ನಾವು ಸುಖವಾಗಿರಲು ಅನೇಕ ವಸ್ತುಗಳು ಬೇಕೆಂದು ಭಾವಿಸುತ್ತೇವೆ. ಆದರೆ ಆ ವಸ್ತುವಿನಿಂದ ಸಂತೋಷ ಅಥವಾ ದುಃಖವು ಬರುವುದಿಲ್ಲ. ನಮ್ಮ ಸುಖ ದುಃಖಕ್ಕೆ ಕಾರಣ ವಸ್ತುವಿನಲ್ಲಿ ಸುಖವಿದೆಯೆಂಬ ಭ್ರಮೆ. ಹೊರಜಗತ್ತಿನ ಎಲ್ಲ ಸುಖಗಳನ್ನು ಅನುಭವಿಸಬೇಕೆಂಬ ಆಸೆ ನಮಗಿದೆ. ಆದರೆ ಅದು ಸಾಧ್ಯವಾಗದು.
ಈ ಜಗತ್ತಿನಲ್ಲಿ ನಾಳೆ ಏನಾಗುತ್ತದೆಂಬುದು ಯಾರಿಗೂ ಗೊತ್ತಿಲ್ಲ. ನಾವು ಏನೇನೆಲ್ಲಾ ಕಲ್ಪಿಸಬಹುದು. ಆದರೆ ಅದು ನಡೆದೇ ತೀರುತ್ತದೆಂದು ಖಚಿತವಾಗಿ ಹೇಳಲು ಆಗದು. ನಮ್ಮ ಮನಸ್ಸಿನಲ್ಲಿರುವ ವೃತ್ತಿಗಳು ನಮಗೆ ತಿಳಿಯದಂತೆ ಹಳೆಯ ಜೀವನ ಶೈಲಿಯನ್ನು ಅನುಸರಿಸಿ ಉದ್ಭವಿಸುತ್ತವೆ. ಅವನ್ನು ತಡೆಯಲು ಸಾಧ್ಯವಿಲ್ಲ. ಆದರೆ ಒಮ್ಮೆ ಆ ವೃತ್ತಿ ಉದಯಿಸಿತು ಎಂದು ನನಗೆ ಗೋಚರವಾದಾಗ ಅದನ್ನು ನಿಗ್ರಹಿಸುವುದು ನಮ್ಮ ಹಿಡಿತದಲ್ಲಿದೆ. ಅಲ್ಲಿ ನಾವು ಎಚ್ಚರವಾಗದಿದ್ದರೆ ಅದರಿಂದ ಅನಾಹುತವಾಗುತ್ತದೆ. ವೃತ್ತಿಗಳು ಸಣ್ಣ ಅಲೆಗಳಂತೆ ನಮ್ಮಲ್ಲಿ ಹುಟ್ಟುತ್ತವೆ ನಂತರ ಒಂದೊಂದು ಸೇರಿ ಸಮುದ್ರವಾಗುತ್ತವೆೆ.
ಸಮುದ್ರವನ್ನು ದಾಟುವುದು ಕಠಿಣ. ಜ್ಞಾನಿಯು ಮನಸ್ಸಿನ ವೃತ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದಿಲ್ಲ. ಸದ್ವಿಚಾರವನ್ನು ಹೆಚ್ಚು ರೂಢಿಸಿಕೊಂಡರೆ ಆಗ ಮನಸ್ಸಿನಲ್ಲಿ ಒಳ್ಳೆಯ ವೃತ್ತಿಗಳೇ ಹುಟ್ಟುತ್ತವೆ. ನಮ್ಮ ವೃತ್ತಿಗಳು ಇದ್ದ ಹಾಗೆ ನಮ್ಮ ಮನಸ್ಸು. ವೃತ್ತಿಗಳನ್ನು ಬದಲಿಸಿದರೆ ಮನಸ್ಸು ಬದಲಾಗುತ್ತದೆ. ಸತ್ಸಂಗ, ಜಪ, ಪೂಜೆ, ಧ್ಯಾನ, ಸೇವೆ ಇವು ಸದ್ ವೃತ್ತಿಗಳು. ಕಣ್ಣು ಕಂಡದ್ದನ್ನು ಬೇಕು ಎನ್ನುವುದು, ಕಿವಿ ಕೇಳಿದ್ದನ್ನು ಮತ್ತೆ ಬಯಸುವುದು ಪ್ರಕೃತಿಯ ಸಹಜ ಧರ್ಮ. ಸಾಧಕನಾದವನು ಅದನ್ನು ಅಧೀನದಲ್ಲಿ ಇಟ್ಟುಕೊಂಡಾಗ ಅದನ್ನು ನಿಗ್ರಹವೆಂದು ಕರೆಯುತ್ತೇವೆ.
ಇದರಿಂದಾಗುವ ಪ್ರಯೋಜನವೇನು? ಮಳೆ ಎಲ್ಲಾ ಕಡೆ ಬೀಳುತ್ತದೆ. ನಂತರ ಬಿದ್ದ ಹನಿ ಒಂದೆಡೆ ಸೇರಿ ಕೆರೆಯಾಗುತ್ತದೆ. ಅದು ಹಾಗೇ ಹರಿದು ನದಿಯಾಗುತ್ತದೆ. ಆ ನದಿಗೆ ಅಣೆಕಟ್ಟನ್ನು ಕಟ್ಟಿ ನಮಗೆ ಬೇಕಾದ ಹಾಗೆ ನೀರನ್ನು ಉಪಯೋಗಿಸಬಹುದು. ಹೀಗೆ ನಾವು ಸಾಧನೆಯ ಮುಖಾಂತರ ಪ್ರಾಪಂಚಿಕ ವಸ್ತುಗಳನ್ನು ತಡೆದು ಸದುಪಯೋಗ ಪಡೆದುಕೊಂಡರೆ ಆಗ ಲೋಕದಲ್ಲಿ ಶಾಂತಿ ನೆಲೆಸುತ್ತದೆ.