(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
ಕಳೆದ ಎರಡು ತಿಂಗಳಿಂದ ಅಮೆರಿಕ ಮತ್ತು ಕೆನಡಾ ಪ್ರವಾಸದಲ್ಲಿರುವ ನಾನು ಮೊನ್ನೆ ತಾನೆ ಸ್ವಾಮಿ ವಿವೇಕಾನಂದರು ತಮ್ಮ ಆಯ್ದ 12 ಶಿಷ್ಯರಿಗೆ ವೇದಾಂತದ ತರಗತಿಗಳನ್ನು ತೆಗೆದುಕೊಂಡು ಭಾರತೀಯ ಸಂನ್ಯಾಸ ಜೀವನ ಹೇಗಿರುತ್ತೆ ಎಂಬ ಪರಿಚಯವನ್ನು ತಮ್ಮ ವ್ಯಕ್ತಿತ್ವ ಹಾಗೂ ದಿನಚರಿಗಳಿಂದ ಮಾಡಿಕೊಟ್ಟ ದಿವ್ಯದಾಣ "ಸಹಸ್ರ ದ್ವೀಪೋದ್ಯಾನ'ಕ್ಕೆ ಭೇಟಿ ಕೊಟ್ಟಿದ್ದೆ. ಕೆನಡಾದ ಅಟ್ಟಾವದಿಂದ ನ್ಯೂಯಾರ್ಕ್ ಸಮೀಪದ ಆಲ್ಬನಿಗೆ ನನ್ನ ಪ್ರಯಾಣವಿತ್ತು. ಈ ಅದ್ಭುತ ಜಾಗದ ಮಹಿಮೆ ತಿಳಿದ ಅಟ್ಟವಾದ 10 ಆಧ್ಯಾತ್ಮಿಕ ಪಿಪಾಸುಗಳು ನನ್ನ ಜತೆ ಸೇರಿದ್ದರು. ಸೇಂಟ್ ಲಾರೆನ್ಸ್ ನದಿ ಇಲ್ಲಿ ಅನೇಕ ಸುಂದರ ಕಿರುದ್ವೀಪಗಳನ್ನು ನಿರ್ಮಿಸಿದೆ. ಚಳಿಗಾಲಕ್ಕಿಂತ ಮುಂಚೆ ಎಲೆ ಉದುರುವ ಮುನ್ನ ಈ ಮರಗಳೆಲ್ಲ ತಮ್ಮ ಪರ್ಣರಾಶಿಯ ಬಣ್ಣವನ್ನು ಬದಲಾಯಿಸಿಕೊಳ್ಳುತ್ತವೆ. ಪ್ರಕೃತಿಮಾತೆ ಶರನ್ನವರಾತ್ರಿಯ ಮುನ್ನ ಬಣ್ಣಬಣ್ಣದ ಚಿತ್ತಾರವುಳ್ಳ ವಸವನ್ನುಟ್ಟು ವರ್ಣರಂಜಿತಳಾಗಿ ಭೂಲೋಕದಡೆಗೆ ನಲಿಯುತ್ತ ಪಯಣ ಮಾಡುತ್ತಿರುವಳೇನೋ ಎನಿಸಿದರೆ ಉತ್ಪೇಕ್ಷೆ ಇಲ್ಲ. ಈ ಸಹಸ್ರ ದ್ವೀಪೋದ್ಯಾನದಲ್ಲೆ ವಿವೇಕಾನಂದರು ಏಳು ವಾರ ವೇದಾಂತದ ಹೃದಯ ಭಾಗವನ್ನೇ ತಮ್ಮ ಪಾಶ್ಚಾತ್ಯ ಶಿಷ್ಯರ ಮುಂದೆ ತೆರೆದಿಟ್ಟರು. ಪ್ರತಿಯೊಬ್ಬ ಶಿಷ್ಯನೂ, ಶಿಷ್ಯಳೂ ಆ ದಿನಗಳನ್ನು ನೆನೆದಾಗಲೆಲ್ಲ ಅದೆಷ್ಟು ರೋಮಾಂಚಿತರಾಗುತ್ತಿದ್ದರು; ಭಾವ ಪರವಶರಾಗುತ್ತಿದ್ದರು ಎಂಬುದನ್ನು ಅವರ ಸ್ಮೃತಿ ಲೇಖನಗಳಿಂದಲೇ ಅರಿಯಬೇಕು. ಅದೃಷ್ಟವಶಾತ್ ಎಮರ್ಸನ್ನರ ಸೋದರಸೊಸೆ ಎಲೆನ್ ವಾಲ್ಡೋ ಅವರಲ್ಲೊಬ್ಬಳು. ಆ ಚಿಂತನೆಗಳ ಒಂದಂಶವನ್ನು ದಿ ಮೈಟ್ ಆಫ್ ಈಸ್ಟರ್ನ್ ಥಾಟ್ ಎನ್ನುವ ಪುಸ್ತಕದ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾಳೆ.
ಇಲ್ಲಿಯ ತರಗತಿಗಳನ್ನು ಮುಗಿಸಿಕೊಂಡೇ, ತಮ್ಮ ಧ್ಯಾನಸಿದ್ಧಿಯ ಪರಿಚಯವನ್ನೂ ಶಿಷ್ಯರಿಗೆ ಮಾಡಿಸಿಯೇ ಇಲ್ಲಿಂದ ಅವರು ಪ್ಯಾರಿಸ್ ಮೂಲಕ ಲಂಡನ್ನಿಗೆ ತೆರಳಿದ್ದು. ಎಷ್ಟೆಷ್ಟು ರೀತಿಯಲ್ಲಿ ಸ್ವಾಮೀಜಿ ಶ್ರಮಿಸಿದರು! ಅವರ ಶಕ್ತಿಗೂ ಮಿತಿ ಇಲ್ಲ; ಅವರ ಮಹಿಮೆಗೂ ಮಿತಿ ಇಲ್ಲ ಎಂಬುದನ್ನರಿಯಬೇಕಾದರೆ ಅವರ ಶಿಷ್ಯರೇ ಆದ ಮಿಸ್ ಲಾರಾಗ್ಲೆನ್ ಮತ್ತು ಸ್ವಾಮಿ ಕೃಪಾನಂದ ಅವರ ಲೇಖನಗಳನ್ನು ಸ್ವಲ್ಪ ಅವಲೋಕಿಸಬೇಕು. ಮುಂದೆ ತಪಸ್ವೀ ಜೀವನ ನಡೆಸುತ್ತ ಸೋದರಿ ದೇವಮಾತಾ ಎಂದು ಪ್ರಸಿದ್ಧಳಾದ ಮಿಸ್ ಲಾರಾಗ್ಲೆನ್ ತನ್ನ ಗುರುವಿನ ಮಹತ್ವವನ್ನು ಕುರಿತು ಹೇಳಿದ ಕೆಲ ವಾಕ್ಯಗಳು ಕೆಳಗಿನಂತಿವೆ.
"ನಮ್ಮಲ್ಲಿ ಅನೇಕರು ಸ್ವಾಮೀಜಿಯನ್ನು ಅವರು ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದರು. ಇವರು ಶ್ರದ್ಧಾವಂತರಾಗಿದ್ದಷ್ಟೇ ಅವಿಶ್ರಾಂತರೂ ಆಗಿದ್ದರು. ರಜಾ ದಿನವೆಂದೋ ಬೇರಾವುದಾದರೂ ಕಾರಣಕ್ಕೋ ಸ್ವಾಮೀಜಿ ಒಂದು ದಿನದ ಪಾಠವನ್ನು ರದ್ದುಪಡಿಸುವ ಸೂಚನೆ ಕೊಟ್ಟರೆ, ತಕ್ಷಣವೇ ಅದಕ್ಕೆ ಗಟ್ಟಿಯಾದ ಪ್ರತಿಭಟನೆ ಕೇಳಿಬರುತ್ತಿತ್ತು. ಅವರ ಒಂದು ಮಾತನ್ನೂ ಕೇಳಿಸಿಕೊಳ್ಳದೆ ಬಿಡಲು ಯಾರಿಗೂ ಇಷ್ಟವಿರಲಿಲ್ಲ. ಹೀಗಾಗಿ ಸ್ವಾಮೀಜಿಗೆ ವಿರಾಮವೇ ಇರಲಿಲ್ಲ.'
ಇಷ್ಟರಮಟ್ಟಿಗೆ ಯಶಸ್ಸನ್ನು ಸಾಧಿಸಲು ಸ್ವಾಮೀಜಿ ಬಹಳಷ್ಟು ಹೋರಾಡಬೇಕಾಯಿತು ಎಂಬುದನ್ನು ಹೇಳಬೇಕಾಗಿಯೇ ಇಲ್ಲ. ಆದರೆ ಆಗಿನ ಕಾಲದಲ್ಲೆ ಅವರ ಅನುಯಾಯಿಗಳು ಹಾಗೂ ಬೆಂಬಲಿಗರಾಗಿದ್ದ ಎಷ್ಟೋ ಜನರಿಗೆ, ಅದರಲ್ಲೂ ಭಾರತೀಯರಿಗೆ, ಅದರ ಅರಿವಿರಲಿಲ್ಲ. ತಾವು ಸಂನ್ಯಾಸಿಗಳು ಅಮೆರಿಕದಲ್ಲಿ ಬದುಕಿ ಉಳಿಯಬೇಕಾದರೆ ಪ್ರತಿಯೊಂದು ಚೂರು ರೊಟ್ಟಿಗೂ ಹೋರಾಡಬೇಕು ಎಂದು ಸ್ವಾಮೀಜಿ ತಮ್ಮ ಗುರುಭಾಯಿಗಳಿಗೆ ಬರೆದಿದ್ದರು. ವಸ್ತುಸ್ಥಿತಿ ನಿಜಕ್ಕೂ ಭಯಂಕರವಾಗಿಯೇ ಇತ್ತು. ಸ್ವಾಮೀಜಿಯ ಕಾರ್ಯದ ನಿಜವಾದ ಮಹತ್ವವೆಂಥದ್ದು ಎಂಬುದನ್ನು ಅವರ ಶಿಷ್ಯರಾದ ಸ್ವಾಮಿ ಕೃಪಾನಂದರು, ಮದರಾಸಿನ "ಬ್ರಹ್ಮವಾದಿನ್' ಪತ್ರಿಕೆಗೆ ಕಳಿಸಿಕೊಟ್ಟ ಒಂದು ದೀರ್ಘ ಪತ್ರದಲ್ಲಿ ವಿವರವಾಗಿ ವಿಶ್ಲೇಷಿಸಿದರು. ಆ ಲೇಖನದ ಕೆಲಭಾಗಗಳನ್ನೂ ಇಲ್ಲಿ ಕೊಡಲಾಗಿದೆ.
"ಹಿಂದೂಧರ್ಮದ ಸಂದೇಶಗಳನ್ನು ಅಮೆರಿಕದಲ್ಲಿ ಪ್ರಸಾರ ಮಾಡುವಲ್ಲಿ ಸ್ವಾಮಿ ವಿವೇಕಾನಂದರು ಸಾಧಿಸಿದ ಅದ್ಭುತ, ಅಪೂರ್ವ ಯಶಸ್ಸು ಸಾಧ್ಯವಾದುದು ಅವರ ಮಹಾನ್ ಸಾಮರ್ಥ್ಯದಿಂದಲೇ ಎನ್ನುವುದು ಅರ್ಥವಾಗಬೇಕಾದರೆ ನಾವು ಇಂದಿನ ಕಾಲದಲ್ಲಿ (19ನೇ ಶತಮಾನದ ಅಂತ್ಯಭಾಗ) ಅಮೆರಿಕದಲ್ಲಿ ಪ್ರಚಲಿತವಿರುವ ವಿಲಕ್ಷಣ ಪರಿಸ್ಥಿತಿಯನ್ನು ಅಧ್ಯಯನ ಮಾಡಬೇಕು; ವಿವೇಕಾನಂದರು ಎದುರಿಸಬೇಕಾದ ವಿರೋಧೀ ಶಕ್ತಿಗಳು ಎಂಥವೆಂಬುದನ್ನೂ ಗಮನಿಸಬೇಕು; ಇಂತಹ ಭಯಂಕರ ಪರಿಸ್ಥಿತಿಯೊಂದಿಗೆ ಹೋರಾಡುವಲ್ಲಿ ಅವರು ಹೇಗೆ ಅಸಂಖ್ಯಾತ ಕಷ್ಟ, ಸಂಕಟಗಳನ್ನು ಎದುರಿಸಬೇಕಾಯಿತೆಂಬುದನ್ನೂ ಪರಿಗಣಿಸಬೇಕು. ಆಗ ಮಾತ್ರವೇ ನಾವು ಅವರ ಕಾರ್ಯಸಿದ್ಧಿಯ ವೈಭವವನ್ನು ಗುರುತಿಸಿ ಪ್ರಶಂಸಿಸಲು ಸಮರ್ಥರಾಗುತ್ತೇವೆ. ಆಗ ಮಾತ್ರವೇ, ಅವರ ಈ ಯಶಸ್ಸು ಕಾರ್ಯಸಿದ್ಧಿಗಳೆಲ್ಲ ಲೋಕಗುರುವಾದ ಅವರ ಅಸಾಧಾರಣ ನೈತಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಶಕ್ತಿಯಿಂದಲೇ ಸಾಧ್ಯವಾಯಿತೆಂಬುದನ್ನು ತಿಳಿಯಲು ಸಮರ್ಥರಾಗುತ್ತೇವೆ.
ಸರ್ವಧರ್ಮ ಸಮ್ಮೇಳನದ ಸಂದರ್ಭದಲ್ಲಿ ಅನೇಕ ಭಾರತೀಯರು ಜಗತ್ತಿನ ಗಮನವನ್ನು ಭಾರತದ ಬೆಳಕಿನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾದರು ಮತ್ತು ನಮ್ಮ (ಅಮೆರಿಕ) ರಾಷ್ಟ್ರದ ಮೇಲೆಲ್ಲ ಒಂದು ಹೊಸ ಅಲೆ ಹರಿಯುವಂತೆ ಮಾಡಿದರು ಎನ್ನುವುದೇನೋ ನಿಜವೇ. ಆದರೆ ಸ್ವಾಮಿ ವಿವೇಕಾನಂದರು ಮಾತ್ರ ತಾವು ಹಿಡಿದ ಪಟ್ಟನ್ನು ಬಿಡದೆ ಪಾಶ್ಚಾತ್ಯ ಜಡವಾದದ ಮೇಲೆ ಹಿಂದೂ ಭಾವನೆಗಳನ್ನು ಕಸಿ ಮಾಡುವ ನಿಟ್ಟಿನಲ್ಲಿ ಶ್ರಮಿಸಿ, ತಮ್ಮ ಕಾರ್ಯವು ಫಲಪ್ರದವಾಗುವವರೆಗೂ ದುಡಿದರು. ಈ ಒಬ್ಬ ವ್ಯಕ್ತಿಯ ಪ್ರಯತ್ನಗಳು ಇಲ್ಲದೆ ಹೋಗಿದ್ದರೆ ಈ ನೂತನ ಅಲೆಯು ಯಾವುದೇ ಶಾಶ್ವತ ಪರಿಣಾಮವನ್ನುಂಟುಮಾಡದೆ, ತಾನು ಉದಿಸಿದಷ್ಟೇ ಶೀಘ್ರವಾಗಿ ಅಂತ್ಯಗೊಳ್ಳುತ್ತಿತ್ತು.
ಈ ಸಮಯದಲ್ಲಿ ಅಮೆರಿಕನ್ನರ ಮನಸ್ಸು, ಹಳೆಯ ಕಾಲದಿಂದಲೂ ಬೆಳೆದುಬಂದಿದ್ದ ಮೂಢನಂಬಿಕೆ, ಮತಾಂಧತೆಗಳ ದಪ್ಪನೆಯ ಪದರಗಳಿಂದ ಆವೃತವಾಗಿತ್ತು. ಎಲ್ಲ ವಿಧದ ಠಕ್ಕು, ಕಪಟ, ವಂಚನೆಗಳು ಅದರಲ್ಲಿ ಬೇರೂರಿದ್ದು, ಇವುಗಳನ್ನು ಕಿತ್ತುಹಾಕುವುದೆಂದರೆ ಅತೀವ ದುಸ್ಸಾಧ್ಯದ ಕೆಲಸವಾಗಿತ್ತು. ಅಮೆರಿಕನ್ನರು ಸ್ವಭಾವತಃ ಎಲ್ಲವನ್ನೂ ಸ್ವೀಕರಿಸುವ ಜನ. ಆದ್ದರಿಂದಲೇ ಈ ದೇಶವು ಎಲ್ಲ ಬಗೆಯ ಧಾರ್ಮಿಕ ಹಾಗೂ ಅಧಾರ್ಮಿಕ ಜಂಜಡಗಳ ನೆಲೆವೀಡಾಗಿ ಇರುವುದು. ಇಲ್ಲಿನ ಪೇಟೆಯಲ್ಲಿ ತಕ್ಷಣವೇ ಬಿಕರಿಯಾಗದ ಯಾವ ಅಸಂಬದ್ಧ ತತ್ತ್ವವಾಗಲಿ, ಅರ್ಥಹೀನ ಬೋಧನೆಯಾಗಲಿ, ಆಗಸದೆತ್ತರದ ಆಶ್ವಾಸನೆಯಾಗಲಿ, ಮುಚ್ಚುಮರೆಯಿಲ್ಲದ ಮೋಸವಾಗಲಿ ಇಲ್ಲವೇ ಇಲ್ಲ ಎನ್ನಬೇಕು. ಇವುಗಳಲ್ಲಿ ಪ್ರತಿಯೊಂದಕ್ಕೂ ಅಸಂಖ್ಯಾತ ಅನುಯಾಯಿಗಳು ಸಿಕ್ಕೇ ಸಿಗುತ್ತಾರೆ. ಮಾಯಾಮಂತ್ರಗಳ ಬಗ್ಗೆ, ಪ್ರೇತವಿದ್ಯೆಯ ಬಗ್ಗೆ, ಅತಿಮಾನುಷ ಶಕ್ತಿಗಳ ಬಗ್ಗೆ ಜನರಲ್ಲಿ ಬೆಳೆದಿರುವ ಈ ಭಯಂಕರ ಆಸಕ್ತಿಯು, ಮಧ್ಯಯುಗವನ್ನು (ಕ್ರಿ.ಶ. 600ರಿಂದ 1400ರವರೆಗಿನ ಕಾಲ) ಪುನರಾವರ್ತನೆಗೊಳಿಸುತ್ತದೆ. ಈ ಗೀಳನ್ನು ತೃಪ್ತಿಪಡಿಸಲು, ಜನರ ಮೌಢ್ಯಕ್ಕೆ ತುಪ್ಪ ಸುರಿಯಲು ನೂರಾರು ಸಂಘಗಳು, ಪಂಥಗಳು ಹುಟ್ಟಿಕೊಂಡವು; ಜಗತ್ತಿಗೆ ಮೋಕ್ಷದ ಭರವಸೆ ಕೊಡುತ್ತ, "ಪ್ರವಾದಿ'ಗಳಿಗೆ ಒಬ್ಬೊಬ್ಬ ದಾರ್ಥಿಯಿಂದಲೂ 25ರಿಂದ 100 ಡಾಲರ್ವರೆಗೂ ದಕ್ಕಿಸಿಕೊಡುತ್ತಿದ್ದುವು. ದೆವ್ವಗಳು, ಪಿಶಾಚಿಗಳು, "ಮಹಾತ್ಮ'ರು ಮತ್ತು ಹೊಸ ಹೊಸ ಅವತಾರಪುರುಷರು ದಿನದಿನವೂ ಹುಟ್ಟಿಕೊಳ್ಳುತ್ತಿದ್ದರು. ಚಿತ್ರವಿಚಿತ್ರ ಧಾರ್ಮಿಕ ಭಾವನೆಗಳ ಈ ಹುಚ್ಚರ ಸಂತೆಯಲ್ಲಿ, ಮೋಸ, ಸೋಗು, ವಂಚನೆಗಳ ಈ ದೆವ್ವದ ಪಾಕಶಾಲೆಯಲ್ಲಿ ಸ್ವಾಮಿ ವಿವೇಕಾನಂದರು ಉದಿಸಿದರು. ಭವ್ಯವಾದ ವೇದಧರ್ಮವನ್ನು, ವೇದಾಂತದ ಅದ್ಭುತ ತತ್ತ್ವವನ್ನು, ಸನಾತನ ಋಷಿಗಳ ಪರಮೋದಾತ್ತ ಜ್ಞಾನವನ್ನು ಬೋಧಿಸಲು, ಆ ಕಾರ್ಯಕ್ಕೆ ಅತ್ಯಂತ ಪ್ರತಿಕೂಲವಾದ ಪರಿಸರ! ತನ್ನ ಮಹಾಕಾರ್ಯವನ್ನು ಸಾಧಿಸುವ ಮೊದಲು ಅವರು ಠಕ್ಕು, ಮೂಢನಂಬಿಕೆ, ಮತಾಂಧತೆಗಳ ಈ ಕೊಳಕು ಲಾಯವನ್ನು ಶುಚಿಗೊಳಿಸುವ ಭಗೀರಥ ಪ್ರಯತ್ನವನ್ನು ಕೈಗೊಳ್ಳಬೇಕಾಗಿತ್ತು. ಆ ಪ್ರಯತ್ನವೋ ಎಂತಹ ಸಿಡಿಲೆದೆಗೂ ಅಧೈರ್ಯವನ್ನು ತರುವಂಥದ್ದು; ಎಂತಹ ಪ್ರಬಲ ಇಚ್ಛೆಯನ್ನೂ ನಿಸ್ಸತ್ವಗೊಳಿಸುವಂಥದ್ದು. ಆದರೆ ಕಷ್ಟಗಳಿಗೆ ಅಂಜುವ ವ್ಯಕ್ತಿಯಾಗಿರಲಿಲ್ಲ ಸ್ವಾಮೀಜಿ! ಬಡವರೂ ಏಕಾಂಗಿಯೂ ಆಗಿದ್ದು, ಭಗವಂತನ ನೆರವು ಹಾಗೂ ಮಾನವತೆಯ ಮೇಲಿನ ಪ್ರೇಮ ಇವೆರಡನ್ನು ಬಿಟ್ಟರೆ ಬೇರಾವ ಆಧಾರವೂ ಇಲ್ಲದೆ ಅವರು ಸಮಾಧಾನಚಿತ್ತದಿಂದ ಕಾರ್ಯನಿಮಗ್ನರಾದರು. ತಾವು ಸಾರಲಿದ್ದ ಸಂದೇಶವು ಸತ್ಯಾನ್ವೇಷಿಗಳಾದ ಸತ್ಪುರುಷರೆದೆಯನ್ನು ತಲುಪುವವರೆಗೂ ಹಿಡಿದ ಕಾರ್ಯವನ್ನು ಬಿಡದಿರಲು ಅವರು ನಿಶ್ಚಯಿಸಿದ್ದರು.
ಪ್ರಾರಂಭದಲ್ಲಿ ಅವರ ಉಪನ್ಯಾಸಗಳಿಗೆ ಜನ ಇನ್ನಿಲ್ಲದಂತೆ ಮುತ್ತಿದರು. ಇವರಲ್ಲಿ ಕೆಲವರು ಕುತೂಹಲಾಕಾಂಕ್ಷಿಗಳು; ಇನ್ನು ಕೆಲವರು ಈ ಮೇಲೆ ಹೇಳಿದಂತಹ ಮೋಸ-ವಂಚನೆಗಳ ಕುಟಿಲ ಜನ. ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ವಿವೇಕಾನಂದರು ಬಹಳ ಒಳ್ಳೆಯ ಉಪಕರಣವಾಗಬಲ್ಲರೆಂದು ಇವರೆಲ್ಲ ಭಾವಿಸಿದ್ದರು. ಇಂಥವರಲ್ಲಿ ಬಹಳಷ್ಟು ಜನ ಮೊದಲು ಸ್ವಾಮೀಜಿಗೆ ತಮ್ಮ ಬೆಂಬಲದ ಭರವಸೆಯನ್ನಿತ್ತು ಅವರನ್ನು ತಮ್ಮ ಪಂಥಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದರು. ಅದಕ್ಕೆ ಸ್ವಾಮೀಜಿ ಒಪ್ಪದಿದ್ದಾಗ ಅಪಾಯದ ಬೆದರಿಕೆಯನ್ನೂ ಹಾಕಿದರು. ಆದರೆ ಕೊನೆಯಲ್ಲಿ ಅವರೆಲ್ಲ ನಿರಾಶರಾಗಬೇಕಾಯಿತು. ಅವರು ಮೊಟ್ಟ ಮೊದಲ ಬಾರಿಗೆ, ತಾವು ಖರೀದಿಸಲಾಗದ ಇಲ್ಲವೆ ಬೆದರಿಸಲಾಗದ ವ್ಯಕ್ತಿಯೊಬ್ಬನನ್ನು ಸಂಧಿಸಿದ್ದರು. ಪೋಲಿಷ್ ಭಾಷೆಯ ಗಾದೆಯಂತೆ "ಮಚ್ಚುಗತ್ತಿ ಬಂಡೆಯನ್ನು ಬಡಿದಿತ್ತು'. ಅವರ ಎಲ್ಲ ಬಗೆಯ ಆಹ್ವಾನಗಳಿಗೆ ಸ್ವಾಮೀಜಿಯದು ಒಂದೇ ಉತ್ತರ- "ನಾನು ಸತ್ಯವನ್ನು ಪ್ರತಿನಿಧಿಸುತ್ತೇನೆ. ಸತ್ಯವೆಂದಿಗೂ ಸುಳ್ಳಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇಡೀ ಜಗತ್ತೇ ನನಗೆ ವಿರುದ್ಧವಾದರೂ ಕೊನೆಯಲ್ಲಿ ಸತ್ಯ ಗೆಲ್ಲಲೇಬೇಕು.' ಮೋಸ, ಮೂಢನಂಬಿಕೆಗಳು ಯಾವುದೇ ರೂಪ ಧರಿಸಿ ಬಂದರೂ ಅವುಗಳನ್ನು ಸ್ವಾಮೀಜಿ ಉಚ್ಚಾಟಿಸಿದರು. ಆ ಎಲ್ಲ ಅಸಂಬದ್ಧತೆ-ಅವಿವೇಕಗಳು ಈ ಸತ್ಯದೂತನ ಮುಂದೆ ಸೂರ್ಯನ ಬೆಳಕನ್ನು ಕಂಡು ಅವಿತುಕೊಳ್ಳುವ ಬಾವಲಿಗಳಂತೆ ಎತ್ತಲೋ ಹುದುಗಿಕೊಂಡುವು.
ಕ್ರೆಸ್ತ ಮಿಷನರಿಗಳ ವಿವಿಧ ಕಪಟೋಪಾಯಗಳು ಎಲ್ಲರಿಗೂ ತಿಳಿದಿರುವಂಥವೇ. ಕ್ರೆಸ್ತಧರ್ಮವನ್ನು ಸ್ವಾಮೀಜಿ, ಮಿಷನರಿಗಳು ಅರ್ಥ ಮಾಡಿಕೊಂಡಿದ್ದ ರೀತಿಯಲ್ಲೆ ಬೋಧಿಸಿದ್ದರೆ ಅದು ಅವರಿಗೆ ಪ್ರಿಯವಾಗಿರುತ್ತಿತ್ತು. ಆದರೆ ಅದೆಂದಿಗೂ ಸಾಧ್ಯವಿರಲಿಲ್ಲ. ಮಿಷನರಿಗಳು ತಮ್ಮ ಬಗ್ಗೆ ಹರಡಿದ ಹೊಲಸು ಕತೆಗಳ ವಿಷಯದಲ್ಲಿ ನಿರ್ಲಿಪ್ತರಾಗಿದ್ದು, ಸ್ವಾಮೀಜಿ ಶಾಂತವಾಗಿ ಭಗವಂತ, ಪ್ರೇಮ, ಸತ್ಯಗಳನ್ನು ಬೋಧಿಸಿದರು. ಆ ಎಲ್ಲ ಗಾಳಿಮಾತುಗಳು ಸ್ವಾಮೀಜಿಯ ಉಪನ್ಯಾಸಗಳಿಗೆ ಕೇವಲ ಜಾಹೀರಾತಾಗಿ ಕೆಲಸ ಮಾಡಿದುವು. ಮತ್ತು ಅವರಿಗೆ ವಿವೇಕಿಗಳಾದ ಜನರ ಸಹಾನುಭೂತಿಯನ್ನು ಗಳಿಸಿಕೊಟ್ಟುವು.'
ಸ್ವಾಮಿ ಕೃಪಾನಂದರ ಈ ಪತ್ರವು, 1896ರ ಫೆ. 15ರಂದು "ಬ್ರಹ್ಮವಾದಿನ್' ಪತ್ರಿಕೆಯಲ್ಲಿ ಪ್ರಕಟವಾಯಿತು. ಸ್ವಾಮೀಜಿಯ ಸಾಧನೆ ನಿಜಕ್ಕೂ ಎಷ್ಟು ಅದ್ಭುತವಾದದ್ದು ಎಂಬುದನ್ನೂ ಅಮೆರಿಕದ ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂಬುದನ್ನೂ ಈ ಪತ್ರದಲ್ಲಿ ಅವರು ಸ್ಪಷ್ಟವಾಗಿ ಚಿತ್ರಿಸಿದ್ದರು. ಅವರ ಉಪನ್ಯಾಸಗಳು ಆ ದಿನಗಳಲ್ಲಿ ಸಾರ್ವಜನಿಕವಾಗಿ ಬೀರುತ್ತಿದ್ದ ಅದ್ಭುತ ಪ್ರಭಾವದ ಕುರಿತಾಗಿ ಸ್ವಾಮಿ ಕೃಪಾನಂದರು ಅದೇ ಪತ್ರಿಕೆಗೆ ಬರೆದ ಮತ್ತೊಂದು ಪತ್ರವೂ ಇಲ್ಲಿ ಉಲ್ಲೇಖನೀಯ.
"ಸ್ವಾಮೀಜಿಯ ಉಪನ್ಯಾಸಗಳ ಹಾಗೂ ಬರವಣಿಗೆಗಳ ಮೂಲಕ ಹೊರಹೊಮ್ಮುವ ಶಕ್ತಿಯುತ ಧಾರ್ಮಿಕ ಚಿಂತನಪ್ರವಾಹವು, ಸದ್ದಿಲ್ಲದಂತೆ ಆಗೋಚರವಾಗಿ ಕೆಲಸ ಮಾಡುತ್ತಿದ್ದರೂ ಜನಸಾಮಾನ್ಯರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮವನ್ನುಂಟು ಮಾಡುತ್ತಿದೆ; ಸಮಾಜದ ಆಧ್ಯಾತ್ಮಿಕ ಉನ್ನತಿಗೆ ಅದೊಂದು ಮಹತ್ವದ ಅಂಶವಾಗಿದೆ. ವೇದಾಂತ ಸಾಹಿತ್ಯಕ್ಕಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಗಮನಿಸಿದಾಗ, ಮತ್ತು ಯಾರ ಬಾಯಲ್ಲಿ ಸಂಸ್ಕೃತ ಪದಗಳು ಬರಬಹುದೆಂದು ಊಹಿಸಲೂ ಸಾಧ್ಯವಿಲ್ಲವೋ ಅಂತಹ ಜನ ಅವುಗಳನ್ನು ಆಗಾಗ ಬಳಸುವುದನ್ನು ಕಂಡಾಗ ಈ ಪರಿಣಾಮ ಸುವ್ಯಕ್ತವಾಗುತ್ತದೆ. ಆತ್ಮ, ಕರ್ಮ, ಯೋಗ, ಮೋಕ್ಷ ಇತ್ಯಾದಿ ಪದಗಳು ಮನೆಮಾತಾಗಿವೆ; ಶಂಕರಾಚಾರ್ಯ, ರಾಮಾನುಜಾಚಾರ್ಯರ ಹೆಸರುಗಳು ಹಕ್ಸ್ಲೀ ಹಾಗೂ ಸ್ಪೆನ್ಸರರ ಹೆಸರುಗಳಷ್ಟೇ ಸುಪರಿಚಿತವಾಗುತ್ತಿವೆ. ಸಾರ್ವಜನಿಕ ಗ್ರಂಥಾಲಯಗಳು ಭಾರತದ ಉಲ್ಲೇಖವುಳ್ಳ ಪುಸ್ತಕಗಳನ್ನೆಲ್ಲ ಪಡೆದುಕೊಳ್ಳಲು ಆತುರ ತೋರುತ್ತಿವೆ. ಮ್ಯಾಕ್ಸ್ಮುಲ್ಲರ್, ಕೋಲ್ಬ್ರೂಕ್, ಡಾಯ್ಸನ್, ಬರ್ನಾಫ್ ಮೊದಲಾದ ಪ್ರಸಿದ್ಧ ಲೇಖಕರ ಹಾಗೂ ಹಿಂದೂ ತತ್ತ್ವಶಾಸ್ತ್ರದ ಬಗ್ಗೆ ಬರೆದಿರುವ ಎಲ್ಲ ಲೇಖಕರ ಪುಸ್ತಕಗಳೂ ವೇಗವಾಗಿ ಮಾರಾಟವಾಗುತ್ತಿವೆ. ತಲೆ ಚಿಟ್ಟು ಹಿಡಿಸುವ ಶೋಪೆನ್ಹಾರ್ನ ಪುಸ್ತಕಗಳನ್ನೂ ಜನರು ಅವನ ವೇದಾಂತದ ಹಿನ್ನೆಲೆಯಿಂದಾಗಿ ಅತ್ಯಂತ ಕುತೂಹಲದಿಂದ ಅಧ್ಯಯನ ಮಾಡುತ್ತಿದ್ದಾರೆ.
ಒಂದು ಧರ್ಮವಾಗಿ ಹೃದಯಕ್ಕೂ ಒಂದು ತತ್ತ್ವಶಾಸ್ತ್ರವಾಗಿ ಬುದ್ಧಿಗೂ ಒಪ್ಪಿಗೆಯಾಗುವ ಮತ್ತು ಮಾನವನ ಧಾರ್ಮಿಕ ತೃಷೆಯನ್ನು ತೃಪ್ತಿಪಡಿಸಬಲ್ಲ ಹಿಂದೂ ಸಿದ್ಧಾಂತವನ್ನು ಜನಗಳು ಬಹುಬೇಗನೆ ಮೆಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ, ತಮ್ಮ ಅದ್ಭುತ ವಾಕ್ ಶಕ್ತಿಯಿಂದ ಮಾನವನಲ್ಲಿ ಸುಪ್ತವಾಗಿರುವ ದಿವ್ಯಪ್ರೇಮವನ್ನು ಜಾಗೃತಗೊಳಿಸಬಲ್ಲ ಮತ್ತು ತಮ್ಮ ಹರಿತವಾದ ಹಾಗೂ ಅಲ್ಲಗಳೆಯಲಾಗದ ತರ್ಕದಿಂದ ಅತ್ಯಂತ ವೈಜ್ಞಾನಿಕ ಬುದ್ಧಿಯುಳ್ಳವನ ಅತಿ ಮೊಂಡು ಬುದ್ಧಿಯನ್ನೂ ಸುಲಭವಾಗಿ ಗೆದ್ದುಕೊಳ್ಳಬಲ್ಲ ನಮ್ಮ ಗುರುಗಳಂಥವರೊಬ್ಬರು ಈ ಸಿದ್ಧಾಂತವನ್ನು ವಿವರಿಸುವಾಗಲಂತೂ ಇದು ಸರಿಯೇ ಸರಿ. ಆದ್ದರಿಂದ, ಸಮಾಜದ ಎಲ್ಲ ವರ್ಗಗಳಲ್ಲೂ ಹಿಂದೂ ಚಿಂತನೆಗಳ ಕುರಿತಾಗಿ ಆಸಕ್ತಿ ಉಂಟಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ.'