Real achievement 
ಧಾರ್ಮಿಕ

ನಿಜವಾದ ಸಾಧನೆ

ಬಾಬುಪ್ರಸಾದ್​ ಮೋಡಿಸ್​
ಮಹಾರಾಜರು ‘ನೀನು ಜಪ ಮಾಡುವಾಗ ನಿನ್ನ ಮನಸ್ಸು ಹೇಗಿರುತ್ತದೆ?’ ಎಂದರು. ‘ಸ್ವಾಮೀ, ಜಪ ಮಾಡುವಾಗ ಹೊರಜಗತ್ತಿನ ವಿಷಯಗಳು ತೊಂದರೆಯನ್ನು ಉಂಟುಮಾಡುತ್ತವೆ. ಆದರೆ ನಾನು ಮಾತ್ರ ಸಂಕಲ್ಪ ಮಾಡಿದಷ್ಟು ಜಪ ಮಾಡುವವರೆಗೂ ಬಿಡುವುದಿಲ್ಲ’ ಎಂದ. ಮಹಾರಾಜರು ‘ಸಂತೋಷ. ನೀನು ಸಾಧನೆಯಲ್ಲಿ ಮುಂದುವರಿಯುತ್ತಿರುವುದು ಗೊತ್ತಾಗಬೇಕಾದರೆ, ನೀನು ಹೊರಜಗತ್ತಿನ ವಿಷಯಗಳಲ್ಲಿ ತಲ್ಲೀನನಾಗಿದ್ದಾಗ ಶ್ರೀರಾಮ ನಾಮ ನಿನ್ನನ್ನು ತೊಂದರೆ ಮಾಡಿದರೆ ನಿನ್ನ ಸಾಧನೆ ಸಾರ್ಥಕ. ಸತ್ಸಂಗ ಹೆಚ್ಚಾದಷ್ಟೂ ದುಸ್ಸಂಗ ತಾನಾಗಿಯೇ ಕಡಿಮೆಯಾಗುತ್ತದೆ.’
ಸ್ವಾಮೀ ಚಿನ್ಮಯಾನಂದರು ಒಂದು ಉದಾಹರಣೆ ನೀಡುತ್ತಿದ್ದರು. ಯಾರು ಸದಾ ಕಾಲನ್ನು ಅಲುಗಾಡಿಸುತ್ತಿರುತ್ತಾರೋ, ಅವರು, ಕಾಲು ತಾನಾಗಿಯೇ ಅಲುಗಾಡುತ್ತದೆ. ನಾನೇನು ಮಾಡಲು ಸಾಧ್ಯ? ಎನ್ನುತ್ತಾರೆ. ಸತ್ಯವಾಗಿ ವ್ಯಕ್ತಿಯೇ ಕಾಲನ್ನು ಅಲುಗಾಡಿಸುವುದು. ಆದರೆ ಅದು ಎಷ್ಟು ಅಭ್ಯಾಸವಾಗಿದೆಯೆಂದರೆ ಅದು ತಾನೇ ಅಲುಗಾಡುತ್ತಿರುವಂತೆ ಕಾಣುತ್ತದೆ. ಅದೇ ರೀತಿ ಮನಸ್ಸಿಗೆ ಸ್ವಂತವಾಗಿ ಏನೂ ಮಾಡಲಾಗದು. ನಾವೇ ಮನಸ್ಸಿಗೆ ಶಕ್ತಿಯನ್ನು ನೀಡುವುದು. ಮನಸ್ಸಿನ ವೃತ್ತಿಯನ್ನು ನಿಯಂತ್ರಿ ಸುವುದು ಹೇಗೆಂದರೆ, ಆ ವೃತ್ತಿರೂಪವಾದ ಅಲೆಯನ್ನು ಪೋ›ತ್ಸಾಹಿಸದೇ ಇರುವುದು.
ಇದೇ ನಿಜವಾದ ಸಾಧನೆ. ಪೂರ್ತಿಗೊಳ್ಳದ ಕಾಮದಿಂದ ಕ್ರೋಧವು ಜನಿಸುತ್ತದೆ. ಕ್ರೋಧದ ತೀವ್ರತೆ ಆಸೆಯ ತೀವ್ರತೆಯನ್ನು ಅವಲಂಬಿಸಿದೆ. ಮಗುವಿಗೆ ತಾನು ಬಯಸಿದ್ದು ಸಿಗಲಿಲ್ಲವೆಂದರೆ ಕೋಪ ಬರುತ್ತದೆ. ಹಾಗೆಯೇ ದೊಡ್ಡವರು ಕ್ರೋಧಕ್ಕೆ ಬಲಿಯಾಗುತ್ತಾರೆ. ನಮ್ಮ ಅಹಂಕಾರಕ್ಕೆ ನೋವಾಗುವುದು ನಾವು ಬಯಸಿದ ಹಾಗೆ ನಡೆಯದಿದ್ದಾಗ. ನಾವು ರಾಗ ದ್ವೇಷ, ಬಯಕೆಗಳನ್ನು ತೊರೆದಾಗ ಕ್ರೋಧ ತಾನಾಗಿಯೇ ಶಮನವಾಗುತ್ತದೆ.