fire 
ಧಾರ್ಮಿಕ

ಹೊರಗೆ ಸುಡುವ ಬೆಂಕಿಗಿಂತ ಮಿಗಿಲಾದುದು ಒಳಗೆ ಬೆಳಗುವ ಅಗ್ನಿ

ನಾವೆಲ್ಲ ಬದುಕಿರಬೇಕಾದರೆ ನೀರು-ಅನ್ನ ಬೇಕು. ಅಲ್ಲದೇ ಗಾಳಿಬೆಳಕು, ಮಣ್ಣು/ನೆಲವೂ ಬೇಕು. ಇವುಗಳೊಂದಿಗೆ ಮುಖ್ಯವೆನಿಸುವುದೆಂದರೆ ಬೆಂಕಿಯೇ ಸರಿ. ಪ್ರಕೃತಿಯಲ್ಲಿ ಬೆಂಕಿ ತೋರಿದ್ದು ಯಾವಾಗ? ನಮ್ಮ ಮಟ್ಟಿಗೆ, ಎಂದರೆ ಸೌರವ್ಯೂಹವನ್ನೂ ಮನಸ್ಸಿನಲ್ಲಿಟ್ಟುಕೊಂಡು ಹೇಳುವುದಾದರೆ, ಸೂರ್ಯನೇ ಮೊದಲ ಬೆಂಕಿ. ಬೆಂಕಿಯನ್ನು ಬಳಸಿಕೊಳ್ಳುವ ಬಗೆಯನ್ನು ಮನುಷ್ಯನೆಂದು ಕಲಿತ? ಹತ್ತುಲಕ್ಷ ವರ್ಷಗಳ ಹಿಂದೋ ಅದಕ್ಕೂ ಹಿಂದೆಯೋ ಎನ್ನುತ್ತಾರೆ, ಆಧುನಿಕ-ವಿಜ್ಞಾನಿಗಳು. ಪ್ರಾಣಿಗಳು ಪ್ರಾಕೃತಿಕ ಶಕ್ತಿಗಳಿಗೆ ಕೇವಲ ಪ್ರತಿಕ್ರಿಯೆಯಷ್ಟನ್ನೇ ತೋರಿಸಬಲ್ಲವು; ಆದರೆ ಅವನ್ನು ಬಳಸುವ, ಪಳಗಿಸಿಕೊಳ್ಳುವ, ಬೇಕೆನಿಸಿದಾಗ ತಯಾರಿಸಿಕೊಳ್ಳುವ, ಸಾಮರ್ಥ್ಯ ಮನುಷ್ಯನಿಗೇ ಮೀಸಲು!. ಪೂರ್ವಕಾಲದ ಮಾನವ ಸಮಾಜದ ಬಲು ದೊಡ್ಡ ಕಂಡುಹಿಡಿಕೆಯೆಂದರೆ ಬೆಂಕಿಯೇ ಎಂದು ಚಾರ್ಲ್ಸ್ ಡಾರ್ವಿನ್ ಒಮ್ಮೆ ಉದ್ಗರಿಸಿದ್ದನು.
ಭಾಷೆಯೆಂಬುದೂ ಪ್ರಾಣಿಗಳಲ್ಲಿಲ್ಲವೆನ್ನಬಹುದು, ಅದನ್ನು ಬಿಟ್ಟರೆ, ಪ್ರಾಣಿಗಳಿಗಿಂತಲೂ ತಾವು ಎಷ್ಟು ವಿಭಿನ್ನರು ಎಂಬುದನ್ನು ತೋರಿಸಲು ಮನುಷ್ಯರು ಬೆಂಕಿಯನ್ನು ಬಳಸಿಕೊಳ್ಳುವ ಬಗೆಯೊಂದೇ ಸಾಕು ಎಂದು ವಿಜ್ಞಾನಿಗಳು ಹೇಳುವರು. ಏಕೆ? ಯಾವ ಪ್ರಾಣಿಯೂ ಅಗ್ನಿಯಲ್ಲಿ ತನ್ನ ಆಹಾರವನ್ನು ಪಾಕಮಾಡಿಕೊಳ್ಳುವ ಕಲೆಯನ್ನು ಕಲಿತಿಲ್ಲ. ಮೈಕಾಯಿಸಿಕೊಳ್ಳಲು ಸಹ ಬೆಂಕಿಯನ್ನು ತಯಾರಿಸಿಕೊಂಡಂತಿಲ್ಲ.
ಪ್ರಕೃತಿಜನ್ಯವಾದ ಮಿಂಚು, ಕಾಳ್ಗಿಚ್ಚುಗಳಿಂದಾಗುವ ಬೆಂಕಿಯ ಬಗೆಯೇ ಬೇರೆ; ಪ್ರಯತ್ನಪೂರ್ವಕವಾಗಿ ಬೆಂಕಿಯನ್ನು ಹೊತ್ತಿಸಿಕೊಳ್ಳುವ ಬಗೆಯೇ ಬೇರೆ. ಪಾಕಕ್ಕಾಗಿ ಅಗ್ನಿಯ ಉಪಯೋಗವು ಆರಂಭವಾದ ಮೇಲೆಯೇ ಮಾನವನ ಶಿರಸ್ಸಿನ ಗಾತ್ರವೂ ದೊಡ್ಡದಾಗಿದೆಯೆಂದೂ ವಿಜ್ಞಾನಿಗಳು ನಿರೂಪಿಸುವುದುಂಟು. ಪಾಕಗೃಹದ ನಿರ್ವಣವಾಗುತ್ತಲೇ ಸಾಮಾಜಿಕ ಸ್ತೋಮವೂ ವಿಸ್ತಾರಗೊಂಡುದು ಎಂದೂ ಅವರು ಹೇಳುತ್ತಾರೆ. ಲೋಹಮಯವಾದ ಆಯುಧಗಳನ್ನೂ ಕೃಷ್ಯುಪಕರಣಗಳನ್ನೂ ತಯಾರಿಸಿಕೊಳ್ಳಲು ಅಗ್ನಿಯ ಬಳಕೆಯಾದುದು ಮತ್ತೂ ಮುಂದಿನ ಹೆಜ್ಜೆಯೇ. ಆದರೆ ಮನುಷ್ಯನ ಆಧ್ಯಾತ್ಮಿಕ ಪ್ರಗತಿಯ ದೃಷ್ಟಿಯಿಂದ ನೋಡುವಾಗ ತೋರುವ ವಿಷಯಗಳೇ ಬೇರೆ.
ಏನು ಆಧ್ಯಾತ್ಮಿಕ ಪ್ರಗತಿಯೆಂದರೆ? ಲೌಕಿಕವೆಂಬುದು ಆಧ್ಯಾತ್ಮಿಕಕ್ಕೆ ವಿರುದ್ಧವೋ? - ಎಂಬ ಪ್ರಶ್ನೆಗಳೂ ಕೇಳಬಹುದಾದಂತಹವೇ. ವಿರೋಧವೆಂಬುದು ಉಂಟೆಂಬುದನ್ನೂ ಇಲ್ಲವೆಂಬುದನ್ನೂ ಮನಗಾಣಬಹುದು. ಹೇಗೆ ಉಂಟು, ಹೇಗಿಲ್ಲ? - ಎಂಬುದನ್ನೊಂದು ಉದಾಹರಣೆಯ ಮೂಲಕ ನೋಡಬಹುದು. ಬೇಕಾದಷ್ಟು ಐಶ್ವರ್ಯವುಳ್ಳವನು ದುಷ್ಟನಾದರೆ ಆತನ ಸಿರಿಸಂಪತ್ತೆಲ್ಲವೂ ಇತರರಿಗೆ ತೊಂದರೆಗೇ; ಸಜ್ಜನನಾದರೆ ಪರೋಪಕಾರಕ್ಕೇ ಆದೀತು, ಅಲ್ಲವೇ? ದೇಹೇಂದ್ರಿಯ, ಮನೋಬುದ್ಧಿಗಳ ಉತ್ಕರ್ಷವೂ ಐಶ್ವರ್ಯದಂತೆಯೇ ಸದುಪಯೋಗಕ್ಕೂ ದುರುಪಯೋಗಕ್ಕೂ ಆಗಬಹುದು. ಆತ್ಮೋತ್ಕರ್ಷವಿದ್ದಾಗ ಸತ್ಪ್ರವೃತ್ತಿ, ಇಲ್ಲದಿದ್ದಾಗ ದುಷ್ಪ್ರವೃತ್ತಿ. ಆತ್ಮೋತ್ಕರ್ಷವಿಲ್ಲದಿದ್ದಾಗ ಪ್ರಾಕೃತಿಕ ಪದಾರ್ಥಗಳಿಗೆ ಸಾಧಾರಣೋಪ ಯೋಗಮಾತ್ರವೇ. ಅದಿದ್ದಾಗ ಸಾಧಾರಣ-ವಸ್ತುಗಳಲ್ಲೂ ಅಡಗಿರುವ ಅಸಾಧಾರಣಶಕ್ತಿಯು ಗೋಚರವಾಗಬಹುದು.
ಎಂದೇ ಅಗ್ನಿಯು ಕೇವಲ ಸುಡುವ ವಸ್ತುವಾಗಿ ಕಾಣದೆ, ಅದು ಭಗವತ್ ಪ್ರತೀಕವಾಗಿಯೂ ತೋರಬಹುದು. ಹೇಗೆ? ಅಗ್ನಿಯ ಹರಿವು ಸದಾ ಮೇಲ್ಮುಖವಾಗಿಯೇ. ಅಗ್ರಸ್ಥಾನಕ್ಕೆ ಯಾವುದು ಒಯ್ಯುವುದೋ ಅದುವೇ ಅಗ್ನಿ (ಅಗ್ರಂ ನಯತಿ). ಅಧೋಗತಿಯನ್ನು ಹೊಂದಿರುವ ನಮಗೆ ಊರ್ಧ್ವಗತಿಯನ್ನು ಉಂಟುಮಾಡುವವನೇ ಪರಮಾತ್ಮ; ಅಥವಾ ಆತನ ಆಶಯವನ್ನೇ ಹೊತ್ತುಬಂದಿರುವ ಗುರು. ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ ಜೀವನದ ಮೂಲನೆಲೆಗೆ, ಕರೆದುಕೊಂಡು ಹೋಗುವುದೇ ಅಗ್ನಿ.
ಯೋಗ-ಆಯುರ್ವೆದಗಳಲ್ಲಿ ಒಳಗಿನ ಅಗ್ನಿಯನ್ನೂ ಹೇಳುವುದುಂಟು. ಜಠರಾಗ್ನಿಯೆಂಬುದು ತನಗರ್ಪಿತವಾದ ಆಹಾರವೆಲ್ಲವನ್ನೂ ಶರೀರದ ಅಂಗಗಳಿಗೆಲ್ಲಕ್ಕೂ ತಲುಪಿಸುವುದಲ್ಲವೇ? ಸಮರ್ಪಿತವಾದ ಸರ್ವಾಹುತಿಗಳನ್ನೂ ಯಜ್ಞಾಗ್ನಿಯೂ ಹಾಗೆಯೇ ಆಯಾ ದೇವತೆಗಳಿಗೆ ತಲುಪಿಸುವುದು. ಇನ್ನು ಯೋಗಾಗ್ನಿಯೆಂಬುದು ಹಲವು ಕಲ್ಮಷಗಳನ್ನು ದಹಿಸಬಲ್ಲುದೆಂಬುದನ್ನು ಶ್ವೇತಾಶ್ವತರೋಪನಿಷತ್ತು ಹೇಳುವುದು. ಜ್ಞಾನಾಗ್ನಿಯು ಸರ್ವಕರ್ಮಗಳನ್ನು ಸುಟ್ಟುಬಿಡುವುದೆಂದು ಭಗವದ್ಗೀತೆಯು ಹೇಳುವುದು.
ಜೀವನದ ಮೂಲಜ್ಯೋತಿಯಾದ ಅಗ್ನಿಯನ್ನೇ ಬಯಸಿರಿ ಎಂಬುದಾಗಿ ಭಾರತೀಯರೆಲ್ಲರಿಗೂ ಕೊಡುವ ವೇದಸಂದೇಶವೇ ‘ಅಗ್ನಿಮಿಚ್ಛಧ್ವಂ ಭಾರತಾಃ!’ ಎಂಬ ತೈತ್ತಿರೀಯಾರಣ್ಯಕದಲ್ಲಿಯ ನುಡಿ. ಪ್ರಣವಜ್ಯೋತಿಯನ್ನೇ ಬಯಸುವುದಕ್ಕೆ ಪ್ರೇರಣೆಕೊಡುವ ಮಾತಿದು! ಎಂಬುದಾಗಿ ಯೋಗಿವರ್ಯರಾದ ಶ್ರೀರಂಗಮಹಾಗುರುಗಳ ಕೊಂಡಾಟಕ್ಕೆ ಪಾತ್ರವಾದ ವೇದೋಕ್ತಿಯಿದು.
ಹೀಗೆ ಅಗ್ನಿಯೆಂಬುದು ತೀರಸಾಧಾರಣವಾದ ಆಧಿಭೌತಿಕವಸ್ತುವೆನಿಸಿದರೂ, ಇತ್ತ ಯಜ್ಞಾಗ್ನಿಯಾಗಿಯೂ ಅತ್ತ ಯೋಗಾಗ್ನಿಯಾಗಿಯೂ ಆಗಿದ್ದು, ಆಧಿದೈವಿಕ- ಆಧ್ಯಾತ್ಮಿಕ ಸ್ತರಗಳಲ್ಲಿಯೂ ಉತ್ಕರ್ಷಕಾರಕ ವಾದ ಪ್ರಭಾವವುಳ್ಳ ಪರಮಪ್ರಕಾಶವೂ ಆಗಿದೆ!
(ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)