(ಲೇಖಕರು ಹವ್ಯಾಸಿ ಬರಹಗಾರರು)
ಪುರಾಣ ಭಾಸ್ಕರರಾದ ಸೂತರು ಹಾಗೂ ಮಹರ್ಷಿ ಶೌನಕರ ಸಂಭಾಷಣೆಯಲ್ಲಿ ಸನಾತನ ಪುರಾಣ ಶಾಸ್ತ್ರಗಳ ವಿಷಯವಷ್ಟೇ ಅಲ್ಲದೆ ಆಸ್ತಿಕ ಪ್ರಪಂಚಕ್ಕೇ ಮಾರ್ಗದರ್ಶನ ನೀಡುವ ಮೂಲಕ ಅನೇಕ ವ್ರತಗಳನ್ನು, ಅವುಗಳ ಪುರಾಣೋಕ್ತ ಹಿನ್ನೆಲೆಯನ್ನು ಹಾಗೂ ವಿಧಿವಿಧಾನಗಳನ್ನು ತಿಳಿಸಿಕೊಟ್ಟಿದ್ದಾರೆ. "ಬಡತನ, ಅನಾರೋಗ್ಯ ಹೀಗೆ ಅನೇಕ ಕಷ್ಟಕಾರ್ಪಣ್ಯಗಳಿಂದ ಜನರು ತೊಂದರೆಯಲ್ಲಿದ್ದಾರೆ. ಇಂತಹ ಉಪದ್ರವಗಳಿಂದ ಆ ಜನರಿಗೆ ಪರಿಹಾರ ಹೇಗೆ? ಪಾಪಗಳನ್ನೆಲ್ಲ ಕಳೆದುಕೊಂಡು ಜ್ಞಾನ, ಪುತ್ರಪೌತ್ರಾದಿ, ಸಮೃದ್ಧಿಗಳನ್ನು ಹೊಂದುವ ಯಾವುದಾದರೂ ವ್ರತೋಪವಾಸವಿದ್ದರೆ ದಯವಿಟ್ಟು ತಿಳಿಸಿ' ಎಂದು ಶೌನಕರು ಕೇಳಿದಾಗ ಸೂತಮಹರ್ಷಿಗಳು ಉಪದೇಶಿಸಿದ ಶ್ರೀಲಕ್ಷ್ಮಿನಾರಾಯಣರ ವಿಶೇಷ ಅನುಗ್ರಹ ಪ್ರಾಪ್ತಿಯಾಗುವ ಶ್ರೇಷ್ಠ ವ್ರತವೇ ಶ್ರೀವರಮಹಾಲಕ್ಷ್ಮಿ ವ್ರತ.
ವರಲಕ್ಷ್ಮಿ ವ್ರತಾಚರಣೆ ಎಂದು?
ಪ್ರತಿ ವರ್ಷವೂ ಸಾಮಾನ್ಯವಾಗಿ ಶ್ರಾವಣದ ಎರಡನೇ ಶುಕ್ರವಾರವೇ ವರಮಹಾಲಕ್ಷ್ಮಿ ಆಚರಣೆ ಇರುತ್ತದೆ. ಕೆಲವು ಬಾರಿ ಐದು ಶುಕ್ರವಾರಗಳು ಬಂದಾಗ ಜನರಿಗೆ ಗೊಂದಲವಾಗುವುದುಂಟು.
"ಪೂರ್ಣಿಮೋಪಾಂತ್ಯಭಾರ್ಗವೇ' ಎಂದು ಭವಿಷ್ಯೋತ್ತರ ಪುರಾಣದ ವಚನವಿದೆ. ಅಂತೆಯೇ "ಹುಣ್ಣಿಮೆಗೆ ಹತ್ತಿರದ ಶುಕ್ರವಾರದಲ್ಲಿ' ಎಂದು ಹೇಳುವ ಈ ವಚನ ಗೊಂದಲಗಳನ್ನು ಪರಿಹರಿಸುತ್ತದೆ. ಈ ಬಾರಿಯೂ ಐದು ಶುಕ್ರವಾರಗಳಿವೆ. ಕೆಲವು ಸಂಪ್ರದಾಯಗಳಲ್ಲಿ ಹುಣ್ಣಿಮೆಯ ದಿನವಾದ ಮೂರನೇ ಶುಕ್ರವಾರ ವ್ರತಾಚರಣೆ ಇದೆ. ಕೆಲವು ಸಂಪ್ರದಾಯಗಳಲ್ಲಿ, ಮೂರನೇ ಶುಕ್ರವಾರದಂದು ಹುಣ್ಣಿಮೆಯು ತುಂಬ ಕಡಿಮೆ ಸಮಯ ಬಂದಿದೆ ಎಂದು ಎರಡನೇ ಶುಕ್ರವಾರ ಆಚರಣೆ ಮಾಡುತ್ತಿದ್ದಾರೆ. ಅವರವರ ಪರಂಪರೆಯಂತೆ ಅವರು ಅನುಸರಿಸಿ, ಆಚರಿಸುವುದು ಉತ್ತಮ.
ವ್ರತಾನುಷ್ಠಾನ: ಗುರು-ಹಿರಿಯರಿಗೆ ನಮಸ್ಕರಿಸಿ. ಪೂಜೆಯು ನಿರ್ವಿಘ್ನವಾಗಿ ಸಾಗಲೆಂದು ಆದಿಯಲ್ಲಿ ವಿಘ್ನೇಶ್ವರನನ್ನು ಪ್ರಾರ್ಥಿಸಿ ಗಣಪತಿ ಪೂಜೆಯನ್ನು ಮಾಡಬೇಕು. ಈ ಪೂಜೆಯ ಪ್ರಾರಂಭದಲ್ಲಿ ಮಾಡುವುದು ಯಮುನಾ ಪೂಜೆ. ಸಾಮಾನ್ಯವಾಗಿ ಎಲ್ಲ ವ್ರತಗಳನ್ನು ನದಿಯ ತೀರದಲ್ಲಿ ಆಚರಿಸಬೇಕೆಂದು ಶಾಸ್ತ್ರಗಳು ತಿಳಿಸಿವೆ. ಆದರೆ ಇಂದಿನ ಪರಿಸ್ಥಿತಿಗಳಲ್ಲಿ ಅದು ಸಾಧ್ಯವಿಲ್ಲವೆಂದು ಸಕಲ ತೀರ್ಥಗಳ ಸನ್ನಿಧಾನವಿರುವ ತುಳಸಿ ಬೃಂದಾವನದ ಸಮೀಪದಲ್ಲಿ ಯಮುನಾ ಕಳಶವನ್ನು ಸ್ಥಾಪಿಸಬೇಕು. ಆ ಕಲಶವನ್ನು ಮನೆಯ ಸುಮಂಗಲಿಯರು ತೆಗೆದುಕೊಂಡು ಮುಂಬಾಗಿಲಿನಿಂದ ಮನೆಯ ಒಳಗೆ ಪ್ರವೇಶಿಸಬೇಕು. ವರಮಹಾಲಕ್ಷ್ಮಿಯ ಪೂಜೆಗೆಂದು ಅಲಂಕೃತವಾದ ಮಂಟಪದಲ್ಲಿ ಇಟ್ಟು, ಅದರ ಮುಂದೆ ಮತ್ತೊಂದು ಕಳಶವನ್ನು ಇಟ್ಟು ಅದರಲ್ಲಿ ಶ್ರೀಲಕ್ಷ್ಮಿನಾರಾಯಣರಿಬ್ಬರ ಆವಾಹನೆಯನ್ನು ಮಾಡಿ ಪೂಜಿಸಬೇಕು. ಹೀಗೆ ಯಮುನಾ ಪೂಜೆಯ ನಂತರ ಮಹಾಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವ ಕಲಶಕ್ಕೆ ವಿಧಿವತ್ತಾಗಿ ಷೋಡಶೋಪಚಾರ ಪೂಜೆಯನ್ನು ಪ್ರಾರಂಭಿಸಬೇಕು. ಕಲಶಕ್ಕೆ ನಾರಾಯಣ ಅಷ್ಟಾಕ್ಷರ ಮಂತ್ರದಿಂದ ಅಭಿಮಂತ್ರಣ. ನಂತರ ಮಂಟಪದ ಪೂಜೆ. ಕಲಶದಲ್ಲಿ ಶುದ್ಧವಾದ ನೀರನ್ನು ತುಂಬಿಸಿ ಅರಿಶಿಣ, ಕುಂಕುಮ, ಗಂಧ, ಅಕ್ಷತೆ, ಹೂವು ಮೊದಲಾದ ಮಂಗಲ ದ್ರವ್ಯಗಳನ್ನು ಹಾಕಿ ಪೂಜಿಸಬೇಕು.
ಸರಸ್ವತಿಯನ್ನು ವಿದ್ಯೆಗಾಗಿ, ಲಕ್ಷ್ಮಿದೇವಿಯನ್ನು ಧನಕ್ಕಾಗಿ ಪೂಜೆ ಎಂಬ ಸಂಕುಚಿತ ಆಚರಣೆಯನ್ನು ಬೆಳೆಸಿಕೊಂಡಿದ್ದೇವೆ. ಜಗನ್ಮಾತೆಯಾದ ಮಹಾಲಕ್ಷ್ಮಿಯು ಸರ್ವ ಸಂಪತ್ತನ್ನೂ ನೀಡುತ್ತಾಳೆ. ಅದು ಜ್ಞಾನ, ಸಜ್ಜನಿಕೆ, ಸದಾ ಸಮಾಜದ ಒಳಿತಿಗಾಗಿ ಶ್ರಮಿಸುವ ಸುಸ್ವಭಾವದ ಸಂಪತ್ತು. ಈ ಪ್ರಾರ್ಥನೆಯಲ್ಲಿ ಧನಧಾನ್ಯ ಸಂಪತ್ತು ಅನಾಯಾಸವಾಗಿಯೇ ದೊರೆಯುತ್ತದೆ. ಜ್ಞಾನವನ್ನು ಪ್ರಾರ್ಥಿಸುತ್ತ ಅಷ್ಟೈಶ್ವರ್ಯವನ್ನು ಅನುಗ್ರಹಿಸುವ ಜಗನ್ಮಾತೆಯಾದ ವರಮಹಾಲಕ್ಷ್ಮಿ ಪೂಜೆ ಭಕ್ತಿ, ಶ್ರದ್ಧೆಯಿಂದ ಸಂಪನ್ನಗೊಳ್ಳಲಿ.
ಈ ವರಮಹಾಲಕ್ಷ್ಮಿ ಪೂಜೆಗೆ ಸಂಪ್ರದಾಯಗಳು ಅನೇಕ. ಕೆಲವರು ಲಕ್ಷ್ಮಿದೇವಿಯ ಪ್ರತಿಮೆಯನ್ನು ಪೂಜಿಸುತ್ತಾರೆ. ಇನ್ನು ಕೆಲವರು ಕಲಶದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುತ್ತಾರೆ. ವ್ರತಬದ್ಧರಾಗಲು ಕಂಕಣ ಬಂಧನವನ್ನು ವಿಧಿಸಿದ್ದಾರೆ. ಅಂತೆಯೇ 9 ಅಥವಾ 12 ಎಳೆಯ ದಾರವನ್ನು ಅರಿಶಿಣದಲ್ಲಿ ನೆನೆಸಿ ವೀಳ್ಯದೆಲೆಯ ಮೇಲಿರಿಸಿ ದೇವಿಯ ಮುಂದಿಟ್ಟು ಪೂಜಿಸಬೇಕು. ಕಲಶದಲ್ಲಿ ಧ್ಯಾನ, ಆವಾಹನ, ಪಂಚಾಮೃತ ಸ್ನಾನ ಇತ್ಯಾದಿಗಳನ್ನು ಮಾಡಬೇಕು. ನಂತರ ಅದನ್ನು ಶುದ್ಧಿಗೊಳಿಸಿ ವಸ್ತ್ರ, ಮಂಗಳಸೂತ್ರ, ಗೆಜ್ಜೆವಸ್ತ್ರ ಹಾಗೂ ಯಥಾಶಕ್ತಿ ಅನೇಕ ಆಭರಣಗಳಿಂದ ಅಲಂಕರಿಸಿ ಪೂಜಿಸಬೇಕು. ಸೌಭಾಗ್ಯ ದ್ರವ್ಯಗಳಾದ ಅರಿಶಿಣ, ಕುಂಕುಮ ಅಕ್ಷತೆಗಳನ್ನು ಸಮರ್ಪಿಸಬೇಕು. ಕಮಲ, ಮಲ್ಲಿಗೆ, ಕೇದಿಗೆ, ಜಾಜಿ, ಸಂಪಿಗೆ, ಸೇವಂತಿಗೆ ಮೊದಲಾದ ಸುಗಂಧಪುಷ್ಪಗಳನ್ನು ಅರ್ಪಿಸಬೇಕು. ಮಂತ್ರಾಕ್ಷತೆ ಹೂವುಗಳನ್ನು ಹಾಕುತ್ತ ಲಕ್ಷ್ಮಿದೇವಿಯ ಅಂಗಪೂಜೆಯನ್ನು ಮಾಡಬೇಕು. ದೇವಿಯ ಮುಂದಿರಿಸಿದ ದಾರಕ್ಕೆ ಲಕ್ಷ್ಮಿದೇವಿಯ 9 ನಾಮಗಳಿಂದ ದೋರ ಗ್ರಂಥ ಪೂಜೆಯನ್ನು ಮಾಡಬೇಕು.
ನಾನಾವಿಧವಾದ ಪತ್ರಗಳನ್ನು ಅರ್ಪಿಸಬೇಕು. ಸ್ತ್ರೀಯರು ಶ್ರೀವರಲಕ್ಷ್ಮಿ ಕಲಶದ ಮುಂದೆ ಒಂದು ತಟ್ಟೆಯನ್ನಿಟ್ಟು ಅಲ್ಲಿ ಹೂವುಗಳಿಂದ ಅಥವಾ ಕುಂಕುಮದಿಂದ ಶತನಾಮ ಪೂಜೆಯ ಅರ್ಚನೆಯನ್ನು ಮಾಡಬೇಕು. ದೀಪ-ಧೂಪಾದಿಗಳನ್ನು ಸಮರ್ಪಿಸಬೇಕು. ಲಕ್ಷ್ಮಿ ದೇವಿಗೆ ಉಡಿಯನ್ನು ತುಂಬಿದ ನಂತರ ನೈವೇದ್ಯ ಅರ್ಪಿಸಬೇಕು. ವರಮಹಾಲಕ್ಷ್ಮಿಗೆ ನಾನಾ ತರಹದ ಭಕ್ಷ್ಯಗಳನ್ನು ಅದರಲ್ಲಿಯೂ ಮುಖ್ಯವಾಗಿ ಶಾವಿಗೆಯ ಪಾಯಸ ಹಾಗೂ ಕಡಲೆ ಹೂರಣದ ಹೋಳಿಗೆಯನ್ನು ನಿವೇದಿಸುವುದು ಶ್ರೇಷ್ಠವೆಂದಿದ್ದಾರೆ. ವಿಹಿತವಾದ ಹಣ್ಣುಗಳು, ತಾಂಬೂಲವನ್ನು ನಿವೇದಿಸಬೇಕು. ಅನುಕೂಲವಿದ್ದವರು ಹೂರಣದಲ್ಲಿಯೇ ಆರತಿಯನ್ನು ಮಾಡಬೇಕು. ಇಲ್ಲದಿದ್ದರೆ ತುಪ್ಪದ ಬತ್ತಿಯಿಂದಲೂ ಮಂಗಳಾರತಿಯನ್ನು ಮಾಡಬಹುದು. ಕೊನೆಗೆ ಮಂತ್ರಾಕ್ಷತೆ, ಹೂಗಳನ್ನು ಹಿಡಿದುಕೊಂಡು ಪ್ರಾರ್ಥಿಸಿ, ಪೂಜೆಯ ಸಮಾಪನೆಯನ್ನು ಮಾಡುವುದು. ಕೊನೆಯಲ್ಲಿ ಪೂಜಿಸಿದ ದಾರವನ್ನು ಹಿರಿಯ ಮುತೈದೆಯರಿಂದ ಅಥವಾ ಪತಿಯ ಕೈಯಿಂದ ಹೂವಿನೊಂದಿಗೆ ಸೇರಿಸಿ ಬಲಗೈಗೆ ಕಟ್ಟಿಸಿಕೊಳ್ಳಬೇಕು.