುಬ್ರಹ್ಮಣ್ಯನ ಧ್ಯಾನ ಶ್ಲೋಕ ಅಭ್ಯಾಸ ಮಾಡಿ. 8 ಬಾರಿ ಮಂತ್ರವನ್ನು ಜಪ ಮಾಡಿ.
ವೃಷಭ: ಶನಿಯು ಏಕಾದಶದಲ್ಲಿದ್ದು, ರವಿಯು ಲಗ್ನದಲ್ಲಿ, ಗುರು, ಶುಕ್ರ, ಬುಧ ದ್ವಿತೀಯದಲ್ಲಿದ್ದಾರೆ. ಇಷ್ಟೂ ಗ್ರಹಗಳು ಸಕಾರಾತ್ಮಕವಾಗಿ ಕೆಲಸ ಮಾಡಿದರೆ, ನಿಮ್ಮ ಸಕಾರಾತ್ಮಕ ಚಿಂತನೆಯೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಈ ಸಂದರ್ಭದಲ್ಲಿ ನಿಮ್ಮ ದೈವಬಲ ಅವಲಂಬಿಸಿ, ಜನಾಕರ್ಷಣೆ ಮಾಡಲು ಒಳ್ಳೆಯ ಸಮಯ. ಚಂಡಿಕಾ ಪಾರಾಯಣ ಮಾಡಿಸಿ.
ಮಿಥುನ: ದ್ವಾದಶದಲ್ಲಿ ಸೂರ್ಯನಿದ್ದಾನೆ. ಬುಧ, ಗುರು, ಶುಕ್ರ ಲಗ್ನದಲ್ಲಿದ್ದು, ಲಗ್ನಾತ್ ಗುರುವು ಜಾಣ್ಮೆಯನ್ನು, ದಾರಿಯನ್ನು ತೋರಿಸುವುದರಲ್ಲಿ ಅತ್ಯಂತ ಒಳ್ಳೆಯ ಗ್ರಹ. ಅಲ್ಲಿಗೆ ಗುರುವಿನ ಮಾತಿಗೆ ಬೆಲೆ ಕೊಟ್ಟರೆ ಗುರುವಿನ ಮೇಲೆ ದೃಢವಾದ ವಿಶ್ವಾಸವಿಟ್ಟರೆ ಅವರೇ ನಿಮ್ಮನ್ನು ಕೈಹಿಡಿದು ನಡೆಸುತ್ತಾರೆ. ಗುರು ಚರಿತ್ರೆಯ 19ನೇ ಅಧ್ಯಾಯ ಓದಿದರೆ ನಿಮಗೆ ತೃಪ್ತಿಯೂ, ದೈವಾಂಶವು ಸಿಕ್ಕಿ ಒಳ್ಳೆಯದಾಗುತ್ತದೆ.
ಕಟಕ: ಕಟಕ ರಾಶಿಗೆ 12ರಲ್ಲಿ ಗುರುವಿದ್ದು, ದ್ವಿತೀಯದಲ್ಲಿ ಕೇತುವಿದ್ದಾನೆ. ಮಿತಿಮೀರಿದ ಕೆಲಸ, ಅತಿಯಾದ ಆಯಾಸ, ಯಾವ ಶರೀರಕ್ಕೂ ಒಳ್ಳೆಯದಲ್ಲ. ನಿತ್ಯವೂ ಪ್ರಾತಃ ಕಾಲದಲ್ಲಿ ಗಣಪತಿಯನ್ನು ಪೂಜಿಸಿದರೆ ನಿಮಗೆ ಬೇಕಾದ ವರವನ್ನು ನೀಡುತ್ತಾನೆ. ಶ್ರೀರಾಮಚಂದ್ರನನ್ನು ಪೂಜಿಸಿದರೆ ಸಾಕು ನೀವು ಗಳಿಸಬಹುದು. ಗಳಿಸಿದ್ದನ್ನು ಬೆಳೆಸಬಹುದು. ಸುಂದರಕಾಂಡ ಪಾರಾಯಣ ಮಾಡಿ.
ಸಿಂಹ: ರಾಶಿಯಲ್ಲಿ ಕೇತುವಿದ್ದು, ಇನ್ನು 15 ದಿನಗಳು ಮಾತ್ರ ಗುರು ಬಲವೂ ಇರುತ್ತದೆ. ಅಷ್ಟಮದಲ್ಲಿ ಶನಿ, ದ್ವಾದಶಕ್ಕೆ ಗುರುಬಂದರೂ ಹೆದರುವ ಅಗತ್ಯವಿಲ್ಲ. ಸಿಂಹರಾಶಿಯವರಿಗೆ ಶನಿಯು ತೊಂದರೆ ಕೊಡನು. ಏಕೆಂದರೆ ಅವನು ಸೂರ್ಯ ಪುತ್ರ. ಲಗ್ನದಲ್ಲಿರುವ ಕೇತುವಿನಿಂದ ಉಂಟಾಗುವ ಚಿಂತೆಯನ್ನು ದೂರಮಾಡಲು ಗಣಪತಿಯ ಮೂಲಮಂತ್ರ ಜಪಮಾಡಿರಿ.
ಕನ್ಯಾ: ಬಂತು ಬಂತು ಸುಗ್ಗಿ ಕಾಲವು ಬಂತು. ವರುಣನ ಕೃಪೆಯಿಂದ ಮಳೆಗಾಲ ಬರುತ್ತದೆ. ಅತಿಯಾದ ಬಿಸಿಲು ಮನುಷ್ಯನ ಆರೋಗ್ಯ ಕೆಡಿಸುತ್ತದೆ. ಸಕಾಲದಲ್ಲಿ ವರುಣ ಕೃಪೆಯಾದರೆ ಭೂಮಿ ತಂಪಾಗುತ್ತದೆ. ಹಾಗೆಯೇ ಏಕಾದಶ ಗುರು ನಿಮ್ಮ ಜೀವನದಲ್ಲಿ ಶಿಸ್ತನ್ನು ನೀಡಿ ನಿಮ್ಮನ್ನು ಕಾಪಾಡುತ್ತಾನೆ. ಗುರುಧ್ಯಾನ ಮಾಡಿರಿ. ಶ್ರೀಕೃಷ್ಣಾಷ್ಟೋತ್ತರ, ವಿಷ್ಣು ಸಹಸ್ರನಾಮ ಪಠಿಸಿ. ಇನ್ನು 15 ದಿನಗಳು ಎಚ್ಚರಿಕೆಯಿಂದ ಸಾಗಿರಿ.
ತುಲಾ: ದಶಮಕ್ಕೆ ಗುರುಬಂದರೂ ಯಾವ ವ್ಯತ್ಯಾಸ. ತಳಮಳ ಇರುವುದಿಲ್ಲ. ಕೊಡುವುದನ್ನೆಲ್ಲ ಕೊಟ್ಟು, ಇಟ್ಟಿದ್ದನ್ನೆಲ್ಲ ಇಟ್ಟು, ಅಪಾರವಾದ ಹಣ, ಮೈತುಂಬಾ ಬಂಗಾರ ಕೊಟ್ಟು ನಿಮ್ಮನ್ನು ಸಂತೋಷವಾಗಿರುವಂತೆ ನೋಡುತ್ತಾನೆ. ನಿಮ್ಮ ಬುದ್ಧಿಶಕ್ತಿಯು ಹೆಚ್ಚಲು ಸರಸ್ವತಿಯ ಮೂಲಮಂತ್ರ, ಅಷ್ಟೋತ್ತರ ಪಠಿಸಿ ಅನುಕೂಲವಾಗುತ್ತದೆ.
ವೃಶ್ಚಿಕ: 15ದಿನ ಕಳೆದರೆ ನಿಮಗೆ 9ಕ್ಕೆ ಗುರು ಉಚ್ಛರಾಶಿಗೆ ಬಂದು ನಿಮ್ಮನ್ನು ಸಂತೋಷವಾಗಿಡುತ್ತಾನೆ. ಕಟಕ ಗುರು ಬರುವುದು ಸಾಮಾನ್ಯ ವಿಷಯವಲ್ಲ. ಆದರೆ ಪಂಚಮದಲ್ಲಿ ಶನಿಯಿರುವುದರಿಂದ ವಿಷಯವನ್ನು ತುಲನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ. ಗುರುದತ್ತಾತ್ರೇಯನನ್ನು ಪ್ರಾರ್ಥಿಸಿ. ಶನಿವಾರದಂದು 1 ಕೆಜಿ ಕರಿಎಳ್ಳು ಕಪು್ಪ ವಸ್ತ್ರವನ್ನು ದೇವರಿಗೆ ನೀಡಿದರೆ ಅತ್ಯಂತ ಯಶಸ್ಸನ್ನು ಕಾಣುತ್ತೀರಿ.
ಧನುಸ್ಸು: ಗುರು ಬದಲಾವಣೆಯ ಸಮಯ ಬಂದಿದೆ. ಗುರುವಿನ ರಾಶಿಯಲ್ಲಿ ಜನಿಸಿದ ನಿಮಗೆ ಹರ ಮುನಿದರೆ ಗುರು ಕಾಯುವನು. ದೇಹಕ್ಕೆ ಅಪಾಯವಾಗಲಿ, ಬುದ್ದಿಗೆ ಕೊರತೆಯಾಗಲಿ ಇಲ್ಲ. ಧನಸುಖಕ್ಕೆ ಬಾಧೆಯಿಲ್ಲ. ನಿಮ್ಮ ತಂದೆ-ತಾಯಿಯ ಪಾದದಲ್ಲಿ ನಿಮ್ಮ ಶಿರಸ್ಸನ್ನು ಇಡಿ. ಸಕಲ ಸಂಪತ್ತು. ಆಯುಷ್ಯ ಆರೋಗ್ಯ ಬಂದು ಸೇರುತ್ತದೆ.
ಮಕರ: ಮಕರ ರಾಶಿಗೆ ಜೂ. 2ನೇ ತಾರೀಖಿನಿಂದ ಗುರುಬಲವು ಆರಂಭವಾಗುತ್ತದೆ. ಶನಿಯು 3ನೇ ಮನೆಯಲ್ಲಿ ಇರುವುದರಿಂದ ಹೆಚ್ಚಿನ ಜವಾಬ್ದಾರಿ, ಅದಕ್ಕೆ ತಕ್ಕಂತೆ ಧನವೂ ಕೂಡಿಕೊಂಡು ಬರುತ್ತದೆ. ಸಪ್ತಮ ಗುರುವು ಸುಖ-ಶಾಂತಿ ಸಂತೋಷ ನೀಡುತ್ತಾನೆ. ನಿಮ್ಮ ಗುರುವಿನ ಪಾದಕ್ಕೆ ವಂದಿಸಿ ಗುರುಪರಂಪರಾ ಸ್ತೋತ್ರ ಪಠಿಸಿ.
ಕುಂಭ: ಶನಿ ಸಂಚಾರ ಇನ್ನೂ ನಡೆದಿದೆ. ಕೆಲವೊಮ್ಮೆ ಕೋಪವು ಹೆಚ್ಚಾಗಿ ಬರುತ್ತದೆ. ಖರ್ಚು ಹೆಚ್ಚಾಗಿ ಅದನ್ನು ತೂಗಿಸಿಕೊಂಡು ಇಷ್ಟು ದಿನ ಕಷ್ಟಪಟ್ಟಿದ್ದೀರಿ. ಹಿತಮಿತವಾಗಿ ಖರ್ಚು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಶನಿಸಂಚಾರ ಮುಗಿದ ನಂತರ ನಿಮ್ಮ ಗುರಿಯನ್ನು ದೇವರೇ ಮುಟ್ಟಿಸುತ್ತಾನೆ. ಒಳ್ಳೆಯದಾಗುತ್ತದೆ.
ಮೀನ: ಗುರುವಿನ ಮನೆಯಲ್ಲಿ ಶನಿಯಿರುವುದರಿಂದ ಅತ್ಯಂತ ವಿಶೇಷವಾದ ಫಲವನ್ನು ನೀಡುತ್ತಾನೆ. ಆದರೆ ಶನಿಸಂಚಾರದಿಂದ ಮನಸ್ಸಿಗೆ ವ್ಯಥೆ, ಗೊಂದಲ ಉಂಟಾಗುತ್ತದೆ. ಬರುವುದೆಲ್ಲಾ ಬರಲಿ ಗೋವಿಂದನೆ ದಯೆ ಇರಲಿ ಎಂಬಂತೆ ಶ್ರೀ ಕೃಷ್ಣನನ್ನು ಪೂಜಿಸಿ. ಅಷ್ಟಮಿ, ಏಕಾದಶಿಯಂದು ಒಪ್ಪತ್ತು ಮಾಡಿ ದೇವರಿಗೆ ಅವಲಕ್ಕಿ ಬೆಲ್ಲವನ್ನು ನೈವೇದ್ಯ ಮಾಡಿ. ಮನೆಗೆ ಬಂದವರಿಗೆ ಅದನ್ನು ಹಂಚಿ, ನಂತರ ನೀವು ಸೇವಿಸಿ. ಶುಭವಾಗುತ್ತದೆ.