ಬಸವಣ್ಣನವರ ಮಹಾಮನೆಯೇ ಶಿವಾನುಭವ ಗೋಷ್ಠಿ ನಡೆಯುವ ಸ್ಥಾನವಾಯಿತು. ಅಲ್ಲಿಗೆ ವೀರ ವಿರಾಗಿಣಿ, ವೈರಾಗ್ಯವೇ ಮಹಾದೇವಿಯಕ್ಕನ ರೂಪದಲ್ಲಿ ಕಲ್ಯಾಣದ ಅನುಭವ ಮಂಟಪಕ್ಕೆ ಬಂದಳು. ಅಕ್ಕ ಬೇರೆಯವರಿಗೆ ಉಪದೇಶಿಸಲಿಲ್ಲ. ತನ್ನೊಳಗಿನ ಹಸುವೆಗೆ ನಿಲ್ಲು ನಿಲ್ಲು, ತೃಷೆಯೇ ನಿಲ್ಲು ನಿಲ್ಲು, ನಿದ್ರೆಯೇ ನಿಲ್ಲು ನಿಲ್ಲು, ಕಾಮವೇ ನಿಲ್ಲು ನಿಲ್ಲು, ಕ್ರೋಧವೇ ನಿಲ್ಲು ನಿಲ್ಲು, ಮೋಹವೇ ನಿಲ್ಲು ನಿಲ್ಲು, ಲೋಭವೇ ನಿಲ್ಲು ನಿಲ್ಲು, ಮದವೇ ನಿಲ್ಲು ನಿಲ್ಲು, ಮತ್ಸರವೇ ನಿಲ್ಲು ನಿಲ್ಲು, ಸಚರಾಚರವೇ ನಿಲ್ಲು ನಿಲ್ಲು, ನಾನು ಚನ್ನಮಲ್ಲಿಕಾರ್ಜುನ ದೇವರಿಗೆ ಅವಸರದ ಓಲೆಯನ್ನು ಒಯ್ಯುತ್ತಿದ್ದೇನೆ ಶರಣಾರ್ಥಿ ಎಂದಳು. ಮನುಷ್ಯನಿಗೆ ಹಸಿವು ನೀರಡಿಕೆ, ನಿದ್ರೆ ಕಾಮ ಮುಖ್ಯವಾಗಿವೆ.
ಆದರೂ ಇವೆಲ್ಲವುಗಳಿಗೆ ನಿಲ್ಲಲು ಹೇಳಿ ಹೊರಟಿರುವಳಲ್ಲ! ಎಲ್ಲೆಲ್ಲಿಯೂ ಇವುಗಳಿಗಾಗಿಯೇ ಅಲ್ಲವೆ ಕೊಲೆ, ಸುಲಿಗೆ, ಕಳವು, ಕದನಗಳ ಬಾಧೆ, ಒಲುಮೆ? ಆ ಬಂಧನವನ್ನು ಅದೆಂತು ಜಯಿಸಿದಳು ಈ ವೀರ ವಿರಾಗಿಣಿ. ಪಂಚೇಂದ್ರಿಯಗಳ ಉಪದೇಶ, ಕಾಮನ ಪಂಚ ಬಾಣಗಳನ್ನು ಅದೆಂತು ಮೀರಿದಳು ಈ ಧೀರ ಮಹಿಳೆ.
ಇದೆಲ್ಲ ಬಹಳ ಅಚ್ಚರಿ. ಆಹಾರ, ನಿದ್ರಾ ಭಯ ಮೈಥುನಗಳು ಸಮಸ್ತ ಜನರಿಗೂ ಸಾಮಾನ್ಯ. ಆದರೆ ಅದಾವ ಧೈರ್ಯವೋ ಇವಳಗೆ? ಘೊರಾರಣ್ಯದಲ್ಲಿ ಬಿಸಿಲು, ಮಳೆಗಳ ಬೆದರಿಕೆ ಇಲ್ಲದೆ ಖಗ-ಮೃಗಗಳ ಭಯವಿಲ್ಲದೆ, ಹಸಿವು ತೃಷೆಯ ಹಂಗಿಲ್ಲದೆ ಹೊರಟಿದ್ದಾಳೆ. ಹಸಿವೆ ಹಲವು ಬಗೆಯಾಗಿವೆ. ನೀರಡಿಕೆ, ಬಾಯಾರಿಕೆ, ಕೀರ್ತಿಯ ದಾಹ ಇತ್ಯಾದಿ ರೀತಿಯದಾಗಿವೆ. ಇವುಗಳ ಬಗ್ಗೆ ವೈರಾಗ್ಯ ತಾಳಿದ ಶರಣರಿಗಾಗಿ ಬಸವಣ್ಣನವರು ಕೈಲಾಸವನ್ನು ಮರ್ತ್ಯಲೋಕಕೆ ತರಿಸಿದ್ದಾರೆ.