Rukminikalyana-9 
ಧಾರ್ಮಿಕ

ರುಕ್ಮಿಣಿಕಲ್ಯಾಣ-9

ಬಾಬುಪ್ರಸಾದ್​ ಮೋಡಿಸ್​

ವೈಕುಂಠದೊಳಗೆ ಚಂಡ ಎಂಬಂತಹ ಒಬ್ಬ ಸೌಮ್ಯ ಭಗವಂತನ ಸೇವಕ ಇದ್ದ. ಪರಮಾತ್ಮನ ದ್ವಾರಪಾಲಕ ಅವನು. ಕೃಷ್ಣ ಪರಮಾತ್ಮ ಒಮ್ಮೆ ವೈಕುಂಠಲೋಕದಿಂದ ವಿಹಾರಕ್ಕೆ ಹೊರಟಾಗ, ಏನೋ ಹಸಿವೆ ಆದವರಂತೆ "ಊಟಕ್ಕೆ ಏನಾದರೂ ತೆಗೆದುಕೊಂಡು ಬಾ" ಎಂದು ಆದೇಶ ಮಾಡುತ್ತಾನೆ. ಆಗ ಚಂಡ ತನ್ನ ಹತ್ತಿರ ಇರುವ ಮೊಸರನ್ನವನ್ನು ದೇವರಿಗೆ ಒಯ್ದು ಕೊಡುತ್ತಾನೆ. ಆ ಪರಮಾತ್ಮನಿಗೆ ದಧ್ಯೋದನವನ್ನು (ಮೊಸರನ್ನ) ಒಯ್ದು ನೈವೇದ್ಯ ಸಮರ್ಪಣೆ ಮಾಡಿ 'ಕೃಷ್ಣಾರ್ಪಣ' ಎಂದು ಹೇಳುತ್ತಾನೆ. ಆ ಒಂದು ಪುಣ್ಯದಿಂದ ದೇವರ ತಮ್ಮನಾಗಿ ಹುಟ್ಟಿದ್ದಾನೆ. ಅವನು ಚಂಡ.

ರುಕ್ಮಿಣಿದೇವಿ ಆ ಕಥೆಯನ್ನು ಸ್ಮರಣೆಗೆ ತಂದುಕೊಡುತ್ತಾಳೆ. ಎಂದೋ ಒಂದು ಸಲ ನೀನು ಹೊರಗೆ ಹೊರಟಾಗ ನಿನಗೆ ಮೊಸರನ್ನ ಕೊಟ್ಟಿದ್ದಕ್ಕೆ ಸ್ವತಃ ಅವನನ್ನು ತಮ್ಮನನ್ನಾಗಿ ಮಾಡಿಕೊಂಡೆ. ಅಖಂಡ ನಿನ್ನ ಮನೆಯೊಳಗೆ ಅನ್ನ ಹಾಕಿ ಹೆಂಡತಿಯಾಗಿ ಕೈಹಿಡಿದವಳು (ಮಹಾಲಕ್ಷ್ಮಿ ರೂಪದಲ್ಲಿ), ಆಗ ಅಲ್ಲಿ ನಿನಗೆ ಬೇಕಾದಷ್ಟು ಅನ್ನ ಬಡಿಸಿದ್ದೇನೆ. ಒಂದು ಸಲ ಮೊಸರನ್ನ ಕೊಟ್ಟವರ ಉಪಕಾರ ನಿನಗೆ ಬಹಳ ಆಯಿತು, ಅವನನ್ನು ತಮ್ಮನನ್ನಾಗಿ ಮಾಡಿಕೊಂಡೆ; ನನಗೇನೂ ಕಿಮ್ಮತ್ತು ಇಲ್ಲ ಅಲ್ಲವೇ? ನಾನು ಪ್ರತಿದಿವಸ ಅನ್ನದಾನ ಮಾಡುತ್ತೇನೆ, ನನ್ನ ಕೈ ಯಾಕೆ ಹಿಡಿಯಬಾರದು? ಎನ್ನುವ ಸೂಚನೆಯನ್ನು ಆ 'ಗದಾಗ್ರಜ' ಎಂಬ ಶಬ್ದದಿಂದ ಮಾಡುತ್ತಿದ್ದಾಳೆ.