ಶ್ರೀಕೃಷ್ಣ ತನ್ನ ಬಳಿ ಬಂದ ಬ್ರಾಹ್ಮಣನನ್ನು ಮತ್ತೆ ಕೇಳುತ್ತಾನೆ- ನಿಮ್ಮನ್ನು ರಕ್ಷಣೆ ಮಾಡಬೇಕಾದ ರಾಜರು ನಿಮಗೆ ಏನೂ ತೊಂದರೆ ಕೊಡದೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ತಾನೆ? - ಇಷ್ಟು ಮಾತನಾಡಿಸಿದ ಮೇಲೆ ತಾವು ಯಾವುದೋ ಕಾರಣಕ್ಕೆ ಬಂದ ಹಾಗೆ ಇದೆ. ಎಲ್ಲಿಯೋ ಹೊರಟು ದ್ವಾರಕೆಗೆ ಬಂದಿದ್ದರೆ ಊಟ ಮಾಡಿ
ತಮ್ಮ ಕೆಲಸ ತಾವು ಮಾಡಿಕೊಳ್ಳಬಹುದು. ಬೇರೆ ಏನಾದರೂ ಉದ್ದೇಶದಿಂದ ತಾವು ಬಂದಿದ್ದರೆ ನಮ್ಮ ಕಿವಿಯಲ್ಲಿ ಆ ಗೌಪ್ಯವಿಷಯವನ್ನು ಹೇಳಬಹುದು. ಎನ್ನುತ್ತಾನೆ ಶ್ರೀಕೃಷ್ಣ. ಸರ್ವಂ ಮೇ ಬ್ರೂಹ್ಯಗುಹ್ಯಂ ಚೇತ್ಕಿಂ ಕಾರ್ಯಂ ಕರವಾಮ ತೇ- ನಿಮ್ಮ ಕೆಲಸ ಗುಹ್ಯವಲ್ಲದೇ ಇದ್ದರೆ, ಇನ್ನೊಬ್ಬರಿಗೆ ಹೇಳಬಹುದು ಎನ್ನುವುದಾದರೆ ಹೇಳಿ. ಹೇಳದೇ ಇದ್ದರೆ ಏನೂ ತೊಂದರೆ ಇಲ್ಲ. ನಿಮ್ಮ ರಹಸ್ಯವನ್ನು ನೀವು ಕಾಪಾಡಿಕೊಳ್ಳಬಹುದು ಎಂದೂ ಹೇಳುತ್ತಾನೆ. ಕೆಲವರು ಇರುತ್ತಾರೆ. ಒತ್ತಾಯ ಮಾಡಿ ಹೇಳಿ ಎಂದು ಗಂಟು ಬೀಳುತ್ತಾರೆ. ಏನಿಲ್ಲ ಸುಮ್ಮನೆ ಬಂದಿದ್ದೇವೆ, ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದರೂ ಕೇಳುವುದಿಲ್ಲ. ಬಲವಂತ ಮಾಡುತ್ತಾರೆ. ಅದಕ್ಕೆ ಶ್ರೀಕೃಷ್ಣ ಹೇಳುತ್ತಾನೆ. ಇನ್ನೊಬ್ಬರ ಗುಹ್ಯವನ್ನು ತಿಳಿಯುವ ಕುತೂಹಲ ಎಂದಿಗೂ ಒಳ್ಳೆಯದಲ್ಲ. ಅವರೇ ಹೇಳುವುದಾದರೆ ಅವಶ್ಯ ಕೇಳೋಣ. ಆದರೆ ಬಲವಂತ ಮಾಡಿ ಕೇಳುವುದು ಸರಿಯಲ್ಲ.
ಬ್ರಾಹ್ಮಣ ಹೇಳುತ್ತಾನೆ : ನಿಮಗೆ ಎಲ್ಲ ವಿಷಯವನ್ನು ಹೇಳಬೇಕು ಎನ್ನುವುದಕ್ಕಾಗಿಯೇ ಬಹಳ ದೂರದಿಂದ ಬಂದಿದ್ದೇನೆ.ರುಕ್ಮಿಣಿಯು ಈ ಪತ್ರವನ್ನು ನಿಮಗೆ ಕೊಡಲು ಕೊಟ್ಟು ಕಳುಹಿಸಿ ದ್ದಾಳೆ. ತೆಗೆದುಕೊಳ್ಳಿ ಎಂದು ಹೇಳಿ ಆ ಪತ್ರವನ್ನು ಶ್ರೀಕೃಷ್ಣನ ಪಾದದ ಮೇಲೆ ಇಟ್ಟು ನಮಸ್ಕಾರ ಮಾಡುತ್ತಿದ್ದಾರೆ.
ಶ್ರೀಕೃಷ್ಣ ಹೇಳುತ್ತಾನೆ - ಒಬ್ಬ ಕನ್ಯೆ ನನಗೆ ಪತ್ರ ಕಳುಹಿಸಿದ್ದಾಳೆ ಎಂದರೆ ಜನರು ಏನೇನೋ ಊಹೆ ಮಾಡುವುದು ಬೇಡ. ನೀವೇ ಓದಿ ಬಿಟ್ಟರೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಆ ಪತ್ರವನ್ನು ಬ್ರಾಹ್ಮಣನಿಗೆ ಕೊಡುತ್ತಾನೆ.