‘ಏಸು ಕಾಯಂಗಳ ಕಳೆದು ಎಂಬತ್ತನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ...’ ಎಂದು ದಾಸವರೇಣ್ಯರು ತಿಳಿಸಿದಂತೆ, ಸಾಮಾನ್ಯವಾಗಿ ದೊರಕಿದ್ದಲ್ಲ ಈ ಮಾನವ ಜನ್ಮ. ಇದನ್ನು ಹಾನಿ ಮಾಡಿಕೊಳ್ಳದೇ ಸದುಪಯೋಗ ಮಾಡಿಕೊಳ್ಳಿ ಎಂದಿದ್ದಾರೆ. ಹಾಗೆಂದರೆ ಏನು, ಕೇವಲ ಚೆನ್ನಾಗಿ ದುಡಿದು, ಮಡದಿ, ಮಕ್ಕಳಿಗಾಗಿ ಗಳಿಸಿಟ್ಟು ನಿರ್ಗಮಿಸಿದರೇ ಸಾಕೇ? ಇಲ್ಲ. ಇದಕ್ಕೆಂದೇ ಆಧ್ಯಾತ್ಮಿಕ ಮಾರ್ಗವೆಂಬುದೊಂದಿದೆ. ಆ ದಾರಿಯಲ್ಲಿ ಸಾಗಲು ಅನೇಕ ವೇದ ವಾಗ್ಮಯ, ಇತಿಹಾಸಾದಿ ಧಾರ್ಮಿಕ ಗ್ರಂಥಗಳು ಮಾರ್ಗಸೂಚಿಗಳಾಗಿವೆ. ಅರಿತವರಿಂದ ತಿಳಿದು ಬಾಳ್ವೆ ನಡೆಸಿದರೆ ಉತ್ತಮ ಆಧ್ಯಾತ್ಮಿಕ ಪ್ರವರ್ತಕರಾಗಲು ಸುಲಭಸಾಧ್ಯ.
ಏನಿದು ಅಧಿಕ ಮಾಸ, ಈ ಮಾಸಕ್ಕೆ ಅಷ್ಟು ಪ್ರಾಮುಖ್ಯ ಬಂದ ಹಿನ್ನೆಲೆ ಏನು? ಎಂದು ವಿಮರ್ಶಿಸಿದಾಗ, ಪ್ರತಿ ಮಾಸ ಮಾಹಾತ್ಮ್ಯಗಳನ್ನು ತಿಳಿಸಿದ ಹಲವು ಗ್ರಂಥಗಳಲ್ಲಿ ಒಂದಾದ ‘ನಾರದ ಪುರಾಣ’ದಲ್ಲಿ ಈ ಅಧಿಕ ಮಾಸದ ಮಹತ್ವವನ್ನು ನಾವು ಕಾಣಬಹುದು. ಇದನ್ನು ಮಲಮಾಸ ಎಂದು ಮೊದಲು ಕರೆಯಲ್ಪಟ್ಟ ಕಾರಣ, ಆಯಾ ಮಾಸಗಳಿಗೆ ಆಯಾ ಅಭಿಮಾನೀ ದೇವತೆಗಳಿದ್ದು, ಮೂರು ವರುಷಕ್ಕೊಮ್ಮೆ ಬರುವ ಈ ಮಾಸದ ಅಧಿಪತಿ ದೇವನಾರೂ ಇಲ್ಲವೆಂಬುದಾಗಿತ್ತು. ಹೀಗಿರುವಾಗ ಮಲಮಾಸದ ಪ್ರಾರ್ಥನೆಯ ಬಳಿಕ ಸ್ವಯಂ ಸರ್ವೋತ್ತಮನಾದ ಸಕಲದೊಡೆಯನಾದ ಶ್ರೀಹರಿಯು ತಾನೇ ಈ ಮಾಸಕ್ಕೆ ಅಧಿಪತಿಯಾದನು.
ಹಿನ್ನೆಲೆ: ಮಲಮಾಸದ ದೇವತೆ ನೊಂದುಕೊಂಡು ಪರಮಾತ್ಮನೆಡೆಗೆ ಬಂದಿದ್ದಾಳೆ. ತನ್ನ ಅಳಲು ತಿಳಿಸಲು ಮುಂದಾಗಿ, ‘ಹೇ ದೇವ ಸರ್ವಾಂತರ್ಯಾಮಿ, ಸಕಲ ಮಾಸಗಳಲ್ಲಿ ಆಯಾ ವೈಶಿಷ್ಟ್ಯಗಳನ್ನು ಒದಗಿಸಿದ ನೀನು ನನ್ನ ಈ ಮಲಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಒಟ್ಟಾರೆ ಮಾಡಲು ಅವಕಾಶವಿಲ್ಲದೆ ಇರುವಂತಾಗಿದೆ, ನನ್ನೀ ಮಾಸವು ಎಲ್ಲರಿಂದ ವರ್ಜ್ಯವಾಗಿದೆ’ ಎಂದಾಗ, ಸ್ವಯಂ ಸರ್ವರಿಂದಲೂ ಉತ್ತಮನಾದ (ಪುರುಷೋತ್ತಮನಾದ) ಶ್ರೀಹರಿಯೇ ಈ ಮಾಸದ ಅಭಿಮಾನಿ ದೇವತೆಯಾಗಲು, ಈ ಮಾಸವು ‘ಪುರುಷೋತ್ತಮ ಮಾಸ/ಅಧಿಕ ಮಾಸ’ವೆಂದು ಪ್ರಸಿದ್ಧವಾಗುವುದು ಎಂದು ಆಶೀರ್ವಚನ ನೀಡಿದನು.
ಈ ಮಾಸ ಶುಭಕಾರ್ಯಗಳಿಗೆ ವರ್ಜ್ಯ ಏಕೆ?: ಪ್ರತಿಯೊಂದು ಮಾಸದಲ್ಲಿ ಒಂದೊಂದು ರಾಶಿಯಲ್ಲಿ ಸೂರ್ಯನ ಸಂಕ್ರಮಣವಾಗುತ್ತದೆ; ಆದರೆ ಅಧಿಕ ಮಾಸದಲ್ಲಿ ಸೂರ್ಯ ಯಾವುದೇ ರಾಶಿಯಲ್ಲಿ ಸಂಕ್ರಮಣ ಮಾಡುವುದಿಲ್ಲ, ಅಂದರೆ ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣದಲ್ಲಿರುವುದಿಲ್ಲ. ಆದುದರಿಂದ ಚಂದ್ರ ಮತ್ತು ಸೂರ್ಯನ ವೇಗದಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ವಾತಾವರಣದಲ್ಲಿಯೂ ಗ್ರಹಣ ಕಾಲದಂತೆ ಬದಲಾವಣೆಗಳಾಗುತ್ತವೆ. ಬದಲಾಗುತ್ತಿರುವ ಈ ಅನಿಷ್ಟ ವಾತಾವರಣದಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂದು ಈ ಮಾಸದಲ್ಲಿ ಕೇವಲ ವ್ರತಗಳು, ಪುಣ್ಯದಾಯಕ ಕಾರ್ಯಗಳನ್ನು ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ.
ಇತರ ಕಾರ್ಯ ಏನೇನು ಮಾಡಬಹುದು?: ಈ ತಿಂಗಳಲ್ಲಿ ಜಪ-ತಪ, ಹೋಮ-ಹವನ, ಪಾರಾಯಣ-ಪ್ರದಕ್ಷಿಣೆ, ದಾನ-ಧರ್ಮ ಹಿರಿಯರ ಸೇವೆ ಮತ್ತು ಆಧ್ಯಾತ್ಮಿಕ ಭಾವನೆಯಿಂದ ಭಗವಂತನೊಂದಿಗಿನ ಸಂಬಂಧವನ್ನು ಗಾಢವಾಗಿಸಲು ಅಪರೂಪದ ಸದವಕಾಶವಾಗಿದೆ. ಭಕ್ತಿಯ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಅನ್ವೇಷಕರಿಗೆ, ಅಧಿಕ ಮಾಸವು ಲೌಕಿಕ ಗೊಂದಲಗಳಿಂದ ವಿರಾಮ ತೆಗೆದುಕೊಂಡು, ಜೀವನದ ಶಾಶ್ವತ ಉದ್ದೇಶದೊಂದಿಗೆ ಮನಗೂಡಿಸಲು ಇದೊಂದು ಸಕಾಲ. ಅಷ್ಟೇ ಅಲ್ಲದೆ ಇಲ್ಲಿ ದಾನಕ್ಕೆ ಪ್ರಾಶಸ್ತ್ಯ ಕೊಡಲಾಗಿದೆ. ಯೋಗ್ಯತಾನುಸಾರ ದೀಪದಾನ, ಸುವರ್ಣದಾನ, ರಜತದಾನ, ರತ್ನದಾನ, ತಾಮ್ರದಾನ, ಧನಧಾನ್ಯ, ಗೋದಾನ, ವಸ್ತ್ರದಾನ, ದೀಪದಾನ, 33 ಅಪೂಪ ದಾನ ಇನ್ನಿತರ ವಿಹಿತದಾನವನ್ನು ಯೋಗ್ಯರಿಗೆ ಮಾಡಿದವರಿಗೆ, ದೊರಕುವ ಪುಣ್ಯವನ್ನು ಅಂದಾಜು ಮಾಡಲು ಸಾಧ್ಯವಿಲ್ಲ ಎನ್ನುತ್ತದೆ ಪದ್ಮಪುರಾಣ. ಮಲಮಾಸದ ಪ್ರತಿದಿನವೂ ಪವಿತ್ರವೇ. ಆದರೆ ವೈಧೃತೀ, ವ್ಯತಿಪಾತ, ಹುಣ್ಣಿಮೆ, ಅಮಾವಾಸ್ಯೆ, ದ್ವಾದಶಿ ಹೀಗೆ ಈ ದಿನಗಳು ದಾನಕ್ಕೆ ಪ್ರಶಸ್ತವಾದ ದಿನಗಳೆಂದಿದೆ ಶಾಸ್ತ್ರ. ಹಾಗೂ ಭಕ್ತಿ ಮತ್ತು ಶ್ರದ್ಧೆಯಿಂದ ಮಾಡಿದ ಕಾರ್ಯಗಳು ಮಾತ್ರವೇ, ಪುಣ್ಯಪ್ರದ ಮತ್ತು ಅರ್ಥಪೂರ್ಣವಾಗಲು ಸಾಧ್ಯ.
ಅಧಿಕ ಮಾಸದಲ್ಲಿ ಶ್ರೀಪುರುಷೋತ್ತಮ ಪ್ರೀತ್ಯರ್ಥವಾಗಿ ಯಥಾ ಸಾಮರ್ಥ್ಯದಂತೆ, ಒಂದು ತಿಂಗಳು ಉಪವಾಸ ಅಥವಾ ಆಯಾಚಿತ ಭೋಜನ, ನಕ್ತ ಭೋಜನ (ಹಗಲಲ್ಲಿ ಊಟ ಮಾಡದೇ ಕೇವಲ ರಾತ್ರಿಯ ಮೊದಲನೇ ಪ್ರಹರದಲ್ಲಿ ಒಂದೇ ಬಾರಿ ಊಟ ಮಾಡುವುದು) ಮಾಡಬೇಕು ಅಥವಾ ಏಕಭುಕ್ತರಾಗಿರಬೇಕು (ದಿನದಲ್ಲಿ ಒಂದೇ ಬಾರಿ ಊಟ ಮಾಡುವುದು). ಅಶಕ್ತರಾದವರು ಈ ನಾಲ್ಕು ಪ್ರಕಾರಗಳಲ್ಲಿ ಒಂದು ಪ್ರಕಾರವನ್ನು ಕಡಿಮೆ ಪಕ್ಷ ಮೂರು ದಿನಗಳು ಅಥವಾ ಒಂದು ದಿನವಾದರೂ ಆಚರಿಸಬೇಕು. ಇಲ್ಲವಾದಲ್ಲಿ ಎರಡು ಹೊತ್ತು ಊಟ ಮಾಡಿಯಾದರೂ ಸರಿ, ದೇವತಾ ಪೂಜೆ, ಪರೋಪಕಾರ ಇನ್ನಿತರ ಲೋಕಕಲ್ಯಾಣದಂತಹ ಕಾರ್ಯವನ್ನಾದರೂ ಸಾಧಿಸಬಹುದು.
ಅಧಿಕ ಹೇಗೆ?: ಸೌರವರ್ಷವೂ 365 ದಿನಗಳು, ಚಾಂದ್ರಮಾನವೂ 354 ದಿನಗಳು ಎಂಬುದು ನಮಗೆಲ್ಲ ತಿಳಿದ ಸಂಗತಿ. ಹೀಗಿರುವಾಗ ಸೌರ ಮತ್ತು ಚಂದ್ರ ವರ್ಷಗಳಲ್ಲಿ 11 ದಿನಗಳು 1 ಗಂಟೆ ನಿಮಿಷಗಳ ಅಷ್ಟು ವ್ಯತ್ಯಾಸ ಬರುತ್ತದೆ. ಇದು ವರ್ಷ ಹೆಚ್ಚಿದಂತೆ ಹೆಚ್ಚಾಗುತ್ತ ಮೂರು ವರ್ಷ ಕಳೆದ ಮೇಲೆ ಒಂದು ಪೂರ್ತಿ ಮಾಸವಾಗುವಷ್ಟು संख्या ತುಂಬಿಕೊಳ್ಳುತ್ತದೆ. ಆ ಮಾಸವೇ ಅಧಿಕ ಮಾಸ ಎಂದಾಗಿದೆ.
33 ಸಂಖ್ಯೆಯ ವಿವರ: ಇಲ್ಲಿ ಅಷ್ಟವಸುಗಳು ಏಕಾದಶ ರುದ್ರರು ದ್ವಾದಶ ಆದಿತ್ಯರು, ಪ್ರಜಾಪತಿ, ವಷಟ್ಕಾರ (8+11+12+1+1) ಹೀಗೆ 33 ದೇವತೆಗಳು ಈ ಮಾಸದ ಅಭಿಷೇಕ್ತ ನಿಯಾಮಕರು. ಈ ಬಾರಿಯ ಅಧಿಕಮಾಸವು ಮೇ 17ರಿಂದ ಜೂನ್ 15ರವರೆಗೆ ಸಂಭವಿಸಲಿದೆ.
(ಲೇಖಕರು ಹವ್ಯಾಸಿ ಬರಹಗಾರರು)