ಮರಣಾನಂತರ ಏನಾಗುತ್ತದೆ? ಬಲ್ಲವರಾರೂ ಇಲ್ಲದಿದ್ದರೂ ಪ್ರಾಜ್ಞರು ಗ್ರಂಥಗಳ ಮೂಲಕ ತಿಳಿಸಿದ್ದಾರೆ. ಮರಣ ಹೊಂದುವುದು ದೇಹದೊಳಗಿನ ಚೈತನ್ಯ ಹೊರಟು ಹೋದಾಗ. ಆಗ ವ್ಯಕ್ತಿ ಮರಣ ಹೊಂದಿದ್ದಾನೆ ಎಂದು ವೈದ್ಯರು, ತಿಳಿದವರು ನಿರ್ಣಯ ಮಾಡಿದ ಬಳಿಕವೇ ಮುಂದಿನ ಸಂಸ್ಕಾರಕ್ಕೆ ಹೊರಡುವುದು. ಚೈತನ್ಯ ಎಂದರೆ ಆತ್ಮ. ಇದು ಅಬಾಧಿತ. ಇದಕ್ಕೆ ಪಾಪ ಪುಣ್ಯಗಳೇನೂ ಅಂಟಿಕೊಳ್ಳೋದಿಲ್ಲ. ಅಂಟಿಕೊಳ್ಳೋದು ಕಾಯಕ್ಕೆ. ಈಗ ಅದು ಶವ (ಪ್ರೇತ) ಆದಾಗ ಮೊದಲು ದಹನ ಅಥವಾ ದಫನ ಕ್ರಿಯೆ ನಡೆಸುತ್ತಾರೆ. ಇದಾದ ಬಳಿಕ ಆ ಕಳೇಬರವು ಸುಟ್ಟಾಗ ಅಥವಾ ಮಣ್ಣಾದಾಗ ಅದರಲ್ಲೊಂದು ತ್ರಿತತ್ವ ಚೈತನ್ಯ ಇರುತ್ತದೆ. ಅದು ಗಗನಕ್ಕೆ ತೆರಳುತ್ತದೆ. ಇಲ್ಲೇ ಮೋಕ್ಷ, ಸ್ವರ್ಗ, ನರಕ ಮಾರ್ಗಗಳಿರೋದು. ಇದು ಆ ಕಾಯ ಮಾಡಿಕೊಂಡಂತಹ ಪಾಪ-ಪುಣ್ಯಗಳ ಆಧಾರದಲ್ಲಿ ಇರುತ್ತದೆ.
ಗತಿಸಿದವನ ವಂಶಸ್ಥರು ಅಥವಾ ಆತ್ಮೀಯರು ಆಗ ಪುಣ್ಯಾಂಶಗಳನ್ನು ಕೊಟ್ಟದ್ದೇ ಆದರೆ ಯಾನ ಸುಲಭವಾಗುತ್ತದೆ. ಅಥವಾ ಆ ಕಾಯವು ಜೀವಿತಾವಧಿಯಲ್ಲಿ ಸತ್ಕರ್ಮಗಳನ್ನು ಮಾಡಿದ್ದಿದ್ದರೆ ಅದಕ್ಕೆ ಪುಣ್ಯಾಂಶ ಸಂಸ್ಕಾರಗಳನ್ನು ಕೊಡಲು ಅಭಿಮಾನಿಗಳು ಒದಗುತ್ತಾರೆ. ಮೋಕ್ಷ ಮಾರ್ಗ ಹಿಡಿಯಬೇಕಾದರೆ ಶುಕ್ಲ ಮರಣ ಸಿಗಬೇಕು. ಇದು ಪರಮ ದುರ್ಲಭ. ಅಂತಹ ಪುಣ್ಯಾತ್ಮರಿಗೆ ಮಾತ್ರ ಸಿಗುತ್ತದೆ. ಹೇಗೆಂದರೆ ಗತಿಸಿದ ಕಾಯವು ಪಂಚಭೂತಗಳಲ್ಲಿ ಅಗ್ನಿ ದಗ್ಧವಾಗಿಯೋ (ದಹನ), ಅನಗ್ನಿ ದಗ್ಧ (ದಫನ) ವಿಲೀನವಾದಾಗ ದೇವ ವಿಮಾನ ಬರುತ್ತದೆ. ಇದು ಬ್ರಹ್ಮ ಯಾನ. ಅಂದರೆ ಮೋಕ್ಷ. ಇದಕ್ಕೆ ಯಾವ ಪುಣ್ಯಾಂಶವೂ ಅಗತ್ಯವಿರೋದಿಲ್ಲ. ಯಾಕೆಂದರೆ ಇದು ಪುಣ್ಯಾತ್ಮರಿಗೇ ಲಭಿಸೋದು. ಪಿತೃಲೋಕಕ್ಕೂ ಹೋಗೋದಿಲ್ಲ. ಇದು ಬ್ರಹ್ಮಲೀನ ಆಗಿಬಿಡುತ್ತದೆ.
ಎರಡನೆಯದ್ದು ಸ್ವರ್ಗಯಾನ. ಈ ಕಾಯಕ್ಕೆ ಅದರ ವಂಶಜರು, ಶಿಷ್ಯರು, ಅಭಿಮಾನಿಗಳು ಸಂಸ್ಕಾರ ಯಾಗ ಯಜ್ಞ ಮಾಡಿ, ತಿಲ ತರ್ಪಣಾದಿಗಳನ್ನು ನೀಡಿ ಪುಣ್ಯಾಂಶ ಕೊಟ್ಟು ಪಿತೃಲೋಕದ ಪ್ರಥಮ ಚರಣ ವಸುರೂಪಕ್ಕೆ ಕಳುಹಿಸುತ್ತಾರೆ. ವಸು, ರುದ್ರ, ಆದಿತ್ಯ ಎಂಬುದು ಮೂರು ಹಂತದ ಪಿತೃ ಸ್ತರಗಳು. ಆದಿತ್ಯರೂಪಕ್ಕೆ ತೆರಳಿದ ಬಳಿಕ ಸ್ವರ್ಗಲೋಕ. ಆದಿತ್ಯ ರೂಪಕ್ಕೆ ಹೋಗಬೇಕಾದರೆ ಪಿತುಃ ಪಿತಾಮಹ, ಪ್ರಪಿತಾಮಹ ಹಂತಕ್ಕೆ ಹೋಗಬೇಕು. ಗತಿಸಿದ ವ್ಯಕ್ತಿ ಪುತ್ರನು ವಸುರೂಪಕ್ಕೆ ಕಳುಹಿಸುವವನು. ಅವನ ಪುತ್ರನು ವಸುವಿನಿಂದ ರುದ್ರರೂಪಕ್ಕೆ ಕಳುಹಿಸುವ ಅರ್ಹತೆ ಉಳ್ಳವನು. ಆ ಪ್ರಪೌತ್ರನ ಮಗನು ಆದಿತ್ಯರೂಪಕ್ಕೆ ಕಳುಹಿಸುವ ಅರ್ಹತೆ ಪಡೆಯುತ್ತಾನೆ (ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಂಸ್ಕಾರವು ಅದಕ್ಕೇ ಇರೋದು. ಮತ್ತೆ ಗತಿಸಿದವನ ಪ್ರಾರಬ್ಧ ಕರ್ಮದ ಮೇಲೆ ಅವಲಂಬಿಸಿರುತ್ತದೆ). ಆದಿತ್ಯ ರೂಪದ ಬಳಿಕ ಸಿಗೋದು ಸ್ವರ್ಗಲೋಕ.
ಈ ಮೂರು ಸ್ತರದ ಕ್ರಿಯೆಯು ಸಾಂವತ್ಸರಿಕ ಶ್ರಾದ್ಧಗಳಲ್ಲಿ ಬರೋದಿಲ್ಲ. ಅಲ್ಲಿ ಕೇವಲ ಕರ್ವಿುಯ ಪಿತೃವಿಗೆ ಮಾತ್ರ. ಅಥವಾ ಮಾತೃವಿಗೆ ಮಾತ್ರ. ಅದಕ್ಕಾಗಿ ಸಕೃಣ್ಮಯ ಮಹಾಲಯ ಸರ್ವಪಿತೃ ಶ್ರಾದ್ಧವಿದೆ. ಅದು ಪ್ರತಿ ವರ್ಷದ ಕನ್ಯಾಮಾಸದಲ್ಲಿ ಅಂದರೆ ಕನ್ಯಾರಾಶಿಯಲ್ಲಿ ರವಿ ಸಂಚಾರ ಕಾಲದ ಕೃಷ್ಣ ಪಕ್ಷದಲ್ಲಿ ಬರುತ್ತದೆ. ಎಲ್ಲ ಕಾಲವು ಮಹಾಲಯಕ್ಕೆ ಸೂಕ್ತವಲ್ಲ. ಈ ಕನ್ಯಾರಾಶಿಯಲ್ಲಿ ರವಿ ಸಂಚಾರ ಕಾಲದಲ್ಲಿ ಚಂದ್ರನು ರವಿಗೆ ಸಮೀಪ ಇರುತ್ತಾನೆ. ರವಿ ಚಂದ್ರರ ಮಧ್ಯೆ ಇರುವುದೇ ಸ್ವರ್ಗಲೋಕ. ಇದೆಲ್ಲ ಕಣ್ಣಿಗೆ ಕಾಣದು. ಯಾವ ಅತ್ಯಾಧುನಿಕ ಉಪಕರಣದಿಂದಲೂ ನೋಡಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿನ ಕಾಯವು ತ್ರಿತತ್ವದ ಪಾರದರ್ಶಕ (ಅಗ್ನಿ, ವಾಯು, ಆಕಾಶ ತತ್ವ). ಕಣ್ಣಿಗೆ ಕಾಣಬೇಕಾದರೆ ಪಂಚ ತತ್ವದಿಂದಿರಬೇಕು. (ಅಗ್ನಿ, ವಾಯು, ಆಕಾಶ, ಜಲ, ಪೃಥ್ವಿ). ಯಾವಾಗ ಈ ಪಂಚತತ್ವ ಕಾಯದಿಂದ ಆತ್ಮಚೈತನ್ಯ ಹೊರಟು ಹೋಗುತ್ತದೋ ಆಗ ಕಾಯ ನಿರ್ಜೀವ ಆಗುತ್ತದೆ. ಇದು ಪಂಚಭೂತಗಳಲ್ಲಿ ವಿಲೀನವಾದಾಗ ತ್ರಿತತ್ವ (ಅಗ್ನಿ, ವಾಯು, ಆಕಾಶ) ಬೇರ್ಪಟ್ಟು ನಭೋ ಮಂಡಲದಲ್ಲಿ ಸಂಚರಿಸಲು ಶುರುವಾಗುತ್ತದೆ. ಆಗ ಇದಕ್ಕೆ ಸಂಸ್ಕಾರ ಪುಣ್ಯಾಂಶ ಕೊಟ್ಟಾಗ ಪಿತೃಯಾನದ ಮೂಲಕ ವಸು ರುದ್ರಾದಿತ್ಯದ ಮಾರ್ಗಕ್ಕೆ ಹೋಗುತ್ತದೆ. ಅಲ್ಲಿಂದ ಸ್ವರ್ಗಯಾನ ಆರಂಭವಾಗುತ್ತದೆ.
ಇಂತಹ ಅತ್ಯುತ್ತಮ ಸಂಸ್ಕಾರವನ್ನು ಸನಾತನ ಧರ್ಮವು ತಿಳಿಸಿದೆ. ಅದರ ಪ್ರಕಾರ ಸಂಸ್ಕಾರ ಸಂಪ್ರದಾಯ ಮಾಡಿಕೊಂಡು ಬರೋದು ನಮ್ಮ ಶ್ರದ್ಧೆ. ಇದನ್ನೇ ಶ್ರಾದ್ಧ ಎಂದರು. ಇದನ್ನು ಕೃತಜ್ಞತಾ ಪೂಜೆ ಎನ್ನಬಹುದು. ನಮಗೆ ಭೌತಿಕ ದೇಹ ಕೊಟ್ಟಂತಹ (ಕ್ಷಮಿಸಿ ಸಂಪತ್ತಲ್ಲ) ನಮ್ಮ ಹಿರಿಯರಿಗೆ ಸಮರ್ಪಣೆ ಮಾಡುವ ಒಂದು ಕೃತಜ್ಞತಾ ಭಾವದ ಕ್ರಿಯೆ ಇದು. ದೇವರ ಪೂಜೆಯನ್ನಾದರೂ ಮಾಡದಿದ್ದರೆ ಅಡ್ಡಿ ಇಲ್ಲ. ಆದರೆ ಪಿತೃಪೂಜೆ ಮಾಡದಿದ್ದರೆ ಅದರಷ್ಟು ಪಾಪ ಇನ್ನೊಂದಿಲ್ಲ. ಯಾರ ಸಹಾಯದಿಂದ ನಮ್ಮ ಜೀವನ ಸಾಗಿತ್ತೋ ಅವರೆಲ್ಲರನ್ನೂ ಸ್ಮರಿಸಿ ಪಿಂಡಪ್ರದಾನ ತರ್ಪಣಾದಿಗಳ ಮೂಲಕ ಪೂಜಿಸುವ ಕ್ರಿಯೆಯೇ ಸಕೃಣ್ಮಯ ಮಹಾಲಯ ಶ್ರಾದ್ಧ.