The stone 
ಧಾರ್ಮಿಕ

ಅನಗತ್ಯವೆನಿಸಿದ ಕಲ್ಲೇ ಮೂಲೆಗಲ್ಲಾಯಿತು

ಯೇಸುವಿನ ಪುನರುತ್ಥಾನ ಮತ್ತು ಮೋಕ್ಷಾರೋಹಣದ ನಂತರ, ಆತನ ಶಿಷ್ಯರಾದ ಪೇತ್ರ ಮತ್ತು ಯೊವಾನ್ನರು ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಅಲ್ಲಿಯ ಜನರನ್ನುದ್ದೇಶಿಸಿ ಉಪದೇಶ ನೀಡುತ್ತಾರೆ. ಅಲ್ಲಿ ಪ್ರಮುಖವಾಗಿ, ಮೃತರಾದ ನೈಜ ವಿಶ್ವಾಸಿಗಳೆಲ್ಲರೂ ಪುನರುತ್ಥಾನ ಹೊಂದುವರು ಎಂದು ಬೋಧಿಸುತ್ತಾರೆ. ಆ ಸಂದರ್ಭದಲ್ಲಿ ಜೆರೂಸಲೇಮಿನ ಮಹಾದೇವಾಲಯದ ಅರ್ಚಕರೂ, ದಳಪತಿ ಮತ್ತು ಇತರರೂ ಅಲ್ಲಿ ಹಾಜರಿದ್ದರು. ಮೃತರಾದ ನೈಜ ವಿಶ್ವಾಸಿಗಳೆಲ್ಲರೂ ಪುನರುತ್ಥಾನ ಹೊಂದುವರು ಎನ್ನುವ ಇವರ ಬೋಧನೆಯನ್ನು ಕೇಳಿ ಸಿಟ್ಟಿಗೆದ್ದ ಜೆರೂಸಲೇಮಿನ ಪ್ರಮುಖರು ಅವರಿಬ್ಬರನ್ನು ಬಂಧಿಸಿ ಸೆರೆಯಲ್ಲಿಟ್ಟರು. ಮಾರನೆ ದಿನ ಯೆಹೂದಿ ಅಧಿಕಾರಿಗಳು, ಪುರದ ಪ್ರಮುಖರು ಮತ್ತು ಧರ್ಮಶಾಸ್ತ್ರಿಗಳ ಸಭೆ ನಿಗದಿಯಾಯಿತು. ಆ ಸಭೆಯಲ್ಲಿ ಬಂಧನಕ್ಕೊಳಗಾದ ಅವರಿಬ್ಬರನ್ನೂ ಎಲ್ಲರೆದುರಿಗೆ ನಿಲ್ಲಿಸಿ, ಈ ರೀತಿಯ ಬೋಧನೆಗಳನ್ನು ನೀವು ಯಾರ ಹೆಸರಿನಲ್ಲಿ ಮತ್ತು ಯಾರ ಅಧಿಕಾರದಿಂದ ಮಾಡುತ್ತಿರುವಿರಿ? ಎಂದು ಪ್ರಶ್ನಿಸಿದರು.

ಆಗ ಯೇಸುವಿನ ಪಟ್ಟದ ಶಿಷ್ಯನಾದ ಪೇತ್ರನು, ‘ಜನಾಧಿಕಾರಿಗಳೇ, ಪುರ ಪ್ರಮುಖರೇ, ಕೇಳಿ. ನಾವು ಕುಂಟನೊಬ್ಬನಿಗೆ ಸತ್ಕಾರ್ಯವೆಸಗಿ ಆತ ಸ್ವಸ್ಥನಾದುದರಿಂದ ನಮ್ಮನ್ನು ನೀವು ಬಂಧಿಸಿರುವಿರಿ. ಇಗೋ ಮತ್ತೆ ಕೇಳಿ. ನಿಮಗೂ ಮತ್ತು ಇಸ್ರಯೇಲಿನ ಸಕಲರಿಗೂ ಈ ವಿಷಯ ತಿಳಿದಿರಲಿ. ನಜರೇತಿನ ಯೇಸು ಕ್ರಿಸ್ತನ ನಾಮ ಬಲದಿಂದಲೇ ಈ ಮನುಷ್ಯ ಗುಣಹೊಂದಿ ನಿಮ್ಮ ಮುಂದೆ ನಿಂತಿದ್ದಾನೆ. ನೀವು ಶಿಲುಬೆಗೇರಿಸಿ ಕೊಂದುಹಾಕಿದ್ದು ಅದೇ ಯೇಸುವನ್ನು. ದೇವರು ಆತನನ್ನು ಪುನರುತ್ಥಾನಗೊಳಿಸಿದ್ದಾರೆ. ಅವರ ಭೋಧನೆಗಳು ಮತ್ತು ಸತ್ಕಾರ್ಯಗಳನ್ನು ನಾವು ಮಹಿಮೆ ಪಡಿಸುತ್ತಿದ್ದೇವೆ’ ಎಂದು ದಿಟ್ಟವಾಗಿ ಹೇಳಿದ. ಅಲ್ಲದೆ, ‘ಇದೋ! ಮತ್ತೆ ಕಿವಿಗೊಟ್ಟು ಆಲಿಸಿ ಮನೆಕಟ್ಟುವವರಾದ ನೀವು ಬೇಡವೆಂದು ಮೂಲೆಗೆಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವುದು ಇದನ್ನೇ’ ಎಂದು ಘೋಷಿಸಿದ. ಅದನ್ನು ಕೇಳಿದ ಅಲ್ಲಿ ನೆರೆದಿದ್ದವರೆಲ್ಲ ಯೇಸು ಕ್ರಿಸ್ತನ ಮಹಿಮೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.