Shri Rambhakta Thyagaraja 
ಧಾರ್ಮಿಕ

ಸಂಗೀತಕ್ಷೇತ್ರದ ಧ್ರುವತಾರೆ ಶ್ರೀರಾಮಭಕ್ತ ತ್ಯಾಗರಾಜರು

ಕರ್ಣಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜ ಸ್ವಾಮಿಗಳು ತಮ್ಮ ಭಕ್ತಿಭರಿತರಚನೆಗಳಿಂದ ಸಂಗೀತ ಕ್ಷೇತ್ರದ ಧ್ರುವತಾರೆಯಾಗಿದ್ದಾರೆ. ಸಾಮಾನ್ಯ ಜನರಿಗೂ ಸುಲಭವಾಗಿ ರಸಾನಂದವನ್ನು ದೊರಕಿಸಿಕೊಡುವ, ಪ್ರಾರಂಭಿಕವಾದ ಅಭ್ಯಾಸಕ್ಕಷ್ಟೇ ಅಲ್ಲದೆ ಪ್ರೌಢವಾದ ವಿನ್ಯಾಸಕ್ಕೂ ಸಲ್ಲುವ ಅವರ ಕೃತಿಗಳನ್ನು ತಿಳಿಯದ ಸಂಗೀತರಸಿಕರೂ, ಅವರ ಕೃತಿಗಳು ಕೇಳಿಬರದ ಸಂಗೀತಕಛೇರಿಗಳೂ ಇಲ್ಲವೆಂದು ಹೇಳಿದರೆ ಅತಿಶಯೋಕ್ತಿಯಲ್ಲ.
1767ರಲ್ಲಿ ರಾಮಬ್ರಹ್ಮ ಮತ್ತು ಸೀತಮ್ಮ ಎಂಬ ದಂಪತಿಗಳಿಗೆ ತಮಿಳುನಾಡಿನ ತಿರುವಾರೂರಿನಲ್ಲಿ ಜನಿಸಿದ ತ್ಯಾಗರಾಜರು ಚಿಕ್ಕ ವಯಸ್ಸಿನಿಂದಲೇ ವಂಶಪಾರಂಪರ್ಯವಾಗಿ ಬಂದ ರಾಮಭಕ್ತಿಯನ್ನೂ ಸಂಗೀತದಲ್ಲಿ ರಕ್ತಿಯನ್ನೂ ಬೆಳೆಸಿಕೊಂಡರು. ಸೊಂಟಿ ವೆಂಕಟರಮಣಯ್ಯನವರಲ್ಲಿ ಶಿಷ್ಯವೃತ್ತಿಯನ್ನು ಕೈಕೊಂಡ ಅವರು ಶೀಘ್ರದಲ್ಲಿಯೇ ಸ್ವತಂತ್ರವಾಗಿ ಕೃತಿಗಳನ್ನು ರಚಿಸಲೂ ಪ್ರಾರಂಭಿಸಿದರು. ದೇಶ್ಯತೋಡಿ ರಾಗದ ‘ನಮೋ ನಮೋ ರಾಘವಾಯ ಅನಿಶಂ’ ಎಂಬ ಕೃತಿಯಿಂದ ಮೊದಲಾದ ಅವರ ಕೃತಿರಚನಾಕೈಂಕರ್ಯ ಸಂಗೀತಸಾಮ್ರಾಜ್ಯದ ಮೇರೆಯನ್ನು ವಿಸ್ತರಿಸಿದ್ದಷ್ಟೇ ಅಲ್ಲದೆ, ಭಕ್ತಿಯ ಅಭಿವ್ಯಕ್ತಿಗೆ ಈಗಾಗಲೇ ಇದ್ದ ಸಂಗೀತದ ದಾರಿಯನ್ನು ‘ಚಕ್ಕನಿ ರಾಜಮಾರ್ಗಮು’ - ಒಳ್ಳೆಯ ರಾಜಮಾರ್ಗವನ್ನಾಗಿಸಿತು. ಅಲ್ಲದೆ, ತುಂಬುರುವಿನ ಅವತಾರವೆಂದೇ ಪರಿಗಣಿತರಾದ ತ್ಯಾಗರಾಜರು ನಾರದಮಹರ್ಷಿಗಳಿಂದ ಪ್ರಣೀತವಾದ ಸ್ವರಾರ್ಣವ ಎಂಬ ಗ್ರಂಥವನ್ನು ಪಡೆದು, ಅಪರೂಪದ ರಾಗಗಳನ್ನು ಹೃದ್ಗತ ಮಾಡಿಕೊಂಡರೆಂದು ಪ್ರತೀತಿ.
ತ್ಯಾಗರಾಜರ ಭಕ್ತಿಭಾವ-ದಿವ್ಯಾನುಭೂತಿ ಗಳಷ್ಟೇ ಅಲ್ಲದೆ ಅವರು ಕಂಡ ವಿವಿಧವರ್ಣಮಯ ವಾದ ಪ್ರಪಂಚವೂ, ತತ್ಪಲವಾಗಿ ಅನ್ಯಾದೃಶವಾದ ವೈವಿಧ್ಯವೂ ಅವರ ಕೃತಿಗಳಲ್ಲಿ ಕಾಣಸಿಗುತ್ತದೆ. ಸುಲಭವಾದ ಸ್ವರಮಟ್ಟನ್ನು ಹೊಂದಿರುವ, ನಾಮಸಂಕೀರ್ತನೆಗೆ ಅನುಕೂಲಿಸುವಂತಹ ಕೃತಿಗಳನ್ನೂ, ಪ್ರೌಢ ಸಾಹಿತ್ಯ, ಕ್ಲಿಷ್ಟವಾದ ಸಂಗೀತಸಂಯೋಜನೆಯನ್ನು ಒಳಗೊಂಡ ಕೃತಿಗಳನ್ನೂ ಅವರು ರಚಿಸಿದ್ದಾರೆ. ಸದ್ಯೋರ ಸಸಿದ್ಧಿಯನ್ನು ಒದಗಿಸುತ್ತವೆ ಎಂಬುದೇ ಈ ಎಲ್ಲ ರಚನೆಗಳಲ್ಲಿಯೂ ಸಾಮಾನ್ಯವಾದ ಅಂಶ. ಹೀಗಾಗಿ, ತ್ಯಾಗರಾಜರ ರಚನೆಗಳನ್ನು ಸಾಮಾನ್ಯವಾಗಿ ‘ದ್ರಾಕ್ಷಾಪಾಕ’ ಎಂದು ಕರೆಯುವುದುಂಟು. ದ್ರಾಕ್ಷಿಯ ಹಣ್ಣನ್ನು ಸವಿಯುವ ತೆರದಲ್ಲಿ ಶ್ರಮವೇ ಇಲ್ಲದೆ ಒಡನೆಯೇ ಆನಂದವನ್ನು ಪಡೆಯಬಹುದು ಎಂಬುದು ಇದರ ತಾತ್ಪರ್ಯ.
ತ್ಯಾಗರಾಜರ ಕೃತಿಗಳ ಬಹುಪಾಲು ಅವರ ಆರಾಧ್ಯದೈವವಾದ ಶ್ರೀರಾಮಚಂದ್ರನಿಗೇ ಮೀಸಲಾಗಿವೆ. ಇಪ್ಪತ್ತೊಂದು ವರ್ಷಗಳ ಕಾಲದ ಸತತಪ್ರಯತ್ನದಿಂದ ತೊಂಬತ್ತಾರು ಕೋಟಿ ರಾಮನಾಮವನ್ನು ಅವರು ಜಪಿಸಿದ್ದರು. ದಿನವೆಲ್ಲವನ್ನೂ ಭಗವದ್ಧಾ್ಯನದಲ್ಲಿಯೇ ಕಳೆಯುತ್ತಿದ್ದ ಅವರು ಪೂಜಾಕೈಂಕರ್ಯಗಳನ್ನು ಪ್ರೀತಿಯಿಂದ ಬಣ್ಣಿಸುವ ಉತ್ಸವಸಂಪ್ರದಾಯಕೃತಿಗಳನ್ನೂ, ಹಲವು ದಿವ್ಯನಾಮ ಸಂಕೀರ್ತನೆಗಳನ್ನೂ ರಚಿಸಿದ್ದಾರೆ. ಭಗವಂತನ ನಡೆನುಡಿಗಳನ್ನು, ಸೌಂದರ್ಯವನ್ನು, ಕೀರ್ತಿಯನ್ನು ಕೊಂಡಾಡುತ್ತ ಅವನನ್ನು ‘ಮೇರುಸಮಾನಧೀರ’, ‘ಮೋಹನರಾಮ ಮುಖಜಿತ ಸೋಮ’, ‘ಸುಜನಜೀವನ ಸುಗುಣಭೂಷಣ’ ಎಂದು ಸ್ತುತಿಸುತ್ತಾರೆ. ಭವದ ಬಾಧೆಗಳು ಹೆಚ್ಚಾದಾಗ ‘ಈ ಹರಾಮಿತನ ಮೇಲ’ (ಈ ಹರಾಮಿತನವೇಕೆ?)ಎಂದು ವಿರೋಧ ಭಕ್ತಿಯಿಂದಲೂ ಸ್ಮರಿಸುತ್ತಾರೆ.
ಭಕ್ತಿಯ ಪರಾಕಾಷ್ಠೆಯಲ್ಲಿ ಪ್ರತಿಷ್ಠಿತರಾಗಿ ದ್ದರೂ ವೇದಾಂತಿಯಾದ ತ್ಯಾಗರಾಜರು ‘ತನಲೋನೆ ಧ್ಯಾನಿಂಚಿ ತನ್ಮಯಮುಗಾ ವಲೆರಾ’ (ತನ್ನೊಳಗೇ ಧ್ಯಾನಿಸಿ ತನ್ಮಯ ನಾಗಬೇಕು) ಎಂದೂ ಹಾಡಿದ್ದಾರೆ. ದ್ವೈತ-ಅದ್ವೈತ ಎಂದು ಹೊಡೆದಾಡುವವರ ಮನಮುಟ್ಟುವಂತೆ ‘ದ್ವೈತಮು ಸುಖಮಾ ಅದ್ವೈತಮು ಸುಖಮಾ’ ಎಂದು ಪರಬ್ರಹ್ಮತತ್ತ್ವವನ್ನು ವಿವೇಚಿಸಿದ್ದಾರೆ.
ಶ್ರೀರಾಮಚಂದ್ರನ ಭಕ್ತಿಯಲ್ಲಿ ದಿನದಿನವೂ ಮಿಂದೇಳುತ್ತಿದ್ದ ತ್ಯಾಗರಾಜರಿಗೆ ಐಹಿಕಧನಭೋಗಗಳ ಅಭಿಲಾಷೆ ಇರಲಿಲ್ಲ. ತಂಜಾವೂರಿನ ಶರಭೋಜಿ ಮಹಾರಾಜರು ಅವರನ್ನು ತಮ್ಮ ಆಸ್ಥಾನಕ್ಕೆ ಕರೆಸಲು ಆಹ್ವಾನವನ್ನು ಕಳುಹಿಸಿದರೂ ಇಂದಿದ್ದು ಮುಂದೆ ನಾಶವಾಗುವ ನಿಧಿಗಿಂತ ಶ್ರೀರಾಮನ ಸನ್ನಿಧಿಸೇವೆಗಳೇ ಸುಖವೆಂದು ಬಗೆದು, ತಿರಸ್ಕರಿಸಿದರು.
ಬಡತನದ ಕುಟುಂಬ ಅವರದ್ದಲ್ಲವಾದರೂ, ಹರಿದಾಸರಾಗಿದ್ದ ತ್ಯಾಗರಾಜರು ತಮ್ಮ ಇಚ್ಛೆ ಯಿಂದಲೇ ಉಂಛವೃತ್ತಿಯನ್ನು ಅವಲಂಬಿಸಿದ್ದರು. ಪ್ರತಿದಿನವೂ ಭಗವಂತನ ನಾಮವನ್ನು ಹಾಡುತ್ತ ಭಿಕ್ಷೆಯನ್ನು ಬೇಡಿ ಅದರಿಂದಲೇ ಜೀವನವನ್ನು ಸಾಗಿಸುತ್ತಿದ್ದರು. ತಮ್ಮ ಜೀವನದ ಅಂತ್ಯ ಸಮೀಪಿಸಿರುವುದನ್ನು ಮನಗಂಡು, ಸಂನ್ಯಾಸವನ್ನು ಸ್ವೀಕರಿಸಿ ‘ನಾದಬ್ರಹ್ಮಾನಂದ’ರಾಗಿ, ಪುಷ್ಯಬಹುಳಪಂಚಮಿಯಂದು ಶ್ರೀರಾಮನ ಪಾದಗಳಲ್ಲಿ ಲೀನರಾದರು. ಈ ದಿನದಂದು ಪ್ರತಿವರ್ಷವೂ ತಿರುವಯ್ಯಾರು ಸೇರಿದಂತೆ ಹಲವೆಡೆಗಳಲ್ಲಿ ಸಂಗೀತ ಗಾರರು ಅವರ ಆರಾಧನೆಯನ್ನು ಭಕ್ತಿಯಿಂದ ಆಚರಿಸುತ್ತಾರೆ.
ರಾಮಾಯಣದ ಶ್ಲೋಕಗಳ ಸಂಖ್ಯೆಗೆ ಸಮನಾಗಿ ತ್ಯಾಗರಾಜರು 24000 ಕೃತಿಗಳನ್ನು ರಚಿಸಿದರೆಂದು ಹೇಳುವುದಾದರೂ, ಸುಮಾರು ಏಳುನೂರು ಕೃತಿಗಳು ಈಗ ನಮಗೆ ಲಭ್ಯವಿವೆ. ಅಲ್ಲದೆ, ‘ಪ್ರಹ್ಲಾದಭಕ್ತಿವಿಜಯ’ ಮತ್ತು ‘ನೌಕಾಚರಿತ್ರ’ ಎಂಬ ಎರಡು ಗೇಯರೂಪಕಗಳನ್ನು ಕೂಡ ಅವರು ರಚಿಸಿದ್ದಾರೆ. ಹಳೆಯ ರಾಗಗಳಾದ ಸೌರಾಷ್ಟ್ರ, ಮುಖಾರಿ ಮುಂತಾದ ರಾಗಗಳಷ್ಟೇ ಅಲ್ಲದೆ, ಖರಹರಪ್ರಿಯ, ಕೀರವಾಣಿ ಮೊದಲಾದ ರಾಗಗಳಲ್ಲಿಯೂ ರಚನೆಗಳನ್ನು ಮಾಡಿದ್ದಾರೆ. ಜಿಂಗಲ, ಗರುಡಧ್ವನಿಯಂತಹ ರಾಗಗಳಿಗಂತೂ ತ್ಯಾಗರಾಜರ ಕೃತಿಗಳೇ ಆಧಾರ. ಅವರ ಶಿಷ್ಯಪರಂಪರೆಯೂ ದೊಡ್ಡದಾದ್ದರಿಂದ ಅವರ ಕೃತಿಗಳು ನಮಗೆ ಉಳಿದು ಬಂದಿವೆ.
ಸಂಗೀತ-ಸಾಹಿತ್ಯ ಎರಡರ ದೃಷ್ಟಿಯಿಂದಲೂ ಸಂಗತಿಗಳ ವಿಸ್ತಾರಕ್ಕೂ, ನೆರವಲ್ ಎಂಬ ವಿನ್ಯಾಸಕ್ಕೂ ಚೆನ್ನಾಗಿ ಒದಗಿಬರುವುದು ತ್ಯಾಗರಾಜರ ಕೃತಿಗಳ ಒಂದು ವೈಶಿಷ್ಟ್ಯ. ಬಹುಶಃ ಅವರ ಎಲ್ಲ ಕೃತಿಗಳೂ ಸುಲಭವಾದ, ಶ್ರವಣ ಗ್ರಾಹ್ಯವಾದ ತಾಳಗಳಲ್ಲಿಯೇ ಇರುವುದರಿಂದ ತಾಳದ ಲೆಕ್ಕಾಚಾರಗಳಲ್ಲಿ ಕಳೆದುಹೋಗದೆ ರಾಗದ ಸೌಂದರ್ಯವನ್ನು ಪರಿಭಾವಿಸಲು ಸುಲಭವಾಗುತ್ತದೆ. ತಮ್ಮ ಅಪ್ರತಿಮಪ್ರತಿಭೆಯನ್ನು ಶ್ರೀರಾಮಸೇವೆಗೆ ಮುಡಿಪಾಗಿಟ್ಟ ತ್ಯಾಗರಾಜರ ಸಂಗೀತವು ಪೂಜೆಯಾಗಿ-ಪೂಜೆಗಾಗಿ, ಸಂಗೀತವಿದ್ಯಾರ್ಥಿಗಳಿಗೆ ದಾರಿದೀಪ ವಾಗಿ, ಉಪಜೀವಿಕೆಯಾಗಿ, ಅಮರವಾಗಿದೆ.