ಧಾರ್ಮಿಕ

ಅಡುಗೆಮನೆಯಲ್ಲಿ ಈ ವಸ್ತುಗಳು ಒಟ್ಟಿಗೆ ಇಟ್ಟರೆ ಹಣ, ನೆಮ್ಮದಿ ಎರಡೂ ಹಾಳು!..Vastu Tips

  • ಅಡುಗೆಮನೆಯಲ್ಲಿ ಧಾನ್ಯಗಳು ಮತ್ತು ಕ್ಲೀನಿಂಗ್ ಲಿಕ್ವಿಡ್‌ಗಳನ್ನು ಎಂದಿಗೂ ಒಟ್ಟಿಗೆ ಇಡಬೇಡಿ.

  • ಉಪ್ಪು ಮತ್ತು ಸಕ್ಕರೆಯನ್ನು ಪ್ರತ್ಯೇಕವಾಗಿಡಿ, ಜೊತೆಗೆ ಲೇಬಲ್ ಇರುವ ಶುದ್ಧ ಪಾತ್ರೆಗಳಲ್ಲಿ ಸಂಗ್ರಹಿಸಿ.

  • ಅಡುಗೆಮನೆಯಲ್ಲಿ ಔಷಧಿಗಳನ್ನು ಇಡುವುದನ್ನು ತಪ್ಪಿಸಿ..ಅದಕ್ಕಾಗಿ ಒಂದು ಬಾಕ್ಸ್ ಇರಲಿ.

  • ರೆಫ್ರಿಜರೇಟರ್‌ನಲ್ಲಿ ಹಳೆಯ ವಸ್ತು ಶೇಖರಿಸಿಡಬೇಡಿ, ಒಡೆದ ಪಾತ್ರೆಗಳನ್ನು ಬಳಸಬೇಡಿ.

Vastu Shastra kitchen tips: ನೆಮ್ಮದಿ, ಹಣಕಾಸು, ನೀರು ಮತ್ತು ಆರೋಗ್ಯದೊಂದಿಗೆ ಅಡುಗೆ ಮನೆ ವಾಸ್ತು ಶಾಸ್ತ್ರ ನೇರ ಸಂಬಂಧ ಹೊಂದಿದೆ. ಹೀಗಾಗಿ ಮನೆಯ ಈ ಪ್ರಮುಖ ಸ್ಥಳವನ್ನು ವ್ಯವಸ್ಥಿತವಾಗಿಡುವುದು ಪಾಸಿಟಿವ್​ ಶಕ್ತಿಯನ್ನು ನೀಡುತ್ತದೆ. ಆದರೆ, ವಸ್ತುಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅದು ಆರ್ಥಿಕ ತೊಂದರೆಗಳು, ವಾಗ್ವಾದಗಳು, ಗೊಂದಲ ಅಥವಾ ನಷ್ಟಕ್ಕೆ ಕಾರಣವಾಗಬಹುದು.

ಚಿಕ್ಕ ಅಡುಗೆಮನೆ ಇದ್ದರೆ..ಸ್ಥಳಾವಕಾಶ ಉಳಿಸಲು ಜನರು ಹಲವು ವಸ್ತುಗಳನ್ನು ಒಟ್ಟಿಗೆ ಜೋಡಿಸಿಡುತ್ತಾರೆ. ಮಸಾಲೆ ಪದಾರ್ಥದ ಬಳಿ ಔಷಧಿ ಇಡುವುದು, ಧಾನ್ಯಗಳ ಪಕ್ಕದಲ್ಲಿ ಲಿಕ್ವಿಡ್, ಡ್ರಾಯರ್‌ನಲ್ಲಿ ಹಳೆಯ ಬಿಲ್‌ಗಳನ್ನು ಹಾಕುವುದು ಇದು ಸಣ್ಣ ಸಣ್ಣ ತಪ್ಪುಗಳು. ಇದರಿಂದ ಎದುರಾಗುವ ಸಮಸ್ಯೆ ಮಾತ್ರ ದೊಡ್ಡದು. ಹಾಗಾದ್ರೆ ನಮ್ಮ ಅಡುಗೆ ಮನೆ ಹೇಗಿರಬೇಕು?, ಯಾವ ವಸ್ತು ಎಲ್ಲಿ ಇರಕೂಡದು ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

ಯಾವುದು ಎಲ್ಲಿರಬೇಕು?

ಅಕ್ಕಿ, ಗೋಧಿ, ಬೇಳೆಕಾಳುಗಳು, ಹಿಟ್ಟು, ಸಕ್ಕರೆ ಅಥವಾ ಮಸಾಲೆ ಪದಾರ್ಥಗಳನ್ನು ಫ್ಲೋರ್ ಕ್ಲೀನರ್‌ಗಳು, ಪಾತ್ರೆ ತೊಳೆಯುವ ದ್ರವಗಳು, ಫಿನಾಯಿಲ್ ಅಥವಾ ರಾಸಾಯನಿಕ ಸ್ಪ್ರೇಗಳ ಹತ್ತಿರ ಎಂದಿಗೂ ಇಡಬೇಡಿ. ಆಹಾರ ಪದಾರ್ಥಗಳು ಸಮೃದ್ಧಿಯ ಸಂಕೇತವಾದರೆ, ಶುಚಿಗೊಳಿಸುವ ಉತ್ಪನ್ನಗಳು ತ್ಯಾಜ್ಯ ಮತ್ತು ನಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತವೆ. ಇವೆರಡನ್ನೂ ಒಟ್ಟಿಗೆ ಇಡುವುದರಿಂದ ಅಡುಗೆಮನೆಯ ಪಾವಿತ್ರ್ಯತೆಗೆ ಧಕ್ಕೆಯುಂಟಾಗುತ್ತದೆ.

ಉಪ್ಪು ಮತ್ತು ಸಕ್ಕರೆ

ಉಪ್ಪು ಮತ್ತು ಸಕ್ಕರೆಯನ್ನು ಪ್ರತ್ಯೇಕವಾಗಿ ಹಾಗೂ ಅಚ್ಚುಕಟ್ಟಾಗಿ ಸಂಗ್ರಹಿಸಬೇಕು. ಸಕ್ಕರೆ ಕುಟುಂಬಸ್ಥರ ಮಧ್ಯೆ ಸಾಮರಸ್ಯವನ್ನು ತರಿಸುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದರೆ, ಉಪ್ಪು ಶುದ್ಧೀಕರಣದ ಪ್ರಕ್ರಿಯೆಯೊಂದಿಗೆ ಸಂಬಂಧ ಹೊಂದಿದೆ. ಇವೆರಡನ್ನೂ ಗೊಂದಲಮಯವಾಗಿ ಒಟ್ಟಿಗೆ ಇಡುವುದು ಸಂಬಂಧಗಳಲ್ಲಿ ಮತ್ತು ಮಾತಿನಲ್ಲಿ ಅಸಮತೋಲನವನ್ನು ಉಂಟುಮಾಡಬಹುದು. ಇವುಗಳನ್ನು ಸ್ಪಷ್ಟವಾಗಿ ಲೇಬಲ್ ಮಾಡಿದ ಸ್ವಚ್ಛ ಪಾತ್ರೆಗಳಲ್ಲಿ ಇರಿಸಿ ಮತ್ತು ಎರಡೂ ಜಾಡಿಗಳಿಗೆ ಒದ್ದೆಯಾದ ಚಮಚಗಳನ್ನು ಬಳಸಬೇಡಿ.

ಔಷಧ ಇರುವ ಬಳಿ ಆಹಾರ ಪದಾರ್ಥ ಬೇಡ

ಒಣ ಹಣ್ಣುಗಳು, ಧಾನ್ಯಗಳು, ಚಹಾ ಪುಡಿ, ಕಾಫಿ ಮತ್ತು ತಿಂಡಿಗಳನ್ನು ಔಷಧಿಗಳ ಜೊತೆಗೆ ಶೇಖರಿಸಿಡಬೇಡಿ. ಅಡುಗೆಮನೆಯು ಆರೋಗ್ಯಕರ ಆಹಾರಕ್ಕೆ ಶಕ್ತಿ ನೀಡುವ ಸ್ಥಳವೇ ಹೊರತು ಕಾಯಿಲೆಗೆ ಅಲ್ಲ. ಊಟದ ನಂತರ ನೆನಪಿVಲು ಮಾತ್ರೆಗಳನ್ನು ಅಡುಗೆಮನೆಯ ಡ್ರಾಯರ್‌ನಲ್ಲಿ ಇಡುವುದು ಸಾಮಾನ್ಯವಾದರೂ, ವಾಸ್ತು ಪ್ರಕಾರ ಪ್ರತ್ಯೇಕವಾದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಬಳಸುವುದು ಉತ್ತಮ.

ಬೆಂಕಿ ಬಳಿ ನೀರಿಡಬೇಡಿ

ಬೆಂಕಿಯ ಕಡ್ಡಿಗಳು, ಲೈಟರ್‌ಗಳು, ಎಣ್ಣೆ ಬಾಟಲಿಗಳು ಮತ್ತು ಅನಿಲಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀರಿನ ಬಾಟಲಿಗಳು, ವಾಟರ್ ಫಿಲ್ಟರ್‌ಗಳು ಮತ್ತು ಒದ್ದೆಯಾದ ಪಾತ್ರೆಗಳ ಹತ್ತಿರ ಇಡಬೇಡಿ. ಬೆಂಕಿ ಮತ್ತು ನೀರು ಪರಸ್ಪರ ವಿರೋಧಿ ಅಂಶಗಳಾಗಿವೆ. ಇವುಗಳನ್ನು ಯಾವುದೇ ಕ್ರಮವಿಲ್ಲದೆ ಹತ್ತಿರದಲ್ಲಿಟ್ಟರೆ ಅಡುಗೆಮನೆಯಲ್ಲಿ ಅಶಾಂತಿ ಮೂಡುತ್ತದೆ.

ಹಳೆಯದ್ದನ್ನು ಶೇಖರಿಸಬೇಡಿ

ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಬೇಯಿಸಿದ ಆಹಾರವನ್ನು ಹಳೆಯ ಹಾಗೂ ಹಾಳಾದ ಎಂಜಲು ಪದಾರ್ಥಗಳ ಜೊತೆಗೆ ಇಡಬಾರದು. ಹಳೆಯ ಆಹಾರದ ನಕಾರಾತ್ಮಕ ಶಕ್ತಿಯು ಅಡುಗೆಮನೆಯ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಒಡೆದ ಪಾತ್ರೆ ತೆರವುಗೊಳಿಸಿ

ಒಡೆದ ಕಪ್​​, ಬಾಗಿದ ಚಮಚ, ಕೆಲಸಕ್ಕೆ ಬಾರದ ಪಾತ್ರೆಗಳನ್ನು ಮೊದಲು ಮನೆಯಿಂದ ತೆರವುಗೊಳಿಸಿ. ಇಂತಹದ್ದನ್ನು ದೈನಂದಿನ ಬಳಕೆಗೆ ಬಳಸಬಾರದು. ಇವು ಅಜಾಗರೂಕತೆಯ ಅಭ್ಯಾಸ ಮತ್ತು ದುರ್ಬಲ ಶಕ್ತಿಯನ್ನು ಸೂಚಿಸುತ್ತವೆ, (ಏಜೆನ್ಸೀಸ್).